ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲಕ್ಕೆ ಹರಸಾಹಸ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಲವು ಹಗರಣಗಳು, ಹಣದುಬ್ಬರ, ಕಪ್ಪು ಹಣದಂತಹ ಬಿಕ್ಕಟ್ಟುಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ‘ಆಮ್ ಆದ್ಮಿ’ ಯನ್ನು ಸಂತುಷ್ಟಗೊಳಿಸಲು ಬಜೆಟ್‌ನಲ್ಲಿ ಪ್ರಯತ್ನ ಮಾಡಿದ್ದು, ರೈತರಿಗೆ ನೀಡುವ ಸಾಲದ ಪ್ರಮಾಣವನ್ನು 4.75 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ ಮತ್ತು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ತುಸು ಹೆಚ್ಚಿಸಿ ಸಂಬಳದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಹಿರಿಯ ನಾಗರಿಕರ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿದ ಅವರು ಸೇವಾ ತೆರಿಗೆಯ ವ್ಯಾಪ್ತಿಯನ್ನು ವಿಸ್ತರಿಸಿ ಜನರ ಮೇಲೆ ನಯವಾಗಿ ಹೊರೆ ಹೊರೆಸಿದ್ದಾರೆ.

ಶೇ 4ರ ಬಡ್ಡಿದರದಲ್ಲಿ ರೈತರಿಗೆ ಸಾಲ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆ, ಸೀಮೆ ಎಣ್ಣೆ, ಅಡುಗೆ ಅನಿಲ, ರಸಗೊಬ್ಬರಗಳ ಸಬ್ಸಿಡಿಯ ಹಣವನ್ನು  ನೇರವಾಗಿ ಬಿಪಿಎಲ್ ಕುಟುಂಬಕ್ಕೇ ಒದಗಿಸುವ ಪ್ರಸ್ತಾವ, ಮೂಲಸೌಕರ್ಯ ವೃದ್ಧಿಗೆ ವಿದೇಶಿ ಬಂಡವಾಳ ಆಕರ್ಷಣೆ ಸಹಿತ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ, ವಿದೇಶಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿರುವ ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಕ್ರಮಕ್ಕೆ ಮುಂದಾಗಿಲ್ಲ.

ಕೇಂದ್ರೀಯ ಅಬಕಾರಿ ತೆರಿಗೆ ಹೆಚ್ಚಿಸಲಾದ 130 ಸಾಮಗ್ರಿಗಳಲ್ಲಿ ಮೊಬೈಲ್ ಫೋನ್ ಸಹ ಸೇರಿದೆ. ಇದರ ತೆರಿಗೆ ಪ್ರಮಾಣ ಶೇ 4ರಿಂದ 5ಕ್ಕೆ ಹೆಚ್ಚಳವಾಗಿದೆ. ಹೀಗಾಗಿ ಏಪ್ರಿಲ್ 1ರಿಂದ ಮೊಬೈಲ್ ಫೋನ್‌ಗಳು ದುಬಾರಿಯಾಗಲಿವೆ. ಸಿಮೆಂಟ್ ಮೇಲಿನ ಅಬಕಾರಿ ತೆರಿಗೆಯೂ ಹೆಚ್ಚಳವಾಗಿದೆ. ಇದರಿಂದ 50 ಕೆ.ಜಿ.ಯ ಸಿಮೆಂಟ್ ಚೀಲದ ಬೆಲೆ 8ರಿಂದ 9ರೂಪಾಯಿಗಳಷ್ಟು ಹೆಚ್ಚಲಿದೆ.  ಹವಾನಿಯಂತ್ರಣ ವ್ಯವಸ್ಥೆ ಇರುವ ಖಾಸಗಿ ಆಸ್ಪತ್ರೆಗಳಲ್ಲಿ  ಪಡೆಯುವ ಚಿಕಿತ್ಸೆ, ವಿಮಾನ ಟಿಕೆಟ್, ಬ್ರಾಂಡೆಡ್ ಚಿನ್ನ, ಸಿಮೆಂಟ್, ಜವಳಿ  ದುಬಾರಿಯಾಗಲಿವೆ. ಸಿಗರೇಟ್, ಟಿ.ವಿ, ಫ್ರಿಜ್, ವಾಷಿಂಗ್ ಮೆಷಿನ್‌ಗಳ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪರಿಸರ ಪೂರಕ ವಾಹನಗಳ ಬಿಡಿ ಭಾಗಗಳು, ಕೃಷಿ ಸಾಮಗ್ರಿಗಳು ಅಗ್ಗವಾಗಲಿವೆ.

ಲೋಕಸಭೆಯಲ್ಲಿ ಸೋಮವಾರ 2011-12ನೇ ಸಾಲಿನ ಬಜೆಟ್ ಮಂಡಿಸಿದ ಪ್ರಣವ್ ಮುಖರ್ಜಿ  ಅವರು 200 ಕೋಟಿ ರೂಪಾಯಿಗಳ ನಿವ್ವಳ ವರಮಾನ ಕೊರತೆಯನ್ನು ತೋರಿಸಿದ್ದಾರೆ. 130 ಹೊಸ ವಸ್ತುಗಳ ಮೇಲೆ ಅಬಕಾರಿ ತೆರಿಗೆಯನ್ನು ವಿಸ್ತರಿಸಿದ ಅವರು ಆಹಾರ ಮತ್ತು ಇಂಧನವನ್ನು ಮಾತ್ರ ಈ ವ್ಯಾಪ್ತಿಯಿಂದ ಹೊರಗಿಟ್ಟಿದ್ದಾರೆ.

ಉದ್ಯಮ ವಲಯಕ್ಕೂ ಕೊಂಚ ನಿಟ್ಟುಸಿರು ಬಿಡುವಂತಹ ವಾತಾವರಣ ಕಲ್ಪಿಸಲಾಗಿದೆ. ದೇಶೀಯ ಕಂಪೆನಿಗಳ ಮೇಲೆ ವಿಧಿಸಲಾಗಿದ್ದ ಶೇ 7.5ರ ಆದಾಯ ತೆರಿಗೆ ಸರ್‌ಚಾರ್ಜ್ ಅನ್ನು ಶೇ 5ಕ್ಕೆ ಇಳಿಸಲಾಗಿದೆ. ಆದರೆ ಕನಿಷ್ಠ ಬದಲಿ ತೆರಿಗೆ (ಎಂಎಟಿ) ಪ್ರಮಾಣವನ್ನು ಶೇ 18ರಿಂದ 18.5ಕ್ಕೆ ಹೆಚ್ಚಿಸಲಾಗಿದೆ. ಇದರ ವ್ಯಾಪ್ತಿಗೆ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ಅಭಿವೃದ್ಧಿ ಮಾಡುವವರೂ ಒಳಗೊಳ್ಳುತ್ತಾರೆ.

ಆದಾಯ ತೆರಿಗೆಯ ಇತರ ಹಂತಗಳು, ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ಮುಟ್ಟದಿರುವ ಸಚಿವರು ವೇತನದಾರರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 1.6 ಲಕ್ಷದಿಂದ 1.8 ಲಕ್ಷ ರೂಪಾಯಿಗೆ ಹೆಚ್ಚಿಸಿರುವುದರಿಂದ ಈ ವರ್ಗದ ಎಲ್ಲರಿಗೂ ವಾರ್ಷಿಕ 2 ಸಾವಿರ ರೂಪಾಯಿಗಳ ಪರಿಹಾರ ಸಿಗುವಂತಾಗಿದೆ.

ಹಿರಿಯ ನಾಗರಿಕರಿಗೆ ಇದ್ದ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.4 ಲಕ್ಷ ರೂಪಾಯಿಯಿಂದ 2.5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಮಹಿಳೆಯರಿಗೆ ಯಾವುದೇ ವಿಶೇಷ ಸೌಲಭ್ಯವನ್ನೂ ಪ್ರಕಟಿಸಲಾಗಿಲ್ಲ. ಮೇಲಾಗಿ ಅವರಿಗೆ ಇದ್ದ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈ ಮೊದಲಿದ್ದ 1.90 ಲಕ್ಷ ರೂಪಾಯಿಯಲ್ಲೇ ಉಳಿಸಲಾಗಿದೆ.

‘ಅತ್ಯಂತ ಹಿರಿಯ ನಾಗರಿಕರು’ ಎಂಬ ಹೊಸ ವಿಭಾಗವನ್ನು ಸಚಿವರು ಸೃಷ್ಟಿಸಿದ್ದು, ಇವರು ಹೊಂದಿರುವ 5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಕಲ್ಪಿಸಲಾಗಿದೆ.

ಸೇವಾ ತೆರಿಗೆ ಜಾಲವನ್ನು ಇನ್ನಷ್ಟು ವಿಸ್ತರಿಸಲಾಗಿದೆ. ದಿನಕ್ಕೆ ಒಂದು ಸಾವಿರ ರೂಪಾಯಿಗಿಂತ ಅಧಿಕ ವೆಚ್ಚದ ಮತ್ತು ಮದ್ಯ ಪೂರೈಸುವ ಹವಾನಿಯಂತ್ರಿತ ರೆಸ್ಟೋರೆಂಟ್‌ಗಳನ್ನು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಜೀವ ವಿಮಾ ಸೇವೆಯ ವ್ಯಾಪ್ತಿಯನ್ನೂ ವಿಸ್ತರಿಸಲಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಸೇವೆಗೆ ತೆರಿಗೆ ವಿಧಿಸಲಾಗುತ್ತದೆ. 25 ಹಾಸಿಗೆಗಳಿಗಿಂತ ದೊಡ್ಡ ಕ್ಲಿನಿಕ್‌ಗಳು, ಅಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೂ ಸೇವಾ ತೆರಿಗೆ ಅನ್ವಯವಾಗುತ್ತದೆ.

ಎಕಾನಮಿ ಕ್ಲಾಸ್ ದೇಶೀಯ ವಿಮಾನಯಾನ 50 ರೂಪಾಯಿಯಷ್ಟು ದುಬಾರಿಯಾಗಲಿದ್ದರೆ, ಅಂತರರಾಷ್ಟ್ರೀಯ ವಿಮಾನಯಾನ 250 ರೂಪಾಯಿಗಳಷ್ಟು ದುಬಾರಿಯಾಗಲಿದೆ.

ನೇರ ತೆರಿಗೆಯಲ್ಲಿ ಮಾಡಲಾದ ಬದಲಾವಣೆಯಿಂದ ಬೊಕ್ಕಸಕ್ಕೆ 11,500 ಕೋಟಿ ರೂಪಾಯಿಗಳಷ್ಟು ವರಮಾನ ಬರುವ ನಿರೀಕ್ಷೆ ಇದ್ದರೆ, ಪರೋಕ್ಷ ತೆರಿಗೆಯಲ್ಲಿ ಮಾಡಲಾದ ಬದಲಾವಣೆಯಿಂದ 11,300 ಕೋಟಿ ರೂಪಾಯಿ ವರಮಾನ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದರಲ್ಲಿ ಸೇವಾ ತೆರಿಗೆ ಮೂಲಕ ಬರಲಿರುವ 4 ಸಾವಿರ ಕೋಟಿ ರೂಪಾಯಿ ಸಹ ಸೇರಿದೆ.

ರಿಯಾಯಿತಿ ದರದ ಅಬಕಾರಿ ತೆರಿಗೆಯನ್ನು ಶೇ 4ರಿಂದ 5ಕ್ಕೆ ಹೆಚ್ಚಿಸಿರುವುದರಿಂದ ಔಷಧಗಳು, ವೈದ್ಯಕೀಯ ಉಪಕರಣಗಳು, ಜವಳಿ ಪದಾರ್ಥಗಳು, ಪೇಪರ್‌ನಿಂದ ತಯಾರಾದ ಸಾಮಗ್ರಿಗಳಂತಹ ಸಾಮಗ್ರಿಗಳು ದುಬಾರಿಯಾಗಲಿವೆ.

ಶೇ 10ರ ಕಡ್ಡಾಯ ಅಬಕಾರಿ ಸುಂಕದಿಂದಾಗಿ ಸಿದ್ಧ ಉಡುಪು ಮತ್ತು ಬ್ರ್ಯಾಂಡ್ ಕಂಪೆನಿಗಳ ಜವಳಿಗಳು ದುಬಾರಿಯಾಗಲಿವೆ. ಕಂಪ್ಯೂಟರ್‌ಗಳ ಮೈಕ್ರೊ ಪ್ರೊಸೆಸರ್, ಪ್ಲಾಪಿ ಮತ್ತು ಹಾರ್ಡ್ ಡಿಸ್ಕ್ ಡ್ರೈವ್, ಸಿ.ಡಿ-ರಾಮ್ ಡ್ರೈವ್, ಡಿವಿಡಿ ಡ್ರೈವ್ ಮತ್ತು ರೈಟರ್‌ಗಳಿಗೆ ನೀಡಲಾಗಿದ್ದ ಅಬಕಾರಿ ತೆರಿಗೆ ವಿನಾಯಿತಿ  ಹಿಂಪಡೆಯಲಾಗಿದೆ.  ಇದರಿಂದ ಇವುಗಳ ಬೆಲೆ ಹೆಚ್ಚಲಿದೆ. ಆದರೆ ಇವುಗಳಿಗೆ ಶೇ 5ರ ರಿಯಾಯಿತಿ ತೆರಿಗೆ ಮಾತ್ರ ಮುಂದೆಯೂ ಅನ್ವಯವಾಗಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸಹ ಏರುವುದು ನಿಚ್ಚಳವಾಗಿದೆ.

ಬ್ರಾಂಡೆಡ್ ಆಭರಣ ಮತ್ತು  ಪರಿಕರಗಳ ಮೇಲೆ ಶೇ 1ರ ಅಬಕಾರಿ ತೆರಿಗೆ ವಿಧಿಸಲಾಗಿದೆ. ಇದರಿಂದ ಇವುಗಳು ತುಟ್ಟಿಯಾಗಲಿವೆ. ಆದರೆ, ಅಬಕಾರಿ ತೆರಿಗೆ ಇಳಿಸಿದ್ದರಿಂದ ಸ್ಯಾನಿಟರಿ ನ್ಯಾಪ್‌ಕಿನ್, ಕ್ಲಿನಿಕಲ್ ಡಯಾಪರ್, ಫ್ಯಾಕ್ಟರಿಯಲ್ಲೇ ತಯಾರಾದ ಆಂಬುಲೆನ್ಸ್, ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳು ಸ್ವಲ್ಪ ಮಟ್ಟಿಗೆ ಅಗ್ಗವಾಗಲಿವೆ.

ಏರಿಕೆ: ಮೊಬೈಲ್ ಫೋನ್,ಸೂಪರ್ ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಚಿನ್ನ, ಕಂಪೆನಿ ಉತ್ಪನ್ನ, ಉಡುಪು, ವಿಮಾನಯಾನ, ಸಿಮೆಂಟ್‌ಮದ್ಯ ಪೂರೈಸುವ ಹವಾನಿಯಂತ್ರಿತ ರೆಸ್ಟೋರೆಂಟ್, ಹೋಟೆಲ್ ಸೇವೆ

ಇಳಿಕೆ: ರೆಫ್ರಿಜರೇಟರ್, ಗೃಹ ಸಾಲ, ಪ್ರಿಂಟರ್, ಕಾಗದ, ಹೋಮಿಯೊಪಥಿ ಔಷಧಿ,
ನ್ಯಾಪ್‌ಕಿನ್, ಸಾಬೂನು, ಉಕ್ಕು, ಕಚ್ಚಾ ರೇಷ್ಮೆ, ಎಲ್‌ಇಡಿ ಬಲ್ಬ್, ಬ್ಯಾಟರಿ ಚಾಲಿತ ವಾಹನ, ಕೃಷಿ
ಯಂತ್ರೋಪಕರಣ

ಬಜೆಟ್‌ನಲ್ಲಿ...
ಕಪ್ಪುಹಣ ತಡೆಗೆ ’ಪಂಚತಂತ್ರ’
ಭ್ರಷ್ಟಾಚಾರವೇ ಕೇಂದ್ರದ ತಲೆನೋವು
ರಕ್ಷಣಾ ವೆಚ್ಚ ್ಙ1,64,415 ಕೋಟಿಗೆ ಏರಿಕೆ
ಗೃಹ ಸಾಲ ಮಿತಿ ಹೆಚ್ಚಳ
ಪೆಟ್ರೋಲ್ ಬೆಲೆ ಏರುವ ಶಂಕೆ

ನಿರಾಶಾದಾಯಕ
ತೀರಾ ನಿರಾಶಾದಾಯಕ ಬಜೆಟ್. ಶ್ರೆಸಾಮಾನ್ಯ, ಮಹಿಳೆ ಮತ್ತು ಯುವಕರಿಗೆ ನ್ಯಾಯ ಒದಗಿಸಿಲ್ಲ.
ಸುಷ್ಮಾ ಸ್ವರಾಜ್, ಲೋಕಸಭೆಯ ವಿರೋಧ ಪಕ್ಷದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT