ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವನ ಧ್ಯಾನ

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಸದಾಶಿವನಿಗೆ ಅದೇ ಧ್ಯಾನ!
ನನಗೋ ಸದಾ
ಶಿವನ ಧ್ಯಾನ
ಮೌನಗರ್ಭದ ಒಳಗೆ
ಮಿಡುಕಾಡುತಿದೆ
ಅವನದೇ ಬಿಂಬ
ಹಾ! ಶಿವ ಶಿವಾ!
ನಿನ್ನೊಂದಿಗೆ ನನದು
ಮುಗಿಯದ ಬೇಟ
ಜೀವಕೊಟ್ಟು ಜೀವ ಪಡೆವ
ಜೀವಕಾಮದ ಆಟ

ಒಂದರೆಘಳಿಗೆ ಡಮರುಗ ಬದಿಗಿಟ್ಟು
ವಿರಮಿಸು ಗೆಳೆಯಾ
ಈ ಅಂತರಗಂಗೆಯ ನಾದ ಕೇಳು
ಸುಮ್ಮನೆ ತಲೆಮೇಲೆ
ಹೊತ್ತುನಡೆದರಾಯಿತೇನೊ
ಹುಂಬ ಶಂಭೂ...

ಧೀಂ ತಕಿಟ ಧೀಂ ತಕಿಟ
ನರ್ತನದ ಆವರ್ತನಕೆ
ಕಂಪಿಸುತಿದೆ ನವಿರೆದ್ದು
ಅಣುಅಣುವಿನೊಡಲು
ಕೂತು ಕೇಳೋಣವೇ
ಕಾಲದ ನೆರಳಿನಲ್ಲಿ?

ಶಬ್ದದಲಿ ಹುಟ್ಟಿದ ಜಗವು
ಶಬ್ದದಲೇ ಲಯವಾಗುವದು
ಮಧ್ಯೆ ಮೌನವ
ಮೊನಚು ಮೊನೆಗೊಳಿಸಿ
ಚಿತ್ರ ಬರೆಯುವಳು
ಸೃಷ್ಟಿ
ತನ್ನ ತಾನೇ ಸೃಜಿಪ
ಅವಳ ಸ್ನಿಗ್ಧ ಚಲುವಿಗೆ
ಮುಗ್ಧ ಒಲವಿಂದ
ಮೂರನೇ ಕಣ್ಣುತೆರೆ
ಇದ್ದರೆ!

ಅಯ್ಯ್ ಶಿವನೆ!
ಧ್ಯಾನಕ್ಕೆ ಕುಳಿತೆಯಾ ಕದಲದೆ?
ಹೋಗಯ್ಯ ಜೋಗಯ್ಯ
ನಿನ್ನ ಹಂಗು ನನಗೂ ಇಲ್ಲ
ಪದ್ಮಾಸನದಿ ಸ್ಥಿರವಾದ ನಿನ್ನ
ಸಿದ್ಧಭಂಗಿ
ಉನ್ಮೀಲಿತ ನೇತ್ರ
ಕಂಡು ಭಯಪಡಲು
ಚಿಕ್ಕ ಹುಡುಗಿಯಲ್ಲ ನಾನೇನು.

ಈಗಷ್ಟೇ ಮಗುವಿಗೆ
ಮೊಲೆಕೊಟ್ಟು ಬಂದಿರುವೆ
ಓ ಬೋಲೆನಾಥಾ...
ಮೊಲೆಕುಡಿದ ಮಗು ಹೀಗೇ
ಅರೆಗಣ್ಣು ತೆರೆದು
ಒರಗಿಕೊಂಡಿತು ಕಣೋ
ನನ್ನೆದೆಗೆ ತೃಪ್ತಿಯಿಂದ.

ಓ ಮಹಾಕಾಲ ಮಹಾಜ್ಞಾನಿ
ಮಹಾರುದ್ರ ಮಹಾಯೋಗಿ
ಹರಹರ ಮಹಾದೇವ ಸ್ವಯಂಭೂ...
ಉಬ್ಬಿಹೋದೆಯಾ ಮಗೂ...
ಓಹೋಹೋ ಜಂಭ ನೋಡು!

ನೀನು ಲಯಗೊಳಿಸಿದಂತೆಲ್ಲ
ಉಸಿರ ಶಹನಾಯಿ ನುಡಿಸಿ
ರಚಿಸಬಲ್ಲೆ ಲೋಕಗಳ
ಲೀಲೆಯಲಿ ಮತ್ತೆಮತ್ತೆ
ಚೆದುರಿದ ಅಗ್ನಿಗರ್ಭಗಳ ಒಟ್ಟಿ
ಕಟ್ಟಬಲ್ಲೆನೋ ಕರುಳಬಳ್ಳಿಯಲ್ಲಿ

ಗಟ್ಟಿಕಾಳು ಮಣ್ಣಲ್ಲಿ ಮಿದುವಾಗಿ
ಹಸಿಮೊಳಕೆ ಮೆಲ್ಲಗೆ ಬಿರಿಯುವದು
ಎದೆಯ ತೇವಕೆ ಕಣ್ಣು ಹನಿಯುವದು
ಭಾವಬಲಿತು ಪ್ರೇಮದಲಿ ಹಣ್ಣಾಗುವದು
ಹುಟ್ಟು ಗುಟ್ಟೊಡೆದು ಬರುವ
ವಿಸ್ಮಯಕೆ ಮೈಯಾಗು ಗೆಳೆಯಾ
ಒಡಲೊಳಗೆ ಮೊಳೆವೆಯಾದರೆ ಹೇಳು
ಧರಿಸಬಲ್ಲೆ ನಿನ್ನನೂ ಧ್ಯಾನದಂತೆ
ನನ್ನೊಳಗೆ ಹರಿದಾಡುವ ಪ್ರೇಮದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT