ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಬ್ಲೂ ಫಿಲಂ: ವಿಚಾರಣಾ ಸಮಿತಿಗೆ ಸ್ಪೀಕರ್ ನಿರ್ಧಾರ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ಪ್ರಕರಣ ಕುರಿತು ತನಿಖೆ ನಡೆಸಲು ವಿಚಾರಣಾ ಸಮಿತಿ ರಚಿಸುವ ನಿರ್ಧಾರವನ್ನು ಸ್ಪೀಕರ್ ಕೆ.ಜಿ. ಬೋಪಯ್ಯ ಕೈಗೊಂಡಿದ್ದಾರೆ. ಆದರೆ ಲಭ್ಯ ದಾಖಲೆಗಳ ಪ್ರಕಾರ, ಸದನದಲ್ಲಿ ಅಶಿಸ್ತು ತೋರಿದ ಸದಸ್ಯರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ.

ಸದಸ್ಯರ ನಡವಳಿಕೆ ಹೇಗಿರಬೇಕು ಎಂಬ ಕುರಿತು ವಿಧಾನ ಪರಿಷತ್ 24 ಮತ್ತು ವಿಧಾನಸಭೆ 30 ಅಂಶಗಳ ಪಟ್ಟಿಯನ್ನೇ ಸಿದ್ಧಪಡಿಸಿದೆ. ಆದರೆ ಸಂದರ್ಭ ದೊರೆತಾಗಲೆಲ್ಲ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸದನದ ನಿಯಮಗಳನ್ನು ಉಲ್ಲಂಘಿಸಿದ ಒಬ್ಬನೇ ಒಬ್ಬ ಸದಸ್ಯನ ವಿರುದ್ಧವೂ ಇತ್ತೀಚಿನ ದಿನಗಳಲ್ಲಿ ದೋಷಾರೋಪಣೆ ಹೊರಿಸಿಲ್ಲ.

ಕಾಂಗ್ರೆಸ್ಸಿಗರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಎಂ.ಬಿ. ಪಾಟೀಲ, ಎಂ. ಮಂಜು ಹಾಗೂ ಬಿಜೆಪಿಯ ಸದಸ್ಯರಾದ ಸೋಮಶೇಖರ ರೆಡ್ಡಿ, ಬಿ. ನಾಗೇಂದ್ರ, ಎಚ್.ಟಿ. ಸುರೇಶ್‌ಬಾಬು, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಅವರು 2010ರ ಜುಲೈ 9ರಂದು ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ್ದರು.
ಪರಸ್ಪರ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿಕೊಂಡಿದ್ದರು. ಆದರೆ ಇದುವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಶಾಸಕರಾದ ಜಮೀರ್ ಅಹ್ಮದ್ ಖಾನ್, ಎಚ್.ಸಿ. ಬಾಲಕೃಷ್ಣ, ಪಾಂಡುರಂಗ ಪಾಟೀಲ, ರಹೀಂ ಖಾನ್, ಎಂ. ಮಂಜು ಅವರು 2009ರ ಡಿಸೆಂಬರ್ 30ರಂದು ವಿಧಾನಸಭೆಯ ಸ್ಪೀಕರ್ ಚುನಾವಣೆ ಸಂದರ್ಭ ಸ್ಪೀಕರ್ ಕುರ್ಚಿಯತ್ತ ನುಗ್ಗಿ ಅಲ್ಲಿನ ಮೈಕ್ ಕಿತ್ತೆಸೆದಿದ್ದರು.

ಆಗ ಸ್ಪೀಕರ್ ಸ್ಥಾನದಲ್ಲಿದ್ದ ಎನ್. ಯೋಗೀಶ್ ಭಟ್ ಅವರ ಕೈಯಿಂದ ಕೆಲವು ದಾಖಲೆಗಳನ್ನು ಕಿತ್ತು, ಹರಿದು ಹಾಕಿದ್ದರು. ಇವರ ವಿರುದ್ಧವೂ ಇದುವರೆಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ.


ಸಿ.ಎಸ್. ಪುಟ್ಟರಾಜು, ಜಮೀರ್ ಅಹ್ಮದ್ ಖಾನ್, ಎನ್.ಎ. ಹ್ಯಾರಿಸ್, ಬಿ.ಕೆ. ಸಂಗಮೇಶ್ವರ, ಬಂಡೆಪ್ಪ ಕಾಶೆಂಪುರ, ಸುರೇಶ್ ಗೌಡ, ಎಚ್.ಪಿ. ಮಂಜುನಾಥ್, ಯು.ಟಿ. ಖಾದರ್, ಪಿ.ಎಂ. ಅಶೋಕ್, ರಹೀಂ ಖಾನ್, ಎಂ.ಟಿ. ಕೃಷ್ಣಪ್ಪ, ಎಚ್.ಸಿ. ಬಾಲಕೃಷ್ಣ, ಕೆ. ರಾಜು, ಪಾಂಡುರಂಗ ಪಾಟೀಲ ಮತ್ತು ಅನರ್ಹಗೊಂಡಿದ್ದ 16 ಶಾಸಕರು 2010ರ ಅಕ್ಟೋಬರ್ 11ರಂದು ಸದನದಲ್ಲಿ ಕೋಲಾಹಲ ಎಬ್ಬಿಸಿದ್ದರು.
 
ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸದನದ ಮೇಜಿನ ಮೇಲೆ ನಿಂತು ತಮ್ಮ ಅಂಗಿ, ಬನಿಯನ್‌ಗಳನ್ನು ತಾವೇ ಹರಿದುಕೊಂಡಿದ್ದರು. ಈ ಪ್ರಕರಣದಲ್ಲಿ ಕೂಡ ತಪ್ಪು ಮಾಡಿದವರಿಗೆ ಇದುವರೆಗೆ ಯಾವುದೇ ಶಿಕ್ಷೆ ಆಗಿಲ್ಲ.

ಇಂತಹ ಅಸಂಸದೀಯ ವರ್ತನೆಗಳ ನೆನಪು ಇನ್ನೂ ಹಸಿಯಾಗಿಯೇ ಇದೆ. ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ. ಪಾಟೀಲ ಅವರು ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಸಂಗತಿ ಈಗ ಬಯಲಾಗಿದೆ.

ಸದನದ ನಿಯಮಗಳನ್ನು ಉಲ್ಲಂಘಿಸಿದ ಕೆಲವು ಸದಸ್ಯರನ್ನು ಅಮಾನತು ಮಾಡಿರುವ ಸಂಗತಿ 1967ರಿಂದ 2004ವರೆಗಿನ ಶಾಸನ ಸಭೆಯ ಕಡತಗಳನ್ನು ಪರಿಶೀಲಿಸಿದಾಗ ಕಂಡುಬಂದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ ಪ್ರಕರಣಗಳೂ ಇದರಲ್ಲಿವೆ.

ಸದಸ್ಯರ ಆಕ್ಷೇಪಾರ್ಹ ವರ್ತನೆಗೆ ಪೂರ್ಣವಿರಾಮ ಹಾಕುವ ಉದ್ದೇಶದಿಂದ ವಿಧಾನ ಪರಿಷತ್ತಿನಲ್ಲಿ 2006ರಲ್ಲಿ `ನೀತಿ ಸಮಿತಿ~ಯನ್ನು (ಎಥಿಕ್ಸ್ ಕಮಿಟಿ) ರಚಿಸಲಾಯಿತು.

ಆದರೆ ಸದಸ್ಯರ ಆಕ್ಷೇಪಾರ್ಹ ವರ್ತನೆ ಕುರಿತು ಪರಿಶೀಲಿಸುವಂತೆ ಸಮಿತಿಗೆ ಇದುವರೆಗೂ ಯಾವುದೇ ಸೂಚನೆ ನೀಡಲಾಗಿಲ್ಲ. ವಿಧಾನಸಭೆಯಲ್ಲಿ ಇಂಥದೊಂದು ಸಮಿತಿಯೇ ಇಲ್ಲ. ವಿಧಾನ ಮಂಡಲದ ಕೆಲವು ಅಧಿಕಾರಿಗಳ ಪ್ರಕಾರ ಸದನದಲ್ಲಿ ಶಾಸಕರಿಗೆ ಸಂವಿಧಾನ ನೀಡಿರುವ ಕೆಲವು ರಕ್ಷಣೆಯೇ ಅವರ ದುರ್ನಡತೆಗೆ ಕಾರಣ.

`ಸದನವನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲದ, ರಾಜಕೀಯ ಪಕ್ಷದ ಕೈಗೊಂಬೆಯಂತೆ ವರ್ತಿಸುವ ಶಾಸಕರನ್ನು ಸ್ಪೀಕರ್ ಹುದ್ದೆಗೆ ನೇಮಕ ಮಾಡುವ ಪರಿಪಾಠ ಇತ್ತೀಚೆಗೆ ಹೆಚ್ಚಾಗುತ್ತಿದೆ~ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಕೆ.ಎಚ್. ಶ್ರೀನಿವಾಸ್ ಅಭಿಪ್ರಾಯಪಡುತ್ತಾರೆ.

ಈ ಕುರಿತು `ಪ್ರಜಾವಾಣಿ~ಯ ಜೊತೆ ಮಾತನಾಡಿದ ಅವರು, `ಸ್ಪೀಕರ್ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಶಾಸಕರಿಗೆ ಗೌರವ ಇಲ್ಲದಿದ್ದಾಗ, ಸದನದ ನಿಯಮಗಳ ಉಲ್ಲಂಘನೆ ಆಶ್ಚರ್ಯ ತರುವುದಿಲ್ಲ. ಸ್ಪೀಕರ್ ಸ್ಥಾನದಲ್ಲಿರುವವರು ಪಕ್ಷಭೇದ ಮೀರಿ, ಸದನದ ಎಲ್ಲ ಸದಸ್ಯರ ಗೌರವಕ್ಕೆ ಪಾತ್ರರಾಗಬೇಕು. ಸ್ಪೀಕರ್‌ಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಸದನದ ಕಾನೂನು ಕುರಿತು ಅವರಿಗೆ ಸಂಪೂರ್ಣ ಜ್ಞಾನ ಇರಬೇಕು~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT