ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ತಿದ್ದುವ ಶಕ್ತಿ ಸಮಾಜವಾದಕ್ಕೆ ಇದೆ

Last Updated 23 ಅಕ್ಟೋಬರ್ 2011, 13:35 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸಮಾಜವನ್ನು ತಿದ್ದುವ ಮೂಲಕ ಹೊಸ ವ್ಯಕ್ತಿತ್ವ ನಿರ್ಮಿಸುವ ಶಕ್ತಿ ಸಮಾಜವಾದಕ್ಕಿದೆ ಎಂದು ಹಿರಿಯ ರೈತ ಮುಖಂಡ, ಪ್ರಗತಿಪರ ಚಿಂತಕ ಕಡಿದಾಳು ಶಾಮಣ್ಣ ಅಭಿಪ್ರಾಯಪಟ್ಟರು.

ಶನಿವಾರ ಸಾಗರದ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಹಾಗೂ  ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಕುಪ್ಪಳಿ ಹೇಮಾಂಗಣ ಸಭಾಂಗಣದಲ್ಲಿ ನವ ಸಮಾಜವಾದದ ರೂಪುರೇಷೆಗಳು ಕುರಿತ ಎರಡು ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವಾದ ಎಂಬುದು ತಾತ್ಕಾಲಿಕವಾದ ಆದರ್ಶವಲ್ಲ. ಅದೊಂದು ಜೀವನಪರ್ಯಂತ ಅಳವಡಿಸಿಕೊಳ್ಳಬೇಕಾದ ಉನ್ನತ ಆದರ್ಶ. ಶಾಂತವೇರಿ ಗೋಪಾಲಗೌಡರಂತವರು ಇಂಥ ಆದರ್ಶ ಮೆರೆದಿದ್ದು, ಯುವಜನರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.

ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್. ನಾಗಭೂಷಣ್ ಅವರು ಮಾತನಾಡಿ, ಸಾಮಾಜಿಕ ಆರ್ಥಿಕ ಅಸಮಾನತೆ ಸುಧಾರಿಸಲು ಹುಟ್ಟಿದ್ದು, ಸಮಾಜವಾದ. ಜಾಗತೀಕರಣದಿಂದ ಈ ಎರಡೂ ಅಸಮಾನತೆಗಳು ಮತ್ತಷ್ಟು ಹೆಚ್ಚಿದ್ದು, ಜಾಗತೀಕರಣಕ್ಕೆ ಪರ್ಯಾಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ಜನಸಮಾನ್ಯರ ಸಂಸ್ಕೃತಿ ನಾಶವಾಗುತ್ತಿದೆ. ಬಡವರು ನಮ್ಮ ನಡುವೆ ಬದುಕಿದ್ದಾರೆ ಎಂಬ ಸೂಕ್ಷ್ಮತೆಯೂ ಇತರರಿಗೆ ಬಾರದಂತಹ ವಿಸ್ಮೃತಿಯನ್ನು ಅದು ಸೃಷ್ಟಿಸಿದೆ. ಕಳೆದ 10 ವರ್ಷಗಳಲ್ಲಿ 2 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಅವರ ನೈತಕ ಸ್ಥೈರ್ಯ ಕುಸಿದಿದ್ದೇ ಕಾರಣವಾಗಿದೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ವ್ಯವಸ್ಥೆ ಸುಧಾರಣೆ ಅಸಾಧ್ಯ ಎಂದು ಹೇಳಿದರು.

ಬಂಡವಾಳಶಾಹಿಗಳಿಗೆ ಪರ್ಯಾಯ ವಾಗಿ ಸಮಾಜವಾದವನ್ನು ಹಿಂದಿನ ಅನುಭವಗಳ ಆಧಾರದ ಮೇಲೆ ಇಂದಿನ ಕಾಲಕ್ಕೆ ತಕ್ಕಂತೆ ರೂಪಿಸುವ ಕೆಲಸ ನಡೆಯಬೇಕಿದೆ. ಗಂಡಸಿನ ಯಜಮಾನಿಕೆಯ ಸಮಾಜವಾದಕ್ಕಿಂತ ಹೆಣ್ತನದ ಹೊಸ ಅರಿವಿನ ಮೂಲಕ ಸಮಾಜವಾದವನ್ನು ಕಟ್ಟುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಪಿ. ವೀರೇಂದ್ರಕುಮಾರ್  ಮಾತನಾಡಿ, ನವಸಮಾಜವಾದದ ರೂಪುರೇಷೆ ಹಾಗೂ ಹೊಸ ಸಾಧ್ಯತೆಗಳ ಹುಡುಕಾಟ ಈ ಶಿಬಿರದ ಆಶಯವಾಗಿದೆ. ಈ ಹುಡುಕಾಟ ಸರಳವಾದ. ಆದರೆ, ಘನತೆಯ ಜೀವನ ನಮ್ಮದಾಗಬೇಕು ಎಂಬ ಧ್ಯೇಯ ವಾಕ್ಯದ ಮೂಲಕ ನಡೆಯಬೇಕಿದೆ ಎಂದರು.

ಇತಿಹಾಸ, ಶಿಕ್ಷಣ, ಭಾಷೆ, ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಯಾವರೀತಿ ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸದೇ ಹೊಸ ಸಿದ್ಧಾಂತವನ್ನು ಕಟ್ಟಿಕೊಡಲಾಗದು. ಸಮಾಜವಾದ ಏಕೆ ಹಿನ್ನೆಲೆಗೆ ಸರಿದಿದೆ ಎನ್ನುವುದರ ಕುರಿತು ಸಮಾಜವಾದಿಗಳು ಆತ್ಮವಿಮರ್ಶೆ ನಡೆಸುವ ಅಗತ್ಯವಿದೆ ಎಂದರು.

ಮಹಾಲಿಂಗ ಕುವೆಂಪು ಗೀತೆ ಹಾಡಿದರು. ಎನ್.ಎಂ. ಕುಲಕರ್ಣಿ ಸ್ವಾಗತಿಸಿದರು. ಎಂ. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದಸದಸ್ಯೆ ಸವಿತಾ ನಾಗಭೂಷಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT