ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್‌ ಜಯಕ್ಕೆ ಕಠಿಣ ಗುರಿ

ಚಾಂಪಿಯನ್ಸ್‌ ಲೀಗ್‌: ಫೈಸಲಾಬಾದ್‌ ವಿರುದ್ಧ ಗೆಲುವು ಪಡೆದ ಒಟಾಗೊ ವೋಲ್ಟ್ಸ್‌
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಕುಮಾರ ಸಂಗಕ್ಕಾರ (61) ಮತ್ತು ಲಾಹಿರು ತಿರಿಮನ್ನೆ (54) ಗಳಿಸಿದ ಅರ್ಧಶತಕದ ನೆರವಿನಿಂದ ಕಂದುರತಾ ಮರೂನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾದ ಮರೂನ್ಸ್‌ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 168 ರನ್‌ ಪೇರಿಸಿತು.

ಈ ಗುರಿ ಬೆನ್ನಟ್ಟಿರುವ ಶಿಖರ್‌ ಧವನ್‌ ನೇತೃತ್ವದ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 15 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 130 ರನ್‌ ಗಳಿಸಿತ್ತು.

ಟಾಸ್‌ ಗೆದ್ದ ಸನ್‌ರೈಸರ್ಸ್‌ ತಂಡದ ನಾಯಕ ಧವನ್‌ ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು. ಮರೂನ್ಸ್‌ ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಆದರೆ ಸಂಗಕ್ಕಾರ ಮತ್ತು ತಿರಿಮನ್ನೆ ಮೂರನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.

ಒಟಾಗೊಗೆ ಜಯ: ದಿನದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ ತಂಡ ಎಂಟು ವಿಕೆಟ್‌ಗಳಿಂದ ಪಾಕಿಸ್ತಾನದ ಫೈಸಲಾಬಾದ್‌ ವೂಲ್ವ್ಸ್‌ ವಿರುದ್ಧ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಫೈಸಲಾಬಾದ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 139 ರನ್‌ ಪೇರಿಸಿತು. ನಾಯಕ ಮಿಸ್ಬಾ ಉಲ್‌ ಹಕ್‌ (46) ಅವರನ್ನು ಹೊರತುಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ವೋಲ್ಟ್ಸ್‌ ತಂಡ 17.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿ ಜಯ ಸಾಧಿಸಿತು. ಅಜೇಯ 83 ರನ್‌ ಗಳಿಸಿದ ಬ್ರೆಂಡನ್‌ ಮೆಕ್ಲಮ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 65 ಎಸೆತಗಳನ್ನು ಎದುರಿಸಿದ ಮೆಕ್ಲಮ್‌ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು.

ಸಾಧಾರಣ ಗುರಿ ಬೆನ್ನಟ್ಟಿದ ಒಟಾಗೊ 41 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಮೆಕ್ಲಮ್‌ ಮತ್ತು ಬೂರ್ಡರ್‌ (30) ಮುರಿಯದ ಮೂರನೇ ವಿಕೆಟ್‌ಗೆ 101 ರನ್‌ ಸೇರಿಸಿ ತಂಡದ ಸುಲಭ ಗೆಲುವಿಗೆ ಹಾದಿಯೊದಗಿಸಿದರು.

ಸಂಕ್ಷಿಪ್ತ ಸ್ಕೋರ್‌: ಕಂದುರತಾ ಮರೂನ್ಸ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 168 (ಉಪುಲ್‌ ತರಂಗ 19, ಕುಮಾರ ಸಂಗಕ್ಕಾರ 61, ಲಾಹಿರು ತಿರಿಮನ್ನೆ 54, ಇಶಾಂತ್‌ ಶರ್ಮ 20ಕ್ಕೆ 2) (ವಿವರ ಅಪೂರ್ಣ)
ಫೈಸಲಾಬಾದ್‌ : 20 ಓವರ್‌ಗಳಲ್ಲಿ 8 ವಿಕೆಟ್‌ಗೆ 139 (ಖುರ್ರಮ್‌ ಶೆಹಜಾದ್‌ 27, ಮಿಸ್ಬಾ ಉಲ್‌ ಹಕ್‌ 46, ಇಮ್ರಾನ್‌ ಖಾಲಿದ್‌ 12, ಇಯಾನ್‌ ಬಟ್ಲರ್‌ 23ಕ್ಕೆ 2, ಜೇಮ್ಸ್‌ ಮೆಕ್‌ಮಿಲನ್‌ 24ಕ್ಕೆ 2, ಜೇಮ್ಸ್‌ ನೀಶಮ್‌ 26ಕ್ಕೆ 2)
ಒಟಾಗೊ : 17.5 ಓವರ್‌ಗಳಲ್ಲಿ 2 ವಿಕೆಟ್‌ಗೆ 142 (ಹಾಮಿಷ್‌ ರುದರ್‌ಫರ್ಡ್‌ 25, ಬ್ರೆಂಡನ್‌ ಮೆಕ್ಲಮ್‌ ಔಟಾಗದೆ 83, ಡೆರೆಕ್‌್ ಡಿ ಬೂರ್ಡರ್‌ ಔಟಾಗದೆ 30, ಸಯೀದ್‌ ಅಜ್ಮಲ್‌ 23ಕ್ಕೆ 1) ಫಲಿತಾಂಶ: ಒಟಾಗೊ ವೋಲ್ಟ್ಸ್‌ಗೆ 8 ವಿಕೆಟ್‌   ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT