ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಸ್ಪಂದಿಸದ ರೈಲ್ವೆ ಇಲಾಖೆ

Last Updated 7 ಜುಲೈ 2012, 6:20 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ರೂಪ ತಳೆದು ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದರೂ, ರೈಲ್ವೆ ಇಲಾಖೆಗೆ ಮಾತ್ರ ಯಾದಗಿರಿ ಜಿಲ್ಲೆಯ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ. ಅತಿ ಹೆಚ್ಚು ಆದಾಯ ಕೊಡುವ ಜಿಲ್ಲೆಯ ಹತ್ತಾರು ಸಮಸ್ಯೆಗಳಿಗೆ         ಸ್ಪಂದಿಸುವ ಸೌಜನ್ಯವನ್ನೂ ಇಲಾಖೆ ತೋರುತ್ತಿಲ್ಲ. ಇದನ್ನು ಕೇಳಬೇಕಾದ ಸಂಸದರೂ ಇತ್ತ ಗಮನ ನೀಡುತ್ತಿಲ್ಲ.

ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಹೋರಾಟ ರೈಲ್ವೆ ಇಲಾಖೆಯ ಗಮನಕ್ಕೆ ಬಾರದೇ ಇರುವುದು ಶೋಚನೀಯ ಸಂಗತಿ. ಯಾದಗಿರಿ ರೈಲು ನಿಲ್ದಾಣ ಗುಂತಕಲ್ ವಿಭಾಗಕ್ಕೆ ಸೇರುತ್ತದೆ. ತಿರುಪತಿ ಹೊರತುಪಡಿಸಿದರೆ, ಯಾದಗಿರಿ ರೈಲು ನಿಲ್ದಾಣದಿಂದಲೇ ಈ ವಿಭಾಗಕ್ಕೆ ಅತಿ ಹೆಚ್ಚು ಆದಾಯ ಬರುತ್ತಿದೆ. ಆದರೂ ಈ ಭಾಗಕ್ಕೆ ಸೌಕರ್ಯ ಕಲ್ಪಿಸುವಂತೆ      ಹಲವಾರು ಬಾರಿ ಪ್ರತಿಭಟನೆ, ಮನವಿ ಮಾಡಿದರೂ ಸ್ಪಂದನೆ ಮಾತ್ರ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ.

ಜಿಲ್ಲೆಯು ಕರ್ನಾಟಕದಲ್ಲಿದ್ದರೂ, ಈ ಭಾಗದ ರೈಲು ನಿಲ್ದಾಣಗಳಲ್ಲಿ ಆಂಧ್ರಪ್ರದೇಶದ ನಾಮಫಲಕಗಳೇ ರಾರಾಜಿಸುತ್ತಿವೆ. ಇದಕ್ಕೊಂದು ಉದಾಹರಣೆ ಎಂಬಂತೆ ತಾಲ್ಲೂಕಿನ ಸೈದಾಪುರದ ರೈಲು ನಿಲ್ದಾಣಕ್ಕೆ ಈಗಲೂ ನಾರಾಯಣಪೇಟ್ ರೋಡ್ ರೈಲು ನಿಲ್ದಾಣ ಎಂದೇ ರೈಲ್ವೆ ಇಲಾಖೆ ಕರೆಯುತ್ತಿದೆ.

ಕರ್ನಾಟಕದಲ್ಲಿರುವ ಸೈದಾಪುರ ರೈಲು ನಿಲ್ದಾಣದಲ್ಲಿ ಸೈದಾಪುರ ರೈಲು ನಿಲ್ದಾಣ ಎಂಬ ನಾಮಫಲಕ ಅಳವಡಿಸುವಂತೆ ಕನ್ನಡಪರ ಸಂಘಟನೆಗಳು ಅನೇಕ ಬಾರಿ ಮನವಿ ಸಲ್ಲಿಸಿವೆ. ರೈಲ್ವೆ ಸಚಿವರನ್ನು ಭೇಟಿ ಮಾಡಿಯೂ ಮನವರಿಕೆ ಮಾಡಿಕೊಟ್ಟಿವೆ. ಆದರೆ ಪ್ರಯೋಜನ ಮಾತ್ರ ಶೂನ್ಯ ಎಂಬಂತಾಗಿದೆ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ.

ಮಂತ್ರಾಯಲಯಂ ರಸ್ತೆ, ಕೃಷ್ಣಾ ನಿಲ್ದಾಣ ದಾಟಿದ ನಂತರ ಕರ್ನಾಟಕ ಆರಂಭವಾಗುತ್ತದೆ. ನಂತರ ರಾಯಚೂರು ರೈಲ್ವೆ ನಿಲ್ದಾಣ ಸಿಗುತ್ತದೆ. ಅದಾದ ನಂತರ ಸೈದಾಪುರ ರೈಲು ನಿಲ್ದಾಣ ಸಿಗುತ್ತದೆ. ಆದರೂ ಈ ರೈಲು ನಿಲ್ದಾಣವು ಆಂಧ್ರಪ್ರದೇಶದಲ್ಲಿರುವ ನಾರಾಯಣಪೇಟ್ ರೋಡ್ ಎಂಬ ನಾಮಫಲಕವನ್ನು ಹೊತ್ತು ನಿಂತಿದೆ ಎಂದು ದೂರುತ್ತಾರೆ.

ಜಿಲ್ಲಾಧಿಕಾರಿಗಳ ಪತ್ರ: ತಾಲ್ಲೂಕಿನ ಸೈದಾಪುರ ರೈಲು ನಿಲ್ದಾಣದಲ್ಲಿರುವ ನಾರಾಯಣಪೇಟ್ ರೋಡ್ ಎಂಬ ನಾಮಫಲಕವನ್ನು ಬದಲಿಸುವಂತೆ ಯಾದಗಿರಿ ಜಿಲ್ಲಾಧಿಕಾರಿಗಳು         ಈಗಾಗಲೇ ದಕ್ಷಿಣ ಮಧ್ಯ ರೈಲ್ವೆ            ಗುಂತಕಲ್ ವಿಭಾಗದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.

2009ರಿಂದಲೇ ಯಾದಗಿರಿ ಜಿಲ್ಲೆ ರಚನೆ ಆಗಿದ್ದು, ಎರಡೂವರೆ ವರ್ಷ ಆಗುತ್ತ ಬಂದಿದೆ. ಗುಂತಕಲ್ ವಿಭಾಗದಲ್ಲಿ ರೈಲ್ವೆ ಇಲಾಖೆಗೆ ಅತಿ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆಗಳಲ್ಲಿ ಯಾದಗಿರಿಯೂ ಒಂದು. ಹೊಸ ಜಿಲ್ಲೆಯಾದ ನಂತರ ಸೈದಾಪುರ ರೈಲ್ವೆ    ನಿಲ್ದಾಣದಲ್ಲಿರುವ ನಾಮಫಲಕವನ್ನು ಬದಲಿಸುವಂತೆ ಪದೇ ಪದೇ ಮನವಿಗಳು ಬರುತ್ತಿವೆ. ಅಲ್ಲದೇ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಸೌಕರ್ಯಗಳನ್ನು ಒದಗಿಸುವಂತೆ ಕೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಯಾದಗಿರಿ ತಾಲ್ಲೂಕಿನಲ್ಲಿ ಬರುವ ಸೈದಾಪುರ ದೊಡ್ಡ ಹೋಬಳಿ                ಕೇಂದ್ರವಾಗಿದೆ. ಅಲ್ಲದೇ ನಿಧಾನವಾಗಿ ಬೆಳವಣಿಗೆ ಆಗುತ್ತಿದ್ದು, ಈ ನಿಲ್ದಾಣದಿಂದಲೇ ಹೆಚ್ಚಿನ ಜನರು ಓಡಾಡು  ತ್ತಿದ್ದಾರೆ. ಈವರೆಗೆ ಆಂಧ್ರಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರವಾದ    ನಾರಾಯಣಪೇಟ್ ರೋಡ್ ಎಂಬ ನಾಮಫಲಕವನ್ನು ಈ ನಿಲ್ದಾಣಕ್ಕೆ  ಅಳವಡಿಸಲಾಗಿದ್ದು, ಇದೀಗ ಸೈದಾಪುರ ಸಹ ಬೆಳವಣಿಗೆ ಆಗುತ್ತಿರುವುದರಿಂದ ಈ ನಿಲ್ದಾಣಕ್ಕೆ ಸೈದಾಪುರ ರೈಲ್ವೆ ನಿಲ್ದಾಣ ಎಂದು ನಾಮಫಲಕ   ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ನೀರಿನ ಯೋಜನೆಗೂ ಮಂಜೂರಾತಿ ಇಲ್ಲ:  ಜಿಲ್ಲೆಯಲ್ಲಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬಹುಗ್ರಾಮ ಯೋಜನೆಯನ್ನೂ ರೂಪಿಸಿದೆ. ಒಂದು ಯೋಜನೆಯ ಮೂಲಕ ಹಲವಾರು ಗ್ರಾಮಗಳಿಗೆ ಭೀಮಾ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.

ಆನೂರ ಕೆ, ಗೊಂದಡಗಿ, ಯರಗೋಳ ಮುಂತಾದೆಡೆ ಇಂತಹ ಯೋಜನೆಗಳನ್ನು ಆರಂಭಿಸಲಾಗಿದೆ. ಕುಡಿಯುವ ನೀರಿನ ಟ್ಯಾಂಕ್, ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಈಗಾಗಲೇ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಇದೀಗ ನದಿಯಿಂದ ನೀರು ತಂದು ಈ ಟ್ಯಾಂಕ್‌ಗಳಿಗೆ ಹರಿಸಬೇಕಾಗಿದೆ.
 
ಆದರೆ ನದಿಯಿಂದ ನೀರು ತರಲು ಪೈಪ್‌ಲೈನ್ ಮಾಡಬೇಕಿದ್ದು, ಮಧ್ಯದಲ್ಲಿ ರೈಲ್ವೆ ಹಳಿಗಳು ಬರುತ್ತಿವೆ. ಈ ರೈಲ್ವೆ ಹಳಿಗಳ ಕೆಳಗಿನಿಂದ ಪೈಪ್‌ಲೈನ್ ತೆಗೆದುಕೊಂಡು ಹೋಗಬೇಕಾಗಿದ್ದು, ಇದಕ್ಕಾಗಿ ರೈಲ್ವೆ ಇಲಾಖೆಯ ಮಂಜೂರಾತಿ ದೊರೆಯಬೇಕಾಗಿದೆ.

ಈ ಯೋಜನೆಗೆ ಮಂಜೂರಾತಿ ನೀಡಲು ರಾಜ್ಯ ಸರ್ಕಾರದಿಂದ ರೈಲ್ವೆ ಇಲಾಖೆಗೆ ರೂ.1.34 ಕೋಟಿ ಶುಲ್ಕವನ್ನು ಪಾವತಿಸಲಾಗಿದೆ. ಇದಾಗಿ ಒಂದು ವರ್ಷ ಕಳೆದರೂ, ರೈಲ್ವೆ   ಇಲಾಖೆಯ ಅಧಿಕಾರಿಗಳು ಯೋಜನೆಗೆ ಅನುಮತಿ ನೀಡುವುದಿರಲಿ, ಪರಿಶೀಲನೆ ಮಾಡುವುದಕ್ಕೂ ಜಿಲ್ಲೆಗೆ ಭೇಟಿ ನೀಡಿಲ್ಲ ಎಂದು ಕರವೇ ಜಿಲ್ಲಾ ಘಟಕ ಅಧ್ಯಕ್ಷ ಟಿ.ಎನ್. ಭೀಮುನಾಯಕ ಆರೋಪಿಸುತ್ತಾರೆ.

ರೈಲ್ವೆ ಇಲಾಖೆಯ ಮಂಜೂರಾತಿ ದೊರೆತರೆ, ಒಂದೆರಡು ತಿಂಗಳಲ್ಲಿಯೇ ಈ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಆದರೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಯೋಜನೆ ಕಾರ್ಯಗತವಾಗುತ್ತಿಲ್ಲ ಎಂದು ದೂರುತ್ತಾರೆ.

ಸಂಸದರೂ ನಾಪತ್ತೆ: ಯಾದಗಿರಿ, ಸುರಪುರ, ಶಹಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ     ರಾಯಚೂರು ಲೋಕಸಭಾ ಕ್ಷೇತ್ರದ ಸದಸ್ಯ ಸಣ್ಣಫಕೀರಪ್ಪನವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ವೈಯಕ್ತಿಕ ರಾಜಕೀಯದಲ್ಲಿ ಬ್ಯುಸಿಯಾಗಿರುವ ಸಂಸದ ಸಣ್ಣಫಕೀರಪ್ಪನವರು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ.  ಜಿಲ್ಲೆಗೆ ಭೇಟಿ ನೀಡಿ ಆರು ತಿಂಗಳುಗಳೇ ಗತಿಸಿವೆ. ಇನ್ನು ಜಿಲ್ಲೆಯ ಜನರ ಸಮಸ್ಯೆಗಳನ್ನು ಕೇಳುವ   ಸೌಜನ್ಯವೂ ಅವರಿಗೆ ಇಲ್ಲದಾಗಿದೆ ಎಂದು ಕಲ್ಯಾಣ ಕರ್ನಾಟಕ ಯುವ ಸೇನೆ ಅಧ್ಯಕ್ಷ ಅಂಬ್ರೀಷ್ ಬಿಲ್ಲವ ಆಕ್ರೋಶ ವ್ಯಕ್ತಪಡಿಸುತ್ತಾರೆ.

ರೈಲ್ವೆ ಇಲಾಖೆಗೆ ಹೆಚ್ಚು ಆದಾಯ ಕೊಡುವ ಬಗ್ಗೆ ರೈಲ್ವೆ ಇಲಾಖೆ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಈ ಬಗ್ಗೆ ಕೂಡಲೇ ಸಂಸದರು ಧ್ವನಿ ಎತ್ತಬೇಕು. ಇಲ್ಲ     ವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು   ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT