ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆನೂ ಬೇಡ.. ಉಸ್ತುವಾರಿನೂ ಬೇಡ ಅಂದ್ರು ಶ್ರೀರಾಮುಲು!

Last Updated 16 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ರಾಯಚೂರು: ನಾನು ಫ್ಲೆಕ್ಸಿಬಲ್ ಆ್ಯಂಡ್ ಫ್ರೀ... ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನ ಆಗಬೇಕು. ಸರ್ಕಾರದಿಂದ ಹಣ ಎಷ್ಟು ತರಬೇಕು ಎಂಬ ವಿಚಾರ ನನಗೆ ಬಿಡಿ... ಎಂದು 2010- ನವೆಂಬರ್ 26ರಂದು ನಡೆದ ವಿವಿಧ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಅವರು ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವರ್ತನೆ, ಕಾರ್ಯವೈಖರಿಗೆ ಬೇಸತ್ತು ಹೋದರು.

ನಿಮ್ಮಂಥ ಅಧಿಕಾರಿಗಳಿದ್ದರೇ ಏನು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ? ಈ ಕೆಡಿಪಿ ಸಭೆನೂ ಬೇಡ. ಉಸ್ತುವಾರಿಯನ್ನೇ ಬಿಟ್ಟು ಹೋಗ್ತೇನೆ... ಎಂದು ಸಿಡಿಮಿಡಿಗೊಂಡರು. 10-15 ವರ್ಷದ ಹಿಂದೆ ಕೈಗೊಂಡ ಕಾಮಗಾರಿಯೂ ಪೂರ್ಣ ಗೊಂಡಿಲ್ಲವೆಂದರೇ ಏನರ್ಥ? ಸರ್ಕಾರ ದುಡ್ಡು ಕೊಟ್ಟಿದೆ ಕೆಲಸ ಮಾಡಲು ಏನು ಸಮಸ್ಯೆ? ಹತ್ತು ವರ್ಷದ ಹಿಂದೆ ತೋಡಿದ ಕೊಳವೆ ಬಾವಿಗೆ ಈಗ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನೀರು ಬಂದೀತೆ? ಪರಿಶಿಷ್ಟ ವರ್ಗ, ಪಂಗಡಕ್ಕೆ ಸರ್ಕಾರ ಸಹಾಯ ಮಾಡಲು ರೂಪಿಸಿದ ಯೋಜನೆಗಳ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದರೆ ಹೇಗೆ? ನಿಮ್ಮ ಸರ್ವಿಸ್‌ನಲ್ಲಿ ಹತ್ತಾರು ಜಿಲ್ಲೆ ಸುತ್ತಿರುತ್ತೀರಿ. ಬಡವರು, ಜನರಿಗೆ ಉಪಯೋಗ ಆಗುವ ಯೋಜನೆಗಳ ಬಗ್ಗೆ ತಮಗೆ ಕಳಕಳಿ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ನಮ್ಮಂಥ ಸಚಿವರು, ಶಾಸಕರು ಬರುತ್ತೇವೆ. ಹೋಗುತ್ತೇವೆ. ಆದರೆ, ಅಧಿಕಾರಿಗಳಾದ ನೀವು ಕೆಲಸ ಮಾಡದೇ ಇದ್ದರೇ ಎಲ್ಲವೂ ವ್ಯರ್ಥ ಎಂಬ ಸತ್ಯ ತಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸಭೆಗೆ ಗೈರು ಹಾಜರಾದ ನೀರಾವರಿ ಇಲಾಖೆ ಯರಮರಸ್ ವಿಭಾಗದ ಎಂಜನಿಯರ್‌ಗೆ ನೋಟಿಸ್ ಕೊಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಸಚಿವರು, ಕೆಡಿಪಿಯಂಥ ಸಭೆಗೆ ಕಾಟಾಚಾರಕ್ಕೆ ಬಂದು ಏನೋ ಒಂದು ಹೇಳಿ ಹೋಗುವ ಮನೋಭಾವ ಸಲ್ಲದು. ನೀವು ಕೊಡುವ ಅಂಕಿ ಅಂಶ, ದಾಖಲೆ, ಪಟ್ಟಿಯಲ್ಲಿನ ವಿವರ ನನಗೆ ಬೇಕಿಲ್ಲ ಎಂದರು.

ವಾಸ್ತವವಾಗಿ ಅಭಿವೃದ್ಧಿ ಕೆಲಸ ಕಾಣಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕೆಲಸ ಮಾಡ್ರಿ ಎಂದು ಹೇಳಿದ ಸಚಿವ ಶ್ರೀರಾಮುಲು, ‘ನಾನು ಮಂತ್ರಿ’ ಎಂಬ ಅಹಂ ವರ್ತನೆ ನನ್ನದಲ್ಲ. ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು. ಸಚಿವರ ಆಕ್ರೋಷ ಈ ರೀತಿಯದ್ದಾದರೆ ಸಭೆಗೆ ಹಾಜರಾಗಿದ್ದ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಮಾನ್ವಿ ಶಾಸಕ ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಎನ್ ಶಂಕರಪ್ಪ ವಕೀಲ, ರಾಯ ಚೂರು ಗ್ರಾಮೀಣ ಕ್ಷೇತ್ರದ ಶಾಸಕ ರಾಯಪ್ಪ ನಾಯಕ, ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ, ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಅವರು ತಮ್ಮ ಗೋಳು ತೋಡಿಕೊಂಡರು.

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು, ಯರಡೋಣಿಗೆ ಸಮರ್ಪಕ ನೀರು ಪೂರೈಕೆಗೆ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಹಣ ದೊರಕಿಸಿ 10 ವರ್ಷ ಆಗಿದೆ. ಈವರೆಗೂ ನೀರು ಕಲ್ಪಿಸಿಲ್ಲ ಎಂದು ಹೇಳಿದರೆ, 1 ಕೋಟಿ ದೊರಕಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಎಕ್ಸಸ್ ಅಮೌಂಟ್ ಎಂಬ ಕಾರಣ ನೀಡಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಶಾಸಕ ಮಾನಪ್ಪ ವಜ್ಜಲ್ ಗೋಳು ತೋಡಿಕೊಂಡರು.

ಮಾನ್ವಿ ತಾಲ್ಲೂಕಿನ ಮಲ್ಲಟ-ಬಲ್ಲಟಗಿ, ಮಲ್ಲಟ-ಗವಿಗಟ್ಟ ನಡುವಿನ ರಸ್ತೆ ಅಭಿವೃದ್ಧಿ ಆಗಿಲ್ಲ. ನಂಜುಂಡಪ್ಪ ವರದಿಯಡಿ ಹಣ ದೊರಕಿ ಮೂರು ವರ್ಷವಾದರೂ ಕಾಮಗಾರಿ ಆರಂಭಿಸಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸಮರ್ಪಕವಾಗಿ ಗೇಜ್ ನಿರ್ವಹಣೆ ಆಗುತ್ತಿಲ್ಲ. ಗೇಜ್ ನಿರ್ವ ಹಣೆ ಆದರೆ ಯಾವುದೇ ಸಮಸ್ಯೆ ಇರು ವುದಿಲ್ಲ. ಕೆರೆ ಕಟ್ಟುತ್ತಾರೆ ಎಂದು ಏನೋ ಹೇಳುವುದನ್ನು ಒಪ್ಪುವುದಿಲ್ಲ ಎಂದು ಮಾನ್ವಿ ಶಾಸಕ ಹಂಪಯ್ಯ ನಾಯಕ ಅತೃಪ್ತಿ ವ್ಯಕ್ತಪಡಿಸಿದರು.

ನಾನು ಎಂಎಲ್‌ಸಿ ಆದ ಬಳಿಕ ಹೇಳಿದ ಮೊದಲ ಕೆಲಸ ಅಂದ್ರೆ ಗಿಲ್ಲೇಸುಗೂರು- ಗಾಣಧಾಳವರೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಪಡಿಸಲು ಕೋರಿದ್ದು. ಮೂರು ವರ್ಷ ಆಯ್ತು. ಈವರೆಗೂ ಕೆಲಸ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಎಲ್ಲವೂ ರೆಡಿಯಾಗಿದೆ. ಭೂಮಿ ಪೂಜೆ ಮಾಡೋ ದಷ್ಟೇ ಬಾಕಿ ಎಂಬ ಉತ್ತರ ದೊರಕುತ್ತಿದೆ ಇದಕ್ಕೆ ಪರಿಹಾರ ಸೂಚಿಸಿ ಎಂದು ವಿಧಾನ ಪರಿಷತ್ ಸದಸ್ಯ ಎನ್ ಶಂಕರಪ್ಪ ಅಲವತ್ತುಕೊಂಡ್ರು.

ಪಂಚಾಯಿತಿಗೆ ದೊರಕಿದ ಅನುದಾನ ಒಂದೇ ಹಳ್ಳಿಗೆ, ಶಿಫ್ಟ್ ಆದ ಹಳ್ಳಿಗೆ ಬಳಕೆ ಮಾಡಲಾಗುತ್ತಿದೆ ಇದರಿಂದ ಆಯಾ ಪಂಚಾಯಿತಿ ವ್ಯಾಪ್ತಿಯ ಇತರ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಸಮರ್ಪಕ ಅನುಷ್ಠಾನಗೊಂಡಿಲ್ಲ ಎಂದು ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ ಅವರು ತಮ್ಮ ಸಮಸ್ಯೆಯನ್ನು ವಿವರಿಸಿದರು. ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಯಬೇ ಕಾದ ಕೆಡಿಪಿ ಸಭೆ ಜನಪ್ರತಿ ನಿಧಿಗಳು ಅಧಿಕಾರಿಗಳ ಅಸಡ್ಡೆ ಧೋರಣೆಗೆ ಅಲವತ್ತುಕೊಳ್ಳುವ ವೇದಿಕೆಯಾಯಿತು. ಸಭೆಯಲ್ಲಿ ಇಷ್ಟೆಲ್ಲ ನಡೆದರೂ ಕೆಲ ಇಲಾಖೆಗಳ ಅಧಿಕಾರಿಗಳು ಇದು ತಮಗೆ ಸಂಬಂಧವೇ ಇಲ್ಲ ಎಂಬಂತೆ ಮೊಬೈಲ್ ರಿಂಗಣಿಸುತ್ತ ಹರಟೆಯಲ್ಲಿ ಮುಳುಗಿದ್ದರು. ಹಿಂದೆ ಕುಳಿತ ಮತ್ತೊಂದಿಷ್ಟು ಜನ ನಿದ್ರೆಗೆ ಜಾರಿದ್ದರು!

ನಂದವಾಡಗಿ ನೀರಾವರಿ ಯೋಜನೆ: 17ಕ್ಕೆ ಸಿಎಂಗೆ ಭೇಟಿ
ರಾಯಚೂರು:  ನಂದವಾಡಗಿ ಏತ ನೀರಾವರಿ ಯೋಜನೆಗೆ ಸಮರ್ಪಕ ನೀರು ಹಂಚಿಕೆ ಮಾಡಿ ಜಾರಿಗೊಳಿಸಲು ಇದೇ 17ರಂದು ಜಿಲ್ಲೆಯ ಶಾಸಕರು ಮತ್ತು ಸಂಸದರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ನಂದವಾಡಗಿ ಏತ ನೀರಾವರಿ ಯೋಜನೆಗೆ ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಬಳಿಕ ಎಷ್ಟು ನೀರು ದೊರಕಿಸಲು ಸಾಧ್ಯವೋ ಅಷ್ಟು ನೀರು ದೊರಕಿಸಬೇಕು.
 
ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಿದೆ ಎಂದು ಎಂದರು. ಈ ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ಕಾಮಗಾರಿಗೆ ಹಣ ನಿಗದಿಪಡಿಸಿ ಘೋಷಣೆ ಮಾಡಲೂ ಈ ಸಂದರ್ಭದಲ್ಲಿ ಕೋರಲಾಗುವುದು. ಜಿಲ್ಲೆಗೆ ಅತ್ಯಂತ ಉಪಯುಕ್ತವಾದ ಈ ನೀರಾವರ ಯೋಜನೆ ಶೀಘ್ರ ಜಾರಿಗೊಳ್ಳಬೇಕು ಎಂಬುದೂ ತಮ್ಮ ಕಳಕಳಿಯಾಗಿದೆ. ಈ ಯೋಜನೆ ಜಾರಿಗೆ ಆಗ್ರಹಿಸಿ ನಂದವಾಡಗಿ ಹೋರಾಟ ಸಮಿತಿ ನಡೆಸಿರುವ ಜನಜಾಗೃತಿ ಪಾದಯಾತ್ರಾ ಜಾಥಾ ತಕ್ಷಣ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಜಾಥಾ ನಡೆಸಿರುವ ಸಮಿತಿಯವರಿಗೆ ಮನವರಿಕೆ ಮಾಡಿಕೊಡಲು ಶಾಸಕ ಪ್ರತಾಪಗೌಡ ಪಾಟೀಲ್, ಸಂಸದ ಪಕ್ಕೀರಪ್ಪ ಅವರು ತಮ್ಮ ಪರವಾಗಿ ತೆರಳಿದ್ದಾರೆ. ಅದಕ್ಕೆ ಸ್ಪಂದಿಸಿ ವಾಪಸ್ ಪಡೆಯಬೇಕು. ಯೋಜನೆ ಅನುಷ್ಠಾನ ನೆನೆಗುದಿಗೆ ಬೀಳುವುದಕ್ಕೆ ಬಿಡುವುದಿಲ್ಲ ಎಂದರು.

380 ಕೆರೆಗೆ ನೀರು ತುಂಬಿಸಲು ಸೂಚನೆ
ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ಸಚಿವರೂ ಆಡಳಿತ ಯಂತ್ರಕ್ಕೆ ಸೂಚಿಸಿದ ವಿಷಯ ಇಂತಿವೆ.
* ಬೇಸಿಗೆ ದಿನಗಳು ಆರಂಭಗೊಂಡವು. ಕಾಲುವೆ ಸೇರಿದಂತೆ ಇತರೆ ಜಲಸಂಪನ್ಮೂಲದ ಮೂಲಕ ಜಿಲ್ಲೆಯ 380 ಕೆರೆಗಳಿಗೆ ನೀರು ತುಂಬಿಸಬೇಕು. ಕುಡಿಯುವ ನೀರಿನ ಸಮಸ್ಯೆ ಆಗಬಾರದು.

* ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ, ಎಸ್‌ಸಿಎಸ್‌ಟಿ ವರ್ಗಕ್ಕೆ ದೊರಕಿಸಿದ ಕೊಳವೆ ಬಾವಿ ಯೋಜನೆ ಸಮರ್ಪಕ ಅನುಷ್ಠಾನ ಆಗಬೇಕು.

* ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕೊರೆದ ಕೊಳವೆ ಬಾವಿಗಳಿಗೆ ಹತ್ತು ವರ್ಷವಾದರೂ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಲು ಏನಾದರೊಂದು ಸಬೂಬು ಹೇಳಿ ಜಾರಿಗೊಳ್ಳುವುದನ್ನು ಸಹಿಸುವುದಿಲ್ಲ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದೇ ಇದ್ದರೆ ನೀವೇ ಎತ್ತಂಗಡಿಯಾಗುತ್ತೀರಿ. ಸರ್ಕಾರ ಹಣ ಕೊಟ್ಟಿದೆ. ಯೋಜನೆಯಡಿ ಕೆಲಸ ಮಾಡಲು ನಿಮಗೇನು ಧಾಡಿ!

* ಪಂಚಾಯಿತಿ ಅಭಿವೃದ್ಧಿ ಕೆಲಸಕ್ಕೆ ಹಣ ಇಲ್ಲ ಎಂಬ ನೆಪವೊಡ್ಡಿ ಕೆಲಸ ಮಾಡದೇ ಕಾಲ ಹರಣ ಮಾಡುವ ಅಧಿಕಾರಿಗಳು ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕು.

* ಕುಡಿಯುವ ನೀರು ಪೂರೈಕೆ ಯೋಜನೆ, ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸ ಮಾಡದೇ ಮುಂದೆ ಹಾಕುವ ಗುತ್ತಿಗೆದಾರರ ಬಗ್ಗೆ ನನಗೂ ಗೊತ್ತು. ಈ ರೀತಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಇಲ್ಲದೇ ಇದ್ದರೆ ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕಾದೀತು.

* ದೇವದುರ್ಗ ತಾಲ್ಲೂಕಿನಲ್ಲಿ 2002ರಲ್ಲಿ ಆರಂಭಗೊಂಡ ಕುಡಿಯುವ ನೀರು ಪೂರೈಕೆ ಯೋಜನೆ 192 ಲಕ್ಷ ವೆಚ್ಚವಾದರೂ ಶೇ 45ರಷ್ಟು ಮಾತ್ರ ಕೆಲಸ ಆಗಿದೆ ಎನ್ನುವುದು ಜಿಡ್ಡು ಗಟ್ಟಿದ ಆಡಳಿತ ಯಂತ್ರದ ಬೇಜವಾಬ್ದಾರಿಯಲ್ಲದೇ ಏನ್ರಿ.

* ಮಾರ್ಚ್ ತಿಂಗಳು ಬಂತು. ಹಣ ಕರ್ಚು ಮಾಡದೇ ಲ್ಯಾಪ್ಸ್ ಆಗುವ ರೀತಿ ಕೆಲ್ಸಾ ಮಾಡಿದ್ರೆ ಹೇಗೆ. ನಯಾಪೈಸೆ ಲ್ಯಾಪ್ಸ್ ಆಗಬಾರ್ದು.

* ಕವಿತಾಳ ಕೆರೆಗೆ ಶೀಘ್ರ ನೀರು ತುಂಬಿಸಿ. ಹಟ್ಟಿ ಗ್ರಾಮ, ಗಣಿ ಇರುವ ಪ್ರದೇಶಕ್ಕೆ ಕುಡಿಯುವ ನೀರು ಸಮಸ್ಯೆ ಇದ್ದು ಶೀಘ್ರ ಪರಿಹರಿಸಿ. 10 ಕೋಟಿ ಗಣಿ ನಿಗಮ ದೊರಕಿಸಿದೆ. ಸರ್ಕಾರ 3 ಕೋಟಿ ಕೊಟ್ಟಿದೆ. ತುರ್ತು ಕೆಲಸ ಮಾಡಿ ನೀರು ಪೂರೈಕೆ  ವ್ಯವಸ್ಥೆ ಮಾಡಿ.

* ಉದ್ಯೋಗ ಖಾತ್ರಿ ಯೋಜನೆಯಡಿ ಹೈ.ಕ ಭಾಗದಲ್ಲಿ ಜಿಲ್ಲೆ ಪ್ರಗತಿ ಕಂಡಿದ್ದರೂ ದೊರಕಿದ ಹಣ ಸಮರ್ಪಕ ಬಳಕೆ ಆಗಬೇಕು.

* ಸಿಂಧನೂರು ತಾಲ್ಲೂಕಿನ ಹುಲಗುಂಚಿ ಗ್ರಾಮದಲ್ಲಿ 114 ಕುಟುಂಬಗಳು ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಹಣ ದೊರಕಿಸಿದರೂ ಮನೆ ಕಟ್ಟಿಲ್ಲ. ಮನೆ ನಿರ್ಮಾಣ ಕಾಮಗಾರಿ ಕೆಲಸ ವಹಿಸಿಕೊಂಡ ಭೂ ಸೇನಾ ನಿಗಮ ಸ್ವಲ್ಪ  ಗಮನವಿಟ್ಟು ಕೆಲಸ ಮಾಡಬೇಕು. ಬಾಂಗ್ಲಾ ಮೂಲ ನಿವಾಸಿಗಳು ವಾಸಿಸುತ್ತಿದ್ದಾರೆ. ಸುಷ್ಮಾ ಸ್ವರಾಜ್ ಅವರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು ಸಹಾಯ ಮಾಡುವ ಉದ್ದೇಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT