ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಿ ಸಂಬಂಧ

Last Updated 23 ಜೂನ್ 2012, 19:30 IST
ಅಕ್ಷರ ಗಾತ್ರ

ಚಿತ್ರ:ನಾಗವಲ್ಲಿ

ನಿರ್ಮಾಪಕರು: ಎ. ಕೇಶವ ಮತ್ತು ಎ. ನರಸಿಂಹ
ನಿರ್ದೇಶಕ: ಕುಮಾರ್
ತಾರಾಗಣ: ಮಧುಶಾಲಿನಿ, ವೇಣು, ಸಂಕೇತ್‌ಕಾಶಿ, ದಕ್ಷಾ, ಕಾರ್ತಿಕ್, ಮಾನಸಿ, ಬ್ಯಾಂಕ್ ಜನಾರ್ದನ್, ಥ್ರಿಲ್ಲರ್ ಮಂಜು, ಮತ್ತಿತರರು.

`ನಾ ಬಂದೆ... ನಾ ನೋಡ್ದೆ... ನಾ ಗೆದ್ದೆ...~- `ಶರಪಂಜರ~ದ ಕಲ್ಪನಾ ಕಾಡುತ್ತಾರೆ. `ನಿಮ್ಮ ಜೊತೆ ಬದುಕೋಕೆ ಒಂದೇ ಒಂದು ಅವಕಾಶ ಮಾಡಿಕೊಡಿ~ ನಾಗವಲ್ಲಿ ಬೇಡುತ್ತಾಳೆ! ಎಲ್ಲಿಯ ಮಿನುಗುತಾರೆ ಕಲ್ಪನಾ, ಎಲ್ಲಿಯ ನಾಗವಲ್ಲಿ? ಎತ್ತಣದಿಂದೆತ್ತ ಸಂಬಂಧ? ಜನ್ಮಜನ್ಮಾಂತರದ್ದೇನೂ ಅಲ್ಲ. ಕಲ್ಪನಾರೇ ನಾಗವಲ್ಲಿ ರೂಪತಾಳಿ ಬಂದಿದ್ದಾರೆಯೇ ಎಂಬ ಕುತೂಹಲವೂ ಬೇಡ. ಅದು `ಸಮಾಧಿ ಸಂಬಂಧ~ವಷ್ಟೇ!

ಅಂದಹಾಗೆ, ಈಕೆ ತೆಲುಗು ನೆಲದ `ರಾ ರಾ~ ನಾಗವಲ್ಲಿಯಲ್ಲ. ಜಯಚಾಮರಾಜೇಂದ್ರ ಬಹದ್ದೂರು ಆಸ್ಥಾನದ ನರ್ತಕಿ ನಾಗವಲ್ಲಿಗೂ ಈ `ಕಲ್ಪನಾ~ ನಾಗವಲ್ಲಿಗೂ ನೆಂಟಸ್ತಿಕೆಯೂ ಇಲ್ಲ. ನಟಿಯಾಗಬೇಕೆಂದು ಕೇರಳದಿಂದ ಕನ್ನಡ ನೆಲಕ್ಕೆ ಪಾದ ಬೆಳೆಸಿದವಳು. ಈಕೆ ಚಿತ್ರಪಟದಿಂದಲೋ, ಹಾವಿನ ರೂಪದಲ್ಲಿಯೋ ಬಂದು ಹೆದರಿಸುವುದಿಲ್ಲ. ಈಕೆ ಎದ್ದು ಬರುವುದು ಕಲ್ಪನಾ ಸಮಾಧಿಯಿಂದ. ಇಲ್ಲಿ `ಭೂತ ಸಂತ್ರಸ್ತ~ ಮನೆಯವರನ್ನು ಮಾತ್ರವಲ್ಲ ಪ್ರೇಕ್ಷಕನನ್ನು ಕಾಪಾಡಲು ಸಹ ಆಪ್ತಮಿತ್ರನಾಗಲೀ, ಆಪ್ತರಕ್ಷಕನಾಗಲೀ ಪ್ರತ್ಯಕ್ಷವಾಗುವುದಿಲ್ಲ. ರಾಮಚಂದ್ರ ಆಚಾರ್ಯರ ದರ್ಶನವೂ ಆಗುವುದಿಲ್ಲ. ಹೀಗಾಗಿ ನಾಗವಲ್ಲಿ ಸುರಕ್ಷಿತೆ. ಪ್ರೇಕ್ಷಕನ ಪಾಡು ನಾಗವಲ್ಲಿಗೆ ಪ್ರೀತಿ.

ಈ ಬಗೆಯ ದೆವ್ವ ಭೂತದ ಕಥೆ ಹೊಸತಲ್ಲ. ಸ್ತ್ರೀ ದೆವ್ವಗಳದ್ದೇ ಹೆಸರಿನ ಚಿತ್ರಗಳ ಸಾಲು ದೊಡ್ಡದಿದೆ. ಆದರೆ ನಾಗವಲ್ಲಿ ಹೆಸರಿನ ತೂಕವೇ ಬೇರೆ. ನಾಗವಲ್ಲಿ ಸತ್ತ ಬಳಿಕ ದೆವ್ವವಾಗಿ ಆಶ್ರಯ ಪಡೆದುಕೊಳ್ಳುವುದು ಕಲ್ಪನಾರ ಸಮಾಧಿಯಲ್ಲಿ. ಕಲ್ಪನಾ ಸಮಾಧಿ ಸಿನಿಮಾದಲ್ಲೇಕೆ ಬಂತು, ನಾಗವಲ್ಲಿ ಅದರೊಳಗೆ ಹೇಗೆ ಸೇರಿಕೊಂಡಳು ಎಂಬುದು ಸಸ್ಪೆನ್ಸ್!

ನಾಗವಲ್ಲಿ ಕಲ್ಪನಾರ ಸ್ವರದಲ್ಲಿಯೇ `ಶ್ರೀರಂಗಪಟ್ಟಣದ ದಾರಿ ನನಗೆ ಚೆನ್ನಾಗಿ ಗೊತ್ತು...~ ಎಂದು `ಶರಪಂಜರ~ದ ಸಂಭಾಷಣೆಯನ್ನು ಪುಂಖಾನುಪುಂಖವಾಗಿ ಉದುರಿಸಿ ಹೆದರಿಸುವ ಪ್ರಯತ್ನ ಮಾಡುತ್ತಾಳೆ. ಜೊತೆಗೆ ಫೈಟ್ ಮಾಡುತ್ತಾಳೆ, `ನಾ ನಿನ್ನ ಬಿಡಲಾರೆ~ಯ ಅನಂತ್‌ನಾಗ್‌ರನ್ನೂ ನೆನಪಿಸುತ್ತಾಳೆ. `ಶ್~ ಚಿತ್ರದಲ್ಲಿ `ಥೂ~ ಎಂದು ಉಗಿಯುವ ಇನ್ಸ್‌ಪೆಕ್ಟರ್ ಬ್ಯಾಂಕ್ ಜನಾರ್ದನ್ ಮತ್ತು ಕೂತಲ್ಲೇ ನಿದ್ರಿಸುವ ಕಾನ್ಸ್‌ಟೇಬಲ್ ಬಿರಾದಾರ್ ಇಲ್ಲೂ ಇದ್ದಾರೆ. ಪಾರ್ಥಿಬನ್ ಕ್ಯಾಮೆರಾ ನಿಂತಲ್ಲೇ ಗಿರಕಿ ಹೊಡೆದು ದೆವ್ವದ ಅಸ್ತಿತ್ವದ ಭ್ರಮೆ ಮೂಡಿಸುವುದರಿಂದ ಪ್ರೇತಾತ್ಮಕ್ಕೆ ಹೆಚ್ಚಿನ ಕೆಲಸವಿಲ್ಲ. ಕಲಾವಿದರು ನಟನೆಯನ್ನೇ ಮರೆಸುವಷ್ಟು ನಾಗವಲ್ಲಿ ನಡುಕ ಹುಟ್ಟಿಸುತ್ತಾಳೆ. ಹಾರರ್ ಚಿತ್ರ ನೋಡಿಯೂ ಪ್ರೇಕ್ಷಕ ನಗುತ್ತಾನೆ!

ದೆವ್ವ ಭೂತಗಳ ಕಲ್ಪನೆಯಿಟ್ಟುಕೊಂಡು ನಿರ್ದೇಶಕ ಕುಮಾರ್ ನಾಗವಲ್ಲಿ ಪ್ರೇತಾತ್ಮಕ್ಕೆ ಮತ್ತೆ ಜೀವ ನೀಡಿದ್ದೇನೋ ಸರಿ. ಆದರೆ ಇಂಥ ದೆವ್ವದ ಕಥೆಯುಳ್ಳ ಚಿತ್ರದಲ್ಲಿ ಕಲ್ಪನಾರ ಸಿನಿಮಾ ಬದುಕನ್ನು ಬಳಸಿಕೊಂಡಿದ್ದರ ಔಚಿತ್ಯವೇನೆಂಬ ಪ್ರಶ್ನೆ ಕಾಡುತ್ತದೆ.

`ಶರಪಂಜರ~ದಂತಹ ಸ್ತ್ರೀ ಮಾನಸಿಕ ತುಮುಲಗಳನ್ನು ಬಿಂಬಿಸುವ ಚಿತ್ರ ಮತ್ತು ಅದರಲ್ಲಿನ ಕಲ್ಪನಾ ನಟನೆಯನ್ನು `ನಾಗವಲ್ಲಿ~ಯ ಭೂತ ಚೇಷ್ಟೆಯೊಂದಿಗೆ ತಳುಕು ಹಾಕಿರುವುದು ನಿರ್ದೇಶಕರ ಅಭಿರುಚಿಯ ಕೊರತೆಯನ್ನು ಬಿಂಬಿಸುತ್ತದೆ. ಆದರೂ ಚಿತ್ರದ ನಡುವೆ ಬರುವ ಕಲ್ಪನಾ ನಟನೆಯ ಚಿತ್ರಗಳ ಹಾಡು ಮತ್ತು ದೃಶ್ಯ ತುಣುಕುಗಳು ಪ್ರೇಕ್ಷಕನ ಅತೃಪ್ತ ಆತ್ಮವನ್ನು ತೃಪ್ತಗೊಳಿಸಬಲ್ಲವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT