ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರವೀರರಿಗೆ ಒಲಿಂಪಿಕ್ಸ್ ಹೆಗ್ಗನಸು

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಇರಾಕ್ ಯುದ್ಧದ ಸಂದರ್ಭದಲ್ಲಿ ಅಮೆರಿಕದ ನೂರಾರು ಸೈನಿಕರು ಪ್ರಾಣ ಕಳೆದುಕೊಂಡ್ದ್ದಿದರೆ, ಬಾಂಬ್ ಸ್ಫೋಟ ಒಳಗೊಂಡಂತೆ ವಿವಿಧ ಘಟನೆಗಳಲ್ಲಿ ಹಲವರು ಗಾಯಗೊಂಡಿದ್ದರು.
 
ಕೈ ಅಥವಾ ಕಾಲನ್ನು ಕಳೆದುಕೊಂಡು ಅಂಗವಿಕಲರಾದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂತಹವರಲ್ಲಿ ಜೋಶ್ ಓಲ್ಸನ್ ಕೂಡಾ ಒಬ್ಬರು.

2003 ರಲ್ಲಿ ಇರಾಕ್‌ನಲ್ಲಿ ಬಂಡುಕೋರರು ನಡೆಸಿದ ಹಠಾತ್ ದಾಳಿಯಲ್ಲಿ ಓಲ್ಸನ್ ಎಡಗಾಲನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಸುಮಾರು 18 ತಿಂಗಳುಗಳ ಕಾಲ ವಾಲ್ಟರ್ ರೀಡ್ ಆರ್ಮಿ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದರು. ಇದೀಗ ಅವರಿಗೆ ನಡೆದಾಡಲು ಕೃತಕ ಕಾಲು ಬೇಕು.  

ಆದರೆ ಕಾಲು ಇಲ್ಲ ಎಂದು ಕೊರಗುತ್ತಾ ಕೂರಲು ಓಲ್ಸನ್ ಸಿದ್ಧವಿರಲಿಲ್ಲ. ಏನಾದರೂ ಸಾಧಿಸಬೇಕೆಂಬ ಛಲ ಅವರಲ್ಲಿತ್ತು. ಅದಕ್ಕಾಗಿ ಆಯ್ದುಕೊಂಡದ್ದು ಕ್ರೀಡಾಕ್ಷೇತ್ರ. ಅದರಲ್ಲೂ ಶೂಟಿಂಗ್ ಸ್ಪರ್ಧೆಯಲ್ಲಿ ಸತ್ವಪರೀಕ್ಷೆಗಿಳಿದರು.  ಸತತ ತರಬೇತಿ, ಪ್ರಯತ್ನದಿಂದಾಗಿ ಇದೀಗ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. 

ಒಲಿಂಪಿಕ್ಸ್ ಬಳಿಕ ನಡೆಯುವ ಪ್ಯಾರಾಲಿಂಪಿಕ್ಸ್ ಕೂಟದ ಶೂಟಿಂಗ್‌ನ ಏರ್ ರೈಫಲ್ ವಿಭಾಗದಲ್ಲಿ  ಅಮೆರಿಕವನ್ನು ಪ್ರತಿನಿಧಿಸುತ್ತಿದ್ದಾರೆ. ಪದಕ ಗೆಲ್ಲುವ ಉದ್ದೇಶದಿಂದ ಕಠಿಣ ತರಬೇತಿಯಲ್ಲಿ ನಿರತರಾಗಿದ್ದಾರೆ. ತನ್ನಂತೆ ಯುದ್ಧದಲ್ಲಿ ಅಂಗವೈಕಲ್ಯ ಅನುಭವಿಸಿದ ಇತರ ಸೈನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತ ಅವರಲ್ಲಿದೆ.

ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ನಡೆದ ದುರ್ಘಟನೆಗಳಲ್ಲಿ ಕೈಕಾಲುಗಳನ್ನು ಕಳೆದುಕೊಂಡಿರುವ ಸಾವಿರಾರು ಸೈನಿಕರು ಅಮೆರಿಕದಲ್ಲಿದ್ದಾರೆ. ಆದರೂ ಪ್ಯಾರಾಲಿಂಪಿಕ್ಸ್‌ನಲ್ಲಿ ಅಮೆರಿಕ ಇತರ ರಾಷ್ಟ್ರಗಳಿಗಿಂತ ಹಿಂದೆ ಉಳಿದಿದೆ. ಈ ಪರಿಸ್ಥಿತಿ ಬದಲಾಗಬೇಕೆಂಬುದು ಓಲ್ಸನ್ ಕನಸು. ಮಾತ್ರವಲ್ಲ ಅದಕ್ಕಾಗಿ ತಮ್ಮಿಂದ ಸಾಧ್ಯವಾದ ಪ್ರಯತ್ನ ಮಾಡುತ್ತಿದ್ದಾರೆ.

ಅಂಗವಿಕಲರಾದ ಸೈನಿಕರು ಸುಲಭದಲ್ಲಿ `ಅಥ್ಲೀಟ್~ ಆಗಿ ಬದಲಾಗಬಹುದು ಎಂಬುದನ್ನು ಓಲ್ಸನ್ ಕಂಡುಕೊಂಡಿದ್ದಾರೆ. ಅಥ್ಲೀಟ್‌ನಲ್ಲಿರಬೇಕಾದ ಎಲ್ಲ ಗುಣಗಳೂ ಸೈನಿಕನಲ್ಲಿರುತ್ತವೆ ಎಂಬುದು ಅವರ ಹೇಳಿಕೆ. `ಶಿಸ್ತು, ಫಿಟ್‌ನೆಸ್, ಮನೋಸ್ಥೈರ್ಯ ಮತ್ತು ಒತ್ತಡವನ್ನು ನಿಭಾಯಿಸುವ ಶಕ್ತಿ ಸೈನಿಕನಿಗೆ ಕರಗತವಾಗಿರುತ್ತದೆ. ಅಥ್ಲೀಟ್‌ಗಳಿಗೆ ಇದು ಅಗತ್ಯ~ ಎಂಬುದು ಓಲ್ಸನ್ ಅನಿಸಿಕೆ.

ಅಂಗವೈಕಲ್ಯಕ್ಕೆ ತುತ್ತಾಗಿರುವ ಸೈನಿಕರು ಆ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಕೊರಗುತ್ತಿರುವವರೇ ಅಧಿಕ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಾನಸಿಕ ಒತ್ತಡವನ್ನು ದೂರಮಾಡಿ ಸಂತಸದ ಜೀವನ ನಡೆಸಬಹುದು ಎಂದಿದ್ದಾರೆ.

ಅಮೆರಿಕದಲ್ಲಿ ಶೂಟಿಂಗ್ ತರಬೇತಿಗೆ ತಕ್ಕ ಸೌಲಭ್ಯ ಇಲ್ಲದೇ ಇರುವುದು ಓಲ್ಸನ್‌ಗೆ ನಿರಾಸೆ ಉಂಟುಮಾಡಿದೆ. `ಜರ್ಮನಿಯಲ್ಲಿ ಎಲ್ಲ ಸಣ್ಣ ಪಟ್ಟಣಗಳಲ್ಲಿ ನಮಗೆ ಶೂಟಿಂಗ್ ರೇಂಜ್ ಕಾಣಲು ಸಾಧ್ಯ. ಆದರೆ ಅಂತರರಾಷ್ಟ್ರೀಯ ಗುಣಮಟ್ಟದ ಶೂಟಿಂಗ್ ರೇಂಜ್‌ಗಳು ಅಮೆರಿಕದಲ್ಲಿ ವಿರಳ~ ಎಂಬುದು ಅವರ ನುಡಿ.

ಓಲ್ಸನ್ ಪ್ರತಿದಿನ ನಾಲ್ಕರಿಂದ ಆರು ಗಂಟೆಗಳ ಕಾಲ ತರಬೇತಿ ನಡೆಸುವರು. ವಾರದಲ್ಲಿ ಐದರಿಂದ ಆರು ದಿನಗಳ ಕಾಲ ಇದು ಪುನರಾವರ್ತನೆಯಾಗುತ್ತದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿಟ್ಟಿನಲ್ಲಿ ಇಂತಹ ಕಠಿಣ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
`ಜೀವನದಲ್ಲಿ ನಾನು ಈಗಾಗಲೇ ಒಮ್ಮೆ ಹಿನ್ನಡೆ ಅನುಭವಿಸಿದ್ದೇನೆ. ಆದರೂ ಎದೆಗುಂದಿಲ್ಲ~ ಎಂಬ ಮಾತು ಓಲ್ಸನ್ ಅವರಲ್ಲಿರುವ ಆತ್ಮವಿಶ್ವಾಸವನ್ನು ತಿಳಿಸುತ್ತದೆ.

ಕೃಪೆ: ದಿ ನ್ಯೂಯಾರ್ಕ್ ಟೈಮ್ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT