ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದುದ್ದೇಶ ಅರಿಯಲಿ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಓಲೈಕೆ ರಾಜಕಾರಣ ದೇಶದಲ್ಲಿ ತುತ್ತತುದಿ ತಲುಪಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಉಚಿತ `ಸೇವೆ'ಗಳು ಮೊದಲ ಮನ್ನಣೆ ಪಡೆದಿವೆ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವಂತಹ ಯೋಜನೆಗಳು ಸವಕಲಾಗಿವೆ. ಟಿ.ವಿ., ಲ್ಯಾಪ್‌ಟಾಪ್, ಸೈಕಲ್, ಮೊಬೈಲ್ ಸಾಧನಗಳನ್ನು ಉಚಿತವಾಗಿ ಪೂರೈಸಿ ಮತದಾರರ ಮನ ಗೆಲ್ಲುವ ಹುನ್ನಾರಗಳು ಹೆಚ್ಚತೊಡಗಿವೆ.

ಮಧ್ಯಪ್ರದೇಶ, ರಾಜಸ್ತಾನ, ಜಮ್ಮು ಮತ್ತು ಕಾಶ್ಮೀರ ಒಳಗೊಂಡಂತೆ ಹಲವು ರಾಜ್ಯಗಳಿಗೆ ವರ್ಷಾಂತ್ಯದಲ್ಲಿ ಚುನಾವಣೆ ಎದುರಾಗಲಿದೆ. ಪ್ರಣಾಳಿಕೆಗಳಲ್ಲಿ ಉಚಿತ ಕೊಡುಗೆಯ ಭರವಸೆಗಳು ಪ್ರವಾಹವಾಗಿ ಹರಿಯುವ ಸಾಧ್ಯತೆಗಳು ಇದ್ದೇ ಇವೆ. ಬೊಕ್ಕಸದ ಹಣ ಇಂತಹ ಅನುತ್ಪಾದಕ ಕಾರ್ಯಕ್ರಮಗಳಿಗೆ ಪೋಲಾಗುತ್ತಿರುವುದಕ್ಕೆ ಯೋಜನಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ಸಕಾಲಿಕ.

ದಶಕದ ಹಿಂದಿನ ರಾಜಕಾರಣದ ರೀತಿ ನೀತಿ ಬೇರೆಯಾಗಿತ್ತು. ಚುನಾವಣೆ ಸಮೀಪಿಸಿದಾಗ ಒಂದಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವ ಪರಿಪಾಠ ರೂಢಿಯಲ್ಲಿತ್ತು. ಈಗ ಸ್ಥಿತಿ ಬದಲಾಗಿದೆ. ಅಧಿಕಾರಕ್ಕೆ ಬಂದವರ ದೃಷ್ಟಿ ಅವಧಿ ಉದ್ದಕ್ಕೂ ಜನಪ್ರಿಯ ಕಾರ್ಯಕ್ರಮಗಳ ಕಡೆಗೇ ನೆಟ್ಟಿರುತ್ತದೆ. ಅವುಗಳನ್ನು ಜಾರಿಗೊಳಿಸುವಷ್ಟಕ್ಕೇ ಅವರ ಗಮನ ಸೀಮಿತವಾಗಿರುತ್ತದೆ. ಕಾರ್ಯಕ್ರಮಗಳನ್ನು ಪ್ರಕಟಿಸಿದ ಮೇಲೆ ಸಾಧಕ-ಬಾಧಕಗಳ ಕುರಿತು ಯೋಚಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗದ್ದುಗೆ ಏರಿದ ಕೂಡಲೇ ಬಿಪಿಎಲ್ ಕಾರ್ಡುದಾರರಿಗೆ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲಿ ತಿಂಗಳಿಗೆ 30 ಕೆ.ಜಿ. ಅಕ್ಕಿ ನೀಡುವುದಾಗಿ ಪ್ರಕಟಿಸಿತು. ಆದರೆ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಹೊಂದಿಸಲಾಗದೆ ಜಾರಿ ದಿನವನ್ನು ಮುಂದೂಡಿದ್ದು ಇದಕ್ಕೊಂದು ಇತ್ತೀಚಿನ ನಿದರ್ಶನ.

ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವ ಭರವಸೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲೇ ಸೇರಿಸಿವೆ. ವಿದ್ಯುತ್ ಕೊರತೆ ರಾಜ್ಯದ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸಿದೆ. ವಿದ್ಯುತ್ ಉತ್ಪಾದನೆಗೆ ಹೊಸ ಯೋಜನೆಗಳನ್ನು ರೂಪಿಸಿ, ಸಮಯ ಮಿತಿಯಲ್ಲಿ ಜಾರಿಗೊಳಿಸುವ ಕುರಿತು ಚಿಂತಿಸಬೇಕಾದ ಪಕ್ಷಗಳು ಈ ಬಗೆಯ ಭರವಸೆಗಳಿಗೆ ತಮ್ಮ ವಿವೇಚನೆಯನ್ನು ವಿನಿಯೋಗಿಸುತ್ತಿವೆ.

ಕೃಷಿ, ಗ್ರಾಮೀಣ ಅಭಿವೃದ್ಧಿ, ಕುಡಿಯುವ ನೀರು, ನೈರ್ಮಲ್ಯ, ನೀರಾವರಿ, ಅರೋಗ್ಯದಂತಹ ಮೂಲ ಕ್ಷೇತ್ರಗಳ ಕಡೆಗೆ ಗಮನ ಕೊಡಬೇಕಾಗಿದೆ. ಮೂಲ ಸೌಕರ್ಯಗಳ ಕೊರತೆ ಬಹುಪಾಲು ರಾಜ್ಯಗಳ ದೊಡ್ಡ ಸಮಸ್ಯೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಇಂದಿನ ತುರ್ತು ಅಗತ್ಯ. ರಾಜ್ಯ ಸರ್ಕಾರಗಳು ರೂಪಿಸುವ ಜನಪ್ರಿಯ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ.

ಇವುಗಳ ವೆಚ್ಚವನ್ನು ಆಯಾ ರಾಜ್ಯದ ಬೊಕ್ಕಸದಿಂದಲೇ ಭರಿಸುವ ಕಾರಣ ಕೇಂದ್ರ ಮಧ್ಯಪ್ರವೇಶಿಸಲಾಗದು. ಆದರೆ, ವಿತ್ತೀಯ ಕೊರತೆಗೆ ದಾರಿ ಮಾಡಿಕೊಡುವುದಿಲ್ಲ ಎಂದು ಖಾತರಿ ಒದಗಿಸುವಂತೆ ಯೋಜನಾ ಆಯೋಗ ಸೂಚಿಸಬಹುದು. ಮೂಲ ಸೌಕರ್ಯ ಕಲ್ಪಿಸಲು ಗಮನ ಕೇಂದ್ರೀಕರಿಸುವಂತೆ ಆಯೋಗ ನೀಡಿರುವ ಸಲಹೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT