ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಸ್ಪಂದಿಸದ ಪಿ.ಡಿ.ಒ.ಗೆ ನೋಟಿಸ್

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕನಕಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ, ಕರ್ತವ್ಯಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಕೊಟ್ಟಗಾಳು ಹಗೂ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ನೀಡುವಂತೆ ಶಾಸಕ ಕೆ.ರಾಜು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕೊಟ್ಟಗಾಳು ಮತ್ತು ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ `ಗ್ರಾಮ ಸಂದರ್ಶನ~ದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಸ್ವೀಕರಿಸಿ ಅವರು ಮಾತನಾಡಿದರು. 

`ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿಲ್ಲ.  ಹೀಗಾಗಿ  15 ಗ್ರಾಮಗಳ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿವೆ. ಸಾರ್ವಜನಿಕರಿಂದ ಅವರ ಕಾರ್ಯ ವೈಖರಿಯ ಬಗ್ಗೆ ದೂರು ಬಂದಿದೆ. ಜೊತೆಗೆ ಇವತ್ತಿನ ಸಭೆಗೆ  ಮಾಹಿತಿ ನೀಡದೆ ಗೈರು ಹಾಜರಾಗಿದ್ದಾರೆಂದು, ಅಧಿಕಾರಿ ವಿರುದ್ಧ ಶಾಸಕರು ಕಿಡಿಕಾರಿದರು.

220 ಮನೆ ಮಂಜೂರು: ಪ್ರಸ್ತುತ  ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಯ ಗ್ರಾಮಗಳಿಗೆ  ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕೊಟ್ಟಗಾಳು ಗ್ರಾಮ ಪಂಚಾಯಿತಿಗೆ ಬಸವ ವಸತಿ ಯೋಜನೆಯಡಿ 220 ಮನೆಗಳನ್ನು ನೀಡಿ ಬಡವರಿಗೆ ಮನೆಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಉಳಿದಿರುವ ಮನೆಗಳನ್ನು ಸಹ ಆಯ್ಕೆಮಾಡಿದ್ದು ಮುಂದಿನ ಪಟ್ಟಿಯಲ್ಲಿ ಸೇರಿಸಲಾಗುವುದೆಂದು ತಿಳಿಸಿದರು.

`ರೈತರ ಜಮೀನಿನ ಟಿ.ಸಿ.ಗಳು ಕೆಟ್ಟುಹೋಗಿ ಒಂದು ತಿಂಗಳಾಗಿದೆ. ದುರಸ್ತಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಕೆಲವು ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇವುಗಳ ಬಗ್ಗೆಯೂ ಗಮನಹರಿಸಿಲ್ಲವೆಂದು ಶಾಸಕರ ಎದುರು ಸಾರ್ವಜನಿಕರು ದೂರಿದರು.

ದೂರಿನನ್ವಯ ಸಭೆಯಲ್ಲಿದ್ದ ಬೆಸ್ಕಾಂ ಅಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. `ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ.  ಇಲ್ಲವೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಿ~ ಎಂದು ತಾಕೀತು ಮಾಡಿದರು. `ಈಗಾಗಲೆ ಬೆಸ್ಕಾಂನ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ, ನಿಗದಿತ ಸಮಯಕ್ಕೆ ಟಿ.ಸಿ.ಗಳನ್ನು ನೀಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಲಾಗಿದೆ~ ಎಂದು ಶಾಸಕರು ತಿಳಿಸಿದರು.

`ಕಳೆದ ವಿಧಾನಸಭಾ ಅಧಿವೇಶನದಲ್ಲಿ ಬಡವರಿಗೆ ಬಿ.ಪಿ.ಎಲ್.ಕಾರ್ಡ್ ನೀಡಲು ಫಲಾನುಭವಿಗಳನ್ನು ಗುರುತಿಸಬೇಕೆಂದು  ಜಿಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಇದುವರೆಗೂ ಸರ್ಕಾರ ಅವರಿಗೆ ಅಧಿಕಾರ ನೀಡದೆ ಪಂಚತಂತ್ರ ಯೋಜನೆಯನ್ನು ರೂಪಿಸಿ ಸರ್ಕಾರವೇ ಬಿ.ಪಿ.ಎಲ್.ಕಾರ್ಡ್ ಫಲಾನುಭವಿಗಳನ್ನು ಗುರುತಿಸುತ್ತಿದೆ~ ಎಂದು ಆರೋಪಿಸಿದರು.

ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು  ನಿರ್ಲಕ್ಷ್ಯಿಸುತ್ತಿಲ್ಲ. ಸಮಯದ ಅಭಾವದಿಂದ ಅಲ್ಲಿನ ಜನತೆಗೆ ಹೆಚ್ಚಿಗೆ ಸ್ಪಂದಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹಾರೋಹಳ್ಳಿಯಲ್ಲಿ ಪಕ್ಷದ ಕಚೇರಿ ತೆರೆದು, ವಾರಕ್ಕೊಮ್ಮೆ ಭೇಟಿ ನೀಡುತ್ತೇನೆ.  ಜನರ ಕುಂದು-ಕೊರತೆಗಳನ್ನು ಆಲಿಸುವುದಾಗಿ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಗ್ರಾಮಸ್ಥರ ಮನವಿ: ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ರಾತ್ರಿವೇಳೆ ಜಮೀನುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಯಾವುದೆ ಸೂಚನೆ ನೀಡದೆ ಬೆಸ್ಕಾಂ ಇಲಾಖೆ ವಿದ್ಯುತ್ ಕಡಿತಗೊಳಿಸುತ್ತಾರೆ. ಇದರಿಂದ ತಿರುಗಾಡಲು ತೊಂದರೆಯಾಗಿದೆ. ಬೆಸ್ಕಾಂ ಅಧಿಕಾರಿಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಅದೇಶಿಸಬೇಕೆಂದು ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು.

 ಗ್ರಾಮ ಪಂಚಾಯಿತಿ ಸದಸ್ಯರಾದ ಮುದುವಾಡಿ ನಾಗರಾಜು, ಜಾದವ್, ಮುಖಂಡರಾದ ಗೊಲಳ್ಲ್ಳಿ ಸುರೇಶ್, ತಿಮ್ಮೇಗೌಡ, ಕಲ್ಬಾಳ್ ಸಿದ್ದರಾಜು, ಅಂಗರಹಳ್ಳಿ ಸುರೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಜಿ.ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಶಿವರಾಮೇಗೌಡ, ಬೆಸ್ಕಾಂ ಎ.ಇ. ಸುರೇಶ್, ಕಂದಾಯ ಇಲಾಖೆಯ ಗುರುಲಿಂಗಯ್ಯ, ರೇಷ್ಮೆ ಇಲಾಖೆಯ ಪ್ರಕಾಶ್ ಸೇರಿದಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮ ಸಂದರ್ಶನದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT