ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಬೆಳೆದೆ

ಮನೆಯಂಗಳದ ಮಾತುಕತೆಯಲ್ಲಿ ನಟಿ ರಮಾ
Last Updated 17 ಅಕ್ಟೋಬರ್ 2015, 19:29 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಯಲ್ಲಿ ಹಿರಿಯ ರಂಗಭೂಮಿ ಕಲಾವಿದೆ ಮತ್ತು ಚಿತ್ರನಟಿ ಆರ್‌.ಟಿ.ರಮಾ ಅವರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅವರು ತಮ್ಮ ವೃತ್ತಿ ಬದುಕಿನ ನೆನಪು ಹಂಚಿಕೊಂಡರು. ‘ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಬರದ ಆ ಕಾಲದಲ್ಲಿ ಬಾಲ್ಯದಲ್ಲಿಯೇ ನಾನು ರಂಗಭೂಮಿ ರುಚಿ ಹಚ್ಚಿಸಿಕೊಂಡೆ. ಆದರೆ, ಇದಕ್ಕೆ ನಮ್ಮ ಅಮ್ಮನ ವಿರೋಧವಿತ್ತು. ಅಂದಿನ ನಾಟಕ ಕಂಪೆನಿಗಳು ನನ್ನ ಪ್ರತಿಭೆಯನ್ನು ಗುರುತಿಸಿದ್ದಕ್ಕೆ ನಟಿಯಾಗಲು ಸಾಧ್ಯವಾಯಿತು’ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

‘ಅಷ್ಟೇನೂ ಆರ್ಥಿಕವಾಗಿ ಸದೃಢವಾಗಿರದಿದ್ದ ನಮ್ಮ ಕುಟುಂಬ ನಾಟಕಗಳಲ್ಲಿನ ಅಭಿನಯದಿಂದ ಬರುತಿದ್ದ ಪುಡಿಗಾಸು ಅಮ್ಮನನ್ನು ಸಂತೋಷಗೊಳಿಸುತ್ತಿತ್ತು. ರಂಗಭೂಮಿ ಚಟುವಟಿಕೆಗಳು ಇಲ್ಲದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ  ಹವ್ಯಾಸಿ ನಾಟಕಗಳಲ್ಲಿ ನಟಿಸುತ್ತಿದ್ದೆ. ಸಮಸ್ಯೆಗಳ ಸುಳಿಯಲ್ಲಿ ಬೆಳೆದು ಕಲಾವಿದೆಯಾದೆ’ ಎಂದರು.

‘ಎಪ್ಪತ್ತು, ಎಂಬತ್ತರ ದಶಕದಲ್ಲಿ ರಾಜ್ಯದ ತುಂಬ ಕಂಪೆನಿ ನಾಟಕಗಳು ಎಡೆಬಿಡದೇ ನಡೆಯುತ್ತಿದ್ದವು. ಅವುಗಳಲ್ಲಿ ನಾನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದೆ. ರಂಗಭೂಮಿ ಜೊತೆ ಜೊತೆಯಾಗಿಯೇ ಚಿತ್ರರಂಗದಲ್ಲಿ ನೆಲೆ ಕಂಡು ಕೊಂಡೆ, ಮಹಾನ್ ಕಲಾವಿದರ ಜೊತೆ ಅಭಿನಯಿಸಿದೆ’ ಎಂದು ಸ್ಮರಿಸಿದರು.

‘ನಮ್ಮ ಸಂಸ್ಕೃತಿಯನ್ನು ಚಲನಶೀಲವಾಗಿ ಇಡುವುದರಲ್ಲಿ ಕಲಾವಿದರ ಪಾತ್ರ ಅಪಾರ, ರಾಜ್ಯದಲ್ಲಿ ಮೊದಲಿನ ಹಾಗೇ ರಂಗಚಟುವಟಿಕೆಗಳು ಕ್ರಿಯಾಶೀಲವಾಗಬೇಕೆನ್ನುವುದು ನನ್ನ ಆಶಯ’ ಎಂದು ಮನದಾಳ ಬಿಚ್ಚಿಟ್ಟರು. ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಉಪಸ್ಥಿತರಿದ್ದರು.
*
1949 ರಲ್ಲಿ ದಾವಣಗೆರೆಯಲ್ಲಿ  ಜನಿಸಿದ ರಮಾ, ನಾಟಕಗಳಲ್ಲದೇ ಕನ್ನಡ, ತೆಲಗು, ಹಿಂದಿಯ ತೊಂಬತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT