ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ಕಂಟಕರಾದರೆ..

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನೀವು ದಾರಿಯಲ್ಲಿ ಹೋಗುವಾಗ ಒಬ್ಬಾತ ಕುರಿ ಕಡಿಯುತ್ತಿ ರುವುದನ್ನು ನೋಡುತ್ತೀರಿ. ನೀವು ಸಸ್ಯಾಹಾರಿ ಆಗಿದ್ದರೆ ಅದು ನಿಮಗೆ ಸಹನೀಯ ಆಗದೇ ಇರಬಹುದು. ಮಾಂಸಾಹಾರಿಯಾಗಿದ್ದರೆ ಏನೂ ಎನಿಸುವುದೇ ಇಲ್ಲ. ಆದರೆ ಮನುಷ್ಯನೊಬ್ಬ ಒಂದು ಮಗು ವನ್ನು ಸಾಯಿಸು ತ್ತಿದ್ದರೆ..? ಇದನ್ನು ನೋಡು ವುದಿರಲಿ, ನೆನೆಸಿ ಕೊಂಡರೇನೆ ಮೈ `ಝುಂ~ ಎನ್ನುತ್ತದೆ. ಇದೇ ಅಪರೂಪದಲ್ಲಿ ಅಪರೂಪದ ಪ್ರಕರಣ.

ಇಂತಹ ವಿಕೃತ ಸ್ವಭಾವದ ವ್ಯಕ್ತಿಗೆ ಗಲ್ಲುಶಿಕ್ಷೆ ವಿಧಿಸುವುದು ತಪ್ಪಲ್ಲ ಎಂದೇ ನನ್ನ ಅನಿಸಿಕೆ. ಏನೋ ಆಕಸ್ಮಿಕವಾಗಿ ಕೋಪದಲ್ಲೋ ಅಥವಾ ಇನ್ನಾವುದೋ ಕಾರಣಕ್ಕೆ ಕೊಲೆ ಘಟಿಸಿಬಿಟ್ಟರೆ ಅವನನ್ನು ಕ್ಷಮಿಸಿ, ಅರ್ಥಾತ್ ಗಲ್ಲುಶಿಕ್ಷೆಯಿಂದ ಮುಕ್ತಿ ಕೊಡಿ.

ಏಕೆಂದರೆ ಇಂತಹ ವ್ಯಕ್ತಿ ಸಮಾಜಕ್ಕೆ ಕಂಟಕಪ್ರಾಯನಲ್ಲ. ಅವನನ್ನು ಜೈಲಿನಿಂದ ಹೊರಕ್ಕೆ ಬಿಟ್ಟರೆ ಈ ರೀತಿಯ ದುಷ್ಕೃತ್ಯ ಪುನಃ ನಡೆಸುತ್ತಾನೆ ಎನ್ನುವ ಭಯ ಇರುವುದಿಲ್ಲ. ಆದರೆ ಕೊಲೆ ಮಾಡು ವುದನ್ನೇ ಚಟ ಮಾಡಿಕೊಂಡವ, ವಿಕೃತವಾಗಿ ಕೊಲೆ ಮಾಡಿ ಸಂತೋಷ ಪಡುವವ, ಬಾಂಬ್ ಸ್ಫೋಟಿಸಿ ಮುಗ್ಧ ಜನರನ್ನು ಉದ್ದೇಶಪೂರ್ವಕವಾಗಿ ಬಲಿ ತೆಗೆದುಕೊಳ್ಳುವವನಿಗೂ ಜೀವದಾನ ನೀಡಬೇಕೆನ್ನುವಲ್ಲಿ ಅರ್ಥವೇ ಇಲ್ಲ.

 ಮರಣದಂಡನೆಗೆ ಒಳಗಾದವ ಆತನ ಕುಟುಂಬದಲ್ಲಿ ಒಬ್ಬನೇ ದುಡಿಯುವವ ಆಗಿದ್ದರೆ, ಅವನ ಸಾವಿನ ನಂತರ ಕುಟುಂಬವನ್ನು ನೋಡಿಕೊಳ್ಳುವವರು ಯಾರು, ಅವರಿಗೆ ಯಾರು ಗತಿ ಎಂಬೆಲ್ಲ ಪ್ರಶ್ನೆಗಳು ಮರಣದಂಡನೆ ವಿರೋಧಿಗಳದ್ದು. ಇದು ಒಂದು ಮುಖವಷ್ಟೇ. ಆದರೆ ಆತನನ್ನು ಬದುಕಲು ಬಿಟ್ಟರೆ ಅದರಿಂದ ಎಷ್ಟು ಕುಟುಂಬಗಳ ಬೀದಿ ಪಾಲಾಗುತ್ತವೆ ಎಂಬ ಇನ್ನೊಂದು ಮುಖವನ್ನೂ ನಾವು ಪರಿಗಣಿಸ ಬೇಕಾಗುತ್ತದೆ.  

ನಾನು ಈವರೆಗೆ ಮೂರು ಬಾರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ್ದೇನೆ. ಇದು ನಾಲ್ಕನೆಯ ಅವಧಿ. ಈ ಅವಧಿಯಲ್ಲಿ 16 ಅಪರಾಧಿ ಗಳಿಗೆ ಹೈಕೋರ್ಟ್‌ನಿಂದ ಗಲ್ಲು ಶಿಕ್ಷೆ ದೊರೆತಿದೆ. ಆ ಪೈಕಿ ಎಂಟು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಶಿಕ್ಷೆಯನ್ನು ಊರ್ಜಿತಗೊಳಿಸಿದೆ. ಒಂದು ಪ್ರಕರಣದಲ್ಲಿ ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನುಳಿದವು ಅಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಈ ಎಲ್ಲ ಪ್ರಕರಣಗಳನ್ನು ನಾನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಈ ಎಲ್ಲ ಅಪರಾಧಿಗಳು ಮಾಡಿರುವ ಹೇಯ ಕೃತ್ಯಗಳ ಬಗ್ಗೆ ಕಲೆ ಹಾಕಿರುವ ದಾಖಲೆಗಳತ್ತ ದೃಷ್ಟಿ ಬೀರಿದಾಗ ಇವರು ಮನುಷ್ಯರಲ್ಲ, ಬದಲಿಗೆ ಮನುಷ್ಯ ರೂಪದ ರಾಕ್ಷಸರು ಎಂದು ಅನಿಸಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಯುವತಿ- ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬರ್ಬರ ಹತ್ಯೆ ಮಾಡಿರುವುದು, ಲಾಭದ ಉದ್ದೇಶದಿಂದ ಸಂಪೂರ್ಣ ಕುಟುಂಬವನ್ನೇ ನಾಶ ಮಾಡಿರುವುದು, ಬಾಂಬ್ ಸ್ಫೋಟಗೊಳಿಸಿ ಅಮಾಯಕರ ಹತ್ಯೆ ಮಾಡುವುದು- ಇವೆಲ್ಲ ಪ್ರಕರಣಗಳನ್ನು ನಾನು ಹತ್ತಿರದಿಂದ ಬಲ್ಲೆ. ಪತ್ನಿಯನ್ನು ಕೊಂದು ಮನೆಯಲ್ಲಿಯೇ ಹೂತಿಟ್ಟು ಕೊಂಡ ಶ್ರದ್ಧಾನಂದ ಸ್ವಾಮಿಯಾಗಲಿ, ಕಂಡಕಂಡ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ವಿಕೃತ ಸಂತೋಷಪಡುತ್ತಿದ್ದ ಉಮೇಶ್ ರೆಡ್ಡಿಯಂಥವರ ನ್ನಾಗಲೀ, ಮುಂಬೈ, ದೆಹಲಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಬಾಂಬ್ ಸ್ಫೋಟಿಸಿರುವವರನ್ನಾಗಲಿ ಗಲ್ಲಿಗೆ ಏರಿಸದಿದ್ದರೆ ಇನ್ನೆಷ್ಟು ಜೀವಗಳು ಬಲಿಯಾಗಲಿವೆ ಎಂಬುದನ್ನೂ ನಾವು ಯೋಚಿಸಬೇಕಾದ ಅಗತ್ಯವಿದೆ.
ಭವಿಷ್ಯದ ಅಪರಾಧಿಗಳಿಗೆ ಕಡಿವಾಣ ಹಾಕ ಬೇಕೆಂದರೆ ಗಲ್ಲುಶಿಕ್ಷೆ ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ.

`ರೂಲ್ ಆಫ್ ಲಾ~ ಉಳಿಯಬೇಕಿದ್ದರೆ ಮರಣದಂಡನೆ ಶಿಕ್ಷೆ ರದ್ದಾಗಬಾರದು. ಇಂತಹ ಒಂದು ಶಿಕ್ಷೆ ಚಾಲ್ತಿಯಲ್ಲಿ ಇದ್ದರೆ ಒಬ್ಬ ಕೊಲೆಗಾರ  ಕೊಲೆ ಮಾಡುವ ಮುನ್ನ ಎರಡೆರಡು ಬಾರಿ ಯೋಚನೆ ಮಾಡುತ್ತಾನೆ. ಇಂತಹ ಶಿಕ್ಷೆ ನಮ್ಮಲ್ಲಿ ಇದೆ ಎಂದು ಗೊತ್ತಿದ್ದರೂ ಕೊಲೆಗೆಡುಕರ ಸಂಖ್ಯೆಯೇನು  ಕಡಿಮೆ ಆಗಿಲ್ಲ. ಆದರೆ ಗಲ್ಲುಶಿಕ್ಷೆ ಇಲ್ಲವೇ ಇಲ್ಲ ಎಂದಾದರೆ ನಮ್ಮ ಸಮಾಜ ಯಾವ ಮಟ್ಟ ತಲುಪಬಹುದು ಒಮ್ಮೆ ಯೋಚಿಸಿ.

ಅರಬ್ ದೇಶದಲ್ಲಿ ಸಾಮಾನ್ಯ ಶಿಕ್ಷೆಯೇ ಅತ್ಯಂತ ಕ್ರೂರವಾಗಿದೆ. `ಕಣ್ಣಿಗೆ ಕಣ್ಣು, ಕೈಗೆ ಕೈ~ ಎನ್ನುವುದು ಅಲ್ಲಿಯ ರೂಢಿ. ಒಬ್ಬ ಕಣ್ಣು ಕಿತ್ತರೆ, ಅಪರಾಧಿಯ ಕಣ್ಣು ಕೀಳುವುದು, ಕೈ ತುಂಡರಿಸಿದರೆ ಅವನ ಕೈಯನ್ನೂ ಕತ್ತರಿಸುವುದು, ಅತ್ಯಾಚಾರ ನಡೆಸಿದರೆ ಮರ್ಮಾಂಗವನ್ನೇ ಕತ್ತರಿಸುವುದು ಇತ್ಯಾದಿ ಪದ್ಧತಿ ಜಾರಿಯಲ್ಲಿ ಇದೆ. ಅಷ್ಟೇ ಅಲ್ಲ. ಆದುದರಿಂದ ಅಂತಹ ದೇಶಗಳಲ್ಲಿ ಅಪರಾಧ ಮಾಡಲು ಜನ ಹೆದರುತ್ತಾರೆ. ಆದರೆ ಅಂತಹ ಕ್ರೂರ ಶಿಕ್ಷೆ ಭಾರತದಲ್ಲಿ ಇಲ್ಲ. ಇರಲೂ ಕೂಡದು. ನೇಣು ಹಾಕಿ ಸಾಯಿಸಲಾಗುತ್ತದೆ.

ಇದೇ ವೇಳೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಅನುಭವಸ್ಥ ನ್ಯಾಯಾಧೀಶರ ನೇಮಕ ಮಾಡಬೇಕು ಎನ್ನುವುದು ನನ್ನ ಆಶಯ. ಪ್ರಕರಣದ ಗಂಭೀರತೆ ತಿಳಿಯಲು ಈ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಕೊಲೆ ಪ್ರಕರಣಗಳಲ್ಲಿ ನ್ಯಾಯಾಧೀಶರು ಪಳಗಿರ ಬೇಕಾದ ಅಗತ್ಯವಿದೆ.

- ಎಚ್.ಎಸ್.ಚಂದ್ರಮೌಳಿ
ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT