ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ತತ್ವ ಶಿಕ್ಷಣ ಪದ್ಧತಿ ಬೇಕು

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಶಿಕ್ಷಣ ಕ್ಷೇತ್ರದಲ್ಲಿ ಕಾಳಿಂಗ ಮರ್ಧನ ನಡೆಸಿ, ಜಗತ್ತಿಗೆ ಉಪಯೋಗಕಾರಿಯಾದ ಅಮೃತದಂತಹ ಸಮಾನ ತತ್ವ ಶಿಕ್ಷಣ ಪದ್ಧತಿಯನ್ನು ಪಡೆಯಬೇಕಾದ ಅಗತ್ಯ ಇದೆ~ ಎಂದು ಬರಹಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಕರ್ನಾಟಕ ಡಿ.ಇಡಿ, ಬಿ.ಇಡಿ ವಿದ್ಯಾರ್ಥಿಗಳ ಮತ್ತು ಪದವೀಧರರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ~ದ ಉದ್ಘಾಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

`ಸಮಾನ ಶಿಕ್ಷಣವೆಂಬ ಪುಂಗಿನಾದವನ್ನು ಸುಮಾರು ಇಪ್ಪತ್ತು ವರ್ಷಗಳಿಂದ ಹಾಡುತ್ತ ಬಂದಿದ್ದೇವೆ. ಆದರೆ, ಇಲ್ಲಿಯವರೆಗೆ ಎಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ಯೋಚಿಸಬೇಕಾಗುತ್ತದೆ~ ಎಂದರು.

`ಶಿಕ್ಷಣ ಸಂವಹನ ಕ್ಷೇತ್ರದ ಒಂದು ಭಾಗ. ಆದರೆ, ಈಗ ಅದು ಒಂದು ವಾಣಿಜ್ಯೀಕರಣ ಕ್ಷೇತ್ರವಾಗಿ ಹಣ ಹೂಡುವ ಮತ್ತು ಹಣ ಮಾಡುವ ಕ್ಷೇತ್ರವಾಗುತ್ತಿರುವುದು ಆತಂಕಕಾರಿಯಾಗಿದೆ. ಈಗಿನ ಜ್ಞಾನದೇಗುಲದಲ್ಲಿ ಬಂಡುಕೋರರು ಹುಟ್ಟುವುದು ಬೇಡ ಎಂಬುದಕ್ಕೆ ಜ್ಞಾನವನ್ನೇ ಬೆಳೆಸದ ಪಠ್ಯಕ್ರಮವನ್ನು ಜಾರಿಗೆ ತರಲಾಗಿದೆ~ ಎಂದರು.

`ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಿರ್ಭೀತಿಕರಣದ ಅವಶ್ಯಕತೆ ಇದೆ. ಆದರೆ, ಇಂದಿನ ಶಿಕ್ಷಣ ಅಂತಹ ನಿರ್ಭೀತಿಕರಣ ಬೆಳೆಯದಂತೆ ಅದನ್ನು ನಾಶ ಮಾಡುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದೆ~ ಎಂದು ಹೇಳಿದರು.

`ಸಮಾನ ಶಿಕ್ಷಣವೆಂಬ ನೀತಿಗೆ ನ್ಯಾಯಯುತವಾದ ತಳಹದಿ ನಿರ್ಮಾಣ ಮಾಡಬೇಕು. ಶ್ರೀರಾಮನಂತೆ ಮಾಯಾ ಜಿಂಕೆ ಬೆನ್ನು ಹತ್ತಿ ಹೋಗುವುದರ ಬದಲು, ಈ ಹೋರಾಟಕ್ಕೆ ಒಂದು ರೂಪುರೇಷೆಗಳನ್ನು ನಿರ್ಮಾಣ ಮಾಡಬೇಕು~ ಎಂದರು.

`ಬಹಳಷ್ಟು ಮಕ್ಕಳಿಗೆ ಅವರು ತಿನ್ನುವ ಆಹಾರವು ಎಲ್ಲಿಂದ ಬರುತ್ತಿದೆ ಎಂದು ತಿಳಿದಿಲ್ಲ. ನಾವು ನೀಡುವ ಶಿಕ್ಷಣ ಕ್ರಮ ಬದುಕುವುದನ್ನು ಹೇಳಿಕೊಡುವುದಿಲ್ಲ. ಬದಲಿಗೆ ಸರ್ಟಿಫಿಕೇಟ್ ಪಡೆಯಲು ಮಾತ್ರ ಸಹಕಾರಿಯಾಗಿದೆ~  ಎಂದು ನುಡಿದರು. `ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆ ಯುತ್ತಿಲ್ಲವೆಂಬುದು ಆತಂಕಕಾರಿ ವಿಷಯವಾಗಿದೆ. ದೇಶದ ಶೇ 90 ರಷ್ಟು ಜನರನ್ನು ಅವಕಾಶವಂಚಿತರನ್ನಾಗಿ ಮಾಡಿರುವುದು ಜಾತಿಪದ್ಧತಿ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ~ ಎಂದು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯ ಅಧ್ಯಕ್ಷೀಯ ಮಂಡಳಿಯ ಸದಸ್ಯೆ ಪ್ರೊ.ಮಧು ಪ್ರಸಾದ್ ಹೇಳಿದರು.

ಜನಶಕ್ತಿ ರಾಜ್ಯ ಸಂಚಲನಾ ಸಮಿತಿ ಸದಸ್ಯೆ ಮಲ್ಲಿಗೆ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ.ವೆಂಕಟರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT