ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಕರೆಂಟ್ ಕದನ

Last Updated 7 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್ ಪೂರೈಕೆಯಲ್ಲಿನ ಅವ್ಯವಸ್ಥೆ ಖಂಡಿಸಿ ಗುರುವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದ ಪ್ರತಿಪಕ್ಷಗಳ ಸದಸ್ಯರು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು.

ಪಕ್ಷೇತರ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಕೃಷಿ ಸಚಿವ ಉಮೇಶ ಕತ್ತಿ, `ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದು ನಿಜ. ಆದರೂ, ಗ್ರಾಮೀಣ ಭಾಗದಲ್ಲಿ ಆರು ಗಂಟೆ ಕಾಲ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ' ಎಂದರು. ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್, ಜೆಡಿಎಸ್ ಸದಸ್ಯರು, `ಯಾವ ಭಾಗದಲ್ಲೂ ರೈತರಿಗೆ ನಿತ್ಯ 6 ಗಂಟೆ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸಚಿವರು ಸುಳ್ಳು ಹೇಳುತ್ತಿದ್ದಾರೆ. ಕೇವಲ 2-3 ಗಂಟೆ ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದೆ ಅಷ್ಟೇ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು' ಎಂದು ಆಗ್ರಹಿಸಿದರು.

`ಪ್ರಶ್ನೋತ್ತರ ವೇಳೆಯಲ್ಲಿ ಎಲ್ಲರೂ ಎದ್ದುನಿಂತರೆ ಹೇಗೆ? ಬೇರೆ ರೂಪದಲ್ಲಿ ತನ್ನಿ, ಅವಕಾಶ ನೀಡುತ್ತೇನೆ' ಎಂದು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು. ಇದರಿಂದ ಸಮಾಧಾನಗೊಳ್ಳದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಧಾವಿಸಿ ಧರಣಿ ನಡೆಸಿದರು. ಗುರುವಾರವೇ ಅರ್ಧಗಂಟೆ ಕಾಲ ಚರ್ಚೆಗೆ ಅವಕಾಶ ನೀಡುವುದಾಗಿ ಬೋಪಯ್ಯ ಭರವಸೆ ನೀಡಿದ ನಂತರ ಧರಣಿ ಕೈಬಿಟ್ಟರು.

ಇದಕ್ಕೂ ಮುನ್ನ ಮಾತನಾಡಿದ ಕತ್ತಿ, ಬೇಡಿಕೆ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡುವುದು ಅಸಾಧ್ಯ. ಕೊರತೆ ನೀಗಿಸುವ ಉದ್ದೇಶದಿಂದ ನಿತ್ಯ 1,280 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಕಾರಿಡಾರ್ ಲಭ್ಯವಿಲ್ಲದ ಕಾರಣ ಖರೀದಿಗೆ ಒಪ್ಪಂದ ಮಾಡಿಕೊಂಡಿರುವ 350 ಮೆಗಾವಾಟ್ ವಿದ್ಯುತ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

18 ಸಾವಿರ ಕೋಟಿ ನಷ್ಟ: ಕರ್ನಾಟಕ ವಿದ್ಯುತ್ ನಿಗಮವು ಕೇಂದ್ರ ಸರ್ಕಾರಿ ಸ್ವಾಮ್ಯದ ಎಂ.ಎಸ್.ಟಿ.ಸಿ.ಯಿಂದ ಅಧಿಕ ದರಕ್ಕೆ ಕಲ್ಲಿದ್ದಲು ಖರೀದಿ ಮಾಡಲಾಗುತ್ತಿದೆ. ಇದರಿಂದಾಗಿ ನಿಗಮಕ್ಕೆ ರೂ 18,000 ಕೋಟಿ ನಷ್ಟವಾಗುತ್ತಿದೆ ಎಂದು ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಆರೋಪಿಸಿದರು.

ಎಂ.ಎಸ್.ಟಿ.ಸಿ ಕಂಪೆನಿಯ ವಿರುದ್ಧ ಸಿಬಿಐ ತನಿಖೆ ಆಗುತ್ತಿದೆ. ಆ ಕಂಪೆನಿಯ ವ್ಯವಹಾರ ಪಾರದರ್ಶಕವಾಗಿಲ್ಲ. ವರ್ಷಕ್ಕೊಮ್ಮೆ ಕಲ್ಲಿದ್ದಲು ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಬದಲು, ದೀರ್ಘಾವಧಿಯಲ್ಲಿ ಖರೀದಿ ಮಾಡಲು ಬೇರೆ ಕಂಪೆನಿಗಳೊಂದಿಗೆ ಯಾಕೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಜಯಚಂದ್ರ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕತ್ತಿ, ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಪ್ರತಿ ಟನ್‌ಗೆ ರೂ 120 ಕಡಿಮೆ ದರದಲ್ಲಿ ಕಲ್ಲಿದ್ದಲು ಖರೀದಿಸಲಾಗುತ್ತಿದೆ. ಕಲ್ಲಿದ್ದಲು ಗಣಿ ಮಾಲೀಕರಿಂದ ನೇರವಾಗಿ ಖರೀದಿ ಮಾಡುವ ಸಂಬಂಧ ಒಂದೆರಡು ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು. ಗುಣಮಟ್ಟದ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ. ಹೆಚ್ಚಿನ ದರ ನೀಡಲಾಗುತ್ತಿದೆ ಎಂಬುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT