ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಯಾಸಿಯೊಬ್ಬನ ಜೀವಂತ ಸ್ಪಂದನಗಳು

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜೀವನ ಪೂರ್ತಿ ಮಾತನಾಡುತ್ತಲೇ ಇದ್ದ ಸನ್ಯಾಸಿ ಓಶೋ ರಜನೀಶ್ ಅಸಾಮಾನ್ಯ ವ್ಯಕ್ತಿ. ತಮ್ಮ ಜೀವಿತಾವಧಿಯಲ್ಲಿ ಮಾತನಾಡುತ್ತಲೇ ಇದ್ದ ಓಶೋ ಅತ್ಯಂತ ವಿವಾದಾತ್ಮಕ ವ್ಯಕ್ತಿ ಕೂಡ. ಈವರೆಗೆ ಎಲ್ಲ ವಿಷಯಗಳ ಬಗ್ಗೆ ಮಾತನಾಡಿರುವ ಓಶೋ, ಮಾತನಾಡದ ವಿಷಯವೇ ಬಹುಶಃ ಇಲ್ಲ.

ಅದೇ ರೀತಿ ಜೀವನದ ಉದ್ದಕ್ಕೂ ಪುಸ್ತಕಗಳನ್ನು ಓದುತ್ತಲೇ ಇದ್ದ ಓಶೋ ಅವರು ತಮ್ಮ ಮೆಚ್ಚಿನ 168 ಪುಸ್ತಕಗಳ ಬಗ್ಗೆ ಮಾತನಾಡಿರುವುದು `ನನ್ನ ಮೆಚ್ಚಿನ ಪುಸ್ತಕಗಳು~ದಲ್ಲಿ ದಾಖಲಾಗಿದೆ.
 
ಇದು ಅವರ ಇಂಗ್ಲಿಷ್‌ನಲ್ಲಿ ಬಂದ `ಬುಕ್ಸ್ ಐ ಹ್ಯಾವ್ ಲವ್ಡ್~ದ ಅನುವಾದ. ಎಂ.ಎಸ್. ರುದ್ರೇಶ್ವರಸ್ವಾಮಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಓಶೋ ಪ್ರವಚನದ ನಿರರ್ಗಳ ಮಾತಿನ ಲಯ, ಧಾಟಿಯನ್ನು ಕನ್ನಡದಲ್ಲೂ ಅನುವಾದಕರು ಯಶಸ್ವಿಯಾಗಿ ಹಿಡಿದಿದ್ದಾರೆ.

ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದೇನೆ ಎಂದು ಈ ಪುಸ್ತಕದಲ್ಲಿ ಓಶೋ ಹೇಳಿಕೊಂಡಿದ್ದಾರೆ. ಮನುಷ್ಯ ಪುಸ್ತಕಗಳನ್ನು ಯಾಕೆ ಓದುತ್ತಾನೆ ಎನ್ನುವುದಕ್ಕೆ ಒಬ್ಬೊಬ್ಬರು ಒಂದು ಕಾರಣವನ್ನು ಕೊಡಬಹುದು. ಮಾಹಿತಿ ಸಂಗ್ರಹಕ್ಕೆ, ಜ್ಞಾನಾರ್ಜನೆಗೆ, ಅಕಡೆಮಿಕ್ ಅಧ್ಯಯನಕ್ಕೆ, ಮನರಂಜನೆಗೆ ಹೀಗೆ ಅದು ಬೆಳೆಯುತ್ತಲೇ ಹೋಗುತ್ತದೆ.
 
ಇಲ್ಲಿ ಓಶೋಗೆ ಅದು ಆತ್ಮದ ಅಗತ್ಯವಾಗಿ, ಹುಡುಕಾಟವಾಗಿ ಪರಿಣಮಿಸಿದೆ. ಅದೊಂದು ಆತ್ಮಕ್ಕೆ ಕಿಡಿ ಹೊತ್ತಿಸುವ ಸಾಧನವಾಗಿ, ಆತ್ಮದ ಅಗತ್ಯವಾಗಿ ಇದೆ. ಈ 168 ಪುಸ್ತಕಗಳನ್ನು ಉಲ್ಲೇಖಿಸುತ್ತಲೇ ಅದು ಯಾಕೆ ನನಗೆ ಮೆಚ್ಚುಗೆಯಾಯಿತು ಎಂದು ಓಶೋ ವಿಶ್ಲೇಷಿಸುತ್ತಾರೆ.

ಇನ್ನು ನಮ್ಮ ಜನಪದದಲ್ಲಿ ಓದಿಗೆ ಅಂಥ ಮಹತ್ವವೇನೂ ಇಲ್ಲ. `ಓದು ಒಕ್ಕಾಲು ಬುದ್ಧಿ ಮುಕ್ಕಾಲು~ ಎಂಬ ಗಾದೆಯೇ ಕನ್ನಡದಲ್ಲಿದೆ. ಓದು ಬರಹ ಮನುಷ್ಯನಿಗೆ ಸಹಜವಲ್ಲ. ಮನುಷ್ಯನಿರುವುದು ಮರಹತ್ತುವ, ಗಾಳ ಹಾಕಿ ಮೀನು ಹಿಡಿಯುವ, ಈಜುವ ಸಹಜ ಕ್ರಿಯೆಗೆ ಎನ್ನುವವರಿದ್ದಾರೆ. ಓದು, ಬರಹಕ್ಕೆ ಅದನ್ನು ನೆನಪಿನಲ್ಲಿಟ್ಟುಕೊಳ್ಳುವ ಭಾರವಿದೆ.

`ಅಳಿಸಲಾಗದ ಲಿಪಿ~ಯನ್ನು ಬರೆಯುವುದು, ಅದನ್ನು ಓದುವುದು ಮನುಷ್ಯನಿಗೆ ಸಹಜವಲ್ಲ. ದಿನವೊಂದಕ್ಕೆ ಏಳೆಂಟು ಪುಸ್ತಕ ಓದುತ್ತಿದ್ದ ಓಶೋ, ಅತ್ಯಂತ ವೇಗವಾಗಿ ಓದುವ ಓದುಗ. ಅಕ್ಷರಗಳ ಮಾಂತ್ರಿಕತೆಗೆ ಮನಸೋತ ವ್ಯಕ್ತಿ.

ನಿರಂತರವಾಗಿ ಮಾತನಾಡುತ್ತಲೇ ಇದ್ದ ಓಶೋ ವಿಚಾರಗಳು 600 ಪುಸ್ತಕಗಳಲ್ಲಿ ಬಂದಿವೆ ಎಂದರೆ ಅವರು ಎಷ್ಟು ಮಾತನಾಡಿದ್ದಾರೆ ಎಂದು ಊಹಿಸಬಹುದು. `ನನಗೆ ಮಾತಾಡುವುದು ಸುಲಭ. ನಾನು ನಿದ್ದೆಯಲ್ಲೂ ಮಾತಾಡಬಲ್ಲೆ. ಮತ್ತು ತುಂಬಾ ವೈಚಾರಿಕವಾಗಿ ಕೂಡಾ~ (ಪು/ 118) ಎಂದು ತಮ್ಮ ಮಾತುಗಾರಿಕೆಯ ಬಗ್ಗೆ ಹೇಳಿಕೊಂಡಿದ್ದಾರೆ.
 
ಬದುಕಿದ್ದ ಕಾಲದಲ್ಲಿ ತಮ್ಮ ಜೀವನ ಶೈಲಿ, ವಿಚಾರಗಳಿಂದ, ವಿಗ್ರಹಭಂಜಕ ಗುಣದಿಂದಾಗಿ, ಮುಕ್ತ ಕಾಮದ ಪ್ರತಿಪಾದನೆಯಿಂದ ಅತ್ಯಂತ ವಿವಾದಾತ್ಮಕ ವ್ಯಕ್ತಿಯಾಗಿದ್ದರು ಓಶೋ. ಸುಂದರಿಯರಿಂದ ಸುತ್ತವರೆದಿರುತ್ತಿದ್ದ ಈ ವರ್ಣರಂಜಿತ ವ್ಯಕ್ತಿಯ ಮಾತುಗಳು ಈಗ ಪುಸ್ತಕ ರೂಪದಲ್ಲಿ ಜನರ ಕೈಯಿಂದ ಕೈಗೆ ಹರಿದಾಡುತ್ತಿರುವುದು ಕುತೂಹಲ, ವಿಸ್ಮಯ ಹುಟ್ಟಿಸುತ್ತದೆ. ಓಶೋ ಪ್ರತಿಪಾದನೆಗಳಲ್ಲಿ ತಮ್ಮ ಯೋಚನೆಗಳ ಪ್ರತಿರೂಪಗಳನ್ನು ಜನರು ಹುಡುಕುತ್ತಿದ್ದಾರೆ ಎಂದೇ ಈಗ ಅವು ಪ್ರಸ್ತುತವಾಗುತ್ತಿವೆ ಎಂದು ಕಾಣುತ್ತದೆ.

ಹಾಗೆ ನೋಡಿದರೆ ಓಶೋ ಏನನ್ನೂ ಬರೆದು ಪ್ರಕಟಿಸಿದವರಲ್ಲ. ಅವರು ಬರೆದ ಒಂದೇ ಒಂದು ಪುಸ್ತಕ `ಎ ಕಪ್ ಆಫ್ ಟೀ~. ಅದು ಅವರು ತಮ್ಮ ಆಪ್ತರಿಗೆ ಬರೆದ ಪತ್ರಗಳ ಸಂಗ್ರಹ. ಆ ಬಗ್ಗೆ ಅವರು ಸಂಕ್ಷಿಪ್ತವಾಗಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
 
`ನಾನೂ ಕೂಡಾ ಏನನ್ನೂ ಬರೆದಿಲ್ಲ... ಸುಮ್ಮನೆ ಕೆಲ ಪತ್ರಗಳು, ನನ್ನ ಅತ್ಯಂತ ಆತ್ಮೀಯರಿಗೆ, ಯೋಚಿಸುತ್ತ ಅಥವಾ ಬಹುಶಃ ಅವರಿಗೆ ನಾನು ಅರ್ಥವಾಗಿದ್ದೇನೆಂಬ ನಂಬಿಕೆಯಿಂದ. ನನಗೆ ಗೊತ್ತಿಲ್ಲ, ಅವರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೋ ಅಥವಾ ಇಲ್ಲವೋ. ಆದ್ದರಿಂದ ನನ್ನ `ಎ ಕಪ್ ಆಫ್ ಟೀ~ ಪುಸ್ತಕವನ್ನು ಮಾತ್ರ ನಾನು ಬರೆದ ಪುಸ್ತಕವೆಂದು ಹೇಳಬಹುದು. ಅದು ನನ್ನ ಪತ್ರಗಳ ಸಂಗ್ರಹ. ಅದನ್ನು ಹೊರತುಪಡಿಸಿದರೆ, ನಾನೇನೂ ಬರೆದಿಲ್ಲ~ (ಪು/90).

ಓಶೋ ಮನುಷ್ಯನ ಪಾಡನ್ನು, ಅವನ ಸಂತೋಷವನ್ನು ಚಿಂತಿಸುವ ಸನ್ಯಾಸಿಯಾದ್ದರಿಂದ ಬದುಕಿನ ತಾತ್ವಿಕತೆಯನ್ನು ಚಿಂತಿಸುವ ಪುಸ್ತಕಗಳೇ ಅವರ ಪಟ್ಟಿಯಲ್ಲಿವೆ. ಕವಿತೆ, ಲಾವೋತ್ಸೆ, ದಾಸ್ತೋವಸ್ಕಿ, ತತ್ವಜ್ಞಾನಿ ಫೆಡರಿಕ್ ನೀಷೆ, ಮಾಕ್ಸಿಂ ಗಾರ್ಕಿ, ಡಿ.ಎಚ್. ಲಾರೆನ್ಸ್, ಸೂಫಿ ತತ್ವ, ಧರ್ಮಗ್ರಂಥಗಳು, ಜರಾತುಷ್ಟ್ರ, ರವೀಂದ್ರನಾಥ ಟ್ಯಾಗೋರ್, ಜಿಡ್ಡು ಕೃಷ್ಣಮೂರ್ತಿ, ಮಿರ್ಜಾ ಗಾಲಿಬ್, ಜಾರ್ಜ್ ಬರ್ನಾಡ್ ಶಾ, ಜೆನ್, ಬುದ್ಧ, ವೈದ್ಯಕೀಯ, ಧರ್ಮ, ಶಿವಸೂತ್ರ, ರಾಮಕೃಷ್ಣ ಪರಮಹಂಸ, ಗಣಿತಕ್ಕೆ ಸಂಬಂಧಿಸಿದ ಪುಸ್ತಕಗಳು ಅವರ ಪಟ್ಟಿಯಲ್ಲಿ ಜಾಗ ಪಡೆದಿವೆ.

ಮನುಷ್ಯ ಜಗತ್ತನ್ನು ಮುಕ್ತವಾಗಿ ನೋಡುವಂತೆ ಮಾಡುವ, ಆತ್ಮಕ್ಕೆ ಕಿಡಿ ಹೊತ್ತಿಸುವ ಪುಸ್ತಕಗಳು ಅವರನ್ನು ಹೆಚ್ಚು ಸೆಳೆದಿವೆ. ಇದು ಸನ್ಯಾಸಿಯೊಬ್ಬನ ಪಟ್ಟಿಯಾದ್ದರಿಂದ ಇದು ಹೆಚ್ಚು ಕುತೂಹಲಕರವೂ, ವಿಶಿಷ್ಟವೂ ಆಗಿದೆ. ಹಾಗೆಯೇ ಧೀಮಂತನೊಬ್ಬನ ಪುಸ್ತಕಗಳ ಕುರಿತಾದ ಸ್ಪಂದನಗಳಾಗಿ ಇವನ್ನು ನೋಡಬಹುದು.

ಹಿಂದಿ, ಇಂಗ್ಲಿಷ್ ಈ ಎರಡು ಭಾಷೆಯಲ್ಲಿ ಅವರು ಮಾತನಾಡಿದ್ದಾರೆ. ಮತ್ತು ಅವರ ಓದೂ ಇವೆರಡು ಭಾಷೆಯಲ್ಲಿ ನಡೆದಿದ್ದು. ಹಾಗಾಗಿ ಬೇರೆ ಭಾಷೆಗಳ ಅತ್ಯುತ್ತಮ ಪುಸ್ತಕಗಳು ಅವರ ಗಮನಕ್ಕೆ ಬಂದಿಲ್ಲ.

ಕನ್ನಡದ ವಚನಕಾರರು, ಬೇಂದ್ರೆಯಂತ ಕವಿಗಳು ಅವರ ಗಮನಕ್ಕೆ ಬಂದಿಲ್ಲ. ಬಹುಶಃ ಇವರು ಅವರಿಗೆ ಗೊತ್ತಿದ್ದರೆ ಅವರ ಆಯ್ಕೆಯಲ್ಲಿ ಇವರೂ ಇರುತ್ತಿದ್ದರು; ಅವರ ಉಲ್ಲೇಖ ಬೇರೆಯೇ ಇರುತ್ತಿತ್ತು. ಹಾಗಾಗಿ ಓಶೋ ಆಯ್ಕೆಯಲ್ಲಿ ಕೂಡ ಮಿತಿಗಳಿವೆ. ಅವರ ಮಟ್ಟಿಗೆ ಅದೇ ಸರಿಯೇನೊ.

ನಮ್ಮಲ್ಲಿ ಓದನ್ನು ಪಾಂಡಿತ್ಯ ಪ್ರದರ್ಶನಕ್ಕೆ, ಬೇರೆಯವರಲ್ಲಿ ಕೀಳರಿಮೆ ಹುಟ್ಟಿಸುವುದಕ್ಕೆ, ಹಣಿಯುವುದಕ್ಕೆ, ಅಧಿಕಾರ ಚಲಾಯಿಸಲು ಬಳಸಲಾಗುತ್ತಿದೆ. ಹೀಗೆ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ `ಓದಿ ಬಂದವರು~ ಗುಮಾಸ್ತರ ಕೆಲಸಕ್ಕಾಗಿ ಓದಿದವರು.
 
ಅದು ನಿಜವಾದ ಓದಲ್ಲ. ಅದು ಮುಗ್ಧರನ್ನು ವಂಚಿಸಲು, ಹಲವು ಅಕ್ರಮಗಳನ್ನು ಎಸಗಲು ಬಳಕೆಯಾಗುತ್ತಿದೆ. ಈ ಬಗ್ಗೆ ಓಶೋ ಈ ಪುಸ್ತಕದಲ್ಲಿ ಮಾತನಾಡಿದ್ದಾರೆ. `ಬಹಳ ಅನುಭಾವಿ ಪುರುಷರು ಓದಿದವರಲ್ಲ. ವಿದ್ಯಾಭ್ಯಾಸದಲ್ಲೇ ಏನೋ ತಪ್ಪಿದ್ದಂತೆ ಕಾಣುತ್ತದೆ.

ಹೆಚ್ಚು ಅನುಭಾವಿಗಳು ಏಕಿಲ್ಲ? ವಿದ್ಯಾಭ್ಯಾಸ ಏನನ್ನೋ ನಾಶ ಮಾಡುತ್ತಿರಬೇಕು. ಮತ್ತು ಅದು ಜನರನ್ನು ಅನುಭಾವಿಗಳಾಗದಂತೆ ತಡೆಯುತ್ತಿರಬೇಕು. ಹೌದು, ವಿದ್ಯಾಭ್ಯಾಸ ವಿನಾಶ ಮಾಡುತ್ತಿದೆ. ಸತತವಾಗಿ 25 ವರ್ಷಗಳವರೆಗೆ~ (ಪು/ 114).

ನಾವಿಲ್ಲಿ ಕೊಡಲಾದ ಪುಸ್ತಕಗಳ ಪರಿಚಯ ಇಲ್ಲದೆಯೂ ಅವರ ಕಥನ ಕ್ರಮದಲ್ಲಿ ತೊಡಗಬಹುದು, ಇಳಿಯಬಹುದು, ಮುಳುಗಬಹುದು. ಅದಕ್ಕೆ ಜಗತ್ತಿನ ಎಲ್ಲಡೆ ಚಲಿಸುವ ಜಂಗಮ ಗುಣವಿದೆ. ಇದು ಓಶೋ ಪ್ರವಚನಗಳ ಮಹತ್ವ ಕೂಡ. 16 ಬೈಠಕ್ಕುಗಳಲ್ಲಿ ಕೂತು ನೀಡಿದ ಈ ಪ್ರವಚನಗಳಲ್ಲಿ ಲೇಖಕರು, ತಾತ್ವಿಕರ ಬಗ್ಗೆ ಅವರ ಅಪಾರ ಜ್ಞಾನ, ವ್ಯಕ್ತಿತ್ವದ ಬಗ್ಗೆ ಕುತೂಹಲ, ಅವರೇ ಹೇಳಿರುವಂತೆ ಪ್ರೀತಿಯ ಜೊತೆಗೇ ಕೆಲವರ ಬಗ್ಗೆ ದ್ವೇಷ ಇರುವುದು ಕಂಡುಬರುತ್ತದೆ.

ಲೇಖಕ ಯು.ಆರ್. ಅನಂತಮೂರ್ತಿಯವರು ಮುನ್ನುಡಿಯಲ್ಲಿ ಹೇಳಿದಂತೆ ಓಶೋ ಒಬ್ಬ ವಿಸ್ಮಯ ವ್ಯಕ್ತಿ. ಅವರ ಚಿಂತನೆಗಳೂ ಕೂಡ ವಿಸ್ಮಯಕರವೇ. ಏಕೆಂದರೆ ಅವು ಕೊಡುವ ಒಳನೋಟಗಳು ಓದುಗನನ್ನು ಕ್ಷಣಕಾಲ ಬೆರಗುಗೊಳಿಸಬಲ್ಲವು, ಚಿಂತನೆಗೆ ಹಚ್ಚಬಲ್ಲವು. ಅವು ರಜನೀಶ್‌ಗೆ ಮಾತ್ರ ವಿಶಿಷ್ಟವಾಗಿರುವಂಥ ನಿರೂಪಣೆಯಲ್ಲಿ ನದಿಯ ನೀರಿನಂತೆ ತಣ್ಣಗೆ ಹರಿಯುತ್ತವೆ. ಮನುಷ್ಯನ ಆತ್ಮ ಸಂತೋಷವೇ, ಧ್ಯಾನಸ್ಥ ಸ್ಥಿತಿಯನ್ನು ಮುಟ್ಟುವುದೇ ಅವರ ಪ್ರವಚನಗಳ ಗುರಿ. ಅದು ಈ ಪುಸ್ತಕದ ಮಟ್ಟಿಗೂ ನಿಜ.

ಇಲ್ಲಿನ ಓಶೋ ಮಾತುಗಾರಿಕೆ, ಅದು ಮಾಡುವ ಮೋಡಿಗೆ ಇಲ್ಲೊಂದು ಉದಾಹರಣೆ:
`ಒಂದು ಜೆನ್ ಪುಸ್ತಕವಿದೆ, ಅದು ಹೇಳುತ್ತದೆ, ಹೂ ಮಾತಾಡುವುದಿಲ್ಲ. ಅದು ತಪ್ಪು, ಖಂಡಿತ ತಪ್ಪದು. ಹೂ ಕೂಡ ಮಾತಾಡುತ್ತದೆ. ಒಪ್ಪಬೇಕಾದದ್ದೆ. ಹೂ ಇಂಗ್ಲಿಷ್‌ನಲ್ಲಿ ಮಾತಾಡುವುದಿಲ್ಲ, ಅಥವಾ ಜಪಾನಿ ಇಲ್ಲವೆ ಸಂಸ್ಕೃತದಲ್ಲಿ ಮಾತಾಡುವುದಿಲ್ಲ. ಅದು ಹೂಗಳ ಭಾಷೆಯಲ್ಲಿ ಮಾತಾಡುತ್ತದೆ. ಅದು ತನ್ನ ಸುಮಧುರ ಪರಿಮಳದೊಂದಿಗೆ ಮಾತಾಡುತ್ತದೆ (ಪು 105/ 106)~.
............

ನಾನು ಮೆಚ್ಚಿದ ಪುಸ್ತಕಗಳು
ಲೇ: ಓಶೋ
ಕನ್ನಡಕ್ಕೆ: ಎಂ.ಎಸ್. ರುದ್ರೇಶ್ವರಸ್ವಾಮಿ
ಪು: 259 ಬೆ: ರೂ 180
ಪ್ರ: ಸಪ್ನ ಬುಕ್ ಹೌಸ್, ನಂ. 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 560 009
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT