ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಡತೆಯ ಕೈದಿಗಳ ಬಿಡುಗಡೆಗೆ ಆಗ್ರಹ

Last Updated 20 ಜೂನ್ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ಕಾರಾಗೃಹದಲ್ಲಿರುವ ಸನ್ನಡತೆಯುಳ್ಳ ಕೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಶೀಘ್ರದಲ್ಲೇ ಕೈದಿಗಳ ಬಿಡುಗಡೆಗೆ ಮುಂದಾಗದಿದ್ದಲ್ಲಿ ಇದೇ 27 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು~ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

`ಸಂವಿಧಾನದ 72 ಮತ್ತು 161 ನೇ ವಿಧಿಯನ್ವಯ ಕೈದಿಗಳನ್ನು ಬಿಡುಗಡೆ ಮಾಡಲು ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರ ಈ ವರೆಗೆ ಕೈದಿಗಳ ಬಿಡುಗಡೆಗೆ ಸರಿಯಾದ ಕ್ರಮ ಕೈಗೊಂಡಿಲ್ಲ. ರಾಜ್ಯಪಾಲರಿಗೂ ಸಹ ಅಧಿಕಾರವಿದ್ದರೂ ಸಹ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ~ ಎಂದು ದೂರಿದರು.

`ಕಾನೂನಿನ ಅನ್ವಯ 7 ವರ್ಷ ಶಿಕ್ಷೆ ಪೂರೈಸಿದ ಪುರುಷ, 4 ವರ್ಷ ಶಿಕ್ಷೆ ಪೂರೈಸಿದ ಮಹಿಳೆ ಹಾಗೂ 65 ವರ್ಷ ಮೇಲ್ಪಟ್ಟ ವಯಸ್ಸಿನ ಕೈದಿಗಳನ್ನು ಬಿಡುಗಡೆ ಮಾಡಬಹುದು. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಈ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸರ್ಕಾರ 2006 ರಲ್ಲಿ 309 ಕೈದಿಗಳನ್ನು ಬಿಡುಗಡೆ ಮಾಡಿರುವುದನ್ನು ಬಿಟ್ಟರೆ ಮತ್ಯಾರನ್ನೂ ಬಿಡುಗಡೆ ಮಾಡಿಲ್ಲ~ ಎಂದರು.

`ರಾಜ್ಯಪಾಲ ಭಾರದ್ವಾಜ್ ಅವರ  ಹಠಮಾರಿತನ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕೈದಿಗಳು ಕಾರಾಗೃಹದಲ್ಲಿ ಕೊಳೆಯುವಂತಾಗಿದೆ. ಪ್ರತಿ ಜಿಲ್ಲೆಯಿಂದ ಕೈದಿಗಳ ಬಿಡುಗಡೆ ಮಾಡಲು ಜಿಲ್ಲಾಧಿಕಾರಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಗಳು ಸರ್ಕಾರಕ್ಕೆ ಪಟ್ಟಿ ಸಲ್ಲಿಸಿ ವರ್ಷ ಕಳೆದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ~ ಎಂದು ಆರೋಪಿಸಿದರು.

ಸಚಿವರ ಹೇಳಿಕೆಗೆ ವಿರೋಧ: `ಸಚಿವ ಮುಮ್ತಾಜ್ ಅಲಿ ಖಾನ್ ಟಿಪ್ಪು ಸುಲ್ತಾನ ಒಬ್ಬ ಸಂತ. ಆತ ಜನ್ಮ ದಿನದಂದು ಸರ್ಕಾರಿ ರಜೆ ಘೋಷಿಸಬೇಕು ಎಂದು ಇತ್ತೀಚೆಗೆ ಹೇಳಿದ್ದರು. ಅವರು ನೀಡಿರುವ ಹೇಳಿಕೆ ಸರಿಯಲ್ಲ. ಅವನೊಬ್ಬ ದೇಶ ದ್ರೋಹಿ, ಹಿಂದೂ ಧರ್ಮದ ವಿರೋಧಿ ಆತನ ಹೆಸರಿನಲ್ಲಿ ರಜಾ ಘೋಷಿಸಿದರೆ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು~ ಎಂದು ಹೇಳಿದರು.

 `ಬಾರ್‌ಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಬಹುದಾಗಿ  ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಬಾರ್‌ಗಳಲ್ಲಿ ಮಹಿಳೆಯರು ಕೆಲಸ ಮಾಡಲು ನಮ್ಮ ವಿರೋಧವಿಲ್ಲ. ಆದರೆ ರಾತ್ರಿ ವೇಳೆ ಅವರು ಕೆಲಸ ನಿರ್ವಹಿಸಲು ನಮ್ಮ ಆಕ್ಷೇಪವಿದೆ~ ಎಂದು ಹೇಳಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT