ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯವಲ್ಲದ ಹಾವು...

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅತ್ತೆ-ಸೊಸೆಯರು ನಿತ್ಯ ಒಬ್ಬರ ವಿರುದ್ಧ ಇನ್ನೊಬ್ಬರು ಬುಸುಗುಡುವ ಅದೆಷ್ಟೋ ಸೀರಿಯಲ್‌ಗಳ ಗದ್ದಲದ ನಡುವೆ ಸತ್ಯವಲ್ಲದ ಹಾವುಗಳ ತಂದು ಬುಸುಗುಡುವಂತೆ ಮಾಡಿದ್ದಾರೆ ವಿಘ್ನೇಶ್‌ರಾವ್.

ದೀರ್ಘಕಾಲದಿಂದ ಮುಂಬೈನಲ್ಲಿ ನೆಲೆಸಿದ್ದ ಅವರು ಮತ್ತೆ ಕನ್ನಡಕ್ಕೆ ಬರುತ್ತಿದ್ದಂತೆಯೇ ತಮ್ಮಂದಿಗೆ ಹೊಸತನವನ್ನು ಹೊತ್ತು ತಂದಿದ್ದಾರೆ. ಕೆಲವು ದಿನಗಳ ಕಾಲ ಇಲ್ಲಿನ ಎಲ್ಲ ಧಾರಾವಾಹಿಗಳನ್ನು ವೀಕ್ಷಿಸುತ್ತಾ ಕಳೆದು ಹೊಸದೊಂದು ಪ್ರಯೋಗ ಅಗತ್ಯವೆಂದು ಯೋಚನೆ ಮಾಡಿದರು. ಅದರ ಫಲವಾಗಿಯೇ ಅದ್ಭುತ ಗ್ರಾಫಿಕ್ ತಂತ್ರಜ್ಞಾನವು ನಮ್ಮ ನಾಡಿನ ಕಿರುತೆರೆಯನ್ನು ಪ್ರವೇಶ ಮಾಡಿದೆ. ಆ ಕುರಿತು ತಮ್ಮ ಮಾತಿನ ಬಳ್ಳಿಯನ್ನು ಬೆಳೆಸಿದ ರಾವ್ ಹೇಳಿದ್ದು ಇಷ್ಟು...

ಎಷ್ಟಂತಾ ನೋಡಲು ಸಾಧ್ಯ? ಅತ್ತೆ-ಸೊಸೆಯರ ಕಥೆಗಳನ್ನೇ ಹೆಣೆಯುತ್ತಾ ನಾವಿನ್ನೂ ಕುಳಿತುಬಿಟ್ಟಿದ್ದೇವೆ. ನಮ್ಮ ಸುತ್ತಲಿನ ಭಾಷೆಗಳಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಹೊಸತನವನ್ನು ಸ್ವೀಕರಿಸುತ್ತಲೇ ಇಲ್ಲವಲ್ಲ! ಧೈರ್ಯದಿಂದ ಒಂದು ಪ್ರಯೋಗ ಮಾಡಿಯೇ ಬಿಡಬೇಕೆಂದು ಮತ್ತೆ ಬೆಂಗಳೂರಿಗೆ ಬಂದಿದ್ದೇನೆ.

ನನ್ನೊಂದಿಗೆ ಗ್ರಾಫಿಕ್ ತಂತ್ರಜ್ಞಾನದ ವಿಶಿಷ್ಟ ಅನುಭವಗಳನ್ನು ಕೂಡ ಹೊತ್ತು ತಂದಿದ್ದೇನೆ. ಅದನ್ನು ನಮ್ಮ ನೆಲದ ಟೆಲಿವಿಷನ್‌ನಲ್ಲಿ ಸ್ವಂತಿಕೆಯೊಂದಿಗೆ ಬಳಸಿಕೊಳ್ಳುವುದು ಉದ್ದೇಶ. ಅದಕ್ಕೆ ತಕ್ಕಂತೆ ಕಥೆಯೊಂದನ್ನು ಕೂಡ ಹೆಣೆದು ಪುಟ್ಟ ಪರದೆಯ ಮೇಲೆ ಮೂಡಿಸುವ ಪ್ರಯತ್ನ ಆರಂಭವಾಗಿದೆ. ನನ್ನ ಯೋಚನೆ, ಕಥೆಗಾರರ ಕಲ್ಪನೆ ಹಾಗೂ ತಂತ್ರಜ್ಞಾನದ ನೆರವು ಸೇರಿಕೊಂಡು ಮೂಡಿಬಂದಿದೆ `ನಾಗಪಂಚಮಿ~.

 ಪುನರ್ಜನ್ಮದ ಕಲ್ಪನೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಇದಾಗಿರುವ ಕಾರಣ ಗ್ರಾಫಿಕ್ ಕಲೆ ಖಂಡಿತ ಅಗತ್ಯ. ಆದರೆ ಅದನ್ನು ನೈಜ ಎನಿಸುವ ಮಟ್ಟಿಗೆ ಸೃಜನಾತ್ಮಕವಾಗಿ ಬಳಸಿಕೊಳ್ಳುವುದು ಸುಲಭವಂತೂ ಅಲ್ಲ.
 
ಆದರೂ ಮುಂಬೈನಲ್ಲಿದ್ದು ವಿವಿಧ ತಂತ್ರಜ್ಞರ ಜೊತೆಗೆ ಕೆಲಸ ಮಾಡಿದ ಅನುಭವ ಇಲ್ಲಿ ಪ್ರಯೋಜನಕಾರಿ. ಜೊತೆಗೆ ಆತ್ಮೀಯತೆಯಿಂದ ಯೂನಸ್ ಬುಖಾರಿ ಅವರು ನೀಡಿದ ಸಲಹೆಗಳೂ ಸಹಕಾರಿ. ಬಾಲಿವುಡ್‌ನಲ್ಲಿ ಅದ್ಭುತ ಗ್ರಾಫಿಕ್ ಕೌಶಲದಿಂದ ಗಮನ ಸೆಳೆದಿರುವಂಥ ಅವರಿಂದ ಸಿಕ್ಕ ಪ್ರೇರಣೆಯ ಫಲವಾಗಿ ಕಿರುತೆರೆಯಲ್ಲಿ ನಮ್ಮ ಧಾರಾವಾಹಿ ಭಿನ್ನವಾದ ದೃಶ್ಯ ಸೊಬಗು ಪಡೆದುಕೊಂಡಿದೆ.

ಸಂಕೀರ್ಣವಾದ ಕಥೆಯನ್ನು ದೃಶ್ಯ ರೂಪಕ್ಕೆ ಇಳಿಸುವುದು ದೊಡ್ಡ ಸವಾಲು. ಹೆಚ್ಚಿನ ದೃಶ್ಯಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಮನುಷ್ಯ ರೂಪವು ಹಾವಾಗುವ ಹಾವು ಮನುಷ್ಯ ರೂಪ ಪಡೆಯುವಂಥ ಸಂದರ್ಭಗಳನ್ನು ಕೂಡ ನೈಜವಾದ ಪರಿವರ್ತನೆ ಎನ್ನುವಂತೆ ಹೊಂದಿಸಬೇಕು.

ಇದೆಲ್ಲವೂ ಗ್ರಾಫಿಕ್ ಕಲೆಯಿಂದ ಮಾತ್ರ ಸಾಧ್ಯ. ಎರಡು ಫ್ರೇಮ್‌ಗಳನ್ನು ಮಿಕ್ಸ್ ಮಾಡುವುದು ಹಿಂದಿನಂತೆ ಚೇಂಜಿಂಗ್ ಶಾಟ್ ಮೂಲಕ ಅಲ್ಲ. ಇಲ್ಲಿ ದೃಶ್ಯಮರೆಯಾಗಿ ಮೂಡುವ ತಂತ್ರ. ಆದ್ದರಿಂದ ನೋಡುಗರಿಗೆ ಅದೊಂದು ದೃಶ್ಯ ವೈಭವವಾಗಿ ಕಾಣಿಸುತ್ತದೆ.

ನಮ್ಮ ಮುಂದಿದ್ದ ಮುಖ್ಯವಾದ ಪ್ರಶ್ನೆ ನೂರಾರು ಹಾವುಗಳನ್ನು ಫ್ರೇಮ್‌ನಲ್ಲಿ ತೋರಿಸುವುದು. ಅಷ್ಟೊಂದು ಹಾವುಗಳನ್ನು ಎಲ್ಲಿಂದ ಹಿಡಿದು ತರುವುದು? ಅಸಾಧ್ಯವಾದ ಮಾತದು. ಜೊತೆಗೆ ನಟ-ನಟಿಯರಿಗೆ ಹಾವುಗಳ ನಡುವೆ ನಿಂತು ಅಭಿನಯಿಸುವಂತೆ ಹೇಳುವುದೂ ಕಷ್ಟ. ಇಂಥ ಎಲ್ಲ ಸವಾಲುಗಳಿಗೆ ಉತ್ತರವಾಗಿ ನಿಂತಿದ್ದು ತಂತ್ರಜ್ಞಾನ.

ಕ್ಯಾಮೆರಾ ಚಲನೆ ಹಾಗೂ ರೋಚಕ ಎನಿಸುವಂಥ ಕೋನಗಳ ಮೂಲಕ ಸೆರೆಹಿಡಿದ ದೃಶ್ಯಗಳಲ್ಲಿ ಸತ್ಯವೇ ಎನ್ನಿಸುವ ಮಟ್ಟಿಗೆ ಮಿಥ್ಯವಾದ ಹಾವುಗಳನ್ನು ಹರಿಸಿದ್ದೇವೆ. ಇಂಥ ಪ್ರತಿಯೊಂದು ಫ್ರೇಮ್ ಕೂಡ ಕನ್ನಡದ ಕಿರುತೆರೆ ವೀಕ್ಷಕರಿಗೆ ಹೊಸತು ಎನಿಸುವುದು ಖಚಿತ.

`ಸುವರ್ಣ~ ವಾಹಿನಿಯಲ್ಲಿ ಮೊದಲ ಎಪಿಸೋಡ್ ನೋಡಿದವರೆಲ್ಲ ಮೆಚ್ಚಿಕೊಂಡು ಹಲವೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ಉತ್ಸಾಹದಿಂದ ಇನ್ನಷ್ಟು ಉತ್ತಮವಾದ ದೃಶ್ಯಗಳನ್ನು ಹೆಣೆಯುವುದಕ್ಕೆ ಸಿಕ್ಕ ಪ್ರೋತ್ಸಾಹದ ಅಮೃತ. ಮುಂದೆ ಇನ್ನೂ ಹಲವಾರು ಹೊಸತನಗಳನ್ನು ಇದೇ ಧಾರಾವಾಹಿಯ ಪ್ರವಾಹದಲ್ಲಿ ಹರಿಯ ಬಿಡುತ್ತೇವೆ. ಅಂಥದೊಂದು ವಿಶ್ವಾಸ ನಮ್ಮ ತಂಡದಲ್ಲಿದೆ. ಪಾತ್ರಗಳ ಪೋಷಣೆಯ ಜೊತೆಗೆ ದೃಶ್ಯ ವೈಭವ ನಮ್ಮ ಗುರಿ.

ಕಲಾವಿದರಿಗೆ ದೃಶ್ಯ ಚಿತ್ರೀಕರಣದ ಸಂದರ್ಭದಲ್ಲಿ ತಮ್ಮ ಸುತ್ತಲೂ ಅಷ್ಟೊಂದು ಹಾವುಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಕಲ್ಪನೆ ಮಾತ್ರ. ತೆರೆಯ ಮೇಲೆ ನೋಡಿದಾಗಲೇ ಸರಳವಾದ ದೃಶ್ಯವೊಂದು ಎಷ್ಟೊಂದು ಅದ್ಭುತವಾದ ರೂಪ ಪಡೆದುಕೊಂಡಿದೆ ಎನ್ನುವ ಅರಿವಾಗುತ್ತದೆ.

ನಮ್ಮ ತಂಡದ ಅನೇಕ ಕಲಾವಿದರು ಹಾಗೂ ಕಲಾವಿದೆಯರು ಇಂಥದೊಂದು ದೃಶ್ಯವಿನ್ಯಾಸ ಕಂಡು ಅಚ್ಚರಿಗೊಂಡಿದ್ದಾರೆ. ವೀಕ್ಷಕರಿಂದಲೂ ಅಂಥ ಪ್ರತಿಕ್ರಿಯೆ ಈಗಾಗಲೇ ಸಿಕ್ಕಿದೆ. ಗ್ರಾಫಿಕ್ಸ್‌ಗೆ ಪೂರಕ ಆಗುವ ರೀತಿಯಲ್ಲಿ ಕ್ಯಾಮೆರಾ ಕೋನಗಳನ್ನು ವಿಶಿಷ್ಟವಾಗಿ ಸೆರೆಹಿಡಿದಿದ್ದು, ಪ್ರತಿಯೊಂದು ದೃಶ್ಯದ ಚಿತ್ರೀಕರಣಕ್ಕೆ ಉತ್ತಮ ಗುಣಮಟ್ಟದ ಕ್ರೇನ್ ಸೇರಿದಂತೆ ಅನೇಕ ಸಪೋರ್ಟಿಂಗ್ ಯಂತ್ರಗಳನ್ನು ಮತ್ತು ಅಪಾರ ಸಂಖ್ಯೆಯಲ್ಲಿ ಸಹಾಯಕ ತಂತ್ರಜ್ಞರನ್ನು ಬಳಸಿದ್ದು ಕೂಡ ವಿಶೇಷ.

ಧಾರಾವಾಹಿ ಎಂದರೆ ಕೇವಲ ಕೌಟುಂಬಿಕ ಕಲಹ, ರಾಜಕೀಯ ಕುತಂತ್ರ, ಪತ್ರಿಕಾರಂಗದ ಯುದ್ಧ, ಉದ್ಯಮಿಗಳ ಸ್ಪರ್ಧೆ ಮಾತ್ರ ಎನ್ನುವ ಸೂತ್ರವನ್ನು ಕೈಬಿಡಲು ನಿರ್ಣಯ ಮಾಡಿದ್ದೇ ಇಷ್ಟೆಲ್ಲಾ ಹೊಸತನಗಳನ್ನು ಒಟ್ಟಿಗೆ ನಮ್ಮ ಕನ್ನಡದ ಕಿರುತೆರೆಗೆ ತರಲು ಸಾಧ್ಯವಾಗುತ್ತಿದೆ.

ಒಬ್ಬ ತಂತ್ರಜ್ಞ ಹಾಗೂ ನಿರ್ದೇಶಕನಾಗಿ ಮುಂಬೈನಲ್ಲಿ ಪಡೆದ ಅನುಭವವನ್ನು ಇಲ್ಲಿ ಪ್ರಯೋಗಿಸುತ್ತಿದ್ದೇನೆ. ಇಂಥ ಪ್ರಯೋಗವು ಬೇರೆ ಭಾಷೆಗಳ ಸೀರಿಯಲ್‌ಗಳಿಗೂ ಪ್ರೇರಣೆ ಆಗಬಹುದು ಎನ್ನುವುದು ನನ್ನ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT