ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ಆಯೋಗ ವರದಿ ತಿರಸ್ಕರಿಸಿ

Last Updated 7 ಆಗಸ್ಟ್ 2012, 8:45 IST
ಅಕ್ಷರ ಗಾತ್ರ

ಕಡೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಶಿಫಾರಸ ಮಾಡಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ತಾಲ್ಲೂಕಿನ ಲಂಬಾಣಿ, ಬೋವಿ, ಕೊರಚ, ಕೊರಮ ಸಮಾಜಗಳು ಬೃಹತ್ ಪ್ರತಿಭಟನೆ ಮಾಡಿ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಪಿಎಂಸಿ ಆವರಣದಿಂದ ಸೋಮವಾರ ಆರಂಭಗೊಂಡ ಪ್ರತಿಭಟನೆ ತುಂತುರು ಮಳೆ ಬೀಳುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಮೂಲಕ ಕೆಎಲ್‌ವಿ ವೃತ್ತ, ಜೈನ್ ಟೆಂಪಲ್ ರಸ್ತೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಪ್ರತಿಭಟಿಸಿ, ತಹಶೀಲ್ದಾರ್ ಬಿ.ಆರ್. ರೂಪಾ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಶಾಮನಾಯ್ಕ ಪರಿಶಿಷ್ಟ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸುದೀರ್ಘವಾಗಿ ಅಧ್ಯಯನ ಮಾಡಿ ಅಂಕಿ ಅಂಶಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರವು ಏಕವ್ಯಕ್ತಿ ಆಯೋಗವನ್ನು ನೇಮಕ ಮಾಡಿ ವರದಿ ಕೋರಿತ್ತು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳಲ್ಲಿನ ಉಪಜಾತಿಗಳನ್ನು ನಿಖರವಾಗಿ ಸಂಗ್ರಹಿಸದೇ, ಅನ್ಯಮಾರ್ಗಗಳಿಂದ ಅಂಕಿ ಅಂಶಗಳನ್ನು ಸಂಗ್ರಹಿಸಿ ವರದಿ ರಚಿಸಿ ತಾವು ನೀಡಿರುವ ವರದಿ ಅಂತಿಮ ತೀರ್ಮಾನ ಎಂಬಂತೆ ಸರ್ಕಾರಕ್ಕೆ ನೀಡಿದೆ. ಆದರೆ ಇದು ಸಂವಿಧಾನ ವಿರೋಧಿ ಬಾಹಿರ ಕೃತ್ಯ ಎಂದು ಆರೋಪಿಸಿದರು.

ಬಂಜಾರ ಸಂಘದ ಸಂಚಾಲಕ ಲಕ್ಷ್ಮಣನಾಯ್ಕ ಮಾತನಾಡಿ ಲಂಬಾಣಿ, ಬೋವಿ, ಕೊರಮ, ಕೊರಚ ಹಾಗೂ ಇತರೆ 99 ಉಪಜಾತಿಗಳು ಪರಿಶಿಷ್ಟರಲ್ಲೇ ಅತೀ ಕಡುಬಡವರಾಗಿದ್ದು, ಇವರಲ್ಲಿ ಕೂಲಿಗಾಗಿ ರಾಜ್ಯ ಮತ್ತು ಹೊರರಾಜ್ಯಗಳಿಗೆ ವಲಸೆ ಹೋಗುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಈ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿಖರವಾಗಿ ಎ.ಜೆ. ಸದಾಶಿವ ಅವರು ಅಧ್ಯಯನ ಮಾಡಿಲ್ಲ. ಪರಿಶಿಷ್ಟ ಜಾತಿಯವರಲ್ಲಿ ಒಡಕು ಮೂಡಿಸುವ ಜನವಿರೋಧಿ ಸಂವಿಧಾನ ಬಾಹಿರ ವರದಿ ಎಂದು ದೂರಿದರು.
ತಂಗಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಆರ್. ಶಿವಕುಮಾರ್ ಮಾತನಾಡಿ, ಸದಾಶಿವ ಆಯೋಗವು ಅವೈಜ್ಞಾನಿಕ ವರದಿ ನೀಡಿ ಒಂದು ಜಾತಿಯನ್ನು ಓಲೈಸುತ್ತಿರುವುದನ್ನು ನಮ್ಮ ಸಮುದಾಯಗಳು ತೀವ್ರವಾಗಿ ಖಂಡಿಸುತ್ತದೆ ಎಂದರು.

ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು. ಈಗಿರುವ ಮೀಸಲಾತಿಯ ಸ್ಥಿತಿಯನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಕೊರಚ-ಕೊರಮ ಸಮುದಾಯಗಳ ಮುಖಂಡರಾದ ಕೆ.ವಿ.ವಾಸು ಒತ್ತಾಯಿಸಿದರು.   

ಜಿಲ್ಲಾ ಪಂಚಾಯಿತಿ ಸದಸ್ಯೆ ಮಾಲಿನಿಬಾಯಿ ರಾಜನಾಯ್ಕ ಲಂಬಾಣಿ ಉಡುಗೆ ತೊಟ್ಟು ಪ್ರತಿಭಟನಕಾರರ ಗಮನಸೆಳೆದರು.

ಬೋವಿ ಸಮಾಜದ ಮುಖಂಡ ಷಣ್ಮಖ ಬೋವಿ, ಕೊರಚ ಕೊರಮ ಸಮುದಾಯಗಳ ಮುಖಂಡರಾದ ಕೆ.ವಿ.ವಾಸು, ಮೂರ್ತಿ, ನಾಗರಾಜು, ಲಂಬಾಣಿ ಸಮುದಾಯಗಳ ಮುಖಂಡರಾದ ಬಿ.ಟಿ. ಗಂಗಧರ ನಾಯ್ಕ, ದೇವಸಿಂಗ್‌ನಾಯ್ಕ, ಮಹೇಂದ್ರಕುಮಾರ್, ರಾಜನಾಯ್ಕ ಸಮಾಜದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಕುರಿತು ಹಾಗೂ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿದರು. ವಾಹನಗಳಲ್ಲಿ ಬಂದಿದ್ದ ಸಾವಿರಾರು ಪ್ರತಿಭಟನಾಕಾರರು ಸದಾಶಿವ ಆಯೋಗದ ವಿರುದ್ಧ ಘೋಷಣೆ ಮೊಳಗಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT