ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಲಿಕೆ; ಸಚಿವರ ಅಸಮಾಧಾನ

Last Updated 9 ಜುಲೈ 2013, 10:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಣ್ಣೆತ್ತಿನ ಅಮಾವಾಸ್ಯೆಯ ದಿನವಾದ ಸೋಮವಾರ ಬಹುತೇಕ ಬಡವರು, ಕೂಲಿ ಕಾರ್ಮಿಕರು ವಾಸವಾಗಿರುವ ಹುಬ್ಬಳ್ಳಿಯ ಲಿಡ್ಕರ್ ಕಾಲೊನಿ ಹಾಗೂ ಹನುಮಂತ ನಗರದಲ್ಲಿ ದಿಢೀರ್ ಸಂಚಲನೆಗೆ ಕಾರಣವಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮುಂಜಾನೆಯೇ ಲಿಡ್ಕರ್ ಕಾಲೊನಿ ಹಾಗೂ ಹನುಮಂತ ನಗರಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ ನಿವಾಸಿಗಳ ಹಬ್ಬದ ಸಂಭ್ರಮ ಹೆಚ್ಚಿಸಿದರು.

ಲಿಡ್ಕರ್ ಕಾಲೊನಿಗೆ ಭೇಟಿ: ಮೊದಲು ಇಲ್ಲಿನ ರವಿ ನಗರದ ಪಕ್ಕದಲ್ಲಿರುವ ಲಿಡ್ಕರ್ ಕಾಲೊನಿಗೆ ಭೇಟಿ ನೀಡಿದ ಲಾಡ್, ಅಲ್ಲಿನ ನಿವಾಸಿಗಳ ಅಳಲು ಆಲಿಸಿದರು. ಬಹುತೇಕ ಸಮಗಾರ ಕುಶಲ ಕರ್ಮಿಗಳು ವಾಸವಾಗಿರುವ ಈ ಪ್ರದೇಶದಲ್ಲಿ ರಸ್ತೆ, ಚರಂಡಿ, ಹಾಳು ಬಿದ್ದ ಲಿಡ್ಕರ್ ಕಾರ್ಯಾಗಾರದ ಕಟ್ಟಡವನ್ನು ವೀಕ್ಷಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಕ್ಕುಪತ್ರ ಗೋಜಲು: 1983ರಲ್ಲಿ ರೂಪುಗೊಂಡಿರುವ ಲಿಡ್ಕರ್ ಕಾಲೊನಿಯ ನಿವಾಸಿಗಳಿಗೆ ಇಲ್ಲಿಯವರೆಗೂ ಹಕ್ಕುಪತ್ರ ನೀಡಿದಿರುವ ಬಗ್ಗೆ ನಿವಾಸಿಗಳಿಂದ ಮಾಹಿತಿ ಪಡೆದ ಸಚಿವರು ಸ್ಥಳದಲ್ಲಿದ್ದ ಲಿಡಕರ್ ಸಂಸ್ಥೆ ಅಧಿಕಾರಿ ಪಂಚಾಗಮಠ ಅವರಿಂದ ವಿವರಣೆ ಪಡೆದರು.

ಮನೆಗಳ ನಿರ್ಮಾಣಕ್ಕೆ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ (ಕೆಎಸ್‌ಐಡಿಸಿ) ಪ್ರತಿ ಮನೆಗೆ ಪಡೆದಿದ್ದ ರೂ.3 ಲಕ್ಷ ಸಾಲವನ್ನು 2011ರಲ್ಲಿ ಲಿಡ್ಕರ್ ಸಂಸ್ಥೆಯಿಂದ ವಾಪಸ್ ಮಾಡಲಾಗಿದೆ. ಆದರೆ ಬಡ್ಡಿ ಹಣ ತುಂಬುವಂತೆ ಹೇಳಿ ಕೆಎಸ್‌ಐಡಿಸಿ ಹಕ್ಕುಪತ್ರ ನೀಡುತ್ತಿಲ್ಲ ಎಂದು ಪಂಚಾಂಗಮಠ ಸಚಿವರಿಗೆ ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ: ಸ್ಥಳದಲ್ಲಿಯೇ ಕೆಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಅವರಿಗೆ ಕರೆ ಮಾಡಿದ ಸಂತೋಷ್ ಲಾಡ್, ಅಸಲು ಕಟ್ಟಿರುವುದರಿಂದ ಬಡ್ಡಿಯನ್ನು ಮನ್ನಾ ಮಾಡಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಸೂಚನೆ ನೀಡಿ, ಆ ಬಗ್ಗೆ ಬೆಂಗಳೂರಿಗೆ ಬಂದು ನಿಮ್ಮ ಇಲಾಖೆಯ ಸಚಿವರೊಟ್ಟಿಗೆ ಮಾತನಾಡುವುದಾಗಿ ತಿಳಿಸಿದರು.

ರಸ್ತೆ ದುರಸ್ತಿಗೆ ಸೂಚನೆ: ಲಿಡ್ಕರ್ ಕಾಲೊನಿಯ ರಸ್ತೆಗಳನ್ನು ದುರಸ್ತಿ ಮಾಡಲು ಹಾಗೂ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿರುವ ತೆರೆದ ಚರಂಡಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಅವರಿಗೆ ಸೂಚನೆ ನೀಡಿದರು.

ಅಂಗನವಾಡಿ ಅವ್ಯವಸ್ಥೆ: ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರ ಪಂಪ್‌ಹೌಸ್‌ನ ಹಾಳುಬಿದ್ದ ಕಟ್ಟದಲ್ಲಿ  ನಡೆಯುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಂಗನವಾಡಿ ಶಿಕ್ಷಕಿ ರತ್ನಾ ಅವರಿಂದ ಅಲ್ಲಿನ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು. ಮಳೆಗಾಲದಲ್ಲಿ ಕಟ್ಟಡ ಸೋರುವುದು. ಮಕ್ಕಳು ನೀರು ನಿಂತ ನೆಲದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಶಿಕ್ಷಕಿ ಅಳಲು ತೋಡಿಕೊಂಡರು.

ಹೊಸದಾಗಿ ಅಂಗನವಾಡಿ ಕಟ್ಟಡ ಕಟ್ಟಲು ಲಿಡ್ಕರ್ ಕಾಲೊನಿಯಲ್ಲಿರುವ ಜಾಗ ನೀಡಲು ಸ್ಥಳೀಯರು ಒಪ್ಪಿಗೆ ನೀಡಿದ ಕಾರಣ ಪಾಲಿಕೆ ಜಂಟಿ ಆಯುಕ್ತರಿಗೆ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಲಾಡ್ ಸೂಚನೆ ನೀಡಿದರು. ಅವಳಿ ನಗರದಲ್ಲಿ ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಅಲ್ಲಿ ಆದ್ಯತೆಯ ಮೇರೆಗೆ ಕಟ್ಟಡಗಳನ್ನು ನಿರ್ಮಿಸುವಂತೆ ಹಾಗೂ ಜಾಗ ಪಡೆಯಲು ಇರುವ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.

ಹನುಮಂತ ನಗರಕ್ಕೆ ಭೇಟಿ: ಲಿಡ್ಕರ್ ಕಾಲೊನಿ ಭೇಟಿಯ ನಂತರ ಕಾಳಿದಾಸ ನಗರದ ಪಕ್ಕದಲ್ಲಿ ಇರುವ ಹನುಮಂತ ನಗರಕ್ಕೆ ಸಚಿವರು ತೆರಳಿ ಅಲ್ಲಿನ ನಿವಾಸಿಗಳೊಟ್ಟಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಕುಡಿಯುವ ನೀರಿಗೆ ಹಾಹಾಕಾರ: ಜಲಮಂಡಳಿ ಕಚೇರಿಯ ಹಿಂಭಾಗದಲ್ಲಿಯೇ ಇದ್ದರೂ ಹನುಮಂತ ನಗರದಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸದರಿರುವುದು. ಮಲಪ್ರಭಾ ಪೈಪ್‌ಲೈನ್ ಅವಕಾಶ ಇಲ್ಲದ ಕಾರಣ ನಿವಾಸಿಗಳು ಬಾವಿಯ ನೀರನ್ನು ಕುಡಿಯುತ್ತಿರುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ತೆರೆದ ಬಾವಿಗಳ ಸ್ಥಿತಿಯನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ ಸಂತೋಷ್‌ಲಾಡ್, ಬಾಟಲಿಯಲ್ಲಿ ನೀರು ಸಂಗ್ರಹಿಸಿ ಅದನ್ನು ಪರೀಕ್ಷೆಗೆ ಕಳುಹಿಸಿದರು. ಹನುಮಂತ ನಗರದ ನಿವಾಸಿಗಳ ಬೇಡಿಕೆಯಷ್ಟು ನೀರನ್ನು ಟ್ಯಾಂಕರ್ ಮೂಲಕ ಪೂರೈಸುವಂತೆ ಪಾಲಿಕೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ ಲಾಡ್, ಆ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವಂತೆ ತಿಳಿಸಿದರು.

ಹನುಮಂತ ನಗರಕ್ಕೆ ಪಾಲಿಕೆಗೆ ಮುಖ್ಯಮಂತ್ರಿ ಅನುದಾನದಿಂದ ಬಂದ 100 ಕೋಟಿ ಹಣದಲ್ಲಿ ಯಾವುದೇ ಸವಲತ್ತು ಕಲ್ಪಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಈ ಜನರಿಗೆ ಮೊದಲು ಸವಲತ್ತು ಕಲ್ಪಿಸಿ. ಕೂಡಲೇ ಇಲ್ಲಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ವೀರೇಂದ್ರ ಕುಂದಗೋಳ ಅವರಿಗೆ ಸೂಚಿಸಿದರು. ಹನುಮಂತ ನಗರದಲ್ಲಿ ಸಿಎ ನಿವೇಶನ ಗುರುತಿಸಿ ನಿವಾಸಿಗಳ ಬೇಡಿಕೆಯಂತೆ ಶಾಲೆ ಹಾಗೂ ಅಂಗನವಾಡಿ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

  ಲಿಡ್ಕರ್ ಕಾಲೊನಿಯಲ್ಲಿ ಡಾ.ಬಾಬು ಜಗಜೀವನರಾಮ ಸೇವಾ ಸಂಘ ಹಾಗೂ ಬಾಬು ಜಗಜೀವನರಾಮ ಪಾದ ಶಿಲ್ಪಿಗಳ ಸಂಘದ ಮುಖಂಡರು ಸಚಿವರಿಗೆ ಮನವಿ ಪತ್ರ ಅರ್ಪಿಸಿ, ಹೂವಿನ ಹಾರ ಹಾಕಿ, ಜಯಘೋಷಣೆ ಮಾಡಿ ಸ್ವಾಗತಿಸಿದರು. ನಂತರ ಧಾರವಾಡದ ಉದಯಗಿರಿಗೆ ಭೇಟಿ ನೀಡಲು ಲಾಡ್ ತೆರಳಿದರು. ಸಚಿವರೊಟ್ಟಿಗೆ ಕಾಂಗ್ರೆಸ್ ಮುಖಂಡ ಡಾ.ಮಹೇಶ ನಾಲವಾಡ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT