ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹರಿಸಿ, ಇಲ್ಲವೇ ಮಣ್ಣು ಮಾಡಿ..!

ಕರೂರಿನಲ್ಲಿರುವ ಕೆಐಎಡಿಬಿ ಕಚೇರಿಗೆ ರೈತರ ಮುತ್ತಿಗೆ, ಇಬ್ಬರು ರೈತರಿಂದ ಆತ್ಮಹತ್ಯೆ ಯತ್ನ
Last Updated 11 ಡಿಸೆಂಬರ್ 2013, 8:50 IST
ಅಕ್ಷರ ಗಾತ್ರ

ದಾವಣಗೆರೆ:  ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಜಮೀನು ನೀಡಿದ ರೈತರು, ಭೂಸ್ವಾಧೀನದ ವೇಳೆ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಸದೇ ಇರುವ ಕ್ರಮ ಖಂಡಿಸಿ ಮಂಗಳವಾರ ಇಲ್ಲಿನ ಕರೂರಿನಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಕಚೇರಿಗೆ ದಿಢೀರ್‌ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಕರೂರು ಕೈಗಾರಿಕಾ ಪ್ರದೇಶದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಅನಿರ್ದಿಷ್ಟ ಅವಧಿಯ ಧರಣಿ ಕೈಗೊಂಡಿದ್ದಾರೆ. ಸಭೆ ನಡೆಸಿ ಸಮಸ್ಯೆ ಆಲಿಸುವಂತೆ ನೂತನ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ಕುಮಾರ್‌ ಅವರನ್ನು ಕೋರಿದ್ದರು. ಅದರಂತೆ, ಮಂಗಳವಾರ ಮಧ್ಯಾಹ್ನ 3ಕ್ಕೆ ರೈತ ಮುಖಂಡರ ಜತೆ ಜಿಲ್ಲಾಧಿಕಾರಿ ಸಭೆ ನಿಗದಿಯಾಗಿತ್ತು.

ಆದರೆ, 3ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿರಲಿಲ್ಲ. ಅಲ್ಲದೇ, ರೈತರು ಒಳ ಹೋಗಲು ಪೊಲೀಸರು ಬಿಡಲಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ‘ಜಿಲ್ಲಾಧಿಕಾರಿಗೆ ರೈತರ ಸಮಸ್ಯೆಗಿಂತ ಬೇರೆಯದು ಮುಖ್ಯವೇ’ ಎಂದು ಆಕ್ರೋಶ ವ್ಯಕ್ತಪಡಿಸಿ, ಕೆಲಕಾಲ ಗೇಟ್‌ನಲ್ಲಿಯೇ ಕುಳಿತರು.

ನಂತರ, ಅಲ್ಲಿಗೆ ಸಮೀಪದಲ್ಲಿಯೇ ಇರುವ ಕೆಐಎಡಿಬಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಕಚೇರಿ ಪ್ರವೇಶಿಸಲು ಮುಂದಾದ ಅವರನ್ನು ಪೊಲೀಸರು ತಡೆದರು. ಗೇಟ್‌ನಲ್ಲಿಯೇ ಕುಳಿತ, ರೈತರು ಹಾಗೂ ಮಹಿಳೆಯರು ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

‘ಕೆಐಎಡಿಬಿ ಅಧಿಕಾರಿಗಳು, ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೆಐಎಡಿಬಿ ಶ್ರೀಮಂತರ ಅಭಿವೃದ್ಧಿ ಮಾಡುತ್ತಿದೆಯೇ ಹೊರತು ಬಡವರಿಗೆ ಸ್ಪಂದಿಸುತ್ತಿಲ್ಲ’ ಎಂದು ಕಿಡಿಕಾರಿದರು.

ಈ ನಡುವೆ, ವ್ಯಕ್ತಿಯೊಬ್ಬ ವಿಷದ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡಿದ್ದರಿಂದ ಆತಂಕದ ಸ್ಥಿತಿ ಉಂಟಾಗಿತ್ತು. ಆತನಿಂದ ಪೊಲೀಸರು, ಬಾಟಲಿ ಕಿತ್ತುಕೊಂಡಿದ್ದರಿಂದ ಅನಾಹುತ ತಪ್ಪಿತು. ರೈತರು ಹಾಗೂ ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸಿಪಿಐ ರೇವಣ್ಣ ಮೊದಲಾದವರು ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.

‘ಕೆಐಎಡಿಬಿ ಅಧಿಕಾರಿಗಳು ಕಚೇರಿಯಲ್ಲಿ ತಣ್ಣಗೆ ಕುಳಿತಿರಲಿ. ನಾವು ನಮ್ಮ ಮಣ್ಣಿನಲ್ಲಿಯೇ ಮಣ್ಣಾಗುತ್ತೇವೆ. ಪೊಲೀಸರು ನಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬಾರದು. ಇಲ್ಲವಾದಲ್ಲಿ ಅಧಿಕಾರಿಗಳೇ ವಿಷ ನೀಡಲಿ’ ಎಂದು ನೋವಿನಿಂದ ನುಡಿದರು.

‘ಕೆಐಎಡಿಬಿ ಅಧಿಕಾರಿಯ ಪತ್ನಿ ಚಿನ್ನದ ಸರ ಕಳೆದುಕೊಂಡಿದ್ದರೆ ಅವರು ಸುಮ್ಮನಿರುತ್ತಿದ್ದರೇ? ನಾವು ಜಮೀನು ಕಳೆದುಕೊಂಡು ಪರಿಹಾರವಿಲ್ಲದೇ ಕುಳಿತಿದ್ದೇವೆ. ನಾವು ಪ್ರತಿಭಟಿಸಬಾರದೇ? ಮಂತ್ರಿ, ಮುಖ್ಯಮಂತ್ರಿ ಭೇಟಿಯಾದರೂ, ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ’ ಎಂದು ಜಮೀನು ಕಳೆದುಕೊಂಡ ಬಸಮ್ಮ ಎಚ್ಚರಿಕೆ ನೀಡಿದರು.

ಈ ನಡುವೆ, ಕೆಐಎಡಿಬಿಗೆ ಜಮೀನು ನೀಡಿದ ಮುಗ್ದಂ ಎಂಬುವರು ಗೇಟು ಪ್ರವೇಶಿಸಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾದರು. ಇದನ್ನು ಪೊಲೀಸರು ತಡೆದರು. ‘ಅಧಿಕಾರಿಗಳ ಬೇಜವಾಬ್ದಾರಿಯನ್ನು ಎಷ್ಟೆಂದು ಸಹಿಸಿಕೊಳ್ಳುವುದು’ ಎಂಬುದು ಮುಗ್ದಂ ಪ್ರಶ್ನೆಯಾಗಿತ್ತು.

ನಂತರ, ಸಂಜೆ 5ಕ್ಕೆ ಸಭೆ ನಿಗದಿಯಾಗಿದೆ. ಜಿಲ್ಲಾಧಿಕಾರಿ ಬರುತ್ತಾರೆ ಎಂದು ಪೊಲೀಸರು ತಿಳಿಸಿದರು. ಇದರಿಂದ ರೈತರು ಜಿಲ್ಲಾಡಳಿತ ಭವನದ ಎದುರು ತೆರಳಿ ಪ್ರತಿಭಟನೆ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT