ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಕೆಲಸವಾಗಲಿ - ಸ್ಥಳೀಯ ಸಂಸ್ಥೆಗಳಿಗೆ ಡಿ.ಸಿ. ಎಚ್ಚರಿಕೆ

Last Updated 12 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಹಾವೇರಿ: ‘ಜನರ ಸಮಸ್ಯೆಗೆ ಸ್ಪಂದಿಸದ ಹಾಗೂ ಸಮರ್ಪಕ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗುವ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಿದ್ದೇನೆ’ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ಸರ್ಕಾರವು ಅಭಿವೃದ್ಧಿ ಕೆಲಸಕ್ಕಾಗಿ ಹಾಗೂ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವುದಕ್ಕಾಗಿಯೇ ಕೋಟ್ಯಂತರ ರೂಪಾಯಿ ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜನತೆಗೆ ಸೌಲಭ್ಯಗಳನ್ನು ಒದಗಿಸುವುದು ಆಯಾ ಚುನಾಯಿತ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ. ಅದನ್ನು ಮಾಡದೇ ಅಭಿವೃದ್ಧಿ ಹೆಸರಿನಲ್ಲಿ ಹಣದ ದುರ್ಬಳಕೆ ಮಾಡಿಕೊಂಡರೆ, ಅಲ್ಲಿನ ಚುನಾಯಿತ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಸಂಸ್ಥೆಗಳು ಆರ್ಥಿಕ ಅಭಿವೃದ್ಧಿಯಲ್ಲಿ ಬೆಳಗಾವಿ ವಿಭಾಗದಲ್ಲಿ ಬರುವ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ರಾಣೆಬೆನ್ನೂರು ನಗರಸಭೆ, ಹಿರೇಕೆರೂರ, ಬ್ಯಾಡಗಿ ಹಾಗೂ ಹಾನಗಲ್ಲ ಪುರಸಭೆಗಳು ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಹಾವೇರಿ ನಗರಸಭೆ, ಶಿಗ್ಗಾಂವ, ಸವಣೂರು ಹಾಗೂ ಬಂಕಾಪುರ ಪುರಸಭೆಗಳ ಕಾರ್ಯ ತೃಪ್ತಿದಾಯಕವಾಗಿಲ್ಲ ಎಂದು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಹಾವೇರಿ ನಗರಸಭೆ ಆಡಳಿತ ವೈಖರಿ ಹಾಗೂ ನಗರದಲ್ಲಿ ಕುಡಿಯುವ ನೀರು, ರಸ್ತೆಗಳ ದುರಸ್ತಿ ಮತ್ತು ಸ್ವಚ್ಛತೆಗೆ ನಗರಸಭೆ ನಿರ್ಲಕ್ಷ್ಯವಹಿಸಿದೆ ಎಂಬುದರ ಬಗ್ಗೆ  ಹಲವಾರು ದೂರುಗಳು ಬಂದಿವೆ. ಬರುವ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ, ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಹಾವೇರಿ ನಗರದಲ್ಲಿನ ಸಮಸ್ಯೆಗಳ ಹಾಗೂ ಅವುಗಳ ಪರಿಹಾರ ಕುರಿತು ಶೀಘ್ರವೇ ನಗರಸಭೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುವುದಾಗಿ ಅವರು ತಿಳಿಸಿದರು.

ಶೀಘ್ರ ಆರಂಭ: ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಈಜುಗೊಳವನ್ನು ಖಾಸಗಿ ಅವರಿಗೆ ಗುತ್ತಿಗೆ ನೀಡಲು ನಿರ್ಧರಿಸಿದ್ದು, ಈಗಾಗಲೇ ಅದರ ಗುತ್ತಿಗೆ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಆದಷ್ಟು ಶೀಘ್ರದಲ್ಲಿ ಈಜುಗೊಳ ಜನರ ಉಪಯೋಗಕ್ಕೆ ದೊರೆಯಲಿದೆ ಎಂದು ತಿಳಿಸಿದರು.

ಅದೇ ರೀತಿ ಒಳಾಂಗಣ ಕ್ರೀಡಾಂಗವನ್ನು ಯುವಜನ ಮತ್ತು ಕ್ರೀಡಾ ಇಲಾಖೆಯೇ ನಿರ್ವಹಣೆ ಮಾಡುತ್ತಿದ್ದು, ಅದನ್ನು ಸಹ ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಕ್ರೀಡಾಂಗಣಗಳನ್ನು ಸಂಘ ಸಂಸ್ಥೆಗಳಿಗೆ ಸಾರ್ವಜನಿಕ ಸಭೆ, ಸಮಾರಂಭ ನಡೆಸದಂತೆ ಸುತ್ತೋಲೆಯೊಂದನ್ನು ಹೊರಡಿಸಲಾಗುವುದು.ಕ್ರೀಡಾಂಗಣಗಳು ಕೇವಲ ಕ್ರೀಡಾಪಟುಗಳಿಗಾಗಿಯೇ ಮೀಸಲಾಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು, ರಾಣೆಬೆನ್ನೂರಿನ ಕ್ರೀಡಾಂಗಣವನ್ನು ಖವ್ವಾಲಿ ಕಾರ್ಯಕ್ರಮವೊಂದಕ್ಕೆ ನೀಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ಶೇ. 10 ರಷ್ಟು ಆಸ್ತಮಾ ಹೆಚ್ಚಳ: ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಒಳಚರಂಡಿ ಕಾಮಗಾರಿ ನೆಪದಲ್ಲಿ ಯಾವುದೇ ರಸ್ತೆಗಳ ದುರಸ್ತಿ ಮಾಡದೇ ಇರುವುದರಿಂದ ರಸ್ತೆಗಳು ದೂಳುಮಯವಾಗಿವೆ. ಇದರಿಂದ ನಗರದಲ್ಲಿ ಆಸ್ತಮಾ ರೋಗಿಗಳ ಸಂಖ್ಯೆ ಶೇ. 10ರಷ್ಟು ಹೆಚ್ಚಾಗಿದೆ ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಎನ್. ಮರೆಕ್ಕನವರ ಸಹ ಒಪ್ಪಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಮಾಳೋದೆ ಮತ್ತಿತರರು ಹಾಜರಿದ್ದರು.

ಲಿಖಿತ ದೂರು ನೀಡಿ...
ನಗರಸಭೆ ಹಾಗೂ ಪುರಸಭೆಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಸಮಸ್ಯೆಗಳು ಉಲ್ಬಣವಾಗಿ ಸಾರ್ವಜನಿಕರಿಗೆ ತೊಂದರೆ ಆಗಿರುವ ಹಾಗೂ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿರುವ ಕುರಿತು ನಗರಸಭೆ ಅಥವಾ ಪುರಸಭೆ ವಿರುದ್ಧ ಲಿಖಿತ ದೂರು ನೀಡುವಂತೆ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಸಾರ್ವಜನಿಕರಿಗೆ ಮನವಿ ಮಾಡಿದರು.

ದಾಖಲೆ ಸಮೇತ ದೂರುಗಳು ಬಂದರೆ, ಯಾವುದೇ ಆಡಳಿತ ಮಂಡಳಿ ಇರಲಿ ಅಥವಾ ಯಾವುದೇ ಅಧಿಕಾರಿ ಇರಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT