ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಧ್ಯಕ್ಷರ ಚಹಾ ಕೊಠಡಿಯಲ್ಲೇ ಕೆಜೆಪಿ ಸಭೆ!

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಹಾವೇರಿಯಲ್ಲಿ ಇದೇ 9ರಂದು ನಡೆಸಲು ಉದ್ದೇಶಿಸಿರುವ ಕೆಜೆಪಿ ಸಮಾವೇಶದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ನಗರಕ್ಕೆ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುವರ್ಣ ವಿಧಾನಸೌಧದಲ್ಲಿ ಒಂದು ಸುತ್ತು ಹಾಕಿ ಸಂಭ್ರಮಿಸಿದರು. ಸಭಾಧ್ಯಕ್ಷರ ಚಹಾ ಕೊಠಡಿಯಲ್ಲೇ ಕೆಜೆಪಿ ಸಭೆ ನಡೆಸಿ ಅಚ್ಚರಿ ಮೂಡಿಸಿದರು.

`ನಾನು ಮುಖ್ಯಮಂತ್ರಿಯಾದ ಬಳಿಕ ತೆಗೆದುಕೊಂಡ ತೀರ್ಮಾನದಂತೆ ಈ ಬೃಹತ್ ಸೌಧ ನಿರ್ಮಾಣವಾಗಿದೆ. ಇದು ನನ್ನ ಕೊಡುಗೆ. ಇಲ್ಲಿ ಕೂತರೆ ಸಹಜವಾಗಿಯೇ ಸಂತಸವಾಗುತ್ತದೆ. ಆದರೆ, ಇದು ವರ್ಷದ 365 ದಿನವೂ ಚಟುವಟಿಕೆಯಿಂದ ಇರಬೇಕು ಎಂಬುದು ನನ್ನ ಇಚ್ಛೆ. ಅದಕ್ಕೆ ಪೂರಕವಾಗಿ ಸರ್ಕಾರ ಕಾರ್ಯಕ್ರಮ ರೂಪಿಸಬೇಕು' ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

ಬೆಳಿಗ್ಗೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ `ಸುವರ್ಣ ವಿಧಾನಸೌಧಕ್ಕೆ ನಾಲ್ಕು ತಿಂಗಳ ನಂತರ ಮತ್ತೆ ಮುಖ್ಯಮಂತ್ರಿಯಾಗಿ ಹೋಗುತ್ತೇನೆ. ಅಲ್ಲಿಯವರೆಗೂ ಹೋಗುವುದಿಲ್ಲ' ಎಂದು ಹೇಳಿದ್ದರು.

ಆದರೆ, ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಪ್ತ ಸಚಿವರು ಮತ್ತು ಶಾಸಕರ ಜತೆ ಉಪಾಹಾರ ಸೇವಿಸಿದ ಬಳಿಕ ಎಲ್ಲರ ಒತ್ತಾಯದ ಮೇರೆಗೆ ಸುವಣ್ಣ ವಿಧಾನಸೌಧಕ್ಕೆ ಬಂದರು. ನೇರವಾಗಿ ಸೆಂಟ್ರಲ್ ಹಾಲ್‌ಗೆ ಹೋಗಿ ಕೆಲ ಹೊತ್ತು ವಿರಮಿಸಿದರು. ಈ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣ, ಸಿ.ಎಂ.ಉದಾಸಿ, ಉಮೇಶ್ ವಿ.ಕತ್ತಿ, ಮುರುಗೇಶ ನಿರಾಣಿ, ಶೋಭಾ ಕರಂದ್ಲಾಜೆ, ಎಂ.ಪಿ.ರೇಣುಕಾಚಾರ್ಯ, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಅನೇಕ ಮಂದಿ ಬೆಂಬಲಿಗ ಶಾಸಕರು  ಅವರಿಗೆ ಸಾಥ್ ನೀಡಿದರು.

ಐತಿಹಾಸಿಕ ಸಮಾವೇಶ: ಸೆಂಟ್ರಲ್ ಹಾಲ್‌ನ ಮಧ್ಯ ಭಾಗದಲ್ಲಿ ಸ್ವಲ್ಪಹೊತ್ತು ಕುಳಿತ ಯಡಿಯೂರಪ್ಪ ಅಲ್ಲೇ ಮಾಧ್ಯಮ ಪ್ರತಿನಿಧಿಗಳ ಜತೆ ಔಪಚಾರಿಕವಾಗಿ ಮಾತನಾಡಿದರು. ಹಾವೇರಿ ಸಮಾವೇಶದ ಬಗ್ಗೆ ಮಾತನಾಡಿದರು. `ನಾಲ್ಕರಿಂದ ಐದು ಲಕ್ಷ ಜನ ಸೇರುತ್ತಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಬಲವಾದ ಪ್ರಾದೇಶಿಕ ಪಕ್ಷ ಉದಯ ಆಗುತ್ತಿದೆ. ಹೀಗಾಗಿ ಅದೊಂದು ಐತಿಹಾಸಿಕ ಸಮಾವೇಶವಾಗಲಿದೆ' ಎಂದರು.

`ಸಚಿವರು ಮತ್ತು ಶಾಸಕರನ್ನು ಸಮಾವೇಶಕ್ಕೆ ಆಹ್ವಾನಿಸಿಲ್ಲ. ಅವರು ಬರುವುದು ಬೇಡ ಎಂದು ಸಲಹೆ ಮಾಡಿದ್ದೇನೆ. ಆದರೆ, ಜನರನ್ನು ಸೇರಿಸುವುದಕ್ಕೆ ಅವರೆಲ್ಲರ ಸಹಕಾರ ಪಡೆಯುತ್ತಿದ್ದೇನೆ' ಎಂದು ಹೇಳಿದರು.

`ಬೃಹತ್ ಸಮಾವೇಶ ಆಯೋಜಿಸುವುದು ಹುಡುಗಾಟದ ಕೆಲಸವಲ್ಲ. ಹೀಗಾಗಿ ಒತ್ತಡಕ್ಕೆ ಒಳಗಾಗಿದ್ದೇನೆ' ಎಂದೂ ಹೇಳಿದ ಅವರು, ಯಾರಿಗೂ ಅನಾನುಕೂಲ ಆಗದಂತೆ ನೋಡಿಕೊಳ್ಳಲು ಸಲಹೆ ಮಾಡಿದ್ದೇನೆ. ಸಂಚಾರ ದಟ್ಟಣೆಯ ಕಿರಿಕಿರಿ ಇರಬಾರದು ಎಂದು ಸಮಾವೇಶವನ್ನು ಬೆಂಗಳೂರಿನಿಂದ ಹೊರಗೆ ಹಮ್ಮಿಕೊಂಡಿದ್ದು, ಅದಕ್ಕೆ ರಾಜ್ಯದ ಎಲ್ಲ ಭಾಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ' ಎಂದು ಯಡಿಯೂರಪ್ಪ ವಿವರಿಸಿದರು.

ಸ್ಪೀಕರ್ ಕೊಠಡಿಯಲ್ಲಿ ಬಿಎಸ್‌ವೈ ಸಭೆ: ಸೆಂಟ್ರಲ್ ಹಾಲ್‌ನಿಂದ ಹೊರ ಬಂದ ಬಳಿಕ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗ ಸಚಿವರು ಮತ್ತು ಶಾಸಕರ ಜತೆ ಗುಟ್ಟಾಗಿ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದರು. ಇದಕ್ಕೆ ವೇದಿಕೆಯಾಗಿದ್ದು ವಿಧಾನಸಭಾಧ್ಯಕ್ಷರ ಚಹಾ ಕೊಠಡಿ. ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಕಚೇರಿ ಮುಂದಿನ ಈ ಕೊಠಡಿಯಲ್ಲಿ ಆಪ್ತರ ಸಭೆ ನಡೆಸುವುದರ ಮೂಲಕ ಅಚ್ಚರಿ ಮೂಡಿಸಿದರು.

ಹೊಸ ಸಂಪ್ರದಾಯ: ಸಭಾಧ್ಯಕ್ಷರ ಕೊಠಡಿಯಲ್ಲಿ ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಸಭೆ ನಡೆಸುವಂತಿಲ್ಲ. ಇದು ನಿಯಮ ಕೂಡ. ಆದರೆ, ಹೊಸ ವಿಧಾನಸೌಧದಲ್ಲಿ ರಾಜಕೀಯ ಸಭೆ ನಡೆಸುವುದರ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕಲಾಯಿತು. ಯಡಿಯೂರಪ್ಪ ಅವರಿಗೆ ಸಭೆ ನಡೆಸುವ ಇಚ್ಛೆ ಇಲ್ಲದಿದ್ದರೂ ಅಲ್ಲಿಗೆ ಅವರನ್ನು ಕರೆದುಕೊಂಡು ಹೋಗಿದ್ದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ.

ಈ ಸಭೆಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿದ್ದ ತಮ್ಮ ಬೆಂಬಲಿಗ ಶಾಸಕರನ್ನು ಕರೆತರುವ ಕೆಲಸವನ್ನು ಸಚಿವರಾದ ಬಿ.ಜೆ.ಪುಟ್ಟಸ್ವಾಮಿ, ಶೋಭಾ ಕರಂದ್ಲಾಜೆ, ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಇತರರು ಮಾಡಿದರು. ಶಾಸಕ ಶಿವರಾಜ ಸಜ್ಜನ್ ಅವರ ಹಾವೇರಿ ನಿವಾಸದಲ್ಲಿ ಭಾನುವಾರ ಬೆಳಗಿನ ಉಪಾಹಾರಕ್ಕೆ ವ್ಯವಸ್ಥೆ ಮಾಡಿದ್ದು, ಅದರಲ್ಲಿ ಭಾಗವಹಿಸಬೇಕು ಎನ್ನುವ ಮನವಿ ಮಾಡಿದರು ಎನ್ನಲಾಗಿದೆ.

ಇದಲ್ಲದೆ, ಹಾವೇರಿ ಜಿಲ್ಲೆಯ ಸುತ್ತಮುತ್ತಲಿನ ಶಾಸಕರು ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಬೇಕು. ಸಾರಿಗೆ ಮತ್ತು ಊಟದ ವ್ಯವಸ್ಥೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಆಸನಗಳ ವ್ಯವಸ್ಥೆ ಸರಿಯಾಗಿ ಮಾಡಬೇಕು ಎನ್ನುವುದರ ಬಗ್ಗೆ ಸಚಿವರು ಮತ್ತು ಶಾಸಕರಿಗೆ ಕೆಲವೊಂದು ಜವಾಬ್ದಾರಿಗಳನ್ನು ವಹಿಸಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT