ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಪಡಿತರಕ್ಕೆ ಆಗ್ರಹಿಸಿ ಪ್ರತಿಭಟನೆ

ಮಾಯಕೊಂಡ: ಅಕ್ಕಿ ಸುರಿದು ಗ್ರಾಮಸ್ಥರ ಆಕ್ರೋಶ
Last Updated 24 ಜುಲೈ 2013, 5:59 IST
ಅಕ್ಷರ ಗಾತ್ರ

ಮಾಯಕೊಂಡ: ನ್ಯಾಯ ಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಅಕ್ಕಿ ವಿತರಿಸದೆ ಕಳಪೆ ಅಕ್ಕಿ ವಿತರಿಸುತ್ತಾರೆ ಎಂದು ಹೆದ್ನೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಮಂಗಳವಾರ ನ್ಯಾಯ ಬೆಲೆ ಅಂಗಡಿಯ ಮುಂದೆಯೇ ಅಕ್ಕಿ ಸುರಿದು ಪ್ರತಿಭಟಿಸಿದರು.

ಗ್ರಾಮದಲ್ಲಿನ ಪ್ರಭಾವತಿ ದಿವಾಕರ ಎಂಬುವವರ ಮಾಲೀಕತ್ವದ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು 265 ಕಾರ್ಡುದಾರರು ಪಡಿತರ ಪಡೆಯುತ್ತಾರೆ. ಸರ್ಕಾರ ನೀಡುತ್ತಿರುವ ರೂ.1ಕ್ಕೆ ಕೆ.ಜಿ. ಅಕ್ಕಿಯನ್ನು ಪಡೆಯಲು ಇಂದು ನ್ಯಾಯ ಬೆಲೆ ಅಂಗಡಿಗೆ ಬಂದ ಕಾರ್ಡುದಾರರಿಗೆ ಅಕ್ಕಿ ಚೀಲದಲ್ಲಿ ಕಾಗದ, ಪ್ಲಾಸ್ಟಿಕ್, ಸಿಮೆಂಟ್ ಕಲ್ಲಿನ ತುಂಡುಗಳು, ಬ್ಲೇಡು, ಮಣ್ಣಿನ ಹೆಂಟೆ ಇತ್ಯಾದಿಗಳು ಕಂಡು ಬಂದಿದೆ.

ಈಬಗ್ಗೆ  ಅಂಗಡಿಯವರನ್ನು ಪ್ರಶ್ನಿಸಿದ್ದಾರೆ. ಅಂಗಡಿ ಮಾಲಿಕರು ನಾನೇನು ಮಾಡಲು ಆಗುವುದಿಲ್ಲ. ಕೆಲ ಚೀಲಗಳು ಈರೀತಿ ಬಂದಿವೆ, ಗೋಡೋನ್‌ನಿಂದಲೇ ಈರೀತಿ ಮಾಲು ಪೂರೈಕೆಯಾಗಿದೆ ಎಂದು ಉತ್ತರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ನಂತರ ಗ್ರಾಮಸ್ಥರು ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ಗೋಡೋನ್‌ನಿಂದ ಕಳಪೆ ಧಾನ್ಯ ಪೂರೈಕೆ ಮಾಡುವುದಿಲ್ಲ ಎಂದು ಮಾಹಿತಿ ನೀಡಿ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. ಅಷ್ಟರಲ್ಲಿ ಆಕ್ರೋಷಗೊಂಡ ಜನರು ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಯ ಮುಂದೆಯೇ ಸುರಿದು ಪ್ರತಿಭಟನೆ ನಡೆಸಿದರು.

ಅಕ್ಕಿ ಅಲ್ಲಿಂದ ಒಳ್ಳೆಯದೇ ಬರುತ್ತೆ, ಅಂಗಡಿಯವರೇ ಕಲಬೆರಕೆ ಮಾಡುತ್ತಾರೆ, 4-5 ದಿನ ಮಾತ್ರ ವಿತರಿಸಿ ಅಂಗಡಿ ಬಾಗಿಲು ಹಾಕಿಕೊಳ್ಳುತ್ತಾರೆ. ಉಪ್ಪು, ಸೋಪು ಬಂದಿದ್ದರೂ ಸರಿಯಾಗಿ ಕೊಡುವುದಿಲ್ಲ ಎಂದು ಗ್ರಾಮದ ಕಿರಣ್ ಕುಮರ್,  ಲಿಂಗರಾಜು, ಪಿ.ಸುಭಾಷ್ ಆರೋಪಿಸಿದರು.

ಆಹಾರ ನಿಗಮದ ಅಧಿಕಾರಿಗಳು ಬಂದು ಇತ್ಯರ್ಥ ಪಡಿಸುವವರೆಗೆ ಯಾರೂ ಪಡಿತರ ತೆಗೆದುಕೊಳ್ಳುವುದು ಬೇಡ ಎಂದು ಗ್ರಾಮಸ್ಥರು ಮನೆಗೆ ತೆರಳಿದರು.

ನೀವೇ ಚೀಲ ಸುರಿದು ನೋಡಿ ಎಲ್ಲಾ ಚೀಲ ಒಂದೇ ರೀತಿ ಇಲ್ಲ ಎಂದು ಅಂಗಡಿಯ ದಿವಾಕರ್ ತೋರಿಸಿದರೂ ಗ್ರಾಮಸ್ಥರು ಒಪ್ಪಲಿಲ್ಲ. ಪೊಲೀಸರು ಸ್ಥಳಕ್ಕೆ ಬಂದು, ಅಧಿಕಾರಿಗಳು ಬರುವವರೆಗೆ ಪಡಿತರ ವಿತರಿಸದಂತೆ ತಿಳಿಸಿದರು. ಮಂಜಾನಾಯ್ಕ, ಶಿವು, ಆನಂದ, ಸಂತೋಷ, ಕೃಷ್ಣಮೂರ್ತಿ, ಕಾಳ್ಯನಾಯ್ಕ, ಸುರೇಶ ನಾಯ್ಕ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT