ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯ ವಾಙ್ಮಯ

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಇದು ನನ್ನದೊಂದು ಅರ್ಥಗರ್ಭಿತ ಹನಿಗವನ:
“ಇಷ್ಟೊಂದು ಕೃತಿಗಳನ್ನು
ಹೇಗೆ ರಚಿಸಿದಿರಿ?” ಎಂದು
ಅನೇಕರು ನನ್ನನ್ನು ಕೇಳುತ್ತಾರೆ.
ಉತ್ತರ: “ನನ್ನದೂ ಅದೇ ಪ್ರಶ್ನೆ!”

ನನ್ನ ಸಾಹಿತ್ಯಸೃಷ್ಟಿ ಸಮೃದ್ಧವಾದುದು; ಬಹುಮುಖವಾದುದು. ಆ ಬಗೆಗೆ ನನಗೆ ಹೆಮ್ಮೆಯಿರುವಂತೆ, ಈ ಹಂತದಲ್ಲಿ ತುಸು ವಿಷಾದ, ಪಶ್ಚಾತ್ತಾಪಗಳೂ ಉಂಟು! ಕತೆ, ಕಾದಂಬರಿಗಳನ್ನು ಬಿಟ್ಟು, ಉಳಿದ ಬಹುತೇಕ ಸಾಹಿತ್ಯ ಪ್ರಕಾರಗಳಲ್ಲಿ, ಗದ್ಯ ಪದ್ಯಗಳಲ್ಲಿ ಸುಮಾರು ಐದೂವರೆ ದಶಕಗಳ ಕಾಲ ನಾನು ನಿರಂತರವಾಗಿ ಕೆಲಸ ಮಾಡುತ್ತ ಬಂದಿದ್ದೇನೆ. (ನನಗೀಗ 75ರ' ಪ್ರಾಯ!) ವಿದ್ಯಾರ್ಥಿದಶೆಯಿಂದ ಶುರುವಾದದ್ದು ಈ ಓದು, ಬರಹದ ಕಾಯಕ.

ನಾನು ಮೊದಲು ಕವಿ; ಉಳಿದದ್ದೆಲ್ಲ ಆಮೇಲೆ! ಕಾವ್ಯಕ್ಷೇತ್ರದಲ್ಲೆ ಕವನ, ಹನಿಗವನ, ವಚನ, ಮುಕ್ತಕಗಳಲ್ಲಿ ನಡೆದಿದೆ, ನನ್ನ ಕೃಷಿ. ಈ ಎಲ್ಲ ಪ್ರಕಾರಗಳಲ್ಲಿ ಬದುಕನ್ನು ಸಮಗ್ರವಾಗಿ ಹಿಡಿದಿಡಲು ಯತ್ನಿಸಿದ್ದೇನೆ. ಆದರೆ ನನ್ನ ಹನಿಗವನಗಳಿಗೆ ಸಿಕ್ಕಿದಷ್ಟು ಪ್ರಚಾರ ಉಳಿದ ರೂಪಗಳಿಗೆ ಸಿಗಲಿಲ್ಲ: ಸಿಪಿಕೆ ಎಂದರೆ ಹನಿಗವನ ಎನ್ನುವಂತಾಗಿದೆ! (ಸ್ವಾರಸ್ಯವೆಂದರೆ, ನನ್ನ ಪೂರ್ತಿ ಹೆಸರೂ ಬಹಳ ಜನಕ್ಕೆ ಅಪರಿಚಿತ.)

ನಾನು ಹುಟ್ಟಿದ್ದು ಒಂದು ಹಳ್ಳಿಯಲ್ಲಿ. ನನಗೆ ಸಾಹಿತ್ಯಾಭಿರುಚಿ, ಆಸಕ್ತಿಗಳು ಬಾಲ್ಯದಲ್ಲೆ ಅಂಟಿಕೊಂಡುವು. ನನ್ನ ಅಜ್ಜಿಯೊಂದು ಜಾನಪದ ನಿಧಿಯೆ ಆಗಿದ್ದು, ಜನಪದ ಸಾಹಿತ್ಯದ ಮಾಯಾಜಗತ್ತಿಗೆ ನನ್ನನ್ನು ಪ್ರವೇಶಗೊಳಿಸಿದರು; ನನ್ನ ತಂದೆ ಕುಮಾರವ್ಯಾಸ ಭಾರತವನ್ನು ಶ್ರಾವ್ಯವಾಗಿ ಓದಬಲ್ಲವರಾಗಿದ್ದರು.

ಹೀಗಾಗಿ, ಜಾನಪದ, ಶಿಷ್ಟ ಎರಡೂ ಸಾಹಿತ್ಯಧಾರೆಗಳು, ನನ್ನ ಮನೋಧರ್ಮವನ್ನು ಹದಗೊಳಿಸಿದುವು. ಪ್ರೌಢಶಾಲೆಯಲ್ಲೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದಾಗ, ಇಂಗ್ಲಿಷ್ ಪಠ್ಯಪುಸ್ತಕದಲ್ಲಿದ್ದ ಕವನವೊಂದನ್ನು ನಾನು ಛಂದೋಬದ್ಧವಾಗಿ ಕನ್ನಡಿಸಿದೆ. ಆದ್ದರಿಂದ, ನನ್ನ ಮೊದಲ ಒಲವು ಭಾಷಾಂತರ ಎನ್ನಬಹುದು; ಕಾವ್ಯ ಎನ್ನಲೂಬಹುದು! ಭಾಷಾಂತರಕ್ಕೆ ಒತ್ತಾಸೆ ಕೊಟ್ಟದ್ದು ವಯಸ್ಕರ ಶಿಕ್ಷಣ ಸಮಿತಿಯ `ಪುಸ್ತಕ ಪ್ರಪಂಚ' ಪತ್ರಿಕೆ; ಆಗ ಅದರ ತುಂಬ ಬಹುಪಾಲು ಅನುವಾದಿತ ಲೇಖನಗಳೆ ಇರುತ್ತಿದ್ದುವು.

ಮುಂದೆ ನಾನು ಶಿವಮೊಗ್ಗದ (ಆಗಿನ) ಇಂಟರ್‌ಮೀಡಿಯಟ್ ಕಾಲೇಜು ಸೇರಿದೆ. ಮೈಸೂರು ಜಿಲ್ಲೆಯವನಾದ ನಾನು ಶಿವಮೊಗ್ಗಕ್ಕೆ ಹೋದದ್ದು ಯಾವ `ಋಣಾನುಬಂಧ'ವೊ! ಒಳಿತೇ ಆಯಿತು. ಅಲ್ಲಿ ನನಗೆ ಕನ್ನಡಕ್ಕೆ ಜಿ.ಎಸ್. ಶಿವರುದ್ರಪ್ಪನವರು, ಇಂಗ್ಲಿಷಿಗೆ ಯು.ಆರ್. ಅನಂತಮೂರ್ತಿಯವರು ಅಧ್ಯಾಪಕರಾಗಿ ದೊರೆತರು.

ಜಿ.ಎಸ್.ಎಸ್. ಅವರಿಂದ ಕನ್ನಡದ ಪರಂಪರೆಗೆ, ನವೋದಯ ಸಾಹಿತ್ಯಕ್ಕೆ ಪ್ರಶಸ್ತ ಪ್ರವೇಶ ಸಿಕ್ಕಿತು; ಅನಂತಮೂರ್ತಿಯವರಿಂದ ಕೊಂಚಮಟ್ಟಿಗೆ `ನವ್ಯ'ದ ದೀಕ್ಷೆಯಾಯಿತು. ಅದರ ಸುಳಿಗೆ ನಾನು ಸಿಕ್ಕಿಹಾಕಿಕೊಳ್ಳದಿದ್ದರೂ, ಅದರ ಪ್ರಭಾವದಿಂದ ಪೂರ್ತಿ ತಪ್ಪಿಸಿಕೊಂಡೆ ಎನ್ನಲಾರೆ! ನಾನು ವಿಜ್ಞಾನದ- ಅದರಲ್ಲೂ ಸಿ.ಬಿ.ಜಡ್.- ವಿದ್ಯಾರ್ಥಿ: ಮುಂದೆ ವೈದ್ಯನಾಗಬೇಕೆಂಬ ಬಯಕೆ ಎಲ್ಲೋ ಅಸ್ಪಷ್ಟ ಸುಪ್ತವಾಗಿತ್ತು. ಆದರೆ,ಜಿ.ಎಸ್.ಎಸ್. ಅವರ ಪಾಠಪ್ರವಚನಗಳನ್ನು ಕೇಳಿದ ಮೇಲೆ, ಅವರ ಪ್ರೋತ್ಸಾಹದಿಂದ ನನ್ನ ಗುರಿ ನಿಚ್ಚಳವಾಯಿತು; ಸಾಹಿತಿಯಾಗಬೇಕು, ಕನ್ನಡ ಅಧ್ಯಾಪಕನಾಗಬೇಕು ಎಂದು ನಿರ್ಧರಿಸಿದೆ.

ನಾನು `ಇಂಟರ್' ಮುಗಿಸಿ 1957 ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿಗೆ ಬಂದು, ಬಿ.ಎ. (ಆನರ್ಸ್) ಸೇರುವ ವೇಳೆಗೆ ಸರಿಯಾಗಿ ಕುವೆಂಪು ಕುಲಪತಿಗಳಾಗಿ ಕ್ರಾಫರ್ಡ್‌ಭವನ ಸೇರಿದ್ದರು. ಆದ್ದರಿಂದ ಅವರ ಪಾಠ ಕೇಳುವ ಭಾಗ್ಯ ನನ್ನದಾಗಲಿಲ್ಲ. ನನಗೆ ಪ್ರಾಧ್ಯಾಪಕರಾಗಿ ಸಿಕ್ಕಿದವರು ತೀ.ನಂ. ಶ್ರೀಕಂಠಯ್ಯನವರು ಮತ್ತು ಡಿ.ಎಲ್. ನರಸಿಂಹಾಚಾರ‌್ಯರು.

ನನ್ನನ್ನು ತುಂಬ ಆಕರ್ಷಿಸಿದವರು ತೀನಂಶ್ರೀ. (ನನ್ನ ತಂದೆಯವರಿಗೂ ಅವರು ಗುರುಗಳಾಗಿದ್ದರಂತೆ!) ಕುವೆಂಪು ಅವರ ಕಾವ್ಯ ವಿಮರ್ಶಪಥವನ್ನು ನನಗೆ ಪರಿಚಯಿಸಿದವರು ಜಿಎಸ್‌ಎಸ್ ಮತ್ತು ಸುಜನಾ. ಆನರ್ಸ್‌ನಲ್ಲಿ ಮೂರು ವರ್ಷ ಮತ್ತು ಎಂ.ಎ.ದಲ್ಲಿ ಒಂದು ವರ್ಷ ಪೂರ್ಣಚಂದ್ರ ತೇಜಸ್ವಿ ನನ್ನ ನಿಕಟ ಸಹಪಾಠಿ ಮಿತ್ರರಾಗಿದ್ದರು. (ಅವರಲ್ಲಿ ಒಬ್ಬ ಲೇಖಕ ಅಡಗಿದ್ದ ನೆಂಬುದರ ಸುಳಿವು ಮೊದಮೊದಲು ಯಾರಿಗೂ ಸಿಕ್ಕಿರಲಿಲ್ಲ; ನನಗೂ. ಆಮೇಲಾಮೇಲೆ ಅವರು ಬರೆಯತೊಡಗಿದರು; ನಾನು ಬೆರಗಿನಿಂದ ನೋಡತೊಡಗಿದೆ!)

ಎಂ.ಎ. ತರಗತಿಯಲ್ಲಿದ್ದಾಗಲೆ, ಎಂದರೆ ವಿದ್ಯಾರ್ಥಿದಶೆಯಲ್ಲೆ ನನ್ನ ಪ್ರಥಮ ಕೃತಿ, `ತಾರಾಸಖ' ಎಂಬ ಕವನಸಂಕಲನ ಪ್ರಕಟವಾಯಿತು (1961); ಆಗಿನ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಬಹುಮಾನವನ್ನೂ ಪಡೆಯಿತು. ವಿಶೇಷವೆಂದರೆ, ಅದು ನವ್ಯಮಿಶ್ರಿತ ನವೋದಯ ಪ್ರಸ್ಥಾನದ ಕೃತಿಯಾದರೂ ಇಂದು ನಾವು `ಬಂಡಾಯ' ಎಂದು ಕರೆಯುವ ಪಂಥಕ್ಕೆ ಖಚಿತವಾಗಿ ಸೇರುವ ಕವನವೊಂದು ಅದರಲ್ಲಿರುವುದು. ಆಗ `ಬಂಡಾಯ' ಎಂಬ ಮಾತೇ ಇರಲಿಲ್ಲ!

ನಾನು ಎಂ.ಎ. ಮುಗಿಸಿದ ನಂತರ, ಅಧ್ಯಾಪಕ ಹುದ್ದೆ ದೊರೆಯಲಿಲ್ಲವಾದ್ದರಿಂದ, ಮೂರು ವರ್ಷ ಪ್ರಾಚ್ಯ ವಿದ್ಯಾಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕನಾಗಿ ಉದ್ಯೋಗ ಮಾಡಬೇಕಾಯಿತು. ಅಲ್ಲಿ ನನಗೆ ಗ್ರಂಥಸಂಪಾದನ ಕಾರ‌್ಯದಲ್ಲಿ ಪರಿಶ್ರಮವುಂಟಾಗಿ, ಗದುಗಿನ ಭಾರತದ ಅರಣ್ಯ ಪರ್ವವನ್ನು ಶಾಸ್ತ್ರೀಯವಾಗಿ ಸಂಪಾದಿಸಿದೆ. 

ಕುವೆಂಪು ನನಗೆ ಪ್ರತ್ಯಕ್ಷ ಗುರುಗಳಲ್ಲವಾದರೂ ಪರೋಕ್ಷ ಪ್ರಾಚಾರ್ಯರಾದರು. ನನ್ನ ವಿದ್ಯಾರ್ಥಿದಶೆ ಮುಗಿಯುವ ಹೊತ್ತಿಗೆ ಅವರು ನಿವೃತ್ತರಾಗಿದ್ದರು. ಅವರಲ್ಲಿಗೆ ಮೇಲಿಂದ ಮೇಲೆ ಹೋಗಿ, ಮಾತುಕತೆಗಳಲ್ಲಿ ತೊಡಗುತ್ತಿದ್ದೆ. ವೈಯಕ್ತಿಕ ಸಂಗತಿಗಳಿಗೆ ಅವಕಾಶವಿರಲಿಲ್ಲ; ಸಾಹಿತ್ಯ ಮುಂತಾದ ವಿಷಯಗಳ ಚರ್ಚೆಯಷ್ಟೆ. ವೈಚಾರಿಕತೆ ಅವರ ಮಂತ್ರವಾಗಿತ್ತು!

ಆನರ್ಸ್ ತರಗತಿಯಲ್ಲಿ ಸಂಸ್ಕೃತ ಒಂದು ಪರೀಕ್ಷಾ ವಿಷಯವಾಗಿತ್ತು; ಅದು ಸಾಲದೆಂದು ನಾನು ಭಾರತೀಯ ವಿದ್ಯಾಭವನ ಆಗ ನಡೆಸುತ್ತಿದ್ದ ಸರಳ ಸಂಸ್ಕೃತ ತರಗತಿಗಳಿಗೂ ಹಾಜರಾಗಿ, ನನ್ನ ಸಂಸ್ಕೃತ ಜ್ಞಾನವನ್ನು ವೃದ್ಧಿಗೊಳಿಸಿಕೊಂಡೆ; ನಾಲ್ಕು ಪರೀಕ್ಷೆಗಳನ್ನು ಕಟ್ಟಿ `ಸಂಸ್ಕೃತ ಕೋವಿದ' ಪದವಿಯನ್ನು ಪಡೆದೆ. (`ಕೋವಿದ' ಎಂಬುದು ಔಪಚಾರಿಕವಷ್ಟೆ!) ಅನಂತರ ಉದ್ದಕ್ಕೂ ಸಂಸ್ಕೃತ ಕಾವ್ಯ, ನಾಟಕಗಳನ್ನು ಕನ್ನಡಿಸುತ್ತ ಬಂದೆ. ಇನ್ನೊಂದು ಕಡೆ ಇಂಗ್ಲಿಷ್‌ನಿಂದ, ಮುಖ್ಯವಾಗಿ ವಿಮರ್ಶೆ, ಕಾವ್ಯಮೀಮಾಂಸೆಗಳಿಗೆ ಸಂಬಂಧಿಸಿದ ಕೃತಿಗಳನ್ನು ಅನುವಾದಿಸಿದೆ, ಅವು ಕನ್ನಡದ ವಿದ್ಯಾರ್ಥಿಗಳಿಗೆ ಅತ್ಯಗತ್ಯವೆಂಬ ದೃಷ್ಟಿಯಿಂದ. ಸಂಸ್ಕೃತ, ಇಂಗ್ಲಿಷ್‌ಗಳಿಂದ ನಾನು ಮಾಡಿದ ಎಲ್ಲ ಬಗೆಯ ಭಾಷಾಂತರಗಳ ಒಟ್ಟು ಸಂಖ್ಯೆಯೆ ಸುಮಾರು 60!

ನನ್ನ ಸಂಸ್ಕೃತ ಪರಿಜ್ಞಾನದ ಹಿನ್ನೆಲೆಯಲ್ಲಿ ನಾನು ಸಿದ್ಧಗೊಳಿಸಿದ್ದು, `ನಾಗವರ್ಮನ ಕರ್ಣಾಟಕ ಕಾದಂಬರಿ: ಒಂದು ವಿಮರ್ಶಾತ್ಮಕ ಮತ್ತು ತೌಲನಿಕ ಅಧ್ಯಯನ' ಎಂಬ ಪಿಎಚ್.ಡಿ. ಮಹಾಪ್ರಬಂಧ. ಆದರೆ ಏತಕ್ಕೊ ಏನೊ ಅದು ಸೆಳೆಯಬೇಕಾದಷ್ಟು ಲಕ್ಷ್ಯವನ್ನು ಸೆಳೆಯಲಿಲ್ಲವೆನಿಸುತ್ತದೆ. ಆದರೆ ಕುವೆಂಪು ಅದನ್ನು ತುಂಬ ಮೆಚ್ಚಿಕೊಂಡರು.

ಪ್ರಾಚ್ಯ ವಿದ್ಯಾಸಂಶೋಧನಾಲಯದಲ್ಲಿ ಕೆಲಸ ಮಾಡಿದ ಬಳಿಕ, ನಾನು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕನಾಗಿ ನೇಮಕಗೊಂಡೆ. ಅಲ್ಲಿ ಮೂರು ವರ್ಷ ಇದ್ದು, ಅನಂತರ ಮಾನಸಗಂಗೋತ್ರಿಯ ಕನ್ನಡ ವಿಭಾಗಕ್ಕೆ, ಮುಂದೆ ಅದು `ಕುವೆಂಪು ಕನ್ನಡ ಸಂಸ್ಥೆ'ಯಾಯಿತು- ವರ್ಗಾವಣೆಗೊಂಡು, ಸುಮಾರು ಮೂರು ದಶಕಗಳ ಕಾಲ ಅಲ್ಲೇ ಸ್ಥಾಣುವಾಗಿ ಉಳಿದೆ; ಪ್ರಾಧ್ಯಾಪಕನಾಗಿ, ಕಡೆಗೆ ಸಂಸ್ಥೆಯ ನಿರ್ದೇಶಕನಾಗಿ, ನಿವೃತ್ತಿ ಹೊಂದಿದೆ (1999).

ಈಗಿನ ಮುಕ್ತ ವಿಶ್ವವಿದ್ಯಾಲಯ ಹಿಂದೆ ಅದರ ಅಭಿಧಾನ, `ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ' ಮೊದಲು ಮೈಸೂರು ವಿಶ್ವವಿದ್ಯಾನಿಲಯದ ಪರಿಧಿಗೇ ಒಳಪಟ್ಟಿತ್ತು. ಅಲ್ಲಿಯ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೂ ಪಾಠ ಬೋಧಿಸುವ ಮತ್ತು ಬರೆಯುವ ಕರ್ತವ್ಯವನ್ನೂ ನಾನು ದಶಕಗಳ ಕಾಲ ನಿರ್ವಹಿಸಿದೆ. ಕರ್ಣಾಟಕದಾದ್ಯಂತ ಮತ್ತು ಹೊರಗೆ ಕೂಡ ಸಾವಿರಾರು ವಿದ್ಯಾರ್ಥಿಗಳ ಬಳಗವನ್ನು ಅದರಿಂದ ಸಂಪಾದಿಸಿದೆ. ಈಗ ನಾನು ಎಲ್ಲಿಗೆ ಹೋದರೂ, “ನಾನು ನಿಮ್ಮ ವಿದ್ಯಾರ್ಥಿ(ನಿ)ಯಾಗಿದ್ದೆ” ಎಂಬ ಯಾವುದಾದರೂ ದನಿ ಕೇಳಿಬಂದು, ಸಂತೋಷವಾಗುತ್ತದೆ!

ನಾನೊಬ್ಬ ಅಧ್ಯಾಪಕ - ಸಾಹಿತಿ; ವೃತ್ತಿ - ಪ್ರವೃತ್ತಿ ಒಂದೇ ಆದವನು! ಅಧ್ಯಾಪಕನಾದ ಲೇಖಕನಿಗೆ ಕೆಲವು ವಿಶಿಷ್ಟ ಸೌಲಭ್ಯಗಳಿರುತ್ತವೆ. ಪಾಠ ಹೇಳಿದ್ದನ್ನೆ ಅವನು ಬರೆಯಬಹುದು! ನಾನೂ ಆ ಕೆಲಸವನ್ನು ತಕ್ಕಮಟ್ಟಿಗೆ ಮಾಡಿದ್ದೇನೆ. ಅಧ್ಯಯನ, ಅಧ್ಯಾಪನ, ಲೇಖನ ಕರ್ಮಗಳ ಜೊತೆಜೊತೆಯಲ್ಲೆ ಅಸಂಖ್ಯ ಭಾಷಣಗಳನ್ನೂ ನಾನು ಮಾಡಿರುವುದುಂಟು; ಅವುಗಳಲ್ಲಿ ಹಲವನ್ನು ಲೇಖನರೂಪಕ್ಕಿಳಿಸಿದ್ದೇನೆ. ಆ ಬಗೆಯ ಭಾಷಣ ಸಾಮಗ್ರಿ ಟಿಪ್ಪಣಿಗಳ ರೂಪದಲ್ಲಿ ಇನ್ನೂ ಯಥೇಚ್ಛವಾಗಿದೆ! ಈಗಿನ ಅನೇಕ ಲೇಖಕರು ಚೆನ್ನಾಗಿ ಬರೆಯುತ್ತಾರಾದರೂ, ಅವರ ವ್ಯತ್ಪತ್ತಿ ಪರಿಮಿತ ಎನ್ನಬೇಕು.

ನಾನು ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಪಾಠ ಹೇಳಿದ ವಿಷಯಗಳ ಪಟ್ಟಿಯನ್ನು ಗಮನಿಸಿದರೆ, ನನ್ನ ಬರವಣಿಗೆಯ ವ್ಯಾಪ್ತಿಯೂ ಸ್ಥೂಲವಾಗಿ ತಿಳಿಯಬಹುದು: ಕಾವ್ಯ, ಕಾವ್ಯಮೀಮಾಂಸೆ, ವಿಮರ್ಶೆ, ಸಾಹಿತ್ಯ ಚರಿತ್ರೆ, ಸಾಂಸ್ಕೃತಿಕ ಚರಿತ್ರೆ, ವ್ಯಾಕರಣ, ಶಾಸನಶಾಸ್ತ್ರ, ಛಂದಸ್ಸು, ಜಾನಪದ, ಭಾಷಾಂತರ, ಗ್ರಂಥ ಸಂಪಾದನೆ, ತೌಲನಿಕ ಸಾಹಿತ್ಯ (-ಇತ್ಯಾದಿ). ಬರವಣಿಗೆ ಎನ್ನುವಾಗ, ಹಾಸ್ಯ ಲೇಖನ, `ವಾಚಕರವಾಣಿ'ಗಳನ್ನೂ ಪ್ರಸ್ತಾಪಿಸಲೇ ಬೇಕಲ್ಲವೆ? ಈ ವೈವಿಧ್ಯ ಸಾಮಾನ್ಯವಲ್ಲ; ಆದರೆ ಮೌಲಿಕತೆಯ ಪ್ರಶ್ನೆ ಬೇರೆ; ಅದರಲ್ಲಿ ಏರಿಳಿತಗಳು ಸ್ವಾಭಾವಿಕ.

ಕನ್ನಡ, ಇಂಗ್ಲಿಷ್, ಸಂಸ್ಕೃತಗಳಲ್ಲಿ, ನನ್ನ ಓದಿನ ಹರಹು ದೊಡ್ಡದು. (ಓದಿದ್ದಕ್ಕಿಂತ ಬರೆದದ್ದೇ ಹೆಚ್ಚೇನೋ!) ಆ ಓದು, ಪರಿಭಾವನೆಗಳ ಫಲವನ್ನು ನನ್ನ `ಚಿಂತನ ಚಿಂತಾಮಣಿ' ಎಂಬ ಸಾವಿರ ಪುಟಗಳ ಬೃಹದ್ಗ್ರಂಥದಲ್ಲಿ ನೋಡಬಹುದು. ಅದೊಂದು ಅನನ್ಯವಾದ ಕೃತಿಯೆಂದು ನಾನು ಹೇಳಿದರೆ, ಇತರರೂ ಹೇಳಿದ್ದಾರೆ - ಜಂಬದ ಮಾತೆಂದು ಯಾರೂ ಭಾವಿಸಬೇಕಿಲ್ಲ. ಅದರಲ್ಲಿ ಸುಮಾರು 800 ಸಣ್ಣ ಪುಟ್ಟ ಚಿಂತನ ಪ್ರಬಂಧಗಳಿವೆ; `ಜಗತ್ತಿನ ಜ್ಞಾನ, ಚಿಂತನಗಳಲ್ಲಿ ಅತ್ಯುತ್ತಮ' ವಾದುದು ಅದರಲ್ಲಿ ಸಾಕಷ್ಟು ಲಭ್ಯ.

ಒಟ್ಟಿನಲ್ಲಿ, ಪ್ರಾಚೀನ - ಅರ್ವಾಚೀನ, ಪೌರ್ವಾತ್ಯ - ಪಾಶ್ಚಾತ್ಯ, ಸಂಸ್ಕೃತ - ಕನ್ನಡ, ಪರಂಪರೆ - ನವ್ಯತೆ ಇತ್ಯಾದಿಯಾಗಿ ನನ್ನದು ಸಮನ್ವಯ ವಾಙ್ಮಯ ಎನ್ನಬಹುದು. (`ಸಮನ್ವಯ ಕವಿ' ಎಂದಂತಲ್ಲ!) ಸೃಜನಶೀಲ, ಸೃಜನೇತರ ಎರಡೂ ನನ್ನ ಕಾರ್ಯವಲಯಗಳಾಗಿವೆ. ಕಾವ್ಯವಂತೂ ಸರಿಯೆ; ಇನ್ನು, ವಿದ್ವತ್ತು, ಸಂಶೋಧನೆಗಳೂ ನನ್ನ ಅಧ್ಯವಸಾಯಕ್ಕೆ ಹೊರಗಲ್ಲ. ಆದರೆ ಒಂದು ಕೊರತೆಯನ್ನು ನಾನು ಹೇಳಿಕೊಳ್ಳಬೇಕು: ನನ್ನ ಬರವಣಿಗೆಗೆ ಬಹಳ ವೈಶಾಲ್ಯವಿದೆ; ಆದರೆ ಆಳ ಸಾಲದೇನೊ. ಈ ಮಾತಿಗೆ ಉಜ್ವಲವಾದ ಅಪವಾದಗಳಿಲ್ಲದಿಲ್ಲ!

ನಾನು ವೃತ್ತಿಯಲ್ಲಿ ಅಧ್ಯಾಪಕನಾಗಿದ್ದೆನಷ್ಟೆ. ಒಂದು ಕಿರು ವಿವರಣೆ ಅಗತ್ಯವೇನೊ. ಮಾತಿಗಿಂತ ಮೌನವೇ ನನಗೆ ಹೆಚ್ಚು ಪ್ರಿಯವಾದದ್ದು: ಒಮ್ಮಮ್ಮೆ ಮಾತನ್ನು ದ್ವೇಷಿಸುತ್ತೇನೆ ಕೂಡ. ಆದರೆ ಮಾತಾಡುವುದನ್ನೆ ವೃತ್ತಿಯಾಗಿ ಮಾಡಿಕೊಂಡದ್ದು ನನ್ನ ಬದುಕಿನ ಅನಿವಾರ‌್ಯ ವಿಚಿತ್ರಗಳಲ್ಲೊಂದು!

ನಾನೊಂದು ಮಹಾಕಾವ್ಯನ್ನೇಕೆ ಬರೆದಿಲ್ಲ ಎಂದು ಅನೇಕರು ಕೇಳುತ್ತಾರೆ; ಸಹಜ (ಒಂದು ಕಡೆ ಚುಟುಕಗಳ, ಇನ್ನೊಂದು ಕಡೆ `ಮಹಾಕಾವ್ಯ'ಗಳ ದಿನಗಳಿವು!) ಹಿಂದೆಯೆ ನಾನೊಂದು ಮಹಾಕಾವ್ಯವನ್ನು ಆರಂಭಿಸಿ, ಹತ್ತಾರು ಪುಟಗಳಷ್ಟು ಬರೆದು, ಯಾವುದೋ ಕಾರಣಕ್ಕಾಗಿ ನಿಲ್ಲಿಸಿದೆ. ಮುಂದುವರಿಸೋಣ ಎಂದು ಈಗ ನೋಡಿದರೆ, ಅದರ ಹಸ್ತಪ್ರತಿಯೇ ಕೈಗೆ ಸಿಗುತ್ತಿಲ್ಲ: ಎಲ್ಲಿಟ್ಟೆನೊ! (ಈಗ ವಯೋನುಗುಣವಾದ ಮರವೆ). ಹೋಗಲಿ, ಇನ್ನೊಂದು ಬರೆಯೋಣ ಎಂದು ಮೊದಲು ಮಾಡಿದರೆ, ಅದೂ ಆರಂಭದಲ್ಲೇ ನಿಂತಿದೆ. ಅಂತೂ ಮಹಾಕಾವ್ಯ ಬರೆಯುವುದು ನನ್ನ ಹಣೆಯಲ್ಲಿ ಬರೆದಿಲ್ಲವೇನೋ!

ವಚನ ರಚನೆಯ ಮಟ್ಟಿಗೆ ನನ್ನನ್ನು `ಅನುಭಾವಿ' ಎಂದು ಕರೆದಿರುವುದುಂಟು, ಕೆಲವರು. ಆದರೆ ಆ ಭ್ರಮೆ ನನಗಿಲ್ಲ. ವಚನಗಳನ್ನು ಹಲವು `ಹನಿ'ಗಳೆ ವಿರೋಧಿಸುತ್ತವೆ!

ಹಿಂದೆಯೇ ನಾನೊಮ್ಮೆ ಕುವೆಂಪು ಅವರಲ್ಲಿ ಬಿನ್ನವಿಸಿಕೊಂಡೆ: `ನಾನು ಯಾವುದೇ ದೊಡ್ಡ ಕೆಲಸ ಮಾಡಲಿಲ್ಲ, ಸರ್!' ಅವರು ಹೇಳಿದರು: `ನೋಡಿ ಕೆಲಸಗಳಲ್ಲಿ ಸಣ್ಣದು, ದೊಡ್ಡದು ಎಂಬುದಿಲ್ಲ. ಚೆನ್ನಾಗಿ ಮಾಡಿದ ಎಲ್ಲ ಕೆಲಸವೂ ದೊಡ್ಡದೇ!' ಅದು ಅವರ `ಪೂರ್ಣದೃಷ್ಟಿಗೆ' ಸಹಜವಾದ ಸಮರ್ಥನೆ; ನಮ್ಮಂಥವರಿಗೆ ಪೂರ್ತಿ ಅನ್ವಯಿಸುವಂಥದಲ್ಲ.

ಹಲವಾರು ಅಯಾಚಿತ (ಮತ್ತು ಅನುಚಿತ?) ಪ್ರಶಂಸೋಕ್ತಿಗಳಿಗೆ ನಾನು ಪಾತ್ರನಾಗಿದ್ದೇನೆ. (ಪ್ರಶಸ್ತಿ, ಪುರಸ್ಕಾರಗಳ ಸರಮಾಲೆ ಬೇರೆ). ಕುವೆಂಪು ಹೇಳಿದ್ದಾರೆ: `ಸಿಪಿಕೆ ಅವರ ಸಾಹಿತ್ಯ ಗಾತ್ರದಲ್ಲಿ ಮಾತ್ರವಲ್ಲ, ಗುಣದಲ್ಲೂ ದೊಡ್ಡದು' ತಮ್ಮ `ಚಿದ್ವಲಯ'ಕ್ಕೆ ಸೇರಿದವರಲ್ಲಿ ನಾನೊಬ್ಬನೆಂದು ಅವರು ಪರಿಗಣಿಸಿದ್ದರು. (ಅವರ ಹೊಗಳಿಕೆಯನ್ನು `ಅನುಚಿತ' ವೆಂದರೆ, ಅವರಿಗೆ ಅಪಚಾರವೆಸಗಿದಂತೆ!) ಇನ್ನೂ ಅನೇಕ ಖ್ಯಾತನಾಮರ ನುಡಿಗಳಿವು: `ಹೊಸಗನ್ನಡ ಗದ್ಯ ನಿರ್ಮಾಪಕರಲ್ಲಿ ಸಿಪಿಕೆ ಅವರೂ ಒಬ್ಬರು'; `ಅವರ ಸಾಹಿತ್ಯ ಗಟ್ಟಿ ಕಾಳುಗಳ ಕಣಜ'; `ನಮ್ಮ ನಡುವೆ ಬದುಕುತ್ತಿರುವ ಮಹತ್ವದ ಕವಿಗಳಲ್ಲೊಬ್ಬರು; `ನಮ್ಮ ಮಧ್ಯದ ಒಂದು ವಿಸ್ಮಯ' ಇನ್ನೂ ಹಲವಾರಿವೆ; ಸಂಕೋಚದಿಂದ ಬಿಡುತ್ತೇನೆ!
ನನ್ನ ಆತ್ಮಕಥೆಯ ಕೆಲವಂಶಗಳನ್ನು ಇಲ್ಲಿ ನಿವೇದಿಸಬೇಕು.

ಮೈಸೂರು ನಗರದ ಒಂದು ಪ್ರತಿಷ್ಠಿತ ಬಡಾವಣೆಯ ಕೊಠಡಿಯೊಂದರಲ್ಲಿ ಯಾರಾದರೂ ಸೀಮೆಯೆಣ್ಣೆ ದೀಪದ ಬೆಳಕಿನಲ್ಲಿ ಓದುವುದನ್ನು ಕಲ್ಪಿಸಿಕೊಳ್ಳಬಹುದೆ? (ಬೀದಿ ದೀಪದ ಬೆಳಕಿನಲ್ಲಿ ಓದಿ ಮುಂದೆ ಬಂದವರ ಕತೆಗಳೇನೋ ಉಂಟು) ನಾನು ಒಂದಲ್ಲ, ಎರಡಲ್ಲ, ನಾಲ್ಕು ವರ್ಷ ವಿದ್ಯಾರ್ಥಿಯಾಗಿ ಆ ಮಂದ ಬೆಳಕಿನಲ್ಲಿ ಓದಿದೆ, ಬರೆದೆ! (ಹಗಲು ಹೊತ್ತು ಕೆಲಸ ಮಾಡುತ್ತಿದ್ದುದೇ ಹೆಚ್ಚು) ಆ ಬಾಡಿಗೆ ರಹಿತ ಕೊಠಡಿ ಎಲ್ಲ ದೃಷ್ಟಿಗಳಿಂದಲೂ ಅನುಕೂಲವಾಗಿತ್ತು; ಆದರೆ ಅದಕ್ಕೆ ಏತಕ್ಕೊ ಏನೊ ವಿದ್ಯುತ್ ಸಂಪರ್ಕವಿರಲಿಲ್ಲ! ಪಡೆದುಕೊಳ್ಳಲು ಮಾಡಿದ ಯತ್ನ ಫಲಿಸಲಿಲ್ಲ.

ಇನ್ನು ಆರಂಭದಲ್ಲಿ ಹೊಟ್ಟೆ, ಬಟ್ಟೆಗಳಿಗೂ ಕಷ್ಟವಿತ್ತು; ಕಾಲಲ್ಲಿ ಚಪ್ಪಲಿಯಿರಲಿಲ್ಲ. ಬಾಲ್ಯಾರಭ್ಯ ಕಣ್ಣು, ಕಿವಿಗಳ ತೊಂದರೆ ಬೇರೆ. ಮುಂದೆ ಈಗಲೂ ಸಾಂಸಾರಿಕ ಜೀವನದಲ್ಲಿ ಆಗಾಗ ನಾನಾಭಂಗ, ಬವಣೆಗಳು. ಗಾಂಧೀಜಿಯ ಉಕ್ತಿಯೊಂದು ನೆನಪಾಗುತ್ತದೆ: `ನನ್ನಲ್ಲಿ ಹಾಸ್ಯ ಪ್ರಜ್ಞೆಯಿಲ್ಲದಿದ್ದರೆ, ಎಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ! ಮುಖ್ಯವಾದ ಮಾತೆಂದರೆ: `ಬದುಕಿಸುವ ಜೀವ ದ್ರವ್ಯ, ಕಾವ್ಯ!'

`ಇಂತಹ' ವ್ಯಕ್ತಿಯೊಬ್ಬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ, ಗಂಗಾವತಿಯ ಉತ್ತುಂಗಕ್ಕೇರಿದ್ದು - ಅದೂ ಅಪ್ರಯತ್ನಪೂರ್ವಕವಾಗಿ, ಅನಿರೀಕ್ಷಿತವಾಗಿ - ಸೋಜಿಗದ `ವಿದ್ಯ' ಮಾನವಲ್ಲವೆ? ಅದರಲ್ಲಿ ಅರ್ಹತೆಯ ಪಾಲೆಷ್ಟು, ಅದೃಷ್ಟದ ಪಾಲೆಷ್ಟು? ನಾನು ಹೇಳಲಾರೆ. `ಪ್ರಯತ್ನವಿಲ್ಲದೆ' ಎಂದರೆ, ಇಂದಿನ ಪರಿಸ್ಥಿತಿಯಲ್ಲಿ ಕೆಲವರಾದರೂ ನಂಬದಿರಬಹುದು! ಅಂದ ಹಾಗೆ, ಮನಸ್ಸು ಮಾಡಿದ್ದರೆ ನಾನು ಏನೇನೋ ಆಗಬಹುದಿತ್ತು. ನಾನು ವಿದ್ವಾಂಸನೊ ಅಲ್ಲವೊ, ಆದರೆ ವ್ಯಾವಹಾರಿಕವಾಗಿ ದಡ್ಡ; ತಕ್ಕಮಟ್ಟಿಗೆ ಸೋಮಾರಿ ಕೂಡ!

ಈ ನಡುವೆ, ನನ್ನ ಎಂ.ಎ. ವಿದ್ಯಾರ್ಥಿನಿಯೊಬ್ಬರು ಸುಮಾರು 40 ವರ್ಷಗಳ ಹಿಂದೆ ನನ್ನ ಮೇಲೆ ಪ್ರೇಮ ಕವನವೊಂದನ್ನು ಬರೆದು, ನನ್ನ ಗಮನಕ್ಕೇ ತರದೆ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ ಚೋದ್ಯವೊಂದನ್ನು ನಾನಿಲ್ಲಿ ಹೇಳಿಕೊಳ್ಳಬಹುದು. ತಮ್ಮ ಕವನ ಸಂಕಲನವೊಂದರಲ್ಲಿ ಅದು ಸೇರಿರುವುದನ್ನು ಈಚೆಗೆ ಅವರೇ ನನ್ನ ಅವಗಾಹನೆಗೆ ತಂದರು! (ಅಂತೂ ಗುಟ್ಟಿನ ಸಂಗತಿಯೇನಲ್ಲ) ಇಂಥವರೂ ಉಂಟೆ? ಈಗ ಆಕೆ ಖ್ಯಾತ ಲೇಖಕಿ.

ಇದುವರೆಗೆ ನಾನು ಏನೇನೂ ಮಾಡಿಯೇ ಇಲ್ಲವೇನೊ ಅಥವಾ ಮಾಡಬೇಕಾದ್ದನ್ನು ಮಾಡಿಲ್ಲವೇನೊ ಎನಿಸುತ್ತದೆ ಒಮ್ಮಮ್ಮೆ! ಆದರೆ ಇಷ್ಟೊಂದು ಹತ್ತಿರ ಹತ್ತಿರ 300 ಪುಸ್ತಕಗಳಿವೆಯಲ್ಲ, ಅವುಗಳ ಹಾಳೆಗಳೆಲ್ಲ ಖಾಲಿ ಅಲ್ಲವಲ್ಲ! ಕನ್ನಡದ ಎಲ್ಲ ಪ್ರಮುಖ ಕವಿಗಳ ಮೇಲೂ ನಾನು ದಣಿವಿಲ್ಲದೆ ಬರೆದಿದ್ದೇನೆ; ಸಂಸ್ಕೃತ ಕವಿಗಳ ಬಗೆಗೂ ತಕ್ಕಮಟ್ಟಿಗೆ. ಇನ್ನೂ ಪ್ರಕಟವಾಗಬೇಕಾದ ಕೃತಿಗಳಿವೆ (ಕೆಲವು ಕೃತಿಗಳ ಪ್ರಕಟಣೆ ಸಾಧ್ಯವಿಲ್ಲ); ಎಷ್ಟೋ ಅರ್ಧಾಂತಿಕವಾಗಿ ನಿಂತಿವೆ; ಮತ್ತೆಷ್ಟೋ ಟಿಪ್ಪಣಿಗಳ ರೂಪದಲ್ಲಿವೆ; ಮತ್ತೆ ಕೆಲವು ಮನಸ್ಸಿನಲ್ಲಿ!
ಗೋಕಾಕ್ ವರದಿ ಚಳವಳಿ ಮುಂತಾದ ಎಲ್ಲ ಕನ್ನಡಪರ ಹೋರಾಟಗಳಲ್ಲಿ ನಾನು ಉದ್ದಕ್ಕೂ ನನ್ನನ್ನು ತೊಡಗಿಸಿಕೊಂಡು ಬಂದಿದ್ದೇನೆ ಎಂಬುದೂ ಇಲ್ಲಿ ಉಲ್ಲೇಖನೀಯ.

ಮತ್ತೊಂದು ಮುಖ್ಯ ಸಂಗತಿ: ನಾನೊಬ್ಬ ಲೇಖಕ ಮಾತ್ರವಲ್ಲ; ಪ್ರಕಾಶಕ ಕೂಡ! ನನ್ನ ಸುಮಾರು 75 ಪುಸ್ತಕಗಳನ್ನು ನನ್ನದೇ `ಚಿತ್ರ ಭಾನುಪ್ರಕಾಶನ'ದ ಮೂಲಕ ಪ್ರಕಟಿಸಿಕೊಂಡಿದ್ದೇನೆ. ಗಣ್ಯ ಸಾಧನೆಯೆ!

ಒಟ್ಟಾರೆ ನನ್ನ ಇದುವರೆಗಿನ ಕಾರ‌್ಯ (ಕಾವ್ಯ) ಕಲಾಪ ಸಫಲವೋ ವಿಫಲವೋ ಎಂಬುದನ್ನು ಬೇರೆಯವರು, ಬಲ್ಲವರು ಹೇಳಬೇಕು; ವಿಪುಲ ಎಂಬುದಂತೂ ಸತ್ಯ! (`ಸಾರ್ಥಕ' ಎಂಬ ಅಭಿನಂದನ ಗ್ರಂಥವೊಂದಕ್ಕೆ ನಾನು ಭಾಜನನಾಗಿದ್ದೇನೆ).
ಕಡೆಯದಾಗಿ, ನೆಹ್ರೂ ತಮ್ಮ ಆತ್ಮಕಥೆಯ ಮುನ್ನುಡಿಯಲ್ಲಿ ಆಡಿರುವ ಒಂದು ಮಾತು: `ಮತ್ತೆ ನನ್ನ ಬದುಕನ್ನು ಮೊದಲಿನಿಂದ ಬದುಕುವ ಅವಕಾಶ ನನಗೇನಾದರೂ ದೊರೆತರೆ, ಯಾವ ಬದಲಾವಣೆಯನ್ನೂ ನಾನು ಮಾಡಿಕೊಳ್ಳಬಯಸುವುದಿಲ್ಲ!' ನನ್ನಂಥವರು ಹಾಗೆ ಹೇಳೀಕೊಳ್ಳಬಲ್ಲವೆ?

ನಾನೊಂದು ವಿಸ್ಮಯವೋ ಅಥವಾ ವಿಚಿತ್ರವೊ? ಮುಂದೇನು? `ಆದಾವ ನಮ ಜೋಳ; ಉಳಿದಾವ ನಮ ಹಾಡು!'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT