ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಗುಡುಗಿದ ದೇವೇಗೌಡ

Last Updated 23 ಫೆಬ್ರುವರಿ 2011, 19:10 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಭ್ರಷ್ಟಾಚಾರ ಹಗರಣ ಕುರಿತು ಲೋಕಸಭೆಯಲ್ಲಿ ಗುರುವಾರ ಗುಡುಗಿದ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ, ಯುಪಿಎ ಸರ್ಕಾರದ ‘2ಜಿ ಹಗರಣ’ ಕುರಿತು ಬೊಬ್ಬೆ ಹಾಕುತ್ತಿರುವ ಬಿಜೆಪಿ ತನ್ನದೇ ಸರ್ಕಾರದ ಅವ್ಯವಹಾರಗಳನ್ನು ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ದೇವೇಗೌಡರು, ತರಂಗಾಂತರ ಹಗರಣದ ವಿಚಾರಣೆಗೆ ಜೆಪಿಸಿ ರಚಿಸಬೇಕೆಂದು  ಒಂದೂವರೆ ತಿಂಗಳು ಅಧಿವೇಶನ ಹಾಳುಮಾಡಿದ ಬಿಜೆಪಿ, ಕರ್ನಾಟಕ ಸರ್ಕಾರದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರು ಮಹಾನಗರಪಾಲಿಕೆಗೆ ಸಂಬಂಧಿಸಿದ ನಾಲ್ಕು ಸಾವಿರ ಕೋಟಿ ರೂಪಾಯಿಗೆ ಲೆಕ್ಕವೇ ಸಿಗುತ್ತಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಕಳೆದ ವರ್ಷ ಲೋಕಾಯುಕ್ತ ಈ ಕುರಿತು ವರದಿ ಕೊಟ್ಟಿದೆ. ಆದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ, ಅವರನ್ನು ಮಹಾಭಾರತದಲ್ಲಿನ ಪಾತ್ರವೊಂದಕ್ಕೆ ಹೋಲಿಸಿದರು.

ನಿಮ್ಮ ಮುಖ್ಯಮಂತ್ರಿ ಕರ್ನಾಟಕವನ್ನು ಹಾಳು ಮಾಡುತ್ತಾರೆ ಅಷ್ಟೇ ಅಲ್ಲ, ತಮ್ಮ ಪಕ್ಷವನ್ನು ಸರ್ವನಾಶ ಮಾಡುತ್ತಾರೆ ಎಂದು ದೂರಿದರು. ಗೌಡರ ಈ ಹೇಳಿಕೆಯನ್ನು ಕರ್ನಾಟಕದ ಬಿಜೆಪಿ ಸದಸ್ಯರು ತೀವ್ರವಾಗಿ ವಿರೋಧಿಸಿದರು. ಪ್ರಹ್ಲಾದ್ ಜೋಶಿ, ಗದ್ದಿಗೌಡರ್, ಶಿವಕುಮಾರ ಉದಾಸಿ, ಸುರೇಶ್ ಅಂಗಡಿ ಮತ್ತಿತರರು ಗುಂಪುಗೂಡಿ ಸಭಾಧ್ಯಕ್ಷರ ಪೀಠದ ಮುಂದೆ ಜಮಾಯಿಸಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಯಿತು. ದೇವೇಗೌಡರು ಮತ್ತು ಸುರೇಶ್ ಅಂಗಡಿ ಕನ್ನಡದಲ್ಲೇ ಪರಸ್ಪರ ವಾಗ್ದಾಳಿಗಿಳಿದರು. ಇದನ್ನು ಸದನ ನಿಬ್ಬೆರಗಾಗಿ ಗಮನಿಸಿತು. ಆದರೆ, ಬಿಜೆಪಿ ಸದಸ್ಯರ ಪ್ರತಿಭಟನೆ ಲೆಕ್ಕಿಸದೆ ಮಾಜಿ ಪ್ರಧಾನಿ ಸೂಟ್‌ಕೇಸಿನಲ್ಲಿ ತಂದಿದ್ದ ದಾಖಲೆಗಳನ್ನು ಪ್ರದರ್ಶಿಸಿ ಬಿಜೆಪಿ ಸದಸ್ಯರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಕರ್ನಾಟಕ ಬಿಜೆಪಿ ಸರ್ಕಾರದ ಸಂಪೂರ್ಣ ಜಾತಕವೇ ತಮ್ಮ ಬಳಿ ಇದ್ದು ಅದನ್ನು ಬಯಲು ಮಾಡುವುದಾಗಿ ಎಚ್ಚರಿಸಿದರು.

ಗೌಡರ ವಿರುದ್ಧ ಪ್ರತಿಭಟನೆ ಮುಂದುವರಿಸಿದ ಬಿಜೆಪಿ ಸದಸ್ಯರು, ಈಗ ಯಡಿಯೂರಪ್ಪನವರ ಬಗ್ಗೆ ಮಾತನಾಡುವ ದೇವೇಗೌಡರಿಗೆ ಅವರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭದಲ್ಲಿ ಈ ಗುಣಗಳ ಬಗ್ಗೆ ಅರಿವಿರಲಿಲ್ಲವೇ ಎಂದು ಕೂಗಿದರು.ಬಿಜೆಪಿ ಆಕ್ಷೇಪದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಗೌಡರು ಪ್ರಯೋಗಿಸಿದ ವಾಕ್ಯವನ್ನು ಕಡತದಿಂದ ತೆಗೆದುಹಾಕಿದರು. ಸಂಸದೀಯ ವ್ಯವಹಾರಗಳ ಸಚಿವ ಪವನ್‌ಕುಮಾರ್ ಬನ್ಸಲ್ ಗೌಡರಿಗೆ ಬೆಂಬಲ ನೀಡಿದರು.

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಏನೂ ಮಾಡಲಾಗುವುದಿಲ್ಲ. ಅವರು ಏನೇ ಮಾಡಿದರೂ ನೀವು ನೋಡಿಕೊಂಡು ಸುಮ್ಮನಿರಬೇಕು. ಏಕೆಂದರೆ ಜಾತಿ, ಹಣ ಹಾಗೂ ಧರ್ಮ ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ದೇವೇಗೌಡರು ಲೇವಡಿ ಮಾಡಿದರು.

ಮುಖ್ಯಮಂತ್ರಿಗಳು ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಮೇಲೆ ಬೇಕಾದಷ್ಟು ಆರೋಪ ಮಾಡಿದ್ದಾರೆ. ನಮ್ಮ ಮೇಲಿನ ಆರೋಪ ಕುರಿತು ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT