ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಅನುಷ್ಠಾನವಾಗಿಲ್ಲ ಆಂಗ್ಲ

Last Updated 7 ಜನವರಿ 2012, 10:15 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರಸ್ತುತ ಉದ್ಯೋಗಕೇಂದ್ರಿತ ಜಗತ್ತಿಗೆ ಸಜ್ಜುಗೊಳಿಸಲು ಹಾಗೂ ಸಂವಹನ ಇಂಗ್ಲಿಷ್ ಕಲಿಸಲು ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಮಹತ್ವಾಕಾಂಕ್ಷೆಯ `ಆಂಗ್ಲ~ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ರಾಜ್ಯದಲ್ಲಿ 350 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿವೆ. ಇವುಗಳಲ್ಲಿ 150ಕ್ಕೂ ಹೆಚ್ಚು ಕಾಲೇಜುಗಳನ್ನು `ಆಂಗ್ಲ~ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಹಂತ ಹಂತವಾಗಿ ಎಲ್ಲ ಕಾಲೇಜುಗಳಿಗೂ ಸೌಲಭ್ಯ ವಿಸ್ತರಿಸುವ ಉದ್ದೇಶ ಹೊಂದಲಾಗಿತ್ತು. ಆಯ್ದ ಕಾಲೇಜುಗಳಲ್ಲಿ, ಇಂತಿಷ್ಟು ತರಗತಿಗಳನ್ನು ನಿಗದಿ ಮಾಡಿ, ಕಲಿಕೆಯನ್ನು ಸಹ ಆರಂಭಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಕಾರ್ಯಕ್ರಮ ಸ್ಥಗಿತಗೊಂಡಿದೆ.

ಇದರಿಂದ ಸರಳವಾಗಿ ಇಂಗ್ಲಿಷ್ ವ್ಯಾಕರಣ, ಸಂವಹನ ಕೌಶಲ ಕಲಿಯುವ ಅವಕಾಶದಿಂದ ಗ್ರಾಮೀಣ ಯುವಕ- ಯುವತಿಯರು ವಂಚಿತರಾಗಿದ್ದಾರೆ.

`ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಬಹುಪಾಲು ಗ್ರಾಮೀಣ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿಯೂ ಬಹುಪಾಲು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನವರು. ಇಂತಹ ವಿದ್ಯಾರ್ಥಿಗಳಿಗೆ ಇಂಗ್ಲಿಷ್ `ಕಬ್ಬಿಣದ ಕಡಲೆ~ಯಂತೆ ಆಗಿರುತ್ತದೆ. ಹೀಗಾಗಿ, ಅವರು ಸ್ಪರ್ಧಾತ್ಮಕ, ಪೈಪೋಟಿಯ, ಸಂವಹನ ಕೌಶಲವೇ ಮೇಲುಗೈ ಆಗಿರುವ ಇಂದಿನ ಜಗತ್ತಿನಲ್ಲಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದರಿಂದ ಸಾವಿರಾರು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.

ಇದನ್ನು ತಪ್ಪಿಸಲು ಹಾಗೂ ಇಂಗ್ಲಿಷ್ ಜ್ಞಾನದ ಮೂಲಕ, ಖಾಸಗಿ ಕ್ಷೇತ್ರಗಳಲ್ಲಿರುವ ವಿಪುಲ ಉದ್ಯೋಗದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದು ಪದವಿ ಕಾಲೇಜುಗಳಲ್ಲಿ `ಆಂಗ್ಲ~ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಂಬಂಧ ಬೋಧನಾ ಸಾಮಗ್ರಿಗಳನ್ನು ಸಹ ಕಳುಹಿಸಲಾಗಿದೆ. ಆದರೆ, ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಅತ್ಯುತ್ತಮ ಯೋಜನೆಯಿದು. ಮೊದಲಿಗೆ, ಪರಿಣತ ಖಾಸಗಿ ಕಂಪೆನಿಯವರು ಆಂಗ್ಲ ಉಪನ್ಯಾಸಕರಿಗೆ ತರಬೇತಿ ನೀಡುತ್ತಾರೆ ಎಂದು ಹೇಳಲಾಗಿತ್ತು. ಇದು ಇನ್ನೂ ಸಾಧ್ಯವಾಗಿಲ್ಲ. ಇದರಿಂದಾಗಿ ಬೋಧನಾ ಸಾಮಗ್ರಿಗಳು ಕಾಲೇಜಿನ ಕಪಾಟಿನಲ್ಲಿ ದೂಳು ತಿನ್ನುತ್ತಿವೆ. ಕೆಲವೆಡೆಯಷ್ಟೇ ಆಸಕ್ತ ಉಪನ್ಯಾಸಕರು ಕಾರ್ಯಕ್ರಮ ಆರಂಭಿಸಿದ್ದಾರೆ. ಬಹುತೇಕ ಕಾಲೇಜುಗಳಲ್ಲಿ ಯೋಜನೆ ಪ್ರಾರಂಭ ಕಂಡಿಲ್ಲ ಎಂದು ಮಾಹಿತಿ ನೀಡಿದರು.

ಪದವಿಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆರಂಭಿಸಿ, 2 ವರ್ಷಗಳ ಕಾಲ `ಆಂಗ್ಲ~ ಕಾರ್ಯಕ್ರಮದಲ್ಲಿ ಸಂವಹನ ಇಂಗ್ಲಿಷ್ ಕಲಿಸಲಾಗುವುದು. ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಇಂಗ್ಲಿಷ್ ಕಲಿಸಲಾಗಿರುತ್ತದೆಯಾದರೂ, ಪದವಿ ಹಂತದಲ್ಲಿ `ಉದ್ಯೋಗ ದೊರಕಿಸಿಕೊಳ್ಳಬಲ್ಲ~ ಇಂಗ್ಲಿಷ್ ಭಾಷಾ ಜ್ಞಾನದ ಅಗತ್ಯವಿರುತ್ತದೆ. ಹೀಗಾಗಿ, ಪದವಿ ನಂತರ ಉದ್ಯೋಗದ ಅವಕಾಶಗಳೇನು. ಸಂವಹನ ಇಂಗ್ಲಿಷ್‌ನ ಮಹತ್ವವೇನು ಎಂಬುದನ್ನು ತಿಳಿಸಿಕೊಡುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಯು ತನ್ನನ್ನು ತಾನು ಪರಿಚಯಿಸಿಕೊಳ್ಳುವುದು ಹೇಗೆ?

ಸಂದರ್ಶನಗಳಿಗೆ ಹೇಗೆ ಹಾಜರಾಗಬೇಕು?. ವ್ಯಕ್ತಿಪರಿಚಯ ಸಿದ್ಧಪಡಿಸುವುದು ಹೇಗೆ? - ಮತ್ತಿತರ ಸಂಗತಿಗಳನ್ನು ಸರಳವಾಗಿ ಹೇಳಿಕೊಡುವ ಬೋಧನಾ ಸಾಮಗ್ರಿಗಳನ್ನು ರೂಪಿಸಲಾಗಿದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಸುತ್ತಮುತ್ತಲ ಸ್ತ್ರೀಶಕ್ತಿ ಸಂಘದ ಸದಸ್ಯರು, ನಿರುದ್ಯೋಗಿ ಯುವಕರಿಗೂ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ತರಬೇತಿ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಯಾಗಿಲ್ಲ ಎಂದು ವಿಷಾದಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT