ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ನಲೋಕದ ಹೊಸ ಟಿಸಿಲು

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಕನ್ನಡದ ಮನಸ್ಸುಗಳಿಗೆ ಪುಸ್ತಕಪ್ರೀತಿಯನ್ನು, ಕನ್ನಡದ ಪುಸ್ತಕ ಲೋಕಕ್ಕೆ ಉದ್ಯಮದ ರೂಪವನ್ನು, ಕನ್ನಡೇತರ ಓದುಗರಿಗೆ ಕನ್ನಡದ ಅಕ್ಷರಮೋಹವನ್ನು ಉಣಬಡಿಸಿದ `ಸಪ್ನ ಬುಕ್ ಹೌಸ್~ ಇದೀಗ ಹಳೆಯ ಕಂಟೋನ್ಮೆಂಟ್ ಪ್ರದೇಶವಾದ ರೆಸಿಡೆನ್ಸಿ ರಸ್ತೆಯಲ್ಲಿ ಹೊಸ ವಿಳಾಸವನ್ನು ಪರಿಚಯಿಸಲಿದೆ.

ಪುಸ್ತಕಲೋಕದ ವಿಸ್ಮಯಕ್ಕೆ, ವಿನೂತನ ಸಾಧ್ಯತೆಗಳಿಗೆ ಉತ್ತರ `ಸಪ್ನ~. ಅದು ಈಗ ಪುಸ್ತಕ ಮಳಿಗೆಯಲ್ಲ, ಬುಕ್ ಮಾಲ್. ಕೇವಲ 100 ಚದರ ಅಡಿ ವಿಸ್ತೀರ್ಣದ ಪುಟ್ಟ ಅಂಗಡಿಯಲ್ಲಿ ಶುರುವಾದ ಸಪ್ನ ರಾಜ್ಯದಲ್ಲಿ ಮನೆಮಾತಾಗಿ ವರ್ಷಗಳೇ ಉರುಳಿವೆ.

ರೆಸಿಡೆನ್ಸಿ ರಸ್ತೆಯಲ್ಲಿ, `ದಿ ತಾಜ್ ಗೇಟ್‌ವೇ~ ಹೋಟೆಲ್‌ನ ಮುಂಭಾಗ (ಅದ್ವೈತ್ ಹ್ಯುಂಡೈ ಶೋರೂಮ್ ಆವರಣ)ದಲ್ಲಿ 18ಸಾವಿರ ಚದರ ಅಡಿ ವಿಸ್ತೀರ್ಣದ ವಿಶಾಲವಾದ ಈ ಬುಕ್ ಮಾಲ್, ಬರಿಯ ಪುಸ್ತಕ ಲೋಕವಷ್ಟೇ ಆಗಿರದೆ ಗ್ರಾಹಕರನ್ನು ಬಹು ಆಯಾಮಗಳಲ್ಲಿ ಸಂಪ್ರೀತಿಗೊಳಿಸಲಿದೆ.

ಇವೆಲ್ಲಾ ಇವೆ...
ಸಪ್ನದ ಇತರ ಬುಕ್‌ಮಾಲ್‌ಗಳಂತೆ ಇಲ್ಲಿಯೂ ವಿಭಾಗವಾರು, ವಿಷಯವಾರು ಪುಸ್ತಕಗಳು ಲಭ್ಯ. ಜೊತೆಗೆ ಅಕಾಡೆಮಿಕ್ ಪುಸ್ತಕಗಳ ಬೃಹತ್ ಸಂಗ್ರಹವೇ ಇಲ್ಲಿದೆ. ನೆಲಮಹಡಿಯಲ್ಲಿ ಮಳಿಗೆ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಪೆನ್ನು, ಶಾಲಾ ಮಕ್ಕಳ ಸಣ್ಣ ಸ್ಟೇಷನರಿ, ಆಕ್ರಿಲಿಕ್ ಬಣ್ಣಗಳು, ದುಬಾರಿ ಪೆನ್ನುಗಳ ವಿಭಾಗವಿದೆ.

ಪ್ರವೇಶದ್ವಾರದ ಮುಂಭಾಗದಲ್ಲಿ ವಿವಿಧ ಬಗೆಯ ಸೀಡಿ, ಡಿವಿಡಿ, ರೈಮ್ಸ ಕಣ್ಣಿಗೆ ಬಿದ್ದರೂ ಬಲಭಾಗದಲ್ಲಿ `ಹಾಲ್‌ಮಾರ್ಕ್~ ಬ್ರ್ಯಾಂಡ್‌ನ ಉಡುಗೊರೆಯ ವಿಭಿನ್ನ ವಸ್ತುಗಳು ಗಮನ ಸೆಳೆಯುತ್ತವೆ. ಬಗೆಬಗೆಯ ಗೋಡೆ ಗಡಿಯಾರ, ಮಗ್, ಕೀಚೈನ್, ಪುಟಾಣಿ ಗೊಂಬೆಗಳು, ಕಾಗದದ ಕೈಚೀಲಗಳು... ಹೀಗೆ ಹತ್ತಾರು ನಮೂನೆಯವು.
ಇನ್ನೇನು ಮೇಲ್ಮಹಡಿ ಹತ್ತಬೇಕು ಅನ್ನುವಾಗ ಮಕ್ಕಳಿಗೊಂದು ಅಚ್ಚರಿ ಕಾದಿದೆ (ಬಾಕ್ಸ್ ನೋಡಿ).

ಆಕರ್ಷಕವಾಗಿ ಜೋಡಿಸಿಟ್ಟ ಪುಸ್ತಕಗಳ ಪರಿಯನ್ನು ಕಣ್ತುಂಬಿಕೊಂಡು ಮೆಟ್ಟಿಲು ಹತ್ತಿದರೆ ಮೇಲ್ಮಹಡಿಯಲ್ಲಿ ನಿಜವಾದ ಸಪ್ನಲೋಕ ತೆರೆದುಕೊಳ್ಳುತ್ತದೆ. ಬಲಭಾಗದಲ್ಲಿ ವಿವಿಧ ಹಂತದ ಶೈಕ್ಷಣಿಕ ಪುಸ್ತಕಗಳ ಬೃಹತ್ ಭಂಡಾರವೇ ಇದ್ದು, ಬಗೆಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕುಬೇಕಾದ ಪುಸ್ತಕಗಳು, ಇತಿಹಾಸ, ರಾಜಕೀಯ, ಅಧ್ಯಾತ್ಮ, ಪುರಾಣ ತೀರಾ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕಗಳು,  ದೊಡ್ಡದೊಂದು ಕಥಾಪುಸ್ತಕಗಳು, ವಾಸ್ತುಶಿಲ್ಪ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಪುಸ್ತಕಗಳಿವೆ.

ಎಡಭಾಗದಲ್ಲಿ ಕಾಮಿಕ್ಸ್, ಮಕ್ಕಳ ಕತೆಗಳು, ಪ್ರಿ ನರ್ಸರಿ, ಸಿಬಿಎಸ್‌ಇ, ಐಸಿಎಸ್‌ಇನಂತಹ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳು ಇವೆ.

ಪರಿಸರಪ್ರೇಮ
ಜಗಮಗಿಸುವ ವಿದ್ಯುದ್ದೀಪಗಳ ಅಲಂಕಾರದಿಂದ ಗ್ರಾಹಕರ ಗಮನ ಸೆಳೆಯುವುದು ಹೊಸ ಮಳಿಗೆಗಳ ವಿನೂತನ ತಂತ್ರ. ಆದರೆ `ಸಪ್ನ~ದ ಈ ಮಳಿಗೆಯಲ್ಲಿ ನೈಸರ್ಗಿಕ ಬೆಳಕೇ ವಿಜೃಂಭಿಸಲಿದೆ.

`ನೆಲಮಹಡಿ ಹಾಗೂ ಮೇಲ್ಮಹಡಿಯಲ್ಲಿ ಬಳಸಲಾಗಿರುವ ಸಿಎಫ್‌ಎಲ್ ದೀಪಗಳೂ ಅತಿನೇರಳೆ ವಿಕಿರಣಗಳನ್ನು ಸೂಸುವುದಿಲ್ಲ, ಶೇಕಡಾ 25ರಷ್ಟು ವಿದ್ಯುತ್ತನ್ನಷ್ಟೇ ಅವು ಬಳಸುತ್ತವೆ. ಇದು, ಮೂರನೇ ಪರಿಸರಪ್ರೇಮಿ ಬುಕ್‌ಮಾಲ್~ ಎಂದು ವಿವರಿಸಿದರು `ಸಪ್ನ~ದ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ.
 

  ಅಮ್ಮ-ಮಕ್ಕಳಿಗೆ...
ಸಪ್ನದ ಇತರ ಬುಕ್ ಮಾಲ್‌ಗಳಿಗಿಂತ ಇದು ಸ್ವಲ್ಪ ಭಿನ್ನವಾಗಿದೆ. ಮಕ್ಕಳನ್ನು ಪುಸ್ತಕ ಜಗತ್ತಿಗೆ ಸೆಳೆಯುವ ವಿನೂತನ ತಂತ್ರವನ್ನು ಇಲ್ಲಿ ಕಾಣಬಹುದು.
`ಡಿಸ್ನಿ ವರ್ಲ್ಡ್~ ಮಕ್ಕಳ ಅಚ್ಚುಮೆಚ್ಚಿನ ಮನರಂಜನಾ ಚಾನೆಲ್. ಅಂತಹ ಡಿಸ್ನಿ ಜಗತ್ತು ಪುಸ್ತಕ ಲೋಕದಲ್ಲೇ ಸಿಗುವಂತಾದರೆ? ಹೌದು, ಸಪ್ನದ ಈ ಮಳಿಗೆಯಲ್ಲಿ ಮಕ್ಕಳಿಗಾಗಿ ಪುಟ್ಟದೊಂದು `ಡಿಸ್ನಿ ವರ್ಲ್ಡ್~ ತಲೆಯೆತ್ತಿದೆ. ಆಗಲೇ ಹೇಳಿದಂತೆ, ಮೇಲ್ಮಹಡಿಗೆ ಹತ್ತುವುದಕ್ಕೂ ಮುನ್ನ ಮಕ್ಕಳನ್ನು ಹಿಡಿದಿಡುವ ಅಚ್ಚರಿ. ಇದು, ಡಿಸ್ನಿವರ್ಲ್ಡ್‌ನ ಕೊಡುಗೆ.
`ಓದುವ ಪ್ರೀತಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು ಎಂಬ ನಮ್ಮ ಆಶಯದಂತೆ ಇಲ್ಲಿ ಡಿಸ್ನಿಲೋಕವನ್ನು ಪರಿಚಯಿಸಿದ್ದೇವೆ. ಡಿಸ್ನಿಲೋಕದಲ್ಲಿ ಖರೀದಿ ಮಾಡಿದ ಮಗು ಮೇಲ್ಮಹಡಿಯಲ್ಲಿ ಒಂದಾದರೂ ಪುಸ್ತಕ ಕೊಂಡರೆ ನಮ್ಮ ಉದ್ದೇಶ ಈಡೇರುದಂತಾಗುತ್ತದೆ~ ಎಂದರು  ನಿತಿನ್ ಷಾ.
`ನವಜಾತ ಶಿಶುವಿನಿಂದ ಎರಡು ವರ್ಷದವರೆಗಿನ ಮಕ್ಕಳಿಗಾಗಿ ಅಪ್ಪ ಅಮ್ಮ ಕೊಳ್ಳಬಹುದಾದ ಸಾಬೂನು, ಟವೆಲ್, ಸಣ್ಣಪುಟ್ಟ ಆಟಿಕೆ, ಉಡುಗೊರೆ ಸಾಮಗ್ರಿಗಳು ಇಲ್ಲಿ ಲಭ್ಯ. ಜಾನ್ಸನ್ ಅಂಡ್  ಜಾನ್ಸನ್, ಫಿಷರ್ಸ್‌ಪ್ರೈಸ್, ಅಮೆರಿಕದ ಡಾಕ್ಟರ್ ಕಂಪನಿಯಂತಹ ಪರಿಸರಸ್ನೇಹಿ ವಸ್ತುಗಳ ತಯಾರಿಕಾ ಕಂಪನಿಗಳ ಉತ್ಪನ್ನಗಳನ್ನಷ್ಟೇ ಹೊಂದಿದ್ದೇವೆ~ ಎಂದು ಮಾಹಿತಿ ನೀಡಿದರು, ಸಪ್ನದ ನಿರ್ದೇಶಕ ಪರೇಶ್ ಷಾ.
ಇನ್ನೊಂದು ವಿಶೇಷವೆಂದರೆ, ಇನ್ನೂ ಹುಟ್ಟದ ಮಗು, ಅದನ್ನು ಹೊತ್ತ ಅಮ್ಮ, ಅದೇ ತಾನೇ ಹೆತ್ತ ಅಮ್ಮ, ಅಂಬೆಗಾಲಿಡುವ, ನಡೆ ಕಲಿಯುವ ಕಂದನೂ ಕಲಿಯಬೇಕಾದ ಹತ್ತಾರು ಬಗೆಯ ಪಾಠೋಪಕರಣ, ಪೀಠೋಪಕರಣ, ತಳ್ಳುಗಾಡಿ, ಕೈಪಿಡಿಗಳು, ಅಕ್ಷರ ಹಾಗೂ ದೃಶ್ಯರೂಪದಲ್ಲಿ ಇಲ್ಲಿ ಲಭ್ಯ.
`ಸಪ್ನ~ವನ್ನು ಅಂತರ್‌ಜಾಲದಲ್ಲಿ ಜಾಲಾಡುವವರು
www.sapnaonline.com ಗೆ ಭೇಟಿ ನೀಡಬಹುದು. ಆನ್‌ಲೈನ್ ಖರೀದಿಯು ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿದೆ~ ಎಂದು, ಜಾಲತಾಣದ ಮುಖ್ಯಸ್ಥೆ ಜಯಶ್ರೀ ಹೇಳಿದರು.
ಅಂದಹಾಗೆ, ರೆಸಿಡೆನ್ಸಿ ರಸ್ತೆಯ ಈ ಬುಕ್‌ಮಾಲ್‌ಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಬುಧವಾರ ಬೆಳಿಗ್ಗೆ ಚಾಲನೆ ನೀಡುತ್ತಾರೆ. ಹೀಗಾಗಿ ಶಾಖೆಯನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ರೆಸಿಡೆನ್ಸಿ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರಿಗೆ ತಮ್ಮ ನೆಚ್ಚಿನ `ಸಪ್ನ~ ಸಮೀಪಕ್ಕೇ ಬಂದಿರುವುದು ಅಚ್ಚರಿಯೋ ಅಚ್ಚರಿಯಂತೆ. ಸೋಮವಾರ ಬೆಳಿಗ್ಗೆಯೇ ಮಳಿಗೆಗೆ ಧಾವಿಸಿ ಸಮಾಚಾರ ಎಲ್ಲಾ ತಿಳಿದುಕೊಂಡು ಉದ್ಘಾಟನೆಗೆ ತಪ್ಪದೇ ಹಾಜರಾಗುವುದಾಗಿ ಹೇಳಿ ಹೋದರಂತೆ. `ಸಪ್ನ~ ಲೋಕದ ಸೆಳೆತವೇ ಹಾಗೇ ಅಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT