ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಕೋಟಿ ಒಡೆಯ ಸಂಪಂಗಿ, ರೆಡ್ಡಿ ಬಳಿ 2 ಕೆ.ಜಿ ಚಿನ್ನ

Last Updated 18 ಏಪ್ರಿಲ್ 2013, 10:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ನಾಮಪತ್ರಗಳನ್ನು ಸಲ್ಲಿಸಿದ್ದು, ಅವರ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಕೆಲ ಅಭ್ಯರ್ಥಿಗಳು ಹೆಚ್ಚಿನ ಸಂಪತ್ತು ಗಳಿಸಿದ್ದರೆ, ಇನ್ನೂ ಕೆಲ ಅಭ್ಯರ್ಥಿಗಳು ತಮ್ಮ ಬಳಿ ಕಡಿಮೆ ಸಂಪತ್ತು ಎಂದು ಹೇಳಿಕೊಂಡಿದ್ದಾರೆ. ಅಂತಹ ಕೆಲವರ ಆಸ್ತಿ ವಿವರ ಈ ಕೆಳಗಿನಂತಿದೆ.

ಕೋಟ್ಯಾಧೀಶರು: ಎನ್.ಸಂಪಂಗಿ (51) ಅವರು ಬಿ.ಕಾಂ ಕಾನೂನು ಪದವೀಧರರು. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮತ್ತು ಅವರ ಕುಟುಂಬದ ಒಟ್ಟು ಚರಾಸ್ತಿ ಒಂದು ಕೋಟಿ ರೂಪಾಯಿ ಮೀರಿದರೆ, ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 6.42 ಕೋಟಿ ರೂಪಾಯಿ. ಅವರು ತಮ್ಮ ಹೆಸರಿನಲ್ಲಿ 55.60 ಲಕ್ಷ ರೂಪಾಯಿ ಮೌಲ್ಯದಷ್ಟು ಮತ್ತು ಅವರ ಪತ್ನಿ ವಿದ್ಯಾ 16.7 ಲಕ್ಷ ರೂಪಾಯಿ ಮೌಲ್ಯದಷ್ಟು ಚರಾಸ್ತಿ ಹೊಂದಿದ್ದಾರೆ.

ಅವರ ಪುತ್ರ ಎಸ್.ಹರ್ಷಿತ್ ಹೆಸರಿನಲ್ಲಿ 2.90 ಲಕ್ಷ ರೂಪಾಯಿ ಮೌಲ್ಯದಷ್ಟು ಮತ್ತು ಪುತ್ರಿ ಎಸ್.ಅಂಕಿತಾ ಹೆಸರಿನಲ್ಲಿ 5.80 ಲಕ್ಷ ರೂಪಾಯಿಗಳಷ್ಟು ಚರಾಸ್ತಿಯಿದೆ. ಬಾಗೇಪಲ್ಲಿ, ಗುಡಿಬಂಡೆ ಮತ್ತು ಬೆಂಗಳೂರಿನಲ್ಲಿ ನಿವೇಶನ, ಜಮೀನು ಹೊಂದಿರುವ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 6.42 ಕೋಟಿ ರೂಪಾಯಿ.

ಅವರ ಕೈಯಲ್ಲಿ 5 ಲಕ್ಷ ರೂಪಾಯಿ ನಗದು ಇದ್ದರೆ, ಅವರ ಪತ್ನಿ ವಿದ್ಯಾ ಬಳಿ 25 ಸಾವಿರ ರೂಪಾಯಿ ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ಅವರು 15.80 ಲಕ್ಷ ರೂಪಾಯಿ ಹಣ ಹೊಂದಿದ್ದರೆ, ಅವರ ಪತ್ನಿ ವಿದ್ಯಾ ಬೆಂಗಳೂರಿನ ಬ್ಯಾಂಕ್ ಖಾತೆಯಲ್ಲಿ 23,750 ರೂಪಾಯಿ ಹೊಂದಿದ್ದಾರೆ. 3 ಲಕ್ಷ ರೂಪಾಯಿ ಮತ್ತು 2 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಪಾಲಿಸಿಗಳನ್ನು ಹೊಂದಿದ್ದಾರೆ.

ಅವರ ಪತ್ನಿಯು 5 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಪಾಲಿಸಿ ಹೊಂದಿದ್ದಾರೆ. 5.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಸಂಪಂಗಿಯವರು ಹೊಂದಿದ್ದರೆ, ಅವರ ಪತ್ನಿಯು 10.59 ಲಕ್ಷ ರೂಪಾಯಿಗಳಷ್ಟು ಚಿನ್ನಾಭರಣ ಹೊಂದಿದ್ದಾರೆ. ತಲಾ 12 ಲಕ್ಷ ರೂಪಾಯಿ ಮೌಲ್ಯದ ಎರಡು ಕಾರುಗಳನ್ನು ಹೊಂದಿದ್ದಾರೆ.

ಪತ್ನಿ, ಪುತ್ರ ಶ್ರೀಮಂತರು !
ಎನ್.ಎಂ.ರವಿನಾರಾಯಣರೆಡ್ಡಿ (61) ಅವರು ಕಲಾ ಪದವೀಧರರು. ಗೌರಿಬಿದನೂರು ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮತ್ತು ಕುಟುಂಬದ ಚರಾಸ್ತಿ ಒಂದು ಕೋಟಿ ರೂಪಾಯಿ ಮೀರುತ್ತದೆ. ಅವರು 58.80 ಲಕ್ಷ ರೂಪಾಯಿ ಮೌಲ್ಯ ಸ್ಥಿರಾಸ್ತಿ ಹೊಂದಿದ್ದಾರೆ.

ಅವರ ಬಳಿ ನಗದು ರೂಪದಲ್ಲಿ 2 ಲಕ್ಷ ರೂಪಾಯಿ, ಪತ್ನಿ ಬೃಂದಾ ಮತ್ತು ಪುತ್ರ ಭರತ್‌ರೆಡ್ಡಿ ಬಳಿ ತಲಾ ಒಂದು ಲಕ್ಷ ರೂಪಾಯಿ ನಗದು ಇದೆ. ಅವರು ತಮ್ಮ ಹೆಸರಿನಲ್ಲಿ 29.24 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ಬೃಂದಾ 66.81 ಲಕ್ಷ ರೂಪಾಯಿ ಮೌಲ್ಯದಷ್ಟು ಮತ್ತು ಪುತ್ರ ಭರತ್‌ರೆಡ್ಡಿ 2.82 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಅವರು ಒಟ್ಟು 58.80 ಲಕ್ಷ ರೂಪಾಯಿ ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದ್ದು, ಅದರಲ್ಲಿ 44.10 ಲಕ್ಷ ರೂಪಾಯಿ ಮೌಲ್ಯದ ಸ್ವಯಾರ್ಜಿತ ಮತ್ತು 14.70 ಲಕ್ಷ ರೂಪಾಯಿ ಮೌಲ್ಯದ ಪಿತ್ರಾರ್ಜಿತ ಆಸ್ತಿಯಿದೆ. ಅವರ ಪತ್ನಿ ಹೆಸರಿನಲ್ಲಿ 22.50 ಲಕ್ಷ ರೂಪಾಯಿ ಮೌಲ್ಯಗಳಷ್ಟು ಮತ್ತು ಪುತ್ರನ ಬಳಿ 7.50 ಲಕ್ಷ ರೂಪಾಯಿ ಮೌಲ್ಯಗಳಷ್ಟು ಸ್ಥಿರಾಸ್ತಿಯಿದೆ.

ಅವರಿಗೆ 26.68 ಲಕ್ಷ ರೂಪಾಯಿಗಳಷ್ಟು ಸಾಲದ ಹೊಣೆಯಿದ್ದು, ಅವರ ಪತ್ನಿಗೆ 14.20 ಲಕ್ಷ ರೂಪಾಯಿ ಮತ್ತು 8.99 ಲಕ್ಷ ರೂಪಾಯಿಗಳಷ್ಟು ಸಾಲದ ಹೊಣೆಯಿದೆ. ಅವರ ಒಂದು ಬ್ಯಾಂಕಿನಲ್ಲಿ 807 ರೂಪಾಯಿಗಳಿದ್ದರೆ, ಇನ್ನೊಂದು ಬ್ಯಾಂಕಿನ ಖಾತೆಯಲ್ಲಿ 410 ರೂಪಾಯಿಯಿದೆ. ಆದರೆ ಅವರ ಪತ್ನಿ ಬ್ಯಾಂಕು ಖಾತೆಯಲ್ಲಿ 1.31 ಲಕ್ಷ ರೂಪಾಯಿ ಹೊಂದಿದ್ದಾರೆ. ಅವರ ಪುತ್ರ ಒಂದು ಬ್ಯಾಂಕು ಖಾತೆಯಲ್ಲಿ 30 ಸಾವಿರ ರೂಪಾಯಿ ಹೊಂದಿದ್ದರೆ, ಮತ್ತೊಂದು ಬ್ಯಾಂಕು ಖಾತೆಯಲ್ಲಿ 834 ರೂಪಾಯಿ ಹೊಂದಿದ್ದಾರೆ. ರವಿನಾರಾಯಣರೆಡ್ಡಿ ಮತ್ತು ಅವರ ಪತ್ನಿ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಎಲ್‌ಐಪಿ ಪಾಲಿಸಿ ಹೊಂದಿದ್ದರೆ, ಅವರ ಪುತ್ರ 2 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಪಾಲಿಸಿ ಹೊಂದಿದ್ದಾರೆ.

ರವಿನಾರಾಯಣರೆಡ್ಡಿ ಅವರ ಬಳಿ 48 ಸಾವಿರ ರೂಪಾಯಿ ಮೌಲ್ಯದ ಬಜಾಜ್ ಪಲ್ಸರ್, 8.10 ಲಕ್ಷ ರೂಪಾಯಿ ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೊ, 4.50 ಲಕ್ಷ ರೂಪಾಯಿ ಮೌಲ್ಯದ ಟೆಂಪೋ ಟ್ರ್ಯಾಕ್ಸ್ ಮತ್ತು 13.75 ಲಕ್ಷ ರೂಪಾಯಿ ಮೌಲ್ಯದ ಟೋಯೋಟಾ ಇನ್ನೊವಾ ಇದೆ. ಅವರ ಪುತ್ರ 1.52 ಲಕ್ಷ ರೂಪಾಯಿ ಮೌಲ್ಯದ ರಾಯಲ್ ಎನ್‌ಫೀಲ್ಡ್ ಹೊಂದಿದ್ದಾರೆ. ಪತ್ನಿ ಬೃಂದಾ ರೆಡ್ಡಿ 56 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಬಂಗಾರ, ರೂ 8.10 ಲಕ್ಷ ಮೌಲ್ಯದ 15 ಕೆಜಿ ಬೆಳ್ಳಿ ಹೊಂದಿದ್ದಾರೆ.

ಸಿಪಿಎಂ ಅಭ್ಯರ್ಥಿ
ಸಿ.ಗೋಪಿನಾಥ್ (53) ಅವರು ಬಿಎಸ್ಸಿ ಪದವೀಧರರು. ಚಿಂತಾಮಣಿ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಒಟ್ಟು 1.01 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ಎಸ್.ಎನ್.ಲಕ್ಷ್ಮಿ ರೂ.4.55 ಲಕ್ಷ ಮೌಲ್ಯದ ಚರಾಸ್ತಿಯಿದೆ. ಅವರ ಬಳಿ 25 ಸಾವಿರ ರೂಪಾಯಿ ನಗದು ಇದ್ದು, ಬ್ಯಾಂಕ್ ಖಾತೆಯಲ್ಲಿ 25 ಸಾವಿರ ರೂಪಾಯಿಯಿದೆ.
ಅವರ ಪತ್ನಿ ಬಳಿ ಐದು ಸಾವಿರ  ನಗದು ಇದೆ.

ಅವರ ಬಳಿ 51 ಸಾವಿರ ರೂಪಾಯಿ ಮೌಲ್ಯದ ಹೀರೋ ಹೋಂಡಾ ಬೈಕ್‌ಯಿದ್ದರೆ, ಅವರ ಪತ್ನಿ 4.55 ಲಕ್ಷ ರೂಪಾಯಿ ಮೌಲ್ಯದ 150 ಗ್ರಾಂ ಚಿನ್ನ ಹೊಂದಿದ್ದಾರೆ.

ಗೋಪಿನಾಥ್ ಅವರ ತಾಯಿ ಆಂಜನಾ ದೇವಿ 3 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನ ಹೊಂದಿದ್ದಾರೆ. ಗೋಪಿನಾಥ್ ಅವರು ಒಟ್ಟು 16.50 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಕೇವಲ 60 ಸಾವಿರ !
ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅವರು ತಮ್ಮ ಬಳಿ 60 ಸಾವಿರ ರೂಪಾಯಿ ನಗದು ಹೊಂದಿದ್ದಾರೆ.

`ನಾಮಪತ್ರದಲ್ಲಿ ನಗದು ವಿವರ ನೀಡುವ ಸ್ಥಳದಲ್ಲಿ  0.60 ಲಕ್ಷ ರೂಪಾಯಿಯೆಂದು ಬರೆಯಲಾಗಿದೆ. ಅದರಂತೆ ನನ್ನ ಬಳಿ ರೂ. 60 ಸಾವಿರ ಮಾತ್ರವೇ ನಗದು ಇದೆ' ಎಂದು ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT