ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಕನಿಷ್ಠ ವೇತನ ನಿಗದಿಗೆ ಕೇಂದ್ರ ಚಿಂತನೆ: ಸಚಿವ ಖರ್ಗೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಸಮಾನ ಕೆಲಸಕ್ಕೆ ಸಮಾನ ವೇತನ~ ಎಂಬ ನಿಯಮದಡಿ ದೇಶಾದ್ಯಂತ ಸಮಾನ ಕನಿಷ್ಠ ವೇತನ ನಿಗದಿಪಡಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.

ದೆಹಲಿಯಲ್ಲಿ ನಡೆದ ಎರಡು ದಿನದ ಕಾರ್ಮಿಕ ಸಮ್ಮೇಳನದ ಬಳಿಕ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ, ಕನಿಷ್ಠ ವೇತನ ಪರಿಷ್ಕರಣೆ ಸೇರಿದಂತೆ ಸಮ್ಮೇಳನದಲ್ಲಿ ಮಾಡಲಾದ ಶಿಫಾರಸುಗಳನ್ನು ವಿವರಿಸಿದರು.

15ನೇ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಸೂಚಿಸಲಾದ ನಿಯಮ- ಮಾನದಂಡ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ವೇತನ ನಿಗದಿಪಡಿಸಲಾಗುವುದು. ಕನಿಷ್ಠ ವೇತನ ನಿಗದಿಗೆ ಮೊದಲು ಕೇಂದ್ರ ಸರ್ಕಾರ, ಕಾರ್ಮಿಕ ಸಂಘಟನೆಗಳು ಹಾಗೂ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಿದೆ. ಈ ವಿಷಯದಲ್ಲಿ ಒಮ್ಮತ ಮೂಡುವ ವಿಶ್ವಾಸವಿದೆ ಎಂದರು.

ಎಷ್ಟು ವೇತನ ನಿಗದಿ ಮಾಡಬೇಕೆಂದು ಇನ್ನೂ ತೀರ್ಮಾನ ಆಗಿಲ್ಲ. ಕೇರಳದಲ್ಲಿ ಕರ್ನಾಟಕಕ್ಕಿಂತ ಹೆಚ್ಚು ವೇತನವಿದೆ. ಬಿಹಾರ, ಉತ್ತರ ಪ್ರದೇಶಕ್ಕಿಂತ ಇದಕ್ಕಿಂತ ಕಡಿಮೆ ವೇತನವಿದೆ. ಬೀಡಿ ಕಾರ್ಮಿಕರಿಗೆ ಬೇರೆ ವೇತನ, ಕೃಷಿ ಕಾರ್ಮಿಕರಿಗೆ ಬೇರೆ ವೇತನ ಹೀಗೆ ವಿಭಿನ್ನ ಕೆಲಸಗಳಿಗೆ ವಿಭಿನ್ನ ವೇತನವಿದೆ. ಕನಿಷ್ಠ ವೇತನದಲ್ಲಿ ಏಕರೂಪತೆ ತರುವ ಉದ್ದೇಶ ಸರ್ಕಾರಕ್ಕಿದ್ದು,. ಕನಿಷ್ಠ ವೇತನ ನಿಗದಿಪಡಿಸುವಾಗ ಬೇರೆ ಬೇರೆ ರಾಜ್ಯಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದರು.

ಕಾರ್ಮಿಕರಿಗೆ ವ್ಯತ್ಯಯ ತುಟ್ಟಿಭತ್ಯೆ ಅನ್ವಯ ಆಗಬೇಕೆಂಬ ಬೇಡಿಕೆಯಿದೆ. 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯತ್ಯಯ ತುಟ್ಟಿಭತ್ಯೆ ಅನ್ವಯ ಆಗುತ್ತಿಲ್ಲ. ಕನಿಷ್ಠ ವೇತನ ಸಲಹಾ ಮಂಡಳಿ ಇವೆಲ್ಲ ವಿಷಯಗಳನ್ನು ಪರಿಶೀಲಿಸಲಿದೆ.

ಭವಿಷ್ಯನಿಧಿ ಯೋಜನೆಯಡಿ ಕೊಡುತ್ತಿರುವ ಪಿಂಚಣಿ ಅತ್ಯಲ್ಪವಾಗಿರುವುದರಿಂದ ಇದನ್ನು ಕನಿಷ್ಠ ಸಾವಿರ ರೂಪಾಯಿಗಾದರೂ ಹೆಚ್ಚಿಸಬೇಕು ಎಂಬ ಶಿಫಾರಸು ಬಂದಿದೆ. ಈ ಶಿಫಾರಸು ಜಾರಿಗೆ ಹಣಕಾಸು ಇಲಾಖೆ ಒಪ್ಪಿಗೆ ಅಗತ್ಯವಿದೆ. `ಗ್ರಾಚ್ಯುಟಿ~ಗೆ ನಿಗದಿ ಮಾಡಿರುವ ಐದು ವರ್ಷಗಳ ಕನಿಷ್ಠ ಅವಧಿಯನ್ನು ಕಡಿಮೆ ಮಾಡಬೇಕು.

ಉದ್ಯೋಗಿ ಸಂಸ್ಥೆಯನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ಖಾತೆ ವರ್ಗಾವಣೆ ಆಗಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಇದಕ್ಕೆ ಆಡಳಿತ ಮಂಡಳಿ ಆಕ್ಷೇಪವಿದೆ ಎಂದು ವಿವರಿಸಿದರು.

ಮಹಿಳಾ ಕಾರ್ಮಿಕರಿಗೆ ಈಗಿರುವ 12 ವಾರಗಳ ಹೆರಿಗೆ ರಜೆಯನ್ನು 24 ವಾರಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆ ಕಾರ್ಮಿಕ ಸಂಘಟನೆಗಳದ್ದು. ಇದಕ್ಕೂ ಆಡಳಿತ ಮಂಡಳಿ ವಿರೋಧವಿದೆ. ಆದರೆ, ಸರ್ಕಾರದ ಉದ್ಯೋಗಿಗಳಿಗೆ 24 ವಾರ ಹೆರಿಗೆ ರಜೆ ನೀಡಲಾಗುತ್ತಿದೆ. ಸರ್ಕಾರ ಉಭಯ ಪಕ್ಷಗಳ ಜತೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಈ ಶಿಫಾರಸು ಜಾರಿ ಮಾಡಲು ಕಾಲಮಿತಿ ಇಲ್ಲ. ಆದಷ್ಟು ಬೇಗ ನಿರ್ಧಾರ ಮಾಡಲಾಗುವುದು ಎಂದು ಖರ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT