ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆ ತಂದ ಖುಷಿ

ಅಂಗವೈಕಲ್ಯ ಶಾಪವಲ್ಲ
Last Updated 3 ಡಿಸೆಂಬರ್ 2013, 9:38 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರತಿಯೊಬ್ಬರೂ ತಮ್ಮ ಮೂಲ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಅಂಗವಿಕಲನೆಂದು ಸುಮ್ಮನೆ ಕುಳಿತಿದ್ದರೆ ನನಗೆ ಏನನ್ನೂ ಸಾಧಿಸಲಾಗುತ್ತಿರಲಿಲ್ಲ. ಅಂಗವಿಕಲತೆ ಶಾಪ ಎಂದು ತಿಳಿಯಬಾರದು. ನಮ್ಮ ಕೈಯಿಂದ ಏನು ಸಾಧ್ಯವೋ ಅದನ್ನು ಮಾಡಬೇಕು. ಮತ್ತೊಬ್ಬರಿಗೆ ಭಾರವಾಗಬಾರದು. ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬುದೇ ನನ್ನ ಉದ್ದೇಶ.’
ಇದು ಎರಡೂ ಕಾಲುಗಳಿಲ್ಲದ ಅಂಗವಿಕಲ ಬಬನ್‌ ಭೋಬೆ ಅವರ ಮಾತು.

ಮೂಲತಃ ಬೆಳಗಾವಿಯ ಗೋಂಧಳಿ ಗಲ್ಲಿ ನಿವಾಸಿ, 55 ವರ್ಷ ವಯಸ್ಸಿನ ಬಬನ್‌ ಅವರು, ಸಮಾಜ ಸೇವೆಯಲ್ಲಿ ಅತ್ಯಂತ ಖುಷಿಯ ಬದುಕನ್ನು ನಡೆಸುತ್ತಿದ್ದಾರೆ. ಜನಿಸಿದಾಗಲೇ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿದ್ದ ಅವರು, ಬಾಲ್ಯಾವಸ್ಥೆಯಲ್ಲಿನ ನೋವನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವೀಲ್‌ ಚೇರ್‌ನಲ್ಲಿಯೇ ಕುಳಿತು ಟೆಲಿಫೋನ್‌ ಬೂತ್‌ ನಡೆಸುವ ಅವರು, ಅದರಿಂದ ಬರುವ ಆದಾಯದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ.

‘ಬಬನ್‌ ಭೋಬೆ ಮಿತ್ರ ಮಂಡಳಿ’ ಸ್ಥಾಪಿಸಿ ಅದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ. ತಮ್ಮ ಸ್ನೇಹಿತರಿಂದ ಪುಸ್ತಕ, ದೇಣಿಗೆ ಸಂಗ್ರಹಿಸಿ ವಿವಿಧ ಆಶ್ರಮಗಳ ಮಕ್ಕಳಿಗೆ ನೀಡುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ದತ್ತು ಸ್ವೀಕರಿಸಿದ್ದಾರೆ.
ಮಾನಸಿಕ ಆಘಾತ, ಯಾತನೆ, ಅವಮಾನ, ನೋವು ಸೇರಿದಂತೆ ಅನೇಕ ಅಡೆತಡೆಗಳನ್ನು ಎದುರಿಸಿ, ವೀಲ್‌ ಚೇರ್‌ನಲ್ಲಿಯೇ ಪಾದರಸದಂತೆ ಸಂಚರಿಸುವ ಬಬನ್‌ ಅವರು, ಇಡೀ ಬೆಳಗಾವಿಗೆ ಚಿರಪರಿಚಿತರು.

‘ನನ್ನ ಬಾಲ್ಯ ಸವಾಲಿನಿಂದ ಕೂಡಿತ್ತು. ಮನೆಯ ಪಕ್ಕದಲ್ಲಿಯೇ ಉಳಿದ ಮಕ್ಕಳು ಆಟವಾಡುತ್ತಿದ್ದುದನ್ನು ನೋಡಿ ನನಗೆ ಬಹಳ ಸಂಕಟವಾಗುತ್ತಿತ್ತು. ಅನೇಕ ಬಾರಿ ಆಡಲು ಹೋಗಿ ಬಿದ್ದಿದ್ದೇನೆ. ನನ್ನ ಪಾಲಕರ ಪ್ರೋತ್ಸಾಹ ನನಗೆ ಆತ್ಮಸ್ಥೈರ್ಯ ತುಂಬಿತು. 10ನೇ ತರಗತಿವರೆಗೆ ಓದಿದ್ದು, ಮುಂದಿನ ಶಿಕ್ಷಣ ಪಡೆಯಲು ಆಗಲಿಲ್ಲ. ಆದರೆ, ಅಕ್ಕಪಕ್ಕದ ಅನೇಕ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಆಗಲೇ ನನಗೆ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಬೇಕು ಎಂಬ ಬಯಕೆ ಹುಟ್ಟಿಕೊಂಡಿತು’ ಎಂದು ಬಬನ್‌ ಬಾಲ್ಯದ ಜೀವನವನ್ನು ನೆನಪಿಸಿಕೊಳ್ಳುತ್ತಾರೆ.

‘ಅಯ್ಯೋ ಪಾಪ ಎಂಬ ಸಹಾನುಭೂತ ಮಾತು ನಮಗೆ ಬೇಕಿಲ್ಲ. ದೇಹ ಊನವಾಗಿದ್ದರೂ, ಅದನ್ನು ಸವಾಲಾಗಿ ಸ್ವೀಕರಿಸಬೇಕು. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕೈಲಾದಷ್ಟು ಮತ್ತೊಬ್ಬರಿಗೆ ಸಹಾಯ ಮಾಡಬೇಕು. ಅಂಗವಿಕಲರಿಗೆ ಕೆಲಸದ ಕೊರತೆಯಿಲ್ಲ. ಆದರೆ, ಮನಸ್ಸನ್ನು ಸರಿಯಾಗಿಟ್ಟುಕೊಂಡು ಶ್ರದ್ಧೆಯಿಂದ ದುಡಿದರೆ ಸಮಾಧಾನ ಸಿಗುವುದು ಗ್ಯಾರಂಟಿ’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

‘ಕಳೆದ 30 ವರ್ಷಗಳಿಂದ ಟೆಲಿಫೋನ್‌ ಬೂತ್‌ ನಡೆಸುತ್ತಿದ್ದೇನೆ. ಇದರಿಂದ ಬರುವ ಎಲ್ಲ ಆದಾಯವನ್ನು ಬಡ ಮಕ್ಕಳಿಗಾಗಿಯೇ ವಿನಿಯೋಗಿಸುತ್ತಿದ್ದೇನೆ. ಟೆಲಿಫೋನ್‌ ಬೂತ್‌ ಆರಂಭಿಸಿದಾಗ ತಿಂಗಳಿಗೆ ₨ 10,000 ಆದಾಯ ಬರುತ್ತಿತ್ತು. ಆದರೆ, ಈಗ ಕಡಿಮೆಯಾಗಿದೆ. ಅವಿವಾಹಿತನಾಗಿರುವ ನನಗೆ ತಂದೆ– ತಾಯಿ ಇಬ್ಬರೂ ಇಲ್ಲ. ನನ್ನ ಸಹೋದರ ಮನೆಯನ್ನು ನಡೆಸುತ್ತಾನೆ’ ಎಂದು ಹೇಳಿದರು.

‘ಸ್ಪಂದನ ನಂದನ ಮಕ್ಕಳ ಧಾಮದಲ್ಲಿ ಪ್ರತಿವರ್ಷ ಮಕ್ಕಳಿಗೆ ಸಮವಸ್ತ್ರ, ನೋಟ್‌ಪುಸ್ತಕ, ಪೆನ್‌, ಬ್ಯಾಗ್‌ಗಳನ್ನು ಕೊಡುತ್ತೇನೆ. ನನ್ನ ಹೆಸರಿನ ಮಿತ್ರ ಮಂಡಳಿಯಿಂದ ಅನೇಕ ಸಾಮಗ್ರಿಗಳನ್ನು ಸಂಗ್ರಹಿಸಿ ಮಕ್ಕಳಿಗೆ ವಿತರಿಸುತ್ತೇನೆ. ದೀಪಾವಳಿ ಸಂದರ್ಭದಲ್ಲಿ ಈ ಮಕ್ಕಳಿಗೆ ಸೋಪ್‌, ತಲೆಗೆ ಹಚ್ಚುವ ಎಣ್ಣೆ ನೀಡುತ್ತ ಬಂದಿದ್ದೇನೆ. ಡೊಂಬರಾಟ ಆಡುವ ಮಕ್ಕಳನ್ನು ಶಾಲೆಗೆ ಸೇರಿಸಿದ್ದು, ಅವರಿಗೆ ಸಮವಸ್ತ್ರ, ಶಾಲಾ ಸಾಮಗ್ರಿಗಳನ್ನು ನೀಡಿದ್ದೇನೆ. ಮೂವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಅವರ ಶಾಲಾ ಖರ್ಚನ್ನು ಭರಿಸಿದ್ದೇನೆ’ ಎಂದು ತಮ್ಮ ಸೇವೆಯನ್ನು ಹೆಮ್ಮೆಯಿಂದ ಹೇಳಿಕೊಂಡರು.

‘ಸಮಾಜ ಸೇವೆಯಿಂದ ಖುಷಿ ಸಿಗುತ್ತದೆ. ನಾನು ಎಂದಿಗೂ ಅಂಗವಿಕಲ ಎಂದು ಹೇಳಿ ಮತ್ತೊಬ್ಬರಿಂದ ಸಹಾಯ ಕೇಳಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಬಾರದು ಎಂಬುದು ನನ್ನ ಉದ್ದೇಶ. ಯಾರಲ್ಲಿಯೂ ಭಿಕ್ಷೆ ಬೇಡಬಾರದು. ನಮ್ಮ ಕೈಯಲ್ಲಾದುದ್ದನ್ನು ನಾವು ಮಾಡಬೇಕು. ಜೀವನಪೂರ್ತಿ ಇದೇ ಸೇವೆಯನ್ನು ಮುಂದುವರಿಸುತ್ತೇನೆ’ ಎಂದು ದೃಢವಾಗಿ ಹೇಳುತ್ತಾರೆ ಬಬನ್‌.

‘ಟೆಲಿಫೋನ್‌ ಬೂತ್‌ಗೆ ವಿದ್ಯುತ್‌ ಸಂಪರ್ಕ ಒದಗಿಸುವಂತೆ ಬಬನ್‌ ಅವರು, ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ. ಆದರೆ, ಈವರೆಗೂ ಸರ್ಕಾರದಿಂದ ಈ ಸೌಲಭ್ಯ ಮಾತ್ರ ಸಿಕ್ಕಿಲ್ಲ’ ಎನ್ನುವ ಬಬನ್‌, ಅಂಗವಿಕಲರು ನಿತ್ಯವೂ ಸಾಧನೆ ಮಾಡಬೇಕಾಗುತ್ತದೆ. ಹಾಸಿಗೆಯಿಂದ ಎದ್ದು ವೀಲ್‌ ಚೇರ್‌ ಹತ್ತುವುದು ಒಂದು ಸಾಧನೆ. ಈ ಸಾಧನೆಯಿಂದ ಸಮಾಧಾನ ತಂದು ಕೊಂಡು ನೆಮ್ಮದಿಯ ಬದುಕು ಸಾಗಿಸಬೇಕು ಎಂಬುದು ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT