ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ `ಎನ್.ಆರ್.ವೃತ್ತ'

Last Updated 17 ಡಿಸೆಂಬರ್ 2012, 6:08 IST
ಅಕ್ಷರ ಗಾತ್ರ

ಹಾಸನ: ಕ್ಷಮಿಸಿ, ಇನ್ನೊಮ್ಮೆ ಎನ್.ಆರ್. ವೃತ್ತದ ಬಗ್ಗೆ ಬರೆಯಬೇಕಾದ ಅನಿವಾರ್ಯತೆ ಬಂದಿದೆ. ಹೊಸ ಬಸ್ ನಿಲ್ದಾಣ ಕಾರ್ಯಾರಂಭವಾದ ಬಳಿಕ ಈ ವೃತ್ತ ಸಮಸ್ಯೆಗಳ ಅಕ್ಷಯಪಾತ್ರೆಯಂತಾಗಿದೆ. ಸಂಚಾರ ದಟ್ಟಣೆಯ ಜತೆಗೆ ಇನ್ನೂ ಹತ್ತಾರು ಸಮಸ್ಯೆಗಳು ಈ ವೃತ್ತವನ್ನು ಸುತ್ತಿಕೊಂಡಿವೆ.

ಮೊದಲು ಸಂಚಾರ ದಟ್ಟಣೆ ಎಂಬ ಒಂದೇ ಸಮಸ್ಯೆ ಇತ್ತು. ಕಳೆದ ಕೆಲವು ದಿನಗಳಿಂದ ಎನ್.ಆರ್.ವೃತ್ತ ಯುದ್ಧ ಭೂಮಿಯಂತಾಗಿದೆ. ವೃತ್ತದಲ್ಲಿ ನಿಂತು ಸುತ್ತ ಕಣ್ಣು ಹಾಯಿಸಿದರೆ ಯಾರಿಗಾದರೂ ಈ ಭಾವನೆ ಬಂದೇ ಬರುತ್ತದೆ.

ಅರೆಬರೆ ರಸ್ತೆ ಕಾಮಗಾರಿಯಿಂದಾಗಿ ಒಂದು ಭಾಗದಲ್ಲಿ ನಿರ್ಮಾಣವಾಗಿರುವ ಗುಂಡಿಗಳು ಸದಾಕಾಲ ದೂಳು ಎಬ್ಬಿಸುತ್ತಲೇ ಇರುತ್ತವೆ. ಇನ್ನೊಂದು ಬದಿಯಲ್ಲಿ ನೀತಿ ನಿಯಮಗಳಿಲ್ಲದೆ ಆಟೊ, ದ್ವಿಚಕ್ರವಾಹನ, ಕಾರುಗಳು ನಿಂತಿರುತ್ತವೆ. `ನಿಲುಗಡೆ ಅಲ್ಲ' ಎಂದು ಹಾಕಿರುವ ಫಲಕದ ಮುಂದೆ ಸಾಲುಸಾಲಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳು  ನಿಂತಿರುತ್ತವೆ. ಅಲ್ಲೇ ನೂರಾರು ಜನರು ಬಸ್ಸಿಗಾಗಿ ಕಾಯುತ್ತಿರುತ್ತಾರೆ.

ಇವುಗಳಲ್ಲಿ ಹೆಚ್ಚಿನವು ಹಳೆಯ ಸಮಸ್ಯೆಗಳೇ. ಇಷ್ಟೇ ಸಾಲದೆಂಬಂತೆ ಪೊಲೀಸರು ಈಚೆಗೆ ಇನ್ನೊಂದು ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಎಲ್ಲೆಲ್ಲೋ ಅಪಘಾತಕ್ಕೆ ಒಳಗಾದ, ವಾಹನಗಳನ್ನು ತಂದು ಈ ವೃತ್ತದಲ್ಲೇ ನಿಲ್ಲಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡುತ್ತಿದ್ದಾರೆ. ಮೈಸೂರು ಬ್ಯಾಂಕ್‌ನವರು ಈ ವೃತ್ತದಲ್ಲಿ (ತಮ್ಮ ಕಚೇರಿ ಆವರಣದೊಳಗೇ) ಸಣ್ಣ ಉದ್ಯಾನ ನಿರ್ಮಿಸಿ ಜನರಿಗೆ ಒಂದಿಷ್ಟು ಪ್ರೇರಣೆಯಾದರೂ ಆಗಲಿ ಎಂಬ ಉದ್ದೇಶದಿಂದ ಅದರೊಳಗೆ ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಿದ್ದಾರೆ. ಪೊಲೀಸರು ತಂದಿಡುವ ನಜ್ಜುಗುಜ್ಜಾದ ವಾಹನಗಳು ಈ ಪ್ರತಿಮೆಯೇ ಕಾಣದಂತೆ ಅಡ್ಡವಾಗಿರುತ್ತವೆ. ವಿಶ್ವೇಶ್ವರಯ್ಯ ಮೂಲೆ ಗುಂಪಾಗಿದ್ದಾರೆ.

ವೃತ್ತದಲ್ಲೇ ನಗರ ಪೊಲೀಸ್ ಠಾಣೆ ಇದೆ. ಠಾಣೆಯವರು ವಶಪಡಿಸಿಕೊಂಡಿದ್ದ ಅಥವಾ ಯಾವ್ಯಾವುದೋ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಅದೆಷ್ಟೋ ವಾಹನಗಳು ಠಾಣೆಯ ಸುತ್ತ ಧೂಳಿನ ಸ್ನಾನ ಮಾಡುತ್ತ ನಿಂತಿವೆ. ಒಂದೇ ವೃತ್ತಕ್ಕೆ ಬಂದು ಇಷ್ಟೊಂದು ಸಮಸ್ಯೆಗಳು ಅಡರಿಕೊಂಡರೆ ಅದು ಯುದ್ಧಭೂಮಿಯಂತೆ ಕಾಣದಿರುತ್ತದೆಯೇ. ಕೆಲವೊಮ್ಮೆ ಈ ವೃತ್ತ ದಾಟಿಕೊಂಡು ಬರುವುದೆಂದರೆ ಯುದ್ಧಗ್ದ್ದೆದ ಅನುಭವವೇ ಆಗುತ್ತದೆ ಎಂಬುದು ಇಲ್ಲಿ ನಿತ್ಯ ಓಡಾಡುವವರ ಅಭಿಪ್ರಾಯ.

ಫ್ಲೆಕ್ಸ್ ಸಂಸ್ಕೃತಿ ಈ ವೃತ್ತಕ್ಕೆ ಇನ್ನೊಂದು ಶಾಪವಾಗಿ  ಪರಿಣಮಿಸಿದೆ. ವೃತ್ತದ ಸುತ್ತ ದೃಷ್ಟಿ ಹಾಯಿಸಿದರೆ ಕನಿಷ್ಠ 50 ರಿಂದ 60 ಫ್ಲೆಕ್ಸ್/ ಜಾಹೀರಾತು ಫಲಕಗಳು ಕಾಣಿಸುತ್ತವೆ. ಇವುಗಳಲ್ಲಿ ಎಷ್ಟು ನಗರಸಭೆಯ ಅನುಮತಿ ಪಡೆದು ಹಾಕಿದವುಗಳು ಎಂಬುದನ್ನು ನಗರಸಭೆಯೇ ಸ್ಪಷ್ಟಪಡಿಸಬೇಕು.

ಹೇಮಾವತಿಯನ್ನೂ ಬಿಟ್ಟಿಲ್ಲ: ಕೆಲವು ತಿಂಗಳ ಹಿಂದೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು, `ಹೇಮಾವತಿ ಪ್ರತಿಮೆ ಇರುವ ಜಾಗ ನಗರದ ಆಕರ್ಷಣೀಯ (?) ಪ್ರದೇಶ. ಇದರ ಅಂದ ಕೆಡಿಸಬಾರದು, ಯಾವ ಸಂದರ್ಭದಲ್ಲೂ, ಯಾರಿಗೂ ಇಲ್ಲಿ ಫ್ಲೆಕ್ಸ್ ಹಾಕಲು ಅನುಮತಿ ನೀಡಬಾರದು' ಎಂದು ಒತ್ತಾಯಿಸಿದ್ದರು. ಅಧ್ಯಕ್ಷರಾದಿಯಾಗಿ ಎಲ್ಲರೂ ಇದನ್ನು ಒಪ್ಪಿ ಇನ್ನು ಮುಂದೆ ಹೇಮಾವತಿ ಪ್ರತಿಮೆ ಸುತ್ತ ಫಲಕಗಳಿಗೆ ಅವಕಾಶ ಕೊಡುವುದಿಲ್ಲ ಎಂದಿದ್ದರು. ಪತ್ರಿಕೆಗಳಲ್ಲೂ ಈ ಸುದ್ದಿ ಪ್ರಕಟವಾಯಿತು. ಆದರೆ ಫ್ಲೆಕ್ಸ್ ತೆರವು ಮಾಡಲು ಯಾರಿಂದಲೂ ಆಗಿಲ್ಲ, ಆಗುವುದೂ ಇಲ್ಲ. ಸಮಯವಿದ್ದರೆ ಒಮ್ಮೆ ಹೇಮಾವತಿ ಪ್ರತಿಮೆ ಮುಂದೆ ಬಂದುನೋಡಿ, ಸುಮಾರು 20ಅಡಿ ಎತ್ತರದ ಹೇಮಾವತಿ ಪ್ರತಿಮೆಯೇ ಕಾಣದಂತೆ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ನಗರದ ಗಣ್ಯರೆನಿಸಿಕೊಂಡವರು, ಫ್ಲೆಕ್ಸ್ ಹಾಕಲು ವಿರೋಧಿಸಿದವರು, ಅದನ್ನು ಒಪ್ಪಿದ ಅಧ್ಯಕ್ಷರು... ಹೀಗೆ ಎಲ್ಲರ ಚಿತ್ರಗಳೂ ಆ ಫ್ಲೆಕ್ಸ್‌ಗಳಲ್ಲಿವೆ. ಹೀಗಿರುವಾಗ ಫ್ಲೆಕ್ಸ್ ತೆಗೆಸಿ ಎಂದು ಹೇಳುವುದಾದರೂ ಯಾರಿಗೆ ?

ನಗರದ ಮುಖದಂತಿರುವ ಎನ್.ಆರ್. ವೃತ್ತ ಹಾಗೂ ಹೇಮಾವತಿ ಪ್ರತಿಮೆ ಮುಂದಿನ ಪ್ರದೇಶದ ಸ್ಥಿತಿ ಹೀಗಿರುವಾಗ ಹಾಸನದ ಉಳಿದ ಭಾಗಗಳ ಬಗ್ಗೆ ಹೇಳಬೇಕೇ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT