ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕವಾಗಿ ಅನುಷ್ಠಾನವಾಗದ ಯೋಜನೆ

ನರೇಗಾ ಯೋಜನೆ ಅನುಷ್ಠಾನ ರಾಜ್ಯಮಟ್ಟದ ಸಮಾವೇಶ
Last Updated 16 ಡಿಸೆಂಬರ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ (ನರೇಗಾ)ವು ಸಮರ್ಪಕವಾಗಿ ಆಗು­ತ್ತಿಲ್ಲ. ಕೂಲಿಕಾರರನ್ನು ವಂಚಿಸಲಾ­ಗು­ತ್ತಿದೆ ಎಂಬ ದೂರುಗಳು ರಾಜ್ಯಮಟ್ಟದ ಸಮಾವೇಶದಲ್ಲಿ ಕೇಳಿಬಂದವು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ (ನರೇಗಾ)’ ಕುರಿತು ಕಾಯಕ ಗುಂಪುಗಳ ಮತ್ತು ಕಾಯಕ ಬಂಧುಗಳ ರಾಜ್ಯ­ಮಟ್ಟದ ಸಮಾವೇಶ­ದಲ್ಲಿ ರಾಜ್ಯದೆಲ್ಲೆಡೆ­ಯಿಂದ ಬಂದಿದ್ದ ಕೂಲಿ­ಕಾರರು ಸಮಸ್ಯೆಗಳನ್ನು ಹೇಳಿಕೊಂಡರು.

‘ಕೂಲಿ ಕೆಲಸ ಮಾಡಿದರೂ ಸರಿ­ಯಾಗಿ ನಮಗೆ ಕೂಲಿಯ ಹಣವನ್ನೇ ನೀಡುವುದಿಲ್ಲ. ನಮಗೆ ಕೇವಲ 60 ದಿನ­ಗಳು ಮಾತ್ರ ಕೆಲಸವನ್ನು ನೀಡುತ್ತಾರೆ. ರೂ 100 ಮಾತ್ರ ಕೂಲಿ ನೀಡಿ ನಮ್ಮನ್ನು ವಂಚಿಸಲಾಗುತ್ತಿದೆ’ ಎಂದು ಜೇವರ್ಗಿ­ಯಿಂದ ಬಂದಿದ್ದ ಕೂಲಿಕಾರ ಪೀರಪ್ಪ ಅವರು ದೂರಿದರು.

‘ನಾವು ಮಾಡಿದ ಕೆಲಸದ ಅಳತೆಯ ವಿಷಯದಲ್ಲಿ ತಕರಾರು ತೆಗೆಯುತ್ತಾರೆ. ಕೆಲಸ ಮಾಡಿ ಕಾಯುತ್ತಿರಬೇಕು. ಅವರು ಇಷ್ಟ ಬಂದಾಗ ಬಂದು ಅಳತೆ ಮಾಡುತ್ತಾರೆ. ಅಲ್ಲಿಯವರಗೂ ನಮಗೆ ಕೂಲಿಯ ಹಣವೇ ಇಲ್ಲ’ ಎಂಬುದು ಗುಲ್ಬರ್ಗದ ಕೂಲಿಕಾರ ತಿಮ್ಮಣ್ಣ ಅವರ ದೂರು.

‘ಉಡುಪಿಯಿಂದ 8 ಕಿ.ಮೀ. ಸಂಚರಿಸಿ ಕೂಲಿ ಮಾಡುತ್ತಿದ್ದೇವೆ. ಪ್ರಯಾಣ ಭತ್ಯೆ ನೀಡುವಂತೆ ಕಾಯ್ದೆಯಲ್ಲಿದ್ದರೂ, ಅಧಿ­ಕಾರಿ­ಗಳು ಪ್ರಯಾಣ ಭತ್ಯೆ ಎಂಬುದು ಕಾಯ್ದೆಯಲ್ಲಿಯೇ ಇಲ್ಲ ಎಂದು ಸುಳ್ಳು ಹೇಳಿ ವಂಚಿಸುತ್ತಾರೆ’ ಎಂದು ಉಡುಪಿ­ಯಿಂದ ಬಂದಿದ್ದ ಕೂಲಿಕಾರ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹಿರಿಯ ಉಪಾಧ್ಯಕ್ಷ ಜಿ.ಎನ್‌.­ನಾಗರಾಜ್‌ ಮಾತ­ನಾಡಿ, ‘ಸರ್ಕಾರವು ಜಾರಿಗೆ ತಂದಿರುವ ನರೇಗಾ ಯೋಜನೆ­ಯು ಅನುಷ್ಠಾನದಲ್ಲಿ ವಿಫಲವಾಗಿದೆ. ಯೋಜನೆಯು ಜಾರಿಯಾದ ಆರಂಭದ 2 ವರ್ಷಗಳಲ್ಲಿ ಸುಗಮವಾಗಿ ನಡೆ­ದಿತ್ತು. ಆದರೆ, ಇತ್ತೀಚೆಗೆ ದುರುಪ­ಯೋಗ­-­ವಾಗುತ್ತಿದೆ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ’ ಎಂದರು.

‘ಕೂಲಿಕಾರರಿಗೆ ಕೆಲಸವನ್ನು ನೀಡದೆ, ಯಂತ್ರ­ಗಳಿಂದ ಕೆಲಸವನ್ನು ಮಾಡಿಸಿ, ಕೂಲಿಕಾರರಿಗೆ ದೊರೆಯಬೇಕಾದ ಕೂಲಿ ಹಣವನ್ನು, ಅವರ ಉದ್ಯೋಗವನ್ನು ದುರು­ಪಯೋಗ ಮಾಡಿಕೊಳ್ಳ­ಲಾಗು­ತ್ತಿದೆ’ ಎಂದು ಹೇಳಿದರು.

‘ಅಂಗವಿಕಲರಿಗೂ ಗ್ರಾಮೀಣ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ನೀಡಬೇಕು. ಇಲಾಖೆ ಸ್ಥಾಪಿಸಿರುವ ಸಹಾಯವಾಣಿ­ಯಿಂದ ಯಾವುದೇ ಪ್ರಯೋಜನವಿಲ್ಲ. ಸಹಾಯವಾಣಿ­ಯಲ್ಲಿ ಕೂಲಿಕಾರರ ಸಮಸ್ಯೆಗಳನ್ನು ಆಲಿಸಿ, ಅದನ್ನು ದಾಖಲೆ ಮಾಡಿಕೊಳ್ಳುವ ಕ್ರಮವನ್ನು ಜಾರಿಗೆ ತರಬೇಕು. ಕನಿಷ್ಠ ಕೂಲಿಯನ್ನು ರೂ 200 ಕ್ಕೆ ಹೆಚ್ಚಿಸಬೇಕು’ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­ಯತ್‌ ಇಲಾಖೆ ಪ್ರಧಾನ ಕಾರ್ಯ­ದರ್ಶಿ ಟಿ.ಎಂ.­ವಿಜಯಭಾಸ್ಕರ್‌ ಮಾತನಾಡಿ, ‘ನರೇಗಾ ಯೋಜನೆ ಜಾರಿಯಾದಾಗಿ­ನಿಂದ ಕೂಲಿಕಾರರ ಜೀವನ­­ಮಟ್ಟ ಸುಧಾ­ರಿಸಿದೆ ಎಂಬುದು ಅಧ್ಯಯನ­ದಿಂದ ತಿಳಿದುಬಂದಿದೆ. ಆದರೆ, ಜಾರಿ ತರುವಲ್ಲಿ ಕೆಲವು ಲೋಪ­ದೋಷಗಳಿವೆ. ಅವುಗಳ­ನ್ನು ಶೀಘ್ರವಾಗಿ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ಈ ವರ್ಷದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಯೋಜನೆಯಲ್ಲಿ 2.20 ಲಕ್ಷ ಜನರು ಕೆಲಸಗಿಟ್ಟಿಸಿದ್ದಾರೆ. ಒಟ್ಟು ರೂ 13 ಕೋಟಿಯಷ್ಟು ಹಣ ಖರ್ಚಾಗಿದೆ. 50 ಲಕ್ಷ ಕೂಲಿಕಾರರಿಗೆ ಉದ್ಯೋಗ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಕಾಯಕ ಗುಂಪು­ಗಳನ್ನು ರಚಿಸಿ, ಕಾಯಕ ಬಂಧುಗಳನ್ನು ನೇಮಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT