ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ

Last Updated 24 ಫೆಬ್ರುವರಿ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜದ ತಳ ಮಟ್ಟದ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಜಾರಿಗೆ ತರಲಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ನಗರದಲ್ಲಿ ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯೋಜಿಸಿದ್ದ `ವಾಜಪೇಯಿ ಆರೋಗ್ಯ ಶ್ರೀ~ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಒಂದು ಬಡ ಕುಟುಂಬದಲ್ಲಿ ವ್ಯಕ್ತಿಯೊಬ್ಬನ ಆರೋಗ್ಯ ಕೆಟ್ಟರೆ ಇಡೀ ಕುಟುಂಬ ಅತಂತ್ರ ಸ್ಥಿತಿ ತಲುಪುತ್ತದೆ. ಆರ್ಥಿಕವಾಗಿ ಅಶಕ್ತರಾದವರಿಗೆ ಉತ್ತಮ ಆರೋಗ್ಯ ಸೌಲಭ್ಯ ಪಡೆಯುವುದು ದೊಡ್ಡ ಹೊರೆ ಎಂಬಂಥಾ ಪರಿಸ್ಥಿತಿ ಪ್ರಸ್ತುತ ದಿನಗಳಲ್ಲಿ  ನಿರ್ಮಾಣವಾಗಿದೆ. ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಬಡವರ ಬದುಕಿಗೆ ಬೆಂಬಲ ನೀಡುವ ಸದುದ್ದೇಶವನ್ನು ಹೊಂದಿದೆ~ ಎಂದು ಅವರು ಹೇಳಿದರು.

`ಪ್ರತಿ ಜನಸ್ಪಂದನ ಕಾರ್ಯಕ್ರಮಗಳಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿರುತ್ತವೆ. ಹೀಗಾಗಿ ಉತ್ತಮ ಆರೋಗ್ಯ ಸೌಲಭ್ಯವನ್ನು ಬಡ ಜನರಿಗೆ ತಲುಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಯೋಜನೆಗೆ ಸರ್ಕಾರ 2011-12ನೇ ಸಾಲಿನ ಬಜೆಟ್‌ನಲ್ಲಿ 40 ಕೋಟಿ ರೂ ಗಳ ಅನುದಾನವನ್ನು ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಯೋಜನೆಗೆ ಅಗತ್ಯವಿರುವ ಸಹಕಾರ ನೀಡಲಾಗುವುದು. ಇಂತಹ ಉತ್ತಮ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಬಿಬಿಎಂಪಿಯ ಶ್ರಮ ಜನರಿಗೆ ತಲುಪಲಿ~ ಎಂದು ಅವರು ಆಶಿಸಿದರು.

`ಯೋಜನೆಗಾಗಿ ಬಿಬಿಎಂಪಿ 21 ಕೋಟಿ ರೂ ಗಳನ್ನು ಈ ವರ್ಷದ  ಆಯವ್ಯಯದಲ್ಲಿ  ಮೀಸಲಿರಿಸಿದೆ. ಸರ್ಕಾರ 2011-12 ನೇ ಸಾಲಿನ ಬಜೆಟ್‌ನಲ್ಲಿ 2,428 ಕೋಟಿ ರೂ ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿದ್ದು, ಅದರ ಸದ್ಬಳಕೆ ಆಗಬೇಕಿದೆ~ ಎಂದರು.

ಗೃಹ ಸಚಿವ ಆರ್.ಅಶೋಕ್ ಮಾತನಾಡಿ, `ಸಾಕಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಅನೇಕ ಸಮಸ್ಯೆಗಳು ಇರುವುದು ನಿಜ. ಹೀಗಾಗಿ ಬಡ ಜನರೂ ಕೂಡಾ ಹೆಚ್ಚು ಖರ್ಚಾದರೂ ಉತ್ತಮ ಆಸ್ಪತ್ರೆಗಳಿಗೆ ಹೋಗಲು ಬಯಸುತ್ತಾರೆ.

ಯೋಜನೆಯನ್ನು ಜಾರಿಗೆ ತರುವ ಮೂಲಕ ಅನೇಕ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕುವ ವಿಶ್ವಾಸ ತುಂಬುವ ಕೆಲಸ ಪಾಲಿಕೆಯಿಂದ ಆಗಿದೆ. ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿದೆ~ ಎಂದು ಹೇಳಿದರು.

ಬಿಬಿಎಂಪಿ ಮೇಯರ್ ಶಾರದಮ್ಮ ಮಾತನಾಡಿ, `ದೇಶದಲ್ಲೇ ಮೊದಲಿಗೆ ನಗರ ಪ್ರದೇಶದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಜಾರಿಗೆ ತರುವ ಕೆಲಸ ಬಿಬಿಎಂಪಿಯಿಂದ ಆಗಿದೆ. ಪೌರ ಕಾರ್ಮಿಕರು, ಆಟೊ ರಿಕ್ಷಾ ಚಾಲಕರು, ವಿಧವಾ ವೇತನ ಪಡೆಯುತ್ತಿರುವವರು, ಅಂಗವಿಕಲರೂ ಸೇರಿದಂತೆ ಎಲ್ಲಾ ಬಿಪಿಎಲ್ ಕುಟುಂಬದವರು ಯೋಜನೆಗೆ  ಅರ್ಹರಾಗಿರುತ್ತಾರೆ. ಸುಮಾರು 7 ಲಕ್ಷ ಜನರಿಗೆ ವಿಮೆ ಹಾಗೂ ಸುಮಾರು 35 ಸಾವಿರ ಜನರಿಗೆ ಯೋಜನೆಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗಿದೆ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎನ್.ಅಶ್ವತ್ಥನಾರಾಯಣ, ಬಿ.ಎನ್.ವಿಜಯಕುಮಾರ್, ಎಸ್.ಮುನಿರಾಜು, ಬಿಬಿಎಂಪಿಯ ಉಪ ಮೇಯರ್ ಎಸ್.ಹರೀಶ್, ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಡಪ್ಪ, ವಿರೋಧ ಪಕ್ಷದ ನಾಯಕ ಎಂ.ಉದಯಶಂಕರ್ ಮತ್ತಿತರರು ಭಾಗವಹಿಸಿದ್ದರು.

ಯಾರ‌್ಯಾರು ಅರ್ಹರು?
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳ ಕೊಳಗೇರಿ ನಿವಾಸಿಗಳು, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಆಟೊ ರಿಕ್ಷಾ ಚಾಲಕರು, ವಿಧವಾ ವೇತನ ಪಡೆಯುತ್ತಿರುವವರು ಹಾಗೂ ಅಂಗವಿಕಲರ ವೇತನ ಪಡೆಯುತ್ತಿರುವವರು ಸೇರಿದಂತೆ ಬಿಪಿಎಲ್ ಕುಟುಂಬಗಳು ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಬೆಂಗಳೂರಿನ 37 ಅತ್ಯುತ್ತಮ ದರ್ಜೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಯೋಜನೆಯ ಫಲಾನುಭವಿಗಳು ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಅಪಘಾತಗಳೂ ಸೇರಿದಂತೆ  402 ಬಗೆಯ ಶಸ್ತ್ರ ಚಿಕಿತ್ಸೆಗಳ ಸೌಲಭ್ಯ ಪಡೆಯಬಹುದಾಗಿದೆ.

ಕುಟುಂಬವೊಂದಕ್ಕೆ ವರ್ಷಕ್ಕೆ 1.5 ಲಕ್ಷ ರೂಪಾಯಿ ಮೀಸಲಿಡಲಾಗಿದ್ದು, ಹೆಚ್ಚಿನ ಮೊತ್ತ ಅಗತ್ಯವಿರುವ ಪ್ರಕರಣಗಳಲ್ಲಿ ರೂ. 50 ಸಾವಿರ ಹೆಚ್ಚುವರಿಯಾಗಿ ಬಿಬಿಎಂಪಿ ಭರಿಸಲಿದೆ. ವಿಮೆಯ ವಾರ್ಷಿಕ ಹಣ 350 ರೂ ಗಳನ್ನು ಪಾಲಿಕೆಯೇ ಭರಿಸಲಿದೆ. ಎಲ್ಲಾ ಬಿಬಿಎಂಪಿ ವಲಯ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಯೋಜನೆಗೆ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಶುಲ್ಕರಹಿತ ಸಂಖ್ಯೆ 1800 200 8787 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT