ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಬಿಚ್ಟಿಟ್ಟ ವಿದ್ಯಾರ್ಥಿಗಳು

ಮಕ್ಕಳ ವಿಶೇಷ ಗ್ರಾಮ ಸಭೆ: ಅಧಿಕಾರಗಳ ಹಾಜರಿ
Last Updated 22 ಡಿಸೆಂಬರ್ 2012, 6:39 IST
ಅಕ್ಷರ ಗಾತ್ರ

ಚಾಮರಾಜನಗರ: `ಕಳೆದ ಏಪ್ರಿಲ್ ತಿಂಗಳಲ್ಲಿ ಕೊಳವೆಬಾವಿ ಕೆಟ್ಟುಹೋಯಿತು. ಇಂದಿಗೂ ದುರಸ್ತಿ ಮಾಡಿಸಿಲ್ಲ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಸೂಕ್ತ ಶೌಚಾಲಯ ಕೂಡ ನಿರ್ಮಿಸಿಲ್ಲ...'

-ಹೀಗೆಂದು ವಿದ್ಯಾರ್ಥಿನಿ ಶಾಂತಲಾ ಮಂಡಿಸಿದ ಸಮಸ್ಯೆಗಳಿಗೆ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳ ಬಳಿಯಲ್ಲಿ ಉತ್ತರ ಇರಲಿಲ್ಲ. ಅಧಿಕಾರಶಾಹಿಯ ನಿರ್ಲಕ್ಷ್ಯವನ್ನು ವಿದ್ಯಾರ್ಥಿನಿ ಬಯಲುಗೊಳಿಸಿದ್ದು, ವಿಶೇಷ.

ತಾಲ್ಲೂಕಿನ ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ ಮತ್ತು ಮೊಬಿಲಿಟಿ ಇಂಡಿಯಾ ಸಂಸ್ಥೆಯಿಂದ ಈಚೆಗೆ ನಡೆದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಅಧಿಕಾರಶಾಹಿ ಮತ್ತು ಜನಪ್ರತಿನಿಧಿ ಗಳ ಮುಂದೆ ಸಮಸ್ಯೆ ಬಿಡಿಸಿಟ್ಟರು.

ಅಂಗವಿಕಲ ವಿದ್ಯಾರ್ಥಿನಿ ಶಿವರುದ್ರಮ್ಮ ಮುಂದಿಟ್ಟ ಪ್ರಶ್ನೆ ಮನಕಲಕಿತು. `ನಾನು ದೈಹಿಕ ಅಂಗ ವಿಕಲತೆ ಹೊಂದಿದ್ದೇನೆ. ಟ್ರೈಸೈಕಲ್ ನೀಡಬೇಕು. ಶಾಲೆಯಲ್ಲಿ  ಇಳಿಜಾರು ವ್ಯವಸ್ಥೆ ಮಾಡಬೇಕು' ಎಂದಳು.

ವಿದ್ಯಾರ್ಥಿಗಳಾದ ಎಂ. ಅಭಿಷೇಕ್, ಮಂಜು ಸೇರಿದಂತೆ ಹಲವು ವಿದ್ಯಾರ್ಥಿಗಳು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆ ಸಮಸ್ಯೆ ಮಂಡಿಸಿ ಗಮನ ಸೆಳೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರ್ ಮಾತನಾಡಿ, `ಮಕ್ಕಳು ಮಂಡಿಸಿರುವ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿ ಇದುವರೆಗೆ 850 ಶೌಚಾಲಯ ನಿರ್ಮಿಸಿರುವ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ನಾನು ಭೇಟಿ ನೀಡಿದ ಯಾವುದೇ ಶಾಲೆಯಲ್ಲಿ ಶೌಚಾಲಯದ ನಿರ್ವಹಣೆ ಮತ್ತು ಬಳಕೆ ಸಮರ್ಪಕವಾಗಿಲ್ಲ. ಶಿಕ್ಷಕರು ಮತ್ತು ಸ್ಥಳೀಯ ಸರ್ಕಾರದ ಜನಪ್ರತಿನಿಧಿಗಳು ಶೌಚಾಲಯ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್. ಬಸವಣ್ಣ ಮಾತನಾಡಿ, `ಅಂಗ ವಿಕಲ ವಿದ್ಯಾರ್ಥಿನಿ ಶಿವರುದ್ರಮ್ಮಳ ಸಮಸ್ಯೆ ಪರಿಹರಿಸಲು 10 ಸಾವಿರ ರೂ ಧನಸಹಾಯ ನೀಡಲಾಗುವುದು' ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಎಸ್. ನಿತ್ಯಾ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಯಲು ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಇಲಾಖೆ ಶ್ರಮವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ನೀಡಲಾಗಿದೆ. ಶಾಲಾ ಕಾಂಪೌಂಡ್ ನಿರ್ಮಾಣ ಹಾಗೂ ಆಟದ ಮೈದಾನ ಸಮತಟ್ಟು ಮಾಡಲು ಬಳಸಿ ಕೊಳ್ಳಬಹುದು ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮದ್ದಾನಸ್ವಾಮಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ, ವೈದ್ಯಾಧಿಕಾರಿ ಚಂದ್ರಕಲಾ, ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಎನ್.  ಆನಂದ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಶಶಿಕಲಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಎಂ. ಶಾಂತಿ, ಮುಖ್ಯಶಿಕ್ಷಕ ಮಹೇಶ್,  ಎಚ್. ಜಯರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT