ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಗೆ ಗ್ರಾಮೀಣ ಜೀವನದಲ್ಲಿ ಪರಿಹಾರ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ಯುವಕರ ಶಕ್ತಿ ದುಷ್ಕೃತ್ಯಗಳಿಗೆ ವ್ಯಯವಾಗುತ್ತಿರುವ ಇಂದಿನ ಸಂದರ್ಭದಲ್ಲಿ ದೇಶದ ಏಳಿಗೆಗಾಗಿ ಯುವಕರನ್ನು ಎಚ್ಚರಿಸಬೇಕಾಗಿದೆ~ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುರಕ್ಷಾ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಯುವ ಮನಸ್ಸುಗಳಿಗೆ ಅಪಾರವಾದ ಕನಸುಗಳಿರುತ್ತವೆ. ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಯುವಕರು ತಮ್ಮ ತಮ್ಮ ಮಿತಿಯಲ್ಲಿಯೇ ಸಮಾಜ ಸೇವೆಗೆ ಮುಂದಾಗಬೇಕು. ಸಮಾಜ ಸೇವೆಯಲ್ಲಿ ಸಿಗುವ ಸುಖ ಮತ್ತೆಲ್ಲಿಯೂ ಸಿಗಲಾರದು~ ಎಂದರು.

`ಆಧುನಿಕ ಜೀವನ ಶೈಲಿಯಿಂದ ಎದುರಾಗಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನಮ್ಮ ಗ್ರಾಮೀಣ ಜೀವನ ವಿಧಾನದಲ್ಲಿದೆ. ಜನಪದ ಸಂಸ್ಕೃತಿ ನಮ್ಮ ಬೇರು ಎಂಬುದನ್ನು ನಾವು ಮರೆಯಬಾರದು. ಆದರೆ ಇಂದಿನ ದಿನಗಳಲ್ಲಿ ಜನಪದ ಕಲೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ~ ಎಂದು ಅವರು ವಿಷಾದಿಸಿದರು.

`ಜನಪದ ಕಲೆಗಳಿಗೆ ವೇದಿಕೆ ಒದಗಿಸಿದರೆ ಸಾಕು, ಕಲೆಗಳು ಉಳಿಯುತ್ತವೆ. ಜನಪದ ಕಲೆ, ಸಂಸ್ಕೃತಿ ಉಳಿಸಲು ಪ್ರಯತ್ನಿಸುತ್ತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು~ ಎಂದು  ಆಶಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, `ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವ ಮನಸ್ಸು ಮಾಡಬೇಕು. ಅನಾಥ ಮಕ್ಕಳ ಬದುಕನ್ನು ರೂಪಿಸಲು ಶ್ರಮಿಸುತ್ತಿರುವ ಸುರಕ್ಷಾ ಚಾರಿಟಬಲ್ ಟ್ರಸ್ಟ್‌ನ ಕೆಲಸ ಉತ್ತಮವಾದುದು. ಇದು ಎಲ್ಲರಿಗೂ ಮಾದರಿಯಾಗಬೇಕು~ ಎಂದರು.

ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮತ್ತು ಅವರ ತಂಡದ ಸದಸ್ಯರು ಜನಪದ ಗೀತೆಗಳನ್ನು ಹಾಡಿದರು. ಟ್ರಸ್ಟ್‌ನ ಮಕ್ಕಳು ಜಾನಪದ ನೃತ್ಯ ನಡೆಸಿಕೊಟ್ಟರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಟಿ.ಜಿ.ಗೋಪಿನಾಥ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT