ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯಪ್ರಜ್ಞೆ ಮರೆತ ಸಚಿವರಿಗೆ ಪ್ರತಿಭಟನೆ ಬಿಸಿ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಗುಲ್ಬರ್ಗ: ನಗರಕ್ಕೆ ಆಗಮಿಸಿದರೂ ನಿಗದಿತ ವೇಳೆಗೆ ಸಭೆಗೆ ಬಾರದ 371 ನೇ(ಜೆ) ತಿದ್ದುಪಡಿ ಅನುಷ್ಠಾನ ಕುರಿತ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಹಾಗೂ ಸದಸ್ಯರ ವಿರುದ್ಧ ಸೋಮವಾರ ಪ್ರತಿಭಟನೆ ನಡೆಯಿತು. 

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ 371ನೇ ಕಲಂ (ಜೆ ) ತಿದ್ದುಪಡಿ ಅನುಷ್ಠಾನದ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸಚಿವ ಸಂಪುಟ ಉಪಸಮಿತಿ ಸಭೆಯು ಸೋಮವಾರ ಬೆಳಿಗ್ಗೆ 10 ರಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಗದಿಯಾಗಿತ್ತು. ಬೀದರ್, ಯಾದಗಿರಿ ಹಾಗೂ ಗುಲ್ಬರ್ಗ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಜೂ.29ರಂದು   ಜಿಲ್ಲಾಧಿಕಾರಿ ಕಚೇರಿಯಿಂದ ಪಾಸ್ ಪಡೆದಿದ್ದು, ಸರದಿಗಾಗಿ ಕಾದು ಕುಳಿತಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜೀವ ಕುಮಾರ್, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಆಗಮಿಸಿದ್ದರು.

ಸಚಿವ ಎಚ್.ಕೆ. ಪಾಟೀಲ್ 11.20ರ ಸುಮಾರಿಗೆ ನಗರಕ್ಕೆ ಬಂದರು. ಆದರೆ ಸಭೆಗೆ ಬಾರದೇ, ನೇರವಾಗಿ ಐವಾನ್-ಎ-ಶಾಹಿ ಪ್ರವಾಸಿ ಮಂದಿರಕ್ಕೆ ತೆರಳಿದರು. ಅಲ್ಲಿ ಪಕ್ಷದ ಮುಖಂಡರಿಂದ ಅಭಿನಂದನೆ, ಅಹವಾಲು ಸ್ವೀಕರಿಸಿದರು. ಬಳಿಕ ಸಭೆಗೆ ಬಾರದೆ ಕೆಲ ಪತ್ರಕರ್ತರ ಜೊತೆ ಮಾತನಾಡುತ್ತಾ ಕುಳಿತರು. ಇದರಿಂದ ಸಭೆಯಲ್ಲಿ ಕಾದು ಕುಳಿತ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ವಿವಿಧ ರಕ್ಷಣಾ ವೇದಿಕೆಗಳ ಸದಸ್ಯರು ಆಕ್ರೋಶಗೊಂಡರು.

`ಸರ್ಕಾರ ಹಾಗೂ ಎಚ್.ಕೆ. ಪಾಟೀಲ್ ಅವರಿಗೆ ಹೈ.ಕ ಪ್ರದೇಶದ ಬಗ್ಗೆ ಕಾಳಜಿ ಇಲ್ಲ. ಆದ್ದರಿಂದ ನಿರ್ಲಕ್ಷ್ಯ ವಹಿಸುತ್ತಿದ್ದಾರೆ' ಎಂದು ಆರೋಪಿಸಿ ಧಿಕ್ಕಾರ ಕೂಗಿದರು.

ಕೊನೆಗೂ 12.15ರ ವೇಳೆಗೆ ಸಚಿವರು ಸಭೆಗೆ ಆಗಮಿಸಿದರು. ಸಭಾಂಗಣದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ಹೊರ ನಡೆದರು. ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಶಿವರಾಜ್ ತಂಗಡಗಿ ಕ್ಷಮೆ ಯಾಚಿಸಿ ವಾಪಸಾಗುವಂತೆ ಮನವಿ ಮಾಡಿದರು. ಆದರೂ ಬೀದರ್ ಜಿಲ್ಲೆಯ ಬಹುತೇಕ ಸಂಘಟನೆಗಳ ಸದಸ್ಯರು ಸಭೆ ಬಹಿಷ್ಕರಿಸಿ ಹೋದರು.

ಉಪ ಸಮಿತಿಗೆ ಎಚ್.ಕೆ. ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕದ ವಿವಿಧ ಹೋರಾಟ ಸಮಿತಿಗಳ ಸದಸ್ಯರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು.

11ರೊಳಗೆ ವರದಿ- ಎಚ್.ಕೆ. ಪಾಟೀಲ
ಗುಲ್ಬರ್ಗ: ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ನೇಮಿಸಿರುವ ಸಚಿವ ಸಂಪುಟ ಉಪ ಸಮಿತಿ ವರದಿಯನ್ನು ಜುಲೈ 11ರ ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಉಪಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ತಿಳಿಸಿದರು. ಬೀದರ್, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ನಂತರ ಸೋಮವಾರ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಗುಲ್ಬರ್ಗದಿಂದ 130, ಯಾದಗಿರಿಯಿಂದ 18 ಹಾಗೂ ಬೀದರ್ ಜಿಲ್ಲೆಯಿಂದ 10 ಮನವಿ ಪತ್ರಗಳು ಸಲ್ಲಿಕೆಯಾಗಿವೆ. ಸಂವಿಧಾನದ ನಿಯಮ, ಉದ್ಯೋಗ ಹಾಗೂ ಶಿಕ್ಷಣ ಮೀಸಲಾತಿಗೆ ಸಂಬಂಧಿಸಿದಂತೆ ಬಹಳ ಅಮೂಲ್ಯ ಸಲಹೆಗಳು ಬಂದಿವೆ ಎಂದರು. ಈ ಭಾಗದ ಕ್ರಿಯಾಶೀಲ ಹೋರಾಟ ಸಮಿತಿಗಳು ನಿಯಮ ರೂಪಿಸುವುದಕ್ಕೆ ಸಂಬಂಧಿಸಿದಂತೆ ಬಹಳಷ್ಟು ವಿವರ ಕೊಟ್ಟಿವೆ. ಜುಲೈ 3ರಂದು ಹೊಸಪೇಟೆಯಲ್ಲಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆ ಜನರ ಸಲಹೆಗಳನ್ನು ಪಡೆದುಕೊಳ್ಳಲಾಗುವುದು. ಎಲ್ಲವನ್ನು ಸೇರಿಸಿ ತಜ್ಞರೊಂದಿಗೆ ಚರ್ಚಿಸಿ ರಾಜ್ಯ ಬಜೆಟ್ ಮಂಡನೆಯಾಗುವ ಪೂರ್ವದಲ್ಲೇ ವರದಿ ಸಲ್ಲಿಸಲು ಪರಿಶ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT