ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ, ಸ್ವಾಭಿಮಾನದ ಪ್ರತೀಕ ಅಂಬೇಡ್ಕರ್‌

ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ ಕುಮಾರ್‌
Last Updated 10 ಡಿಸೆಂಬರ್ 2013, 6:56 IST
ಅಕ್ಷರ ಗಾತ್ರ

ದಾವಣಗೆರೆ: ದಲಿತರು ಸೇರಿದಂತೆ ಮೀಸಲಾತಿ ಅನುಭವಿಸುತ್ತಿರುವ ಸಮಾಜದ ಹಿಂದುಳಿದ ವರ್ಗಗಳ ಪ್ರತಿಯೊಬ್ಬರೂ ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಋಣಿಯಾಗಿರಬೇಕು ಎಂದು ಜಿಲ್ಲಾಧಿಕಾರಿ  ಅಂಜನ್‌ ಕುಮಾರ್‌ ಅಭಿಪ್ರಾಯಪಟ್ಟರು.

ನಗರದ ಛಲವಾದಿ ವಿದ್ಯಾರ್ಥಿನಿಲಯದಲ್ಲಿ ಸೋಮವಾರ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್‌ ದಿನಾಚರಣೆ ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲ. ಅವರು ಶೋಷಿತರ ದನಿ, ಹಿಂದುಳಿದ ವರ್ಗಗಳ ಆಶಾಕಿರಣ. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನ ಆಚರಿಸುವುದೇ ಪ್ರತಿಯೊಬ್ಬರ ಜೀವನಕ್ಕೆ ಹೊಳಪು ಕೊಟ್ಟಂತೆ ಎಂದರು.

ಅಂಬೇಡ್ಕರ್‌ ನಿಧನರಾದ ದಿನ ಅವರ ಅಂತ್ಯಕ್ರಿಯೆಗೂ ಅವರ ಕುಟುಂಬದ ಬಳಿ ಹಣವಿರಲಿಲ್ಲ. ಅವರ ಆಪ್ತರೆಲ್ಲರೂ ಸೇರಿ ಅಂತ್ಯಕ್ರಿಯೆಗೆ ಹಣ ಹೊಂದಿಸಿದರು. ಈ ಘಟನೆಯೇ ಅವರ ಪ್ರಾಮಾಣಿಕತೆಗೆ ಸಾಕ್ಷಿ. ಇಂದು ದಲಿತರು ಸಮಾನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್‌ ಅವರೇ ಕಾರಣ. ಶಿಕ್ಷಣ, ಸಂಘಟನೆ, ಹೋರಾಟ ಅವರ ಪ್ರಮುಖ ಅಸ್ತ್ರವಾಗಿದ್ದವು. ಜೀವನದುದ್ದಕ್ಕೂ ಪ್ರವಾಹದ ವಿರುದ್ಧ ಈಜುತ್ತಾ ಶೋಷಿತರ, ದಮನಿತರ ದನಿಯಾದವರು ಅಂಬೇಡ್ಕರ್‌ ಎಂದರು.

ಪೂರ್ವವಲಯ ಐಜಿಪಿ ಪರಶಿವಮೂರ್ತಿ ಮಾತನಾಡಿ, ತುಳಿತಕ್ಕೆ ಒಳಗಾದವರ ಮಧ್ಯೆ ಪ್ರತಿಭೆಗಳು ಅರಳುವುದು ತುಂಬಾ ಕಡಿಮೆ. ಆದರೆ ಈ ಮಾತಿಗೆ ಅಪವಾದ ಅಂಬೇಡ್ಕರ್‌, ಮೇಲ್ವರ್ಗದ ಶೋಷಣೆ, ಬಡತನದ ನಡುವೆಯೂ ಶಿಕ್ಷಣ ಎಂಬ ಅಸ್ತ್ರದಿಂದ ದೇಶದ ಸಂವಿಧಾನ ರಚಿಸುವ ಮಟ್ಟಕ್ಕೆ ಬೆಳೆದ  ಮಹಾನ್‌ ವ್ಯಕ್ತಿ ಅಂಬೇಡ್ಕರ್‌. ಅವರ ಆದರ್ಶ, ತತ್ವಗಳನ್ನು ದಲಿತರು ಮಾತ್ರವಲ್ಲ. ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಮನುಷ್ಯ ಮನುಷ್ಯನ ನಡುವೆ ಸಾಮರಸ್ಯ ಅಗತ್ಯ. ಆರ್ಥಿಕ ಬಡತನವಿದ್ದರೂ ಕ್ರಿಯಾಶೀಲತೆ, ಶುಚಿತ್ವದಲ್ಲಿ ಬಡತನ ಇರಬಾರದು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ದಲಿತರು ತಾವು ಬೆಳೆಯುವುದರ ಜತೆಗೆ ತಮ್ಮ ವರ್ಗವನ್ನೂ ಬೆಳೆಸಬೇಕು ಎಂದರು.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಎಂ.ಎಸ್.ವಿಕಾಸ್‌ ಮಾತನಾಡಿ, 12ನೇ ಶತಮಾನದಲ್ಲಿ ಜಾತೀಯತೆ, ಅಸಮಾನತೆ ವಿರುದ್ಧ ಹೋರಾಡಿದವರು ಬಸವಣ್ಣನವರು. ನಂತರದ 800 ವರ್ಷಗಳ ಬಳಿಕ ಸಮಾನತೆಯ ಕ್ರಾಂತಿಯ ಕಿಚ್ಚು ಹಚ್ಚಿದವರು ಅಂಬೇಡ್ಕರ್‌. ಅವರ ತತ್ವ, ಆದರ್ಶ, ದಲಿತ ಹಾಗೂ ಹಿಂದುಳಿದ ವರ್ಗಗಳ ಬಗೆಗಿನ ಕಾಳಜಿ, ಅವರನ್ನು ಮಹಾನ್‌ ಚೇತನವನ್ನಾಗಿ ರೂಪಿಸಿತು ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಆರ್‌.ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಛಲವಾದಿ ಮಹಾಸಭ ಅಧ್ಯಕ್ಷ ಎ.ಆರ್‌.ಮಹಾದೇವಪ್ಪ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ಬಿ.ಎಚ್‌.ವೀರಭದ್ರಪ್ಪ, ಜಿಲ್ಲಾ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್‌.ಗೋವಿಂದರಾಜು ಉಪಸ್ಥಿತರಿದ್ದರು.

ಛಲವಾದಿ ದೀನ ಸೇವಾ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಎಂ.ಸಿ.ಓಂಕಾರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT