ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಯಾಸಿಯ ದಾಳಿಂಬೆ ಕೃಷಿ!

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆ ದೊಡ್ಡ ಗೇಟು ತೆಗೆದು ಒಳ ಹೊಕ್ಕರೆ, ಬಲಬದಿಯಲ್ಲಿ ಬೃಹತ್ ಕೃಷಿ ಹೊಂಡ. ಎಡಬದಿಯಲ್ಲಿ ಪುಟ್ಟ ಕಟ್ಟಡ. ಎದುರಿನಲ್ಲಿ ಬೃಹತ್ ದಾಳಿಂಬೆ ತೋಟ. ತೋಟವನ್ನು ಸೀಳಿರುವ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಇಕ್ಕೆಲಗಳಲ್ಲಿ ಗೊಂಚಲು ದಾಳಿಂಬೆ ಹಣ್ಣುಗಳೊಂದಿಗೆ ಬಾಗಿರುವ ಗಿಡಗಳು ಸಹೃದಯರನ್ನು ಸ್ವಾಗತಿಸುತ್ತವೆ. ದೂರದಲ್ಲಿ ಸಣ್ಣದಾಗಿ ಮಂತ್ರ ಘೋಷಗಳು ಮೊಳಗಿದಂತೆ ಕೇಳುತ್ತದೆ. ದಾಳಿಂಬೆ ಗಿಡಗಳ ನಡುವೆ ಸ್ವಾಮೀಜಿಯೊಬ್ಬರು ಹೆಜ್ಜೆ ಹಾಕುತ್ತಾ, ಗಿಡಗಳ ಆರೈಕೆಯಲ್ಲಿ ನಿರತರಾಗಿರುವ ದೃಶ್ಯವೂ ಕಾಣಿಸುತ್ತದೆ.

ಹೊಸದುರ್ಗ ತಾಲ್ಲೂಕಿನ ಗಡಿಗ್ರಾಮ ಹೊಸಕೆರೆ ಸಮೀಪದ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಅವರು ನಿರ್ಮಿಸಿರುವ ದಾಳಿಂಬೆ ತೋಟ ಕಾಣುವ ಪರಿ ಇದು. ಈ ತೋಟ ಕೇವಲ ಕೃಷಿ ಕ್ಷೇತ್ರವಷ್ಟೇ ಅಲ್ಲ, ಕಾಯಕ ಯೋಗಿಗಳ ಆಶ್ರಮವೂ ಹೌದು. ಈ ತೋಟದಿಂದ ಬರುವ ಪೈಸೆ ಪೈಸೆ ಆದಾಯವೂ ಮಠದ ನಿರ್ಮಾಣಕ್ಕೆ ಬಳಕೆಯಾಗುತ್ತದೆ ಎಂಬುದು ವಿಶೇಷ.
ಸನ್ಯಾಸಿಯ ದಾಳಿಂಬೆ ನಂಟು!

ಕುಂಚಿಟಿಗ ಪೀಠಾಧ್ಯಕ್ಷರಾಗಿ 2008ರಲ್ಲಿ ದೀಕ್ಷೆ ಪಡೆದ ಸ್ವಾಮೀಜಿ ಹೊಸದುರ್ಗದಲ್ಲಿ ಮಠ ಕಟ್ಟುವ ಕಾಯಕದಲ್ಲಿ ನಿರತರಾದರು. ಭಕ್ತರಿಂದ ಮಾನಸಿಕ ಬೆಂಬಲ ದೊರೆತರೂ ಹೇಳಿಕೊಳ್ಳುವಂತಹ ಆರ್ಥಿಕ ನೆರವು ದೊರೆಯಲಿಲ್ಲ. ‘ಬೇರೆಯವರ ಎದುರು ಕೈಚಾಚಿ ಮಠ ಕಟ್ಟುವ ಅವಶ್ಯಕತೆ ಇಲ್ಲ’ ಎಂಬ ಸ್ವಾಭಿಮಾನ ಸ್ವಾಮೀಜಿ ಅವರದು. ಆದರೆ, ನಿಧಿ ಯಾವ ಪ್ರಯತ್ನವೂ ಇಲ್ಲದೆ ದೊರೆಯುವುದು ಹೇಗೆ? ಈ ಜಿಜ್ಞಾಸೆಯಲ್ಲಿ ಸ್ವಾಮೀಜಿ ಅವರಿಗೆ ಹೊಳೆದದ್ದು ಕೃಷಿ ಕಾಯಕ. ಅಂದಿನಿಂದ ಅವರು ‘ಕೃಷಿ ಸ್ವಾಮೀಜಿ’ ಆದರು.

ರೈತನಾಗಬೇಕು ಎಂದು ನಿರ್ಧರಿಸಿದ್ದಾಯಿತು. ಮುಂದಿನದು ಬೆಳೆ ನಿರ್ಣಯದ ಕೆಲಸ. ಆಗ ಅವರ ಮನದಲ್ಲಿ ಮೊಳೆದಿದ್ದು ದಾಳಿಂಬೆ ಕೃಷಿ. ‘ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ’ ಎಂದೂ ನಷ್ಟವಾಗುವುದಿಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ದಾಳಿಂಬೆ ಕೃಷಿಗೆ ಮುಂದಾದರು.

ಭೋಗ್ಯದ ನೆಲದಲ್ಲಿ...
ಕೃಷಿ ಮಾಡಲು ಮುಂದಾದರೂ ಮಠಕ್ಕೆ ಸ್ವಂತ ಭೂಮಿ ಇರಲಿಲ್ಲ. ಕೃಷಿ ಮಾಡಬೇಕೆನ್ನುವ ಸ್ವಾಮೀಜಿ ಅವರ ಉತ್ಸಾಹಕ್ಕೆ ಹೊಸಕೆರೆಯ ಕೃಷಿಕ ಎಚ್.ಆರ್. ಕಲ್ಲೇಶಪ್ಪ ನೀರೆರೆದರು. ಗ್ರಾಮದ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸೇರಿದ 25 ಎಕರೆ ಭೂಮಿಯನ್ನು ಸ್ವಾಮೀಜಿಯವರಿಗೆ 25 ವರ್ಷಕ್ಕೆ ಗುತ್ತಿಗೆ ನೀಡಲು ಗ್ರಾಮಸ್ಥರನ್ನು ಒಪ್ಪಿಸಿದರು. ಎಕರೆಗೆ 1000 ರೂಪಾಯಿ ಗುತ್ತಿಗೆ. ಸಮಿತಿಗೆ ಜಮೀನು ಬಿಟ್ಟುಕೊಡುವಾಗ ಎಲ್ಲ ಮೂಲಸೌಲಭ್ಯಗಳನ್ನು ದೇವಾಲಯ ಸಮಿತಿಗೆ ಉಳಿಸುವ ನಿಬಂಧನೆಯೊಂದಿಗೆ ‘ಭೋಗ್ಯ’ದ ನೆಲ ದಾಳಿಂಬೆ ವೈಭೋಗಕ್ಕೆ ತಳಹದಿಯಾಯಿತು.

ಕೃಷಿ ಭೂಮಿ ಸಿಕ್ಕಿತು. ಆದರೆ ಕೃಷಿ ಮಾಡುವುದಕ್ಕೆ ಮಠದಲ್ಲಿ ಹಣವಿಲ್ಲ. ಸಾಲ ಮಾಡಿಯಾದರೂ ತೋಟ ಮಾಡೋಣ ಎಂದುಕೊಂಡು ಮಠದ ಆತ್ಮೀಯರ ಬಳಿ ಶೇ 2 ವಾರ್ಷಿಕ ಬಡ್ಡಿಯಂತೆ ಅಗತ್ಯ ಮೊತ್ತದ ಸಾಲ ಮಾಡಿದರು. 22 ಎಕರೆ ಭೂಮಿಯಲ್ಲಿ ಐದು ಸಾವಿರ ‘ಭಗುವಾ’ ದಾಳಿಂಬೆ ತಳಿಯನ್ನು ನಾಟಿ ಮಾಡಲಾಯಿತು. ಹತ್ತು ಕೊಳವೆಬಾವಿಗಳು, 20 ಲಕ್ಷ ಲೀಟರ್‌ಗೂ ಹೆಚ್ಚು ನೀರು ಸಂಗ್ರಹಿಸುವ ಕೃತಕ ಕೃಷಿ ಹೊಂಡ ಸಿದ್ಧಗೊಂಡವು. ಗ್ರಾಮದ ಸುತ್ತಲಿನ ಕೂಲಿ ಕಾರ್ಮಿಕರ ನೆರವಿನೊಂದಿಗೆ ಜೊತೆಗೆ 2011ರಲ್ಲಿ ದಾಳಿಂಬೆ ಕೃಷಿ ವಿಧ್ಯುಕ್ತವಾಗಿ ಆರಂಭವಾಯಿತು.

ದಾಳಿಂಬೆ ಬೆಳೆ ಆರಂಭಕ್ಕೆ ಮುನ್ನ ಸ್ವಾಮೀಜಿಯವರು ನೂರಾರು ದಾಳಿಂಬೆ ತೋಟ ಸುತ್ತಿ ಬಂದರು. ಕೃಷಿಯಲ್ಲಿ ಪರಿಣತಿ ಪಡೆದವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ದಾಳಿಂಬೆ ತಜ್ಞ ಧರಣಪ್ಪ ಅವರ ಮಾರ್ಗದರ್ಶನ ಕೃಷಿಗೆ ಹೆಚ್ಚು ಶಕ್ತಿ ತುಂಬಿತು.

‘ಪ್ರತಿ ಗಿಡಕ್ಕೆ 500 ರಿಂದ 600 ರೂಪಾಯಿ ಖರ್ಚು. ಇದರಲ್ಲಿ ಕೊಳವೆಬಾವಿ, ಗೊಬ್ಬರ, ಸಸಿ, ಕೃಷಿ ಹೊಂಡ, ಬೇಲಿ, ಹನಿ ನೀರಾವರಿಗೆ, ಕೂಲಿಕಾರ್ಮಿಕರಿಗೆ ಸಂಬಳ.. ಹೀಗೆ ಎಲ್ಲ ಸೇರುತ್ತದೆ. ಜಮೀನು ಹದ ಮಾಡಿಸುವುದಕ್ಕೆ ಹೆಚ್ಚು ಹಣ ಖರ್ಚು. 2 ಗುಂಟೆ ವಿಸ್ತಾರದಲ್ಲಿ (72 ಅಡಿ ಅಗಲ, 72 ಅಡಿ ಉದ್ದ, 10 ಅಡಿ ಆಳ) ಕೃಷಿ ಹೊಂಡ ಮಾಡಿಸಿದ್ದೇವೆ. ಕೊಳವೆಬಾವಿ ಇದ್ದರೂ, ಈ ಹೊಂಡದ ನೀರನ್ನೇ ಡ್ರಿಪ್ ಮೂಲಕ ಗಿಡಗಳಿಗೆ ಹರಿಸುತ್ತೇವೆ. ಇದರಿಂದ ನೀರು ಪೋಲಾಗುವುದಿಲ್ಲ. ಜೊತೆಗೆ ವಿದ್ಯುತ್ ಅಭಾವವಿರುವುದರಿಂದ ಗಿಡಗಳಿಗೆ ಅಗತ್ಯವಿದ್ದಾಗಷ್ಟೇ ನೀರು ಪೂರೈಸಲು ಅನುಕೂಲ’ ಎನ್ನುವುದು ಸ್ವಾಮೀಜಿ ಅಭಿಪ್ರಾಯ.

ಸಾವಯವ-ರಾಸಾಯನಿಕ ಮಿಶ್ರಿತ
ಗಿಡದ ನಾಟಿ ಮಾಡುವಾಗ ಹೇರಳವಾಗಿ ಹಟ್ಟಿಗೊಬ್ಬರ ಬಳಸಲಾಗುತ್ತದೆ. ಗಿಡ ಬೆಳೆಯುತ್ತಿದ್ದಾಗ ವಿಜ್ಞಾನಿಗಳ ಸಲಹೆಯಂತೆ ರಸಗೊಬ್ಬರ ಹಾಗೂ ಸಕಾಲದಲ್ಲಿ ಕೀಟನಾಶಕ ಪೂರೈಸುವುದು ಅನಿವಾರ್ಯ. ಹಾಗಾಗಿ ಇದು ಸಾವಯವ - ರಾಸಾಯನಿಕ ವಿಧಾನಗಳ ಮಿಶ್ರಣದ ತೋಟ.

ದಾಳಿಂಬೆ ತೋಟದಲ್ಲಿ ಉಳುಮೆಯಿಲ್ಲ. ಹಾಗೆಂದು ಇದು ಶೂನ್ಯ ಬೇಸಾಯ ಕೃಷಿಯಲ್ಲ. ಕಲ್ಲು ನೆಲವಾದ್ದರಿಂದ ಗಿಡ ನಾಟಿ ಮಾಡುವ ಭಾಗವನ್ನಷ್ಟೇ ಸಡಿಲಗೊಳಿಸಲಾಗಿದೆ. ವರ್ಷದ ಹೊತ್ತಿಗೆ ಮೊದಲ ಫಸಲು ಆರಂಭವಾಗಿದೆ. ಉತ್ತಮ ಆರೈಕೆಯ ಪ್ರತಿಫಲವಾಗಿ ಪ್ರತಿ ಗಿಡದಲ್ಲಿ 200–250 ಹಣ್ಣುಗಳು ತೊನೆದಾಡುತ್ತಿವೆ. ‘ಒಂದೊಂದು ಗೊಂಚಲಲ್ಲಿ 12 ಹಣ್ಣುಗಳಿವೆ. ಒಂದೊಂದು ಕಾಯಿ 650 ಗ್ರಾಂವರೆಗೂ ತೂಗುತ್ತವೆ. ಕಾಳುಗಳು ಕಡುಗೆಂಪು. ರುಚಿ ತುಂಬಾ ಸೊಗಸು' ಎನ್ನುತ್ತಾರೆ ಸ್ವಾಮೀಜಿ.

ಗಿಡಗಳಿಗೆ ರೋಗ, ಕಾಯಿಗೆ ಕೀಟ ಬಾಧೆ ಇದೆ. ಔಷಧಿ ಹೊಡೆದರೂ ಕೀಟಬಾಧೆ ತಪ್ಪುವುದಿಲ್ಲ. ಪಕ್ಕದಲ್ಲೇ ಕಾಡು ಇರುವುದರಿಂದ ಗಿಳಿ, ಗೊರವಂಕಗಳ ಹಾವಳಿ ಇದೆ. ‘ಇವೆಲ್ಲದಿಂದ ಕನಿಷ್ಠ ಒಂದು ಫಸಲಿಗೆ ಶೇ 10ರಷ್ಟು ಹಣ್ಣು ನಷ್ಟವಾಗುತ್ತದೆ (4ರಿಂದ 5 ಲಕ್ಷ ರೂಪಾಯಿ). ಹುಳುಗಳು, ಪಕ್ಷಿಗಳ ಪಾಲಾಗುವುದರಿಂದ ನಿಸರ್ಗಕ್ಕೆ ನೇವೇದ್ಯ ಮಾಡಿದಂತೆ ಎನ್ನುವುದ ಅವರ ಅಭಿಪ್ರಾಯ.

ಲಾಭ - ನಷ್ಟದ ಲೆಕ್ಕಾಚಾರ
22 ಎಕರೆ ತೋಟದಲ್ಲಿ ಐದು ಸಾವಿರ ಗಿಡಗಳಿವೆ. ಇದು ಎರಡನೇ ಬೆಳೆ. ಆರಂಭದಲ್ಲಿ 42 ಲಕ್ಷ ರೂಪಾಯಿ ಬಂಡವಾಳ ತೊಡಗಿಸಲಾಗಿತ್ತು. ಮೊದಲ ಬೆಳೆಯಲ್ಲಿ ದೊರೆತದ್ದು 72 ಲಕ್ಷ ರೂಪಾಯಿ ಲಾಭ. ಈಗ ಎರಡನೇ ಬೆಳೆ ಸಿದ್ಧವಾಗಿದೆ. 1.8 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗುತ್ತಿದೆ. ತೋಟದ ಬಳಿಗೆ ಮಾರ್ಕೆಟ್ ಬರುತ್ತದೆ. ಹಾಗಾಗಿ ಮಾರ್ಕೆಟ್ ಚಿಂತೆಯಿಲ್ಲ. 

‘ಪ್ರಸ್ತುತ ದೊರೆತಿರುವ ಯಶಸ್ಸು ದಾಳಿಂಬೆ ಜೊತೆಗೆ ಬೇರೆ ಬೇರೆ ಹಣ್ಣಿನ ತೋಟಗಳನ್ನು ಮಾಡಬೇಕೆಂಬ ಉತ್ಸಾಹಕ್ಕೆ ಕಾರಣವಾಗಿದೆ' ಎನ್ನುತ್ತಾರೆ ಶಾಂತವೀರ ಶ್ರೀಗಳು. ‘ಒಮ್ಮೆ ನೆಟ್ಟ ದಾಳಿಂಬೆ ಗಿಡಗಳು ಆರೋಗ್ಯ ಪೂರ್ಣವಾಗಿದ್ದರೆ 12 ವರ್ಷ ಬದುಕುತ್ತವೆ. ಆರಂಭದಲ್ಲಿ ಬಂಡವಾಳ ಹೆಚ್ಚು. ನಂತರದ ವರ್ಷಗಳಲ್ಲಿ ಅದು ಶೇ 50ರಷ್ಟು ಕಡಿತಗೊಳ್ಳುತ್ತದೆ’ಎನ್ನುವುದು ಅವರ ಲೆಕ್ಕಾಚಾರ.

ಈ ಲೆಕ್ಕಾಚಾರಗಳನ್ನೆಲ್ಲ ಬದಿಗಿಟ್ಟು ಮಾತನಾಡುವ ಎಚ್.ಆರ್.ಕಲ್ಲೇಶಪ್ಪ– ‘ಕಲ್ಲು ನೆಲದಲ್ಲಿ ಸ್ವಾಮೀಜಿ ಹಣ್ಣನ್ನು ಅರಳಿಸಿದ್ದಾರೆ. ಸುತ್ತಲಿನ ಕೃಷಿಕರನ್ನು ಉತ್ತೇಜಿಸಿದ್ದಾರೆ. 2 ವರ್ಷಗಳ ಹಿಂದೆ ಹೊಸದುರ್ಗ ವ್ಯಾಪ್ತಿಯಲ್ಲಿ 40 ದಾಳಿಂಬೆ ತೋಟಗಳಿದ್ದವು. ಈಗ ಸಾವಿರಾರು ತೋಟಗಳಾಗಿವೆ. ಜೊತೆಗೆ ಅಕ್ಕಪಕ್ಕದ ಹಳ್ಳಿಗರು ಗುಳೆ ಹೋಗುವುದನ್ನು ಬಿಟ್ಟು, ದಾಳಿಂಬೆ ತೋಟಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ’ ಎಂದು ಸ್ವಾಮೀಜಿಯವರ ಶ್ರಮವನ್ನು ಪ್ರಶಂಸಿಸುತ್ತಾರೆ.

ಎಲ್ಲವೂ ಸರಿ... ಆದರೆ...
ಸ್ವಾಮೀಜಿಯವರ ದಾಳಿಂಬೆ ಕೃಷಿ ಲೋಕ, ಬರದ ನಾಡಿನ ಕೃಷಿಕರಿಗೆ ಪರ್ಯಾಯ ಕೃಷಿ ಮಾರ್ಗ ತೆರೆದಿಟ್ಟಿದೆ. ಆದರೆ, ದಾಳಿಂಬೆ ಗಿಡಗಳಿಗೆ ಉಣಿಸುತ್ತಿರುವ ಕ್ರಿಮಿನಾಶಕ, ರಸಗೊಬ್ಬರಗಳು, ಆ ಜಮೀನಿನ ಮಣ್ಣನ್ನೇ ಕೊಂದುಹಾಕುತ್ತವೆ. ಒಂದೊಮ್ಮೆ ದಾಳಿಂಬೆ ಕೃಷಿಯ ಯುಗಾಂತ್ಯವಾದರೆ (ವೆನಿಲ್ಲಾ ತರಹ) ವಿಷದ ಭೂಮಿಯಲ್ಲಿ ಏನು ಬೆಳೆಯಲು ಸಾಧ್ಯ? ಇದೊಂದು ನೈತಿಕ ಪ್ರಶ್ನೆ. ಸದ್ಯಕ್ಕೆ ಸ್ವಾಮೀಜಿ ಅವರ ಮುಂದಿರುವುದು ಮಠ ಕಟ್ಟುವ ಉದ್ದೇಶಕ್ಕಾಗಿ ಹಣ ಸಂಗ್ರಹಿಸುವುದು. ಆ ಕಾರಣದಿಂದಲೇ ಅವರು ವಾಣಿಜ್ಯ ಬೆಳೆಗೆ ಮುಂದಾಗಿದ್ದಾರೆ. ಈ ವಾಣಿಜ್ಯ ಕೃಷಿಯ ಜೊತೆಗೆ ತಳುಕು ಹಾಕಿಕೊಂಡಿರುವ ನೈತಿಕ ಸಿಕ್ಕುಗಳನ್ನು ಅವರು ಮುಂದಿನ ದಿನಗಳಲ್ಲಿ ಬಿಡಿಸಿಕೊಳ್ಳಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT