ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೂಕದ ತಂಡ

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

‘ನಿಮ್ಮ ಹೃದಯಾಂತರಾಳದಿಂದ ಆಡಿ, ಗೆಲ್ಲಿ’ ಎಂಬ ಹಾರೈಕೆ ಜಾಹೀರಾತುಗಳ ಭರಾಟೆ ಆರಂಭವಾಗುತ್ತಿರುವಂತೆಯೇ ವಿಶ್ವಕಪ್ ಕ್ರಿಕೆಟ್ ಸಮರಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಒಂದಿಬ್ಬರು ಆಟಗಾರರ ಬಗ್ಗೆ ಸ್ವಲ್ಪ ಚರ್ಚೆ ಮಾಡಬಹುದಾದರೂ ಆಯ್ಕೆಯಲ್ಲಿ ದೊಡ್ಡ ದೋಷಗಳೇನೂ ಕಂಡುಬರುವುದಿಲ್ಲ. ಪ್ರಾದೇಶಿಕ ಅಸಮಾಧಾನ ಇಡೀ ದೇಶವನ್ನು ತುಂಬಿರುವಾಗ ಅದೇ ಮನೋಭಾವ ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಕಂಡುಬರುತ್ತದೆ.

ಕರ್ನಾಟಕದವರು ತಮ್ಮ ರಾಜ್ಯದವರು ಇಲ್ಲ ಎಂದರೆ ಬಂಗಾಳದವರು ತಮ್ಮವರ್ಯಾರೂ ಇಲ್ಲ ಎಂದು ದೂರುತ್ತಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯೇ ಪ್ರಾದೇಶಿಕ ಅಂದರೆ ವಲಯಾಧಾರಿತ ಆಗಿರುವುದರಿಂದ ತಂಡದ ಆಯ್ಕೆಯೂ ಸಹಜವಾಗಿಯೇ ಆ ನಿಟ್ಟಿನಲ್ಲೇ ನಡೆಯುತ್ತದೆ. ಸಮಗ್ರ ಭಾರತ ತಂಡ ಎಂಬ ಕಲ್ಪನೆಯೇ ನಮ್ಮಲ್ಲಿ ಇಲ್ಲ. ಹಿಂದೆ ‘ಜೋಕರುಗಳು’ ಎಂದು ಕರೆಸಿಕೊಂಡ ಆಯ್ಕೆಗಾರರು ಮತ್ತು ವ್ಯವಸ್ಥೆ ಇದಕ್ಕೆ ಕಾರಣ. ಈಗ ಆಯ್ಕೆಯಾಗಿರುವ ತಂಡಕ್ಕೆ ಗೆಲ್ಲುವ ಸಾಮರ್ಥ್ಯ ಇದೆಯೇ ಎಂದು ನೋಡಬೇಕು. ಆ ದೃಷ್ಟಿಯಿಂದ ಇದೊಂದು ಸಮತೂಕದ ತಂಡವೆಂದೇ ಹೇಳಬಹುದು. ನಾಯಕ ದೋನಿ ಮಾತಿಗೂ ಬೆಲೆ ಸಿಕ್ಕಂತಿದೆ.

ಮಹೇಂದ್ರ ಸಿಂಗ್ ದೋನಿ ಅವರಿಗೆ ತಮ್ಮ ದೈಹಿಕ ಅರ್ಹತೆಯ ಮೇಲೂ ಅಪಾರ ವಿಶ್ವಾಸ ಇದ್ದಂತಿದೆ. ಅದಕ್ಕಾಗಿಯೇ ಅವರು ತಂಡಕ್ಕೆ ಎರಡನೇ ವಿಕೆಟ್ ಕೀಪರ್ ಹೆಸರು ಸೂಚಿಸದೇ ‘ಮೂರನೇ ಸ್ಪಿನ್ನರ್ ಬೇಕು’ ಎಂದಿರಬಹುದು. ದೋನಿ ಗಾಯಗೊಂಡರೆ ಅವರ ಸ್ಥಾನ ತುಂಬುವವರು ಯಾರೂ ಇಲ್ಲ.

ಉಪಖಂಡದಲ್ಲಿಯ ಪಿಚ್‌ಗಳು ಸ್ಪಿನ್ನರುಗಳಿಗೆ ಸಹಾಯಕ ಎಂಬ ಕಾರಣದಿಂದಲೇ ಮೂರನೇ ಸ್ಪಿನ್ನರ್ ಆಗಿ ಪಿಯೂಷ್ ಚಾವ್ಲಾ ಸ್ಥಾನ ಪಡೆದಿದ್ದಾರೆ. ಆದರೆ ಸೆಹ್ವಾಗ್, ರೈನಾ ಮತ್ತು ಯುವರಾಜ್ ಸಿಂಗ್ ತಾವು ಅಗತ್ಯ ಬಿದ್ದಾಗ ಉಪಯುಕ್ತ ಸ್ಪಿನ್ನರುಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಲೆಗ್ ಸ್ಪಿನ್ನರ್ ಒಬ್ಬ ತಂಡದ ದಾಳಿಗೆ ಮೊನಚು ಹಾಗೂ ವೈವಿಧ್ಯ ತಂದುಕೊಡಬಲ್ಲ. ಆದರೆ ಹರಭಜನ್ ಇರುವಾಗ ಇನ್ನೊಬ್ಬ ಪರಿಣಿತ ಆಫ್‌ಸ್ಪಿನ್ನರ್ ಬೇಕಾಗಿರಲಿಲ್ಲ. ತಮಿಳುನಾಡಿನ ಅಶ್ವಿನ್ ಆಯ್ಕೆಗೆ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಕಾರಣ ಎಂಬ ದೂರು ಸಹಜವಾಗಿಯೇ ಕೇಳಿಬರುತ್ತಿದೆ. ರೋಹಿತ್ ಶರ್ಮ ಆಲ್‌ರೌಂಡರ್ ಆಗಿಯೂ ಉಪಯುಕ್ತವಾಗುತ್ತಿದ್ದರು.

ಮಧ್ಯಮ ವೇಗದ ಬೌಲರ್ ಮುನಾಫ್ ಪಟೇಲ್ ಚೆನ್ನಾಗಿ ಬೌಲ್ ಮಾಡಬಲ್ಲವರಾದರೂ ಅವರ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ತೀರ ಕೆಟ್ಟದಾಗಿದೆ. ಇಶಾಂತ್ ಶರ್ಮ ಅಥವಾ ಶ್ರೀಶಾಂತ್ ಆ ವಿಷಯದಲ್ಲಿ ಉತ್ತಮವಾಗಿದ್ದಾರೆ. ಹಿಂದೆ ಕರ್ನಾಟಕದ ಆಟಗಾರರು ಯಾವ ಅನುಮಾನವೂ ಇಲ್ಲದೇ ತಂಡದಲ್ಲಿ ಸ್ಥಾನ ಪಡೆದಂತೆ ಈಗ ಪ್ರತಿಭೆಯೊಂದರ ಮೇಲೆಯೇ ಸ್ಥಾನ ಪಡೆಯುವ ಸಾಮರ್ಥ್ಯದ ಆಟಗಾರ ಯಾರೂ ಇಲ್ಲ. ಮಧ್ಯಮವೇಗಿ ವಿನಯಕುಮಾರ್ ಇನ್ನೂ ಸ್ವಲ್ಪ ಕಷ್ಟಪಡಬೇಕು. ತೀರ ಹಾಸ್ಯಾಸ್ಪದ ಎನಿಸುವಂಥ ಆಯ್ಕೆಯೇನೂ ಆಗಿಲ್ಲವಾದ್ದರಿಂದ ವಿಶ್ವ ಕಪ್ ಹಾದಿಯಲ್ಲಿ ಭಾರತ ಮೊದಲ ಹೆಜ್ಜೆಯನ್ನು ಸರಿಯಾಗಿಯೇ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT