ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ನಗರದಲ್ಲೊಂದು `ಸಗಣಿ ಹಳ್ಳ'!

ನಗರ ಸಂಚಾರ
Last Updated 22 ಜುಲೈ 2013, 6:58 IST
ಅಕ್ಷರ ಗಾತ್ರ

ಬೆಳಗಾವಿ: ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿರುವ `ಸಗಣಿ ಹಳ್ಳ'. ಬಡಾವಣೆಯ ಸುತ್ತಲೆಲ್ಲ ದಿನವಿಡಿ ಹರಡಿಕೊಂಡಿರುವ ದುರ್ನಾತ. ಡೆಂಗೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹರಡಲು ಸಜ್ಜಾಗುತ್ತಿರುವ ಸೊಳ್ಳೆಗಳ ತಾಂಡವ ನೃತ್ಯ...!

ಮಹಾನಗರ ಪಾಲಿಕೆಯ ವಾರ್ಡ್ ನಂ. 43ರ ಸದಾಶಿವ ನಗರದ 2ನೇ ಮುಖ್ಯ ರಸ್ತೆಯಲ್ಲಿನ ಬೆಲ್ಲದಾರ ಛಾವಣಿ ಎದುರಿನ ರಸ್ತೆಯ ಬಳಿ ಹೋದರೆ ಇಂಥ ದೃಶ್ಯಗಳು ಕಣ್ಣಿಗೆ ರಾಚುತ್ತವೆ. ಇಲ್ಲಿನ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೂ, ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾತ್ರ `ಯಾರೇ ಕೂಗಾಡಲಿ, ಊರೇ ಹೋರಾಡಲಿ... ನಮ್ಮ ನೆಮ್ಮದಿಗೆ ಭಂಗವಿಲ್ಲ...' ಎಂದು ಹಾಡುತ್ತ ತೂಕಡಿಸುತ್ತಿದ್ದಂತಿದೆ.

ಸದಾಶಿವ ನಗರದ 2ನೇ ಮುಖ್ಯರಸ್ತೆಯಲ್ಲಿ ಬೆಲ್ಲದಾರ ಛಾವಣಿ ಬಳಿಯ ಸಾರ್ವಜನಿಕ ಶೌಚಾಲಯದ ಹಿಂದೆ ಇರುವ ಖಾಲಿ ನಿವೇಶನದಲ್ಲಿ ಈಗ `ಸಗಣಿ ಹಳ್ಳ' ಉದ್ಭವವಾಗಿದ್ದು, ಮಳೆ ಸುರಿದಾಗಲೆಲ್ಲ ಇದು 3ನೇ ಅಡ್ಡ ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದೆ. ಈ ರಸ್ತೆಗೆ ಹೊಂದಿಕೊಂಡಿರುವ ನಿವಾಸಿಗಳು ಸಂಚರಿಸಲು ಪರದಾಡುವಂತಾಗಿದೆ.

ಇಲ್ಲಿನ ಖಾಲಿ ನಿವೇಶನದಲ್ಲಿ ಹಲವು ವರ್ಷಗಳಿಂದ ನಿತ್ಯವೂ ಕಸ-ಕಡ್ಡಿ, ಎಮ್ಮೆ- ಆಕಳಿನ ಸಗಣಿ, ಮೂತ್ರಗಳನ್ನು ತಂದು ಎಸೆಯುತ್ತಿದ್ದಾರೆ. ಇದರಿಂದಾಗಿ ಇಡೀ ನಿವೇಶನ ಸಗಣಿಯಿಂದ ಆವೃತವಾಗಿದೆ. ಹೀಗಾಗಿ ರಸ್ತೆಯ ಮೇಲೆ ನಿಂತು ಈಗ ಸಗಣಿ- ಮೂತ್ರವನ್ನು ಹಾಕುತ್ತಿರುವುದರಿಂದ ಅವು ರಸ್ತೆಯನ್ನೇ ಆಕ್ರಮಿಸುತ್ತಿದೆ.

ಇದರಿಂದಾಗಿ ಸೊಳ್ಳೆ, ವಿವಿಧ ಬಗೆಯ ಹುಳು, ಕ್ರಿಮಿ-ಕೀಟಗಳು ಹುಟ್ಟಿಕೊಂಡಿವೆ. ಹಗಲಿನ ಹೊತ್ತಿನಲ್ಲೂ ಸೊಳ್ಳೆಗಳ ಕಾಟ ಇರುವುದರಿಂದ ಸ್ಥಳೀಯ ನಿವಾಸಿಗಳು ಅನಾರೋಗ್ಯದಿಂದ ಬಳಲುವಂತಾಗಿದೆ. ಡೆಂಗೆ, ಮಲೇರಿಯಾದಂತಹ ಮಾರಣಾಂತಿಕ ರೋಗ ಹರಡುವ ಭೀತಿ ಅವರನ್ನು ಕಾಡುತ್ತಿದೆ.
ಸಗಣಿ ಗೊಬ್ಬರದಿಂದಾಗಿ ನಿವೇಶನದೊಳಗೆ ಗಿಡಗಂಟಿಗಳು ಹುಲುಸಾಗಿ ಬೆಳೆದಿವೆ. ಹೀಗಾಗಿ ಹಂದಿಗಳ ದಂಡು ಇದರೊಳಗೆ ನೆಲೆಸುತ್ತಿದ್ದು, ರಾಡಿಗಳನ್ನು ಎಳೆದಾಡುತ್ತಿರುತ್ತವೆ.

ಇಲ್ಲಿ ಹಲವು ಹಂದಿಗಳು ಗಿಡಗಂಟಿಗಳ ಮರೆಯಲ್ಲಿ ಸತ್ತು ಬೀಳುತ್ತಿದ್ದು, ದುರ್ವಾಸನೆ ಬೀರುತ್ತದೆ. ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗೆ ನೂರಾರು ಮಕ್ಕಳು ದುರ್ನಾತದಿಂದ ಕೂಡಿರುವ ರಸ್ತೆಯಲ್ಲಿಯೇ ಹಾದು ಹೋಗುತ್ತಿರುವುದು ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅವಲತ್ತುಕೊಳ್ಳುತ್ತಾರೆ.

ಸಾರ್ವಜನಿಕ ಶೌಚಾಲಯದ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ಅದರಿಂದ ಹೊರ ಬರುವ ಹೊಲಸು  ನೀರು ಚರಂಡಿ ಕಟ್ಟಿಕೊಂಡಿರುವುದರಿಂದ ಅಲ್ಲಿಯೇ ನಿಂತು ನಿವೇಶನದೊಳಗೆ ಹರಿಯುತ್ತಿದೆ. ಸೊಳ್ಳೆಗಳ ಉಗಮಸ್ಥಾನವಾಗಿ ಮಾರ್ಪಟ್ಟಿದೆ. ಇದರ ಬಳಿಯ ಕಸದ ತೊಟ್ಟಿಯನ್ನು ಇಡಲಾಗಿದ್ದು, ದ್ರವ ತ್ಯಾಜ್ಯ ಸುತ್ತಲೆಲ್ಲ ಹರಿದಾಡುತ್ತಿದೆ. ಆಹಾರಕ್ಕಾಗಿ ಹಂದಿಗಳ ದಂಡು ಕಿತ್ತಾಡುತ್ತಿರುತ್ತವೆ.

`ಇಲ್ಲಿನ ಖಾಲಿ ನಿವೇಶನದಲ್ಲಿ ಸಗಣಿ, ಮೂತ್ರ ಎಸೆಯುತ್ತಿರುವುದರಿಂದ ಉಂಟಾಗುವ ಸಮಸ್ಯೆ ಬಗ್ಗೆ 2009ರಿಂದ ಮಹಾನಗರ ಪಾಲಿಕೆಗೆ ಹಲವು ಬಾರಿ ಲಿಖಿತವಾಗಿ ಮನವಿಗಳನ್ನು ನೀಡಿದ್ದೇವೆ. ಪಾಲಿಕೆ ಆಯುಕ್ತರು ಹಾಗೂ ಶಾಸಕ ಫಿರೋಜ್ ಸೇಠ್ ಅವರಿಗೂ ಮನವಿ ಸಲ್ಲಿಸಿದ್ದೇವೆ. ಈ ಪ್ರದೇಶವನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಕೆಲಸ ಮಾಡಿಲ್ಲ. ನಗರದಲ್ಲಿ ಡೆಂಗೆ ಜ್ವರಕ್ಕೆ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಹೀಗಿದ್ದರೂ ಸಹ ಪಾಲಿಕೆಯ ಆರೋಗ್ಯ ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ' ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು `ಪ್ರಜಾವಾಣಿ' ಬಳಿ ಅಳಲು ತೋಡಿಕೊಂಡರು.

`ಇಲ್ಲಿನ ಖಾಲಿ ನಿವೇಶನದ ಮಾಲೀಕರು ಯಾರು ಎಂಬುದು ನಮಗೆ ಗೊತ್ತಿಲ್ಲ. ಇಲ್ಲಿ ಸಗಣಿ, ಮೂತ್ರಗಳನ್ನು ಎಸೆಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಜಾಗವನ್ನು ಸ್ವಚ್ಛಗೊಳಿಸಿ, ಆವರಣ ಗೋಡೆ ನಿರ್ಮಿಸುವಂತೆ ಮಾಲೀಕರಿಗೆ ನೋಟಿಸ್ ನೀಡಬೇಕು. ಇಲ್ಲದಿದ್ದರೆ ಅವರಿಗೆ ಭಾರಿ ಪ್ರಮಾಣದ ದಂಡವನ್ನು ವಿಧಿಸುವ ಮೂಲಕ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯ ಕಾಪಾಡಲು ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕು' ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT