ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪುತರಾ ಮನೋಹರ

Last Updated 6 ಜನವರಿ 2011, 10:50 IST
ಅಕ್ಷರ ಗಾತ್ರ

ಇಲ್ಲಿ ಏನುಂಟು ಏನಿಲ್ಲ. ಬಯಲಿದೆ, ಕಾಡಿದೆ, ಮಳೆಯಿದೆ, ತಂಗಾಳಿಯಿದೆ, ನದಿಯಿದೆ, ಮಂಜಿದೆ, ಜಲಪಾತವಿದೆ. ಮಳೆಗಾಲದಲ್ಲಿ ತುಂತುರು ಮಳೆಗೆ ಮೈಯೊಡ್ಡಿದ ಕಾಡಿನ ಸೊಬಗು, ಕಣ್ಸೆಳೆಯುವ ಸಣ್ಣ ಸಣ್ಣ ಬಣ್ಣದ ಹೂಗಳು; ಭೋರ್ಗರೆವ ಜಲಪಾತ. ಬೇಸಿಗೆಯಲ್ಲಿ ಸರೋವರದಲ್ಲಿ ಸೂರ್ಯ ಮುಳುಗುತ್ತಿರುವ ನೋಟ, ತಂಪು ಹವೆ, ಇರುಳಿನಲ್ಲಿ ಆಕಾಶಕ್ಕೆ ಹತ್ತಿರವಾಗಿ ನಿಂತ ಅನುಭಾವ.

ಚಳಿ ದಿನಗಳಲ್ಲಿ ಮಂಜು ಮುಸುಕಿದ ದಾರಿಯಲ್ಲಿ ಚಿಲಿಪಿಲಿ ಹಕ್ಕಿಗಳ ನಾದ. ಬೆಟ್ಟಗಳ ನಡುವೆ ಝುಳುಝುಳು ಹರಿವ ನದಿಯ ಬಳುಕಾಟ.ಇದು ಸಪುತರಾ ಗಿರಿಧಾಮ. ಸಹ್ಯಾದ್ರಿ ಬೆಟ್ಟ ಸಾಲಿನ ಈ ಊರು ಗುಜರಾತ್ ರಾಜ್ಯದ ದಂಗ್ ಜಿಲ್ಲೆಯಲ್ಲಿದೆ.

ಸಮುದ್ರ ಮಟ್ಟದಿಂದ ಒಂದು ಸಾವಿರ ಮೀಟರ್ ಎತ್ತದಲ್ಲಿರುವ ಈ ಪ್ರದೇಶ ಮಾಲಿನ್ಯಗೊಳ್ಳದೆ ಉಳಿದಿರುವುದೊಂದು ವಿಶೇಷ. ಅದಕ್ಕೆ ಕಾರಣ ಗುಜರಾತ್ ಪ್ರವಾಸೋದ್ಯಮ ಇಲಾಖೆ. ಇದೊಂದು ವ್ಯವಸ್ಥಿತ ಗಿರಿಧಾಮ. ಸಪುತರಾ ಸರೋವರ, ಕಲಾವಿದರ ಗ್ರಾಮ, ಬೋಟಿಂಗ್ ಕ್ಲಬ್, ಎಕೋ ಪಾಯಿಂಟ್, ಕಾಡಿನ ನರ್ಸರಿ, ಹಟ್, ಹಟ್‌ಗದ ಕೋಟೆ, ಜೇನು ಕೇಂದ್ರ, ಲೇಕ್‌ವೀವ್ ಗಾರ್ಡನ್, ಮ್ಯೂಸಿಯಂ, ನಾಗೇಶ್ವರ ದೇವಾಲಯ, ಪೂರ್ಣ ಪಕ್ಷಿಧಾಮ, ಗಿರಾ ಜಲಪಾತ, ಗಿರ್ಮಲ್ ಜಲಪಾತ, ಮಹಲ್ ಕಾಡು, ಸಪ್ತಶೃಂಗಿ ದೇವಿ ದೇವಾಲಯ, ಉನ್ನೈಮಾತಾ ದೇವಾಲಯ- ಹೀಗೆ ಪೂರ್ಣ ಪ್ರವಾಸಕ್ಕೆ ಯೋಗ್ಯವಾದ ಸ್ಥಳಗಳು ಇಲ್ಲಿವೆ. ಕಾಡಿನಲ್ಲಿ ಚಾರಣಕ್ಕೂ ಅವಕಾಶವಿದೆ.

ಮಹಾರಾಷ್ಟ್ರದಿಂದ ಐದು ಕಿ.ಮೀ. ದೂರದಲ್ಲಿರುವ ಈ ಪ್ರದೇಶ, ಸೂರತ್‌ನಿಂದ 170 ಕಿಮೀ ಮತ್ತು ನಾಸಿಕ್‌ನಿಂದ 80 ಕಿಮೀ ದೂರದಲ್ಲಿದೆ. ಇದೆಲ್ಲದರ ಜೊತೆಗೆ ಇಲ್ಲೊಂದು ಸರ್ಪಶಿಲ್ಪ ಇದೆ. ಅದರ ನಡುವೆಯೇ ಸರ್ಪಗಾನ ನದಿ ಊರಿನ ಉದ್ದಕ್ಕೂ ಬಳುಕುತ್ತಾ ಹರಿಯುತ್ತದೆ. ಅದನ್ನು ಅಲ್ಲಿರುವ ಆದಿವಾಸಿ ಜನ ಪೂಜಿಸುತ್ತಾರೆ. ಅಂದಹಾಗೆ ಗುಜರಾತ್ ರಾಜ್ಯದಲ್ಲಿ ಇರುವ ಏಕೈಕ ಗಿರಿಧಾಮ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT