ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಸಾಯಿ ಟ್ರಸ್ಟ್‌ನ 35 ಲಕ್ಷ ರೂ ವಶ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ಸಾಯಿಬಾಬಾ ಅವರ ಸತ್ಯ ಸಾಯಿ ಕೇಂದ್ರೀಯ ಟ್ರಸ್ಟ್‌ಗೆ ಸೇರಿದ 35.5 ಲಕ್ಷ ರೂ ಹಣವನ್ನು ಆಂಧ್ರಪ್ರದೇಶ ಪೊಲೀಸರು ಅನಂತಪುರ ಜಿಲ್ಲೆಯಲ್ಲಿ ಕಾರೊಂದರಿಂದ ವಶಪಡಿಸಿಕೊಂಡಿದ್ದು, ಟ್ರಸ್ಟ್‌ನಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬ ಭಕ್ತರ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಟೋಲ್‌ಗೇಟ್ ಬಳಿ ವಾಹನವನ್ನು ಅಡ್ಡಗಟ್ಟಿದ ಪೊಲೀಸರು ಚಾಲಕ ಹರಿಶ್ಚಂದ್ರ ಶೆಟ್ಟಿ ಎಂಬಾತನನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡರು. ಬಂಧಿತನನ್ನು ವಿಚಾರಣೆಗೆಂದು ಪುಟ್ಟಪರ್ತಿಗೆ ಕರೆದೊಯ್ಯಲಾಗಿದೆ. ಹಣವನ್ನು ಟ್ರಸ್ಟ್‌ನ ಅಧಿಕಾರಿಯೊಬ್ಬರು ಆತನ ಮೂಲಕ ಸಾಗಿಸುತ್ತಿದ್ದರು ಎಂದು ಶಂಕಿಸಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಟ್ರಸ್ಟ್‌ನ ಸದಸ್ಯರಾದ ಆರ್.ಜೆ. ರತ್ನಾಕರ ಮತ್ತು ಎಸ್.ವಿ.ಗಿರಿ ಅವರು ಯಜುರ್ ಮಂದಿರಕ್ಕೆ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟ್ರಸ್ಟ್‌ಗೆ ಸೇರಿದ ಅಪಾರ ಹಣವನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿಗಳು ಬಂದಿರುವ ಹಿನ್ನೆಲೆಯಲ್ಲಿ ಪುಟ್ಟಪರ್ತಿ ಪೊಲೀಸರು ರಾಜ್ಯದಿಂದ ಹೊರಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಬಸ್‌ವೊಂದರಲ್ಲಿ ಹಣ ತುಂಬಿದ್ದ ಎರಡು ಚೀಲಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ವಶಪಡಿಸಿಕೊಂಡಿರುವ ಹಣದ ಮೊತ್ತ ತಿಳಿದುಬಂದಿಲ್ಲ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಸರ್ಕಾರ ಟ್ರಸ್ಟ್ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಕಂಡು ಬಂದಲ್ಲಿ ತಾನು ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದು ಹೇಳಿದೆ.

ಯಾರಾದರೂ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ರಘುವೀರ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಸಾಯಿಬಾಬಾ ಅವರ ಖಾಸಗಿ ಕೋಣೆ ಯಜುರ್ ಮಂದಿರವನ್ನು ತೆರೆದು ಅದರಲ್ಲಿದ್ದ ಹಣ ಮತ್ತು ಒಡವೆಗಳ ಮಾಹಿತಿ ಬಹಿರಂಗ ಪಡಿಸಿದ ಎರಡು ದಿನಗಳ ಬಳಿಕ ಈ ಘಟನೆ ನಡೆದಿದೆ. ಹೀಗಾಗಿ ಸಾಯಿಬಾಬಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗಲೇ ಯಜುರ್ ಮಂದಿರದಲ್ಲಿದ್ದ ಅಪಾರ ಸಂಪತ್ತನ್ನು ಟ್ರಸ್ಟ್ ಸದಸ್ಯರು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂಬ ಶಂಕೆ ಇನ್ನಷ್ಟು ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT