ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಭಿರುಚಿಯ ಸಾಂಪ್ರದಾಯಿಕ ಗಾಯನ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ನಗರದಲ್ಲಿ ನಡೆಯುತ್ತಿರುವ ಶ್ರೀಮದ್ ವಾದಿರಾಜ ಕಲಾ ಮಹೋತ್ಸವ ಒಂದು ಅಪೂರ್ವ ಸಾಂಸ್ಕೃತಿಕ ಸಡಗರ!

ಗಾಯಕ, ಬೋಧಕ, ವಾಗ್ಗೇಯಕಾರ, ನಟ, ನಾಟಕಕಾರ, ನಿರ್ದೇಶಕ, ಕಾದಂಬರಿಕಾರ ಹಾಗೂ ವ್ಯವಸ್ಥಾಪಕ ಆರ್.ಕೆ. ಪದ್ಮನಾಭಅವರ ಬಹುಮುಖ ವ್ಯಕ್ತಿತ್ವದ ಫಲವಾಗಿ ಈ ಕಲಾ ಮಹೋತ್ಸವ ಏರ್ಪಾಟಾಗಿದೆ.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಸುಹೊಕ್ಕಾಗಿ ಮೇಳೈಸಿರುವ ಈ ಉತ್ಸವದಲ್ಲಿ ಗಾನಯಜ್ಞವು ಸಂಗೀತದ ಮೂಲಕ ನಡೆಯುವುದು ಇನ್ನೊಂದು ವಿಶೇಷ!

ಪ್ರತಿದಿನ ಗಣಪತಿ ಪೂಜೆ, ನವಗ್ರಹ ಪೂಜೆ, ಲಲಿತಾ ಸಹಸ್ರನಾಮ, ನಾಗಪೂಜೆ, ರುದ್ರಾಭಿಷೇಕ, ವಿಷ್ಣು ಸಹಸ್ರನಾಮ, ಸೀತಾ ಕಲ್ಯಾಣ, ಆಚಾರ್ಯತ್ರಯರ (ಶಂಕರ, ಮಧ್ವ, ರಾಮಾನುಜಾ ಆಚಾರ್ಯರು) ಪೂಜಾ, ಶ್ರೀನಿವಾಸ ಕಲ್ಯಾಣಗಳು ದಿನಕ್ಕೊಂದರಂತೆ ನಡೆಯುತ್ತಿವೆ. ಬೆಳಗಿನ ವೇಳೆ ಗೋಷ್ಠಿ ಗಾಯನದಲ್ಲಿ ನಡೆಯುವ ಗಾನಯಜ್ಞದಲ್ಲಿ ಆಯಾ ದಿನಗಳ ಗ್ರಹ (ದೀಕ್ಷಿತರ ರಚನೆ) ಹಾಗೂ ಕಮಲಾಂಬಾ ನವಾವರಣ ಕೃತಿಗಳಲ್ಲಿ ಒಂದೊಂದು ರಚನೆಗಳನ್ನು ಶತಕಂಠದಲ್ಲಿ ಕೇಳುವುದೇ ಒಂದು ಹರ್ಷದಾಯಕ ಅನುಭವ.
 
ಸಂಗೀತ, ನೃತ್ಯ, ನಾಟಕ, ಹರಿಕಥೆಗಳಲ್ಲದೇ ಸೂತ್ರದ ಗೊಂಬೆ (ಸೂತ್ರ ಮೇಳ)ಯೂ ಸೇರಿ, ಒಂದು ವೈವಿಧ್ಯಮಯ- ವರ್ಣರಂಜಿತ ಕಾರ್ಯಕ್ರಮಗಳು ನಡೆಯುತ್ತಿವೆ.
ಬುಧವಾರದಂದು ಇಲ್ಲಿ ಹಾಡಿದ ಗಾಯತ್ರಿ ವೆಂಕಟರಾಘವನ್, ಖ್ಯಾತಿಯ ಶಿಖರವನ್ನು ಶೀಘ್ರವಾಗಿ ಏರುತ್ತಿರುವ ಗಾಯಕಿ. ಪದ್ಮಾ ವೀರರಾಘವನ್ ಮತ್ತು ಎ. ಸುಂದರೇಶನ್ ಅವರಲ್ಲಿ ಪ್ರಾರಂಭಿಕ ಸಂಗೀತ ಶಿಕ್ಷಣ ಪಡೆದು ವಿ. ಸುಬ್ರಹ್ಮಣ್ಯ ಅವರಲ್ಲಿ ಮುಂದುವರೆಸಿ, ಇದೀಗ ಕೆಲ ಕಾಲದಿಂದ, ಹಿರಿಯರಾದ ಪಿ. ಎಸ್. ನಾರಾಯಣಸ್ವಾಮಿ ಅವರಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ತಮ್ಮ ಗಾಯನವನ್ನು ಮುತ್ತಯ್ಯ ಭಾಗವತರ  ಮಾತೆ ಮಲಯ ಧ್ವಜದೊಂದಿಗೆ ಪ್ರಾರಂಭಿಸಿ, ಗಾಯತ್ರಿ ಎತ್ತುಗಡೆಯನ್ನು ದ್ರುತಕಾಲದಲ್ಲಿ ತೆಗೆದುಕೊಂಡು, ಕಛೇರಿಗೆ ದಢವಾದ ಚಾಲನೆ ನೀಡಿದರು. ಒಂದು ಅಪರೂಪವಾದ - ಬಳಕೆಯಲ್ಲಿ ಇಲ್ಲದ ದೇವರನಾಮವನ್ನು ಗಣೇಶನ ಪ್ರಾರ್ಥನೆ ರೂಪದಲ್ಲಿ ಆಯ್ದು, ಸ್ವಾರಸ್ಯ ತುಂಬುವ ಪ್ರಯತ್ನ ಮಾಡಿದರು. ವಾದಿರಾಜರ ರಚನೆ, ಪದ್ಮನಾಭರ ಸಂಗೀತ ಸಂಯೋಜನೆಯ  ಗಜಮುಖ ವಂದಿಸುವೆ  ಪದಕ್ಕೆ ನೆರವಲ್ (ವಾರಜನಾಭಶ್ರೀ) ಹಾಗೂ ಸ್ವರಗಳನ್ನು ಸೇರಿಸಿದರು.

ಹಾಗೆಯೇ ಶ್ಯಾಮಾಶಾಸ್ತ್ರಿಗಳ  ಕರುಣಜೂಡವಮ್ಮ ವು ವರಾಳಿ ರಾಗದ ಉತ್ತಮ ಕತಿಗಳಲ್ಲಿ ಒಂದು. ಒಂದು ಕಾಲದಲ್ಲಿ ಎಲ್ಲರ ಬಾಯಲ್ಲಿ ನಲಿಯುತ್ತಿದ್ದ  ರಂಗಪುರ ವಿಹಾರ ವನ್ನು ಗಾಯಕಿ ಹಾಡುತ್ತಿದ್ದಂತೆಯೇ ಸಭೆಯಲ್ಲಿ ಹರ್ಷದ ಉದ್ಗಾರಗಳು ಕೇಳತೊಡಗಿದವು! ಕಿರುಸ್ವರಪ್ರಸ್ತಾರದೊಂದಿಗೆ ಹಾಡಿದ  ಶ್ರೀನಿವಾಸ ನೀನೇ ಪಾಲಿಸೊ ಸಹ ಹಸನು.

ಘನವಾದ ಶಂಕರಾಭರಣ ರಾಗವನ್ನು ವಿಸ್ತಾರಕ್ಕೆ ಆಯ್ದು, ವಿಶಾಲವಾಗಿ ಅರಳಿಸಿದರು. ಹಂತಹಂತವಾಗಿ ಬೆಳೆಸುತ್ತಾ ತಾರಸ್ಥಾಯಿಗೆ ತಲುಪಿ, ರಾಗದ ಒಂದು ಸುಂದರ ಚಿತ್ರ ಬಿಡಿಸಿದರು. ತ್ಯಾಗರಾಜರ ಎಂದೂ ಪ್ರಿಯವಾದ ಕೃತಿ ಸ್ವರರಾಗ ಸುಧಾವನ್ನು ಆಲಾಪನೆ, ಸ್ವರ ಪ್ರಸ್ತಾರಗಳಿಂದ ಅಲಂಕರಿಸಿದರು. ವಾದಿರಾಜ ಪ್ರಭುಗಳ ವಿಶಾಲ ಚಿತ್ರದಿಂದ ದಿವ್ಯವಾಗಿ ಕಾಣುತ್ತಿದ್ದ ವಿಶಾಲ ವೇದಿಕೆಯಿಂದ ಸ್ಫೂರ್ತಿ ಪಡೆದ ಗಾಯಕಿ ಹಿತಮಿತವಾಗಿ ಸ್ವರ ಹಾಕಿ, ಕಛೇರಿಯ ಸ್ವಾರಸ್ಯವನ್ನು ಕಾಪಾಡಿಕೊಂಡರು.

ಶೃಂಗೇರಿ ಸ್ವಾಮಿಗಳ ರಚನೆ `ಶಾರದೆ ಕರುಣಾನಿಧೆ~ ಹಾಗೂ ದಾಸರ ಅರ್ಥಪೂರ್ಣ ಪದ  `ನೀನ್ಯಾಕೊ ನಿನ್ನ ಹಂಗ್ಯಾಕೊ~ ರಾಗಮಾಲಿಕೆಯಲ್ಲಿ ಹಾಡಿ ಕೇಳುಗರಿಗೆ ಸಂತೋಷ ಕೊಟ್ಟರು.  `ಭಾವಯಾಮಿ ಗೋಪಾಲ~ ಭಾವಪೂರ್ಣವಾಗಿ ಹಾಡಿ, ವಾದಿರಾಜರ  ಮನ್ನಿಸೊ ಶ್ರೀ ವೆಂಕಟೇಶದೊಂದಿಗೆ ಮಂಗಳ ಹಾಡಿದರು. ಉತ್ತಮ ಕಂಠ, ಸಾಂಪ್ರದಾಯಿಕ ಚೌಕಟ್ಟು ಹಾಗೂ ಸದಭಿರುಚಿಯ ನಿರೂಪಣೆಗಳಿಂದ ಗಾಯತ್ರಿ ವೆಂಕಟರಾಘವನ್ ಸಭೆಯ ಗೌರವಕ್ಕೆ ಪಾತ್ರರಾದರು.

ಲಾಲ್‌ಗುಡಿ ವಿಜಯಲಕ್ಷ್ಮಿ ಪಿಟೀಲಿನಲ್ಲಿ ಒತ್ತಾಸೆ ನೀಡಿದರು. ವಿಶೇಷವಾಗಿ ಅವರ ಶಂಕರಾಭರಣ ಇಲ್ಲಿ ಸ್ಮರಣಾರ್ಹ. ಮನೋಜ್ ಶಿವ ಮೃದಂಗದಲ್ಲಿ ಯಾವ ಅತಿರೇಕಕ್ಕೂ ಕೈ ಹಾಕದೆ, ಸ್ವಾದ ತುಂಬಿದರೆ, ಬಿ.ಎಸ್. ಪುರುಷೋತ್ತಮ ಖಂಜರಿಯಲ್ಲಿ ಅನುಭವೀ ಜೊತೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT