ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಗ್ರಹಕ್ಕೂ ಮುನ್ನವೇ ಅಣ್ಣಾ ಬಂಧನ, ವ್ಯಾಪಕ ಪ್ರತಿಭಟನೆ

Last Updated 16 ಆಗಸ್ಟ್ 2011, 4:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ, ಐಎಎನ್ಎಸ್): ಭ್ರಷ್ಟಾಚಾರ ವಿರುದ್ಧ ಸಮರ ಸಾರಿ ಜನಲೋಕಪಾಲ ಮಸೂದೆ ಜಾರಿಗಾಗಿ  ಆಗ್ರಹಿಸಿ ಅನಿರ್ದಿಷ್ಟ ನಿರಶನ ಆರಂಭಿಸುವುದಾಗಿ ಘೋಷಿಸಿದ್ದ ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಸತ್ಯಾಗ್ರಹ ಆರಂಭಕ್ಕೂ  ಮುನ್ನವೇ ಬಂಧಿಸಿದ್ದಾರೆ. ಇದರಿಂದಾಗಿ ದೆಹಲಿಯಲ್ಲಿ ಜನತೆ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಪ್ರತಿಭಟನೆಗಳ ಸರಣಿ ಆರಂಭವಾಗಿದೆ. 

ಮುಂಜಾನೆಯಿಂದ ಸುಮಾರು ಮೂರು ತಾಸು ಕಾಲ ಅಣ್ಣಾ ಹಜಾರೆ ಅವರನ್ನು ~ಮುಂಜಾಗರೂಕತಾ ಸ್ಥಾನಬದ್ಧತೆ~ಯಲ್ಲಿ ಇರಿಸಿದ ಪೊಲೀಸರು ನಂತರ ಅವರನ್ನು ~ಮುಂಜಾಗರೂಕತಾ ಬಂಧನ~ಕ್ಕೆ ಒಳಪಡಿಸಿರುವುದಾಗಿ ಘೋಷಿಸಿದ್ದಾರೆ. 
 

ಬಂಧನವಾದರೆ ಸೆರೆಮನೆಯಲ್ಲೇ ಸತ್ಯಾಗ್ರಹ ಮುಂದುವರೆಸುವುದಾಗಿ ಘೋಷಿಸಿದ್ದ ಅಣ್ಣಾ ಹಜಾರೆ ಈದಿನ ಬೆಳಗ್ಗಿನಿಂದಲೇ ಯಾವುದೇ ಆಹಾರವನ್ನೂ ಸೇವಿಸದೆ ನಿರಶನ ಮುಂದುವರೆಸಿದ್ದಾರೆ. 
 

ಹಜಾರೆ ಬಂಧನದ ಕ್ರಮವನ್ನು ವಿರೋಧಪಕ್ಷಗಳು ಅತ್ಯುಗ್ರವಾಗಿ ಖಂಡಿಸಿವೆ. ತುರ್ತು ಪರಿಸ್ಥಿತಿ ಮತ್ತೆ ಬಂದಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಅಣ್ಣಾ ವಿಷಯದ ಮೇಲೆ ಚರ್ಚಿಸಲು ಬಿಜೆಪಿ ನಿಲುವಳಿ ಸೂಚನೆ ನೀಡಿದ ಪರಿಣಾಮವಾಗಿ ಸಂಸತ್ತಿನಲ್ಲೂ ಮಂಗಳವಾರ ಗೊಂದಲಮಯ ಸ್ಥಿತಿ ಉಂಟಾಗಿದೆ.

 ಬೆಳಗ್ಗೆ 7.30ರ ವೇಳೆಗೆ ಸತ್ಯಾಗ್ರಹ ಆರಂಭಿಸಲು ಹೊರಡುವುದಕ್ಕೆ ಸ್ವಲ್ಪ ಮುನ್ನ ಹಜಾರೆ ಅವರು ವಾಸ್ತವ್ಯ ಇದ್ದ ದೆಹಲಿಯ ಸುಪ್ರೀಂ ಎನ್ ಕ್ಲೇವ್ ನ ಮಯೂರ ವಿಹಾರಕ್ಕೆ ನಾಗರಿಕ ದುಸ್ತಿನಲ್ಲಿ ಆಗಮಿಸಿದ ಪೊಲೀಸರು ಹಜಾರೆ ಅವರನ್ನು ಇನ್ನೋವಾ ಕಾರಿನಲ್ಲಿ ಬಲಾತ್ಕಾರವಾಗಿ ಒಯ್ಯಲು  ಯತ್ನಿಸಿದರು.

ಆದರೆ ನೂರಾರು ಮಂದಿ ಪ್ರತಿಭಟನಕಾರರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರು ಅಲುಗಾಡಲೂ ಆಸ್ಪದ ನೀಡಲಿಲ್ಲ.

ನಂತರ ಅಣ್ಣಾ ಅವರನ್ನು ಉತ್ತರ ದೆಹಲಿಯ ಒಬೆರಾಯ್ ಮೈದಾನ ಬಳಿಯ ದೆಹಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಜಾಮೀನು ಪಡೆಯಲು ನಿರಾಕರಿಸಿದರೆ ಅಣ್ಣಾ ಹಜಾರೆಯವರನ್ನು ಕಾರಾಗೃಹಕ್ಕೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರು ಹಾಕಿದ್ದ ಷರತ್ತುಗಳನ್ನು ಒಪ್ಪಲು ನಿರಾಕರಿಸಿದ ಕಾರಣಕ್ಕಾಗಿ ಅಣ್ಣಾ ಹಜಾರೆ ಅವರಿಗೆ ನವದೆಹಲಿಯ ಜಯಪ್ರಕಾಶ ನಾರಾಯಣ ಉದ್ಯಾನದಲ್ಲಿ ನಿರಶನ ನಡೆಸಲು ಅನುಮತಿ ನಿರಾಕರಿಸಿರುವುದಾಗಿ ಪೊಲೀಸರು ಸೋಮವಾರವೇ ಪ್ರಕಟಿಸಿದ್ದರು. 

ಈ ಪ್ರಕಟಣೆಯ ಬೆನ್ನಲ್ಲೇ ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧೀಜಿ ಅವರ ಸಮಾಧಿಯ ಬಳಿ ಸುಮಾರು ಒಂದು ತಾಸು ಧ್ಯಾನ ನಡೆಸಿದ್ದ ಹಜಾರೆ ತಾವು ಮಂಗಳವಾರ ಪೂರ್ವ ನಿರ್ಧಾರದಂತೆ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದರು. 

ತಮ್ಮನ್ನು ಪೊಲೀಸರು ಬಂಧಿಸಿದರೆ ಕಾರಾಗೃಹದಲ್ಲೇ ಸತ್ಯಾಗ್ರಹ ಮುಂದುವರೆಸುವುದಾಗಿಯೂ ಘೋಷಿಸಿದ್ದ ಅವರು, ದೇಶವ್ಯಾಪಿ ಜೈಲ್ ಭರೋ ಚಳವಳಿ ನಡೆಸುವಂತೆಯೂ ಜನತೆಗೆ ಕರೆ ನೀಡಿದ್ದರು. 

ಮಂಗಳವಾರ ಸತ್ಯಾಗ್ರಹ ಆರಂಭಕ್ಕೆ ಕೆಲವು ಗಂಟೆ ಮುನ್ನ ಹಜಾರೆ ಅವರನ್ನು ಪೊಲೀಸರು ಬಂಧಿಸಿದರು. ಅಣ್ಣಾ ಹಜಾರೆ ತಂಡದ ಧುರೀಣತ್ವ ವಹಿಸಿದ ಕಿರಣ್ ಬೇಡಿ, ಪ್ರಶಾಂತ ಭೂಷಣ್, ಅರವಿಂದ ಕೇಜ್ರಿವಾಲ್ ಅವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಅಣ್ಣಾ ಹಜಾರೆ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ ಭಾರಿ  ಸಂಖ್ಯೆಯಲ್ಲಿ  ಅವರ ಅಪಾರ್ಟ್ ಮೆಂಟ್ ಬಳಿ ಜನ ಸೇರ ತೊಡಗಿದರು.ಇದನ್ನು ಅನುಸರಿಸಿ ಪೊಲೀಸರು ಅಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದರು. 

ಹಜಾರೆ ಬಂಧನವಾಗುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಅದರಲ್ಲೂ ಯುವಕ- ಯುವತಿಯರು ~ನನ್ನನ್ನೂ ಬಂಧಿಸಿ~ ಎಂಬ ಸ್ಟಿಕ್ಕರ್ ಗಳನ್ನು ಹಚ್ಚಿಕೊಂಡು ಪ್ರತಿಭಟನಾ ಪ್ರದರ್ಶನ ಆರಂಭಿಸಿದ್ದಾರೆ. 

ಬೆಂಗಳೂರಿನಲ್ಲೂ ಸ್ವಾತಂತ್ರ್ಯ ಉದ್ಯಾನದಲ್ಲಿ ಜನ ಜಮಾವಣೆಗೊಂಡು ಪ್ರತಿಭಟನೆ ಆರಂಭಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT