ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಪೊಲೀಸ್ ಭದ್ರತೆ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಾಗಲಕೋಟೆ ತಾಲ್ಲೂಕಿನ ಪ್ರತಿಷ್ಠಿತ ಗ್ರಾಮ ಪಂಚಾಯಿತಿಯೊಂದರಲ್ಲಿ ಪ್ರತಿ ತಿಂಗಳು ನಡೆಯುವ ಸಾಮಾನ್ಯ ಸಭೆಯನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ನಡೆಸಲಾಗುತ್ತಿದೆ.

ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತದೆ ಎಂದರೆ. ಅಲ್ಲಿ ಗದ್ದಲ, ಗಲಾಟೆ, ಪರ್ಸಂಟೇಜ್ ಬಗ್ಗೆ ಜಗಳ ನಡೆಯುತ್ತದೆ ಎಂಬುದು ಖಚಿತ. ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ನಾಲ್ಕು ಬಾರಿ ಹಲ್ಲೆ ಯತ್ನ ನಡೆದಿದೆ. 

ಎನ್‌ಆರ್‌ಇಜಿ ಅನುದಾನವನ್ನು ಗ್ರಾಮದ ಎಲ್ಲಾ ವಾರ್ಡ್‌ಗೆ ಸಮನಾಗಿ ಹಂಚಿಕೆ ಮಾಡಬೇಕು, ಅಲ್ಲದೇ ಎಲ್ಲಾ ಹಣವನ್ನು ಒಬ್ಬರ ಅಕೌಂಟ್‌ಗೆ ಹಾಕಬೇಕು ಎಂಬುದು ಈ ಪಂಚಾಯ್ತಿಯಲ್ಲಿ ಸದಸ್ಯರಾಗಿರುವ ಗಂಡ ಮತ್ತು ಹೆಂಡತಿಯ ಬೇಡಿಕೆ. ಕಾನೂನು ಪ್ರಕಾರ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಪಿಡಿಒ ಅವರ ಗಮನಕ್ಕೆ ತಂದರೆ, ಅದು ಯಾವ ಕಾನೂನು? ಎಂದು ಪ್ರಶ್ನಿಸುತ್ತಾರೆ. `ನಾನು ಚುನಾವಣೆಗೆ 16 ಲಕ್ಷ ರೂಪಾಯಿ ಖರ್ಚು ಮಾಡಿ ಗೆದ್ದು ಬಂದಿದ್ದೇನೆ, ಖರ್ಚು ಮಾಡಿರುವ ಹಣವನ್ನು ನಾನು ದುಡಿದುಕೊಳ್ಳಬೇಕಿದೆ, ಹಾಗಾಗಿ ನಾನು ಹೇಳಿದ್ದಕ್ಕೆ ನೀವು ಸಹಿ ಮಾಡಬೇಕು, ಇಲ್ಲದಿದ್ದರೆ ನಿಮ್ಮ ಕತೆ ಏನಾಗುತ್ತೇ ನೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಬೆದರಿಕೆ ಹಾಕುತ್ತಾರೆ.

ಕೆಲಸ ಮಾಡಲು ಬಿಡುವುದಿಲ್ಲ, ಪರ್ಸಂಟೇಜ್ ಕೇಳುತ್ತಾರೆ, ಪ್ರತಿ ಕಾಮಗಾರಿಯನ್ನೂ ಅಧ್ಯಕ್ಷ ಮತ್ತು ಸದಸ್ಯರು ಹೇಳಿದವರಿಗೇ ಗುತ್ತಿಗೆ ನೀಡಬೇಕು, ಕಾಮಗಾರಿಯನ್ನು ಪರ್ಸಂಟೇಜ್‌ಗೆ ಹರಾಜು ಹಾಕುತ್ತಾರೆ ಎಂಬುದು ಪಿಡಿಒ ದೂರು.ಇದೇ ರೀತಿ ಬಾಗಲಕೋಟೆ ತಾಲ್ಲೂಕಿನ ಮತ್ತೊಂದು ಗ್ರಾಮ ಪಂಚಾಯಿತಿಯಲ್ಲಿ ರೂ. 250ಕ್ಕೆ ಖರೀದಿಸಿದ ಸಿಎಲ್‌ಎಫ್ ಬಲ್ಬ್‌ಗಳಿಗೆ ರೂ. 750 ಎಂದು ಬಿಲ್ ಹಾಕಿಸಿಕೊಂಡು ಬಂದಾಗ ಅದಕ್ಕೆ ಒಪ್ಪಿಗೆ ಕೊಡದ ಪಿಡಿಒ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ  `ನಿಮಗೆ ಪ್ರತಿ ತಿಂಗಳೂ ಸಂಬಳ ಬರುತ್ತದೆ, ನಮಗೆ ಯಾವ ಸಂಬಳವೂ ಇಲ್ಲ, ಇರುವ ಐದು ವರ್ಷದಲ್ಲಿ ಒಂದಷ್ಟು ಹಣ ಮಾಡಿಕೊಳ್ಳಬೇಕು, ಇದಕ್ಕೆ ಅಡ್ಡ ಬಂದರೆ ಗ್ರಹಚಾರ ಬಿಡಿಸುತ್ತೇವೆ~ ಎಂದು ಬೆದರಿಕೆ ಹಾಕಿರುವ ಘಟನೆ ನಡೆದಿದೆ.

  ಈ ಬಗ್ಗೆ ಇಲಾಖೆಯ ಮೇಲಾಧಿಕಾರಿ ಅವರ ಗಮನಕ್ಕೆ ತಂದರೆ ಸ್ವಲ್ಪ ಹೊಂದಿಕೊಂಡು ಹೋಗಿ ಎನ್ನುತ್ತಾರೆ. ಕಾನೂನು ಪಾಲಿಸಿದರೆ ಕಿರುಕುಳ ನೀಡುತ್ತಾರೆ. ಕಾನೂನು ಪಾಲಿಸದಿದ್ದರೆ ನಮ್ಮನ್ನೇ ಹೊಣೆಗಾರರನ್ನಾಗಿಸುತ್ತಾರೆ. ಹೀಗಾದರೆ ಗ್ರಾಮದ ಅಭಿವೃದ್ಧಿ ಹೇಗೆ ಎಂಬುದು ಪಿಡಿಒಗಳ ಪ್ರಶ್ನೆಯಾಗಿದೆ.
- ಬಸವರಾಜ್ ಸಂಪಳ್ಳಿ

ಕನಸಿನ ಬಲೂನ್ ಠುಸ್
ಸಹಪಾಠಿಗಳಂತೆ ಸಾಫ್ಟ್‌ವೇರ್ ಕಂಪೆನಿ ಕಡೆ ಧಾವಿಸದೆ ಹಳ್ಳಿಗಳ ಉದ್ಧಾರದ ಕನಸು ಕಾಣುತ್ತಾ ಬಂದ ನಾಗರಾಜ್ 2010 ರಲ್ಲಿ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡರು. ಆದರೆ ಕೇವಲ ಏಳು ತಿಂಗಳ ಹೊತ್ತಿಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದರು. ಅವರ ಕನಸಿನ ಬಲೂನು ಭ್ರಷ್ಟರು ಹಾಗೂ ಕಾಳಜಿರಹಿತ ಜನಪ್ರತಿನಿಧಿಗಳಿಂದಾಗಿ ಒಡೆದು ಹೋಯಿತು.

ಒಮ್ಮೆ ಗ್ರಾಮ ಪಂಚಾಯಿತಿಗೆ ಹಣಕಾಸು ಯೋಜನೆಯೊಂದರಲ್ಲಿ 5 ಲಕ್ಷ ರೂಪಾಯಿ ಅನುದಾನ ಬಂದಿತು. ಮಾರ್ಗಸೂಚಿ ಪ್ರಕಾರ ಈ ಅನುದಾನವನ್ನು ಕುಡಿಯುವ ನೀರು, ರಸ್ತೆ ರಿಪೇರಿ ಸೇರಿದಂತೆ ಅಗತ್ಯ ಕೆಲಸಕ್ಕೆ ಬಳಕೆ ಮಾಡಬೇಕಿತ್ತು. ಈ 5 ಲಕ್ಷ ರೂಪಾಯಿ ಅನುದಾನದಲ್ಲಿ 2 ಲಕ್ಷ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಮೀಸಲಿಡುವುದು, ಉಳಿದ 3 ಲಕ್ಷ ರೂಪಾಯಿಗಳನ್ನು ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಳ್ಳಬಹುದು ನಾಗರಾಜ್ ಸಲಹೆ ನೀಡಿದ್ದರು. ಆದರೆ ಸದಸ್ಯರು ನಾಗರಾಜ್‌ನ ಸಲಹೆಯನ್ನು ಕಸದ ಬುಟ್ಟಿಗೆ ಹಾಕಿದವರು `ಈಗ ಬಂದಿರುವ  ಅನುದಾನವನ್ನು ಎಲ್ಲ ಸದಸ್ಯರಿಗೂ ಸಮಾನವಾಗಿ ಹಂಚಿ. ಆ ಹಣದಲ್ಲಿ ಏನು ಕಾಮಗಾರಿ ಮಾಡಬೇಕು ಎನ್ನುವುದನ್ನು ನಾವು ನಿರ್ಧರಿಸುತ್ತೇವೆ~ ಎಂದರು!  ಕೀಳುಮಟ್ಟದ ಸ್ಥಳೀಯ ರಾಜಕೀಯ, ಜನಪ್ರತಿನಿಧಿಗಳ ಹಣದಾಸೆ ಮತ್ತು ಮೇಲಧಿಕಾರಿಗಳ ಲಂಚಗುಳಿತನಗಳಿಂದ ರೋಸಿ ಹೋದ ನಾಗರಾಜ್ ಪಿಡಿಒ ಹುದ್ದೆಗೆ ಗುಡ್‌ಬೈ ಹೇಳಿದರು.
- ಸುದೇಶ ದೊಡ್ಡಪಾಳ್ಯ

ಅಡಕತ್ತರಿಯಲ್ಲಿ ಪಿಡಿಒ ಜೀವ
`ಸಂಬಂಧಿಸಿದ ಗ್ರಾಮ ಪಂಚಾಯಿತಿಯು ಜನರಿಂದ ಸಂಗ್ರಹಿಸುವ ಶೇ 34 ತೆರಿಗೆ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡುವುದು ನಮ್ಮ ಜವಾಬ್ದಾರಿ. ಪಿಡಿಒ ಮತ್ತು ಅಧ್ಯಕ್ಷರು ಸಹಿ ಮಾಡಿರುವ ಚೆಕ್ ಮೂಲಕವೇ ಈ ಕೆಲಸವಾಗಬೇಕು. ಆದರೆ ಆ ಚೆಕ್‌ಗೆ ಸಹಿ ಹಾಕಲು ಅಧ್ಯಕ್ಷರು ಕಮಿಷನ್ ಕೇಳುತ್ತಾರೆ. ಅವರಿಗೆ ಕಮಿಷನ್ ಕೊಡೋ ಹಾಗಿಲ್ಲ. ಆದರೆ ತೆರಿಗೆ ಕಟ್ಟದಿದ್ದರೆ ಸರ್ಕಾರ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾನು ಅಡಕತ್ತರಿಯಲ್ಲಿ ಸಿಲುಕಿದ್ದೇನೆ..~-ಇದು ಕೋಲಾರ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರ ಅಳಲು. 

 ಕಾಮಗಾರಿಯ ಕುರಿತ ವರದಿಯನ್ನು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡದೆಯೇ ದಾಖಲಿಸುತ್ತಾರೆ. ಆಗಿರುವ ಕೆಲಸಕ್ಕಿಂತಲೂ ಹೆಚ್ಚು ಹಣ ಬಿಲ್ ಆಗುತ್ತದೆ. ಅದನ್ನು ಪ್ರಶ್ನಿಸಿದರೆ ಉಳಿಗಾಲವಿಲ್ಲ ಎಂಬ ವಾತಾವರಣವಿದೆ. ಕಾಂಪೌಂಡ್ ನಿರ್ಮಾಣವೊಂದರ ಕಾಮಗಾರಿ ಅಡಿಯಲ್ಲಿ ಕೇವಲ 17 ಕೂಚಗಳನ್ನು (ಕಲ್ಲುಚಪ್ಪಡಿ) ಅಳವಡಿಸಲಾಗಿತ್ತು. ಆದರೆ ಬಿಲ್‌ನಲ್ಲಿ ಮಾತ್ರ 30 ಕೂಚದ ಹಣವನ್ನು ಸೇರಿಸಲಾಗಿತ್ತು. ಆ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ನಿರ್ವಹಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ವರ್ಗಾವಣೆಗೆ ಯತ್ನ ನಡೆಯಿತು.

ವಸತಿ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಗಳಲ್ಲೆ ತಯಾರಿಸಬೇಕು ಎಂಬುದು ನಿಯಮ. ಆದರೆ ಶಾಸಕರ ಕಡೆಯಿಂದ ಬರುವ ಪಟ್ಟಿಯ ಹೆಸರುಗಳನ್ನು ಸೇರಿಸಲೇಬೇಕು ಎಂಬ ಒತ್ತಾಯ ನಿರಂತರವಾಗಿದೆ. ಅದನ್ನು ವಿರೋಧಿಸಿದರೆ, ಶಾಸಕರ ನೇತೃತ್ವದ ಸಮಿತಿಯು, ಗ್ರಾಮಸಭೆಯ ಮೂಲಕ ತಯಾರಿಸಿದ ಪಟ್ಟಿಯನ್ನು ಅನುಮೋದನೆ ಮಾಡುವುದೇ ಇಲ್ಲ. ಪಟ್ಟಿ ವಾಪಸ್ ಬಂದಾಗ ಸ್ಥಳೀಯರು ನಮ್ಮ ಮೇಲೆ  ಗೂಬೆ ಕೂರಿಸುತ್ತಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

ಬಂಗಾರಪೇಟೆ ತಾಲ್ಲೂಕಿನ ಅಧಿಕಾರಿಯ ಅನುಭವ ಹೀಗಿದೆ : ಅಭಿವೃದ್ಧಿ ಅಧಿಕಾರಿಗೆ ಕೇವಲ 200 ರೂಪಾಯಿ ಮಾತ್ರ ನೇರವಾಗಿ ಖರ್ಚು ಮಾಡಲು ಅಧಿಕಾರವಿದೆ. ಅದಕ್ಕಿಂತಲೂ ಹೆಚ್ಚಿನ ಹಣವನ್ನು ಚೆಕ್ ಮೂಲಕವೇ ಖರ್ಚು ಮಾಡಬೇಕು. ಜನರಿಗಾಗಿ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಯೊಂದರಲ್ಲಿ ಸಾಲ ಮಾಡುತ್ತೇವೆ. ಅತಿ ಕಡಿವೆು ಬೆಲೆಗೆ ಎಲ್ಲಿ ದೊರಕುವುದೋ ಅಲ್ಲಿಯೇ ಖರೀದಿಸಿ, ಚೆಕ್ ನೀಡುವ ಸಂದರ್ಭದಲ್ಲಿ ಅಧ್ಯಕ್ಷರು ಸಹಿ ಹಾಕಲ್ಲ. ಬದಲಿಗೆ, ತಾವುಹೇಳುವ ಅಂಗಡಿಯಿಂದಲೇ ಸಾಮಗ್ರಿ ಖರೀದಿಸಬೇಕು.

ಕೊಟ್ಟ ಬಿಲ್‌ಗೆ ಮಾತಾಡದೆ ಸಹಿಮಾಡಬೇಕು ಎಂದು ಹೇಳುತ್ತಾರೆ. ಅಲ್ಲಿ, ಉದಾಹರಣೆಗೆ, 17 ರೂಪಾಯಿ ಬಲ್ಬ್‌ನ ಬಲೆ 28ರಿಂದ 30 ರೂಪಾಯಿ ಎಂದು ಉಲ್ಲೇಖಿಸಲಾಗಿರುತ್ತದೆ. ಅದನ್ನು ಹೇಗೆ ಒಪ್ಪುವುದು? ಆದರೆ, ಪ್ರಶ್ನೆ ಎತ್ತಿದರೆ ಉಳಿಗಾಲವೇ ಇಲ್ಲ ಎಂಬ ಸನ್ನಿವೇಶ.
- ಕೆ.ನರಸಿಂಹಮೂರ್ತಿ

ಪಿಡಿಒ ಮನೆ ಮುಂದೆ ಧರಣಿ
`ಮನೆಗಳ ವಿತರಣೆ ವಿಚಾರದಲ್ಲಿ ನಮಗೆ ಬೆದರಿಕೆ ಹಾಕಿರುವ ಘಟನೆಗಳು ನಡೆದಿವೆ. ಈಗಾಗಲೇ ಮನೆ ಪಡೆದ ಫಲಾನುಭವಿಗಳಿಗೆ ಮತ್ತೆ ಮನೆ ವಿತರಿಸುವಂತೆ ಜನಪ್ರತಿನಿಧಿಗಳು ಒತ್ತಡ ಹಾಕುತ್ತಾರೆ. ನಿಯಮಗಳನ್ನು ತಿಳಿಸಿದರೆ ನಿನ್ನ ಮನೆಯಿಂದ ತಂದು ಕೊಡ್ತೀಯಾ?~ ಎಂದು ಪ್ರಶ್ನಿಸುತ್ತಾರೆ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಳ್ಳದಿದ್ದರೂ ಬಿಲ್ ಮಂಜೂರಾತಿಗೆ ಒತ್ತಾಯಿಸುತ್ತಾರೆ. ಬಿಲ್ ನೀಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ~ ಎಂದು ಆರೋಪಿಸುತ್ತಾರೆ ಚಿತ್ರದುರ್ಗ ಜಿಲ್ಲಾ ಪಿಡಿಒ ಸಂಘಟನೆಯ ಅಧ್ಯಕ್ಷ ಬಸವರಾಜ್.

ಶಂಕುಸ್ಥಾಪನೆಯ ನಾಮಫಲಕದಲ್ಲಿ ಶಿಷ್ಟಾಚಾರ ಉಲ್ಲಂಘನೆಗಾಗಿ ಹಿರಿಯೂರು ತಾಲ್ಲೂಕಿನ ಬಬ್ಬೂರಿನ ಪಿಡಿಒ ಅವರನ್ನು ಅಮಾನತುಗೊಳಿಸಲಾಯಿತು.ಚಳ್ಳಕೆರೆ ತಾಲ್ಲೂಕಿನ ಪಡಗಲಬಂಡೆ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಜಿ.ಪಂ. ಸದಸ್ಯರೊಬ್ಬರ ನಡುವೆ ಜಟಾಪಟಿ ನಡೆದ ಪ್ರಸಂಗ ನಡೆಯಿತು. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್ ಮಂಜೂರಾತಿ ಮಾಡಲು ಪಿಡಿಒ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನನ್ನಿವಾಳ್ ಕ್ಷೇತ್ರದ ಜಿ.ಪಂ. ಸದಸ್ಯೆ ಕವಿತಾ ಮಹೇಶ್ ಪಿಡಿಒ ಮನೆ ಮುಂದೆ ಧರಣಿ ಮಾಡಿದ್ದರು. ಜಿ.ಪಂ. ಸಾಮಾನ್ಯ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂತು.

ಸದಸ್ಯರೆಲ್ಲರೂ ಪಟ್ಟು ಹಿಡಿದಿದ್ದರಿಂದ ಕೊನೆಗೆ ಪಿಡಿಒ ಅಮಾನತುಗೊಳ್ಳಬೇಕಾಯಿತು.
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ 15 ಸದಸ್ಯರ ಪೈಕಿ ಎಂಟು ಮಂದಿ ಸದಸ್ಯರು ಮೂರು ಸಾಮಾನ್ಯಸಭೆಗಳಿಗೆ ಸತತವಾಗಿ ಗೈರುಹಾಜರಾಗಿದ್ದರು. ಈ ಎಂಟು ಮಂದಿ ಸದಸ್ಯರ ಸದಸ್ಯತ್ವ ರದ್ದತಿಗೆ ಸಂಬಂಧಿಸಿದಂತೆ ಪಿಡಿಒ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದರು. ರದ್ದತಿಯ ಪ್ರಕ್ರಿಯೆಗಾಗಿ ನಡೆಯುವ ಪತ್ರ ವ್ಯವಹಾರ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆವರೆಗೆ ತಲುಪಿತು. ಆದರೆ, ಕೊನೆಗೆ ಪಿಡಿಒ ಬಲಿಪಶುವಾಗಬೇಕಾಯಿತು. ಕೂಲಂಕಷ ಪರಿಶೀಲನೆ ನಡೆಸದೆ ಕರ್ತವ್ಯಲೋಪವೆಸಗಿರುವ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಅವರನ್ನು ಅಮಾನತಿನಲ್ಲಿಟ್ಟು ವಿಚಾರಣೆ ನಡೆಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದರು.
-ಸಚ್ಚಿದಾನಂದ ಕುರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT