ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಹರಿಕಾರ ಬಸವೇಶ್ವರ

ಇಂದು ಕೊಡೇಕಲ್ಲ ಬಸವೇಶ್ವರ ಜಾತ್ರೆ
Last Updated 26 ಏಪ್ರಿಲ್ 2013, 6:32 IST
ಅಕ್ಷರ ಗಾತ್ರ

ಹುಣಸಗಿ: ಜಾತಿ ಪದ್ಧತಿ, ಸಂಪ್ರದಾಯ, ಆಚಾರ ಮುಂತಾದವುಗಳನ್ನು ಮೆಟ್ಟಿನಿಂತ ಸಂತ, ಸಮಾನತೆಯ ಹರಿಕಾರ, ಹಿಂದು ಮುಸ್ಲಿಂ ಶೈಲಿಯ ಸಂಗಮ ಕೊಡೇಕಲ್ಲ ಬಸವೇಶ್ವರ ಜಾತ್ರಾಮಹೋತ್ಸವ ಇಂದು ಶುಕ್ರವಾರ ನಡೆಯಲಿದೆ.

ಶುಕ್ರವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಊರ ಹೊರಗಿನ ಗುಡಿಯಿಂದ ಐಕ್ಯಸ್ಥಳ ಊರ ಒಳಗಿನ ಗುಡಿಯವರೆಗೆ ಜೋಡು ಪಲ್ಲಕ್ಕಿ ಉತ್ಸವ ನಡೆಯಲಿದೆ.

ಈ ಜಾತ್ರಾ ಮಹೋತ್ಸವವು ಇಂದಿನ ಪೀಠಾಧಿಪತಿ ಮಹಲಿನ ಮಠದ ಶ್ರೀ ವೀರಯ್ಯ ಅಪ್ಪನವರ ಸಾನಿಧ್ಯದಲ್ಲಿ ರಾಜಾ ಜಿತೇಂದ್ರನಾಯಕ ಮತ್ತು ರಾಜಾ ವೆಂಕಟಪ್ಪನಾಯಕ ಅವರ ನೇತೃತ್ವದಲ್ಲಿ ಬಾರಾಬಲುತಿ( ಎಲ್ಲವತನದಾರರ) ಸಮ್ಮುಖದಲ್ಲಿ ನಡೆಯುತ್ತದೆ. ಅಲ್ಲದೆ ಹಿಮ್ಮುಖವಾಗಿ ನಡೆಯುತ್ತಾ ಕಾಲಜ್ಞಾನದ ವಚನ ಪಠಣ ನಡೆಯುವದು ಇಲ್ಲಿನ ವಿಶೇಷ.

ಹಿನ್ನೆಲೆ: 15ನೇ ಶತಮಾನದಲ್ಲಿ ಆಗಿಹೋದ ಮಹಾನ್ ಸಂತರಲ್ಲಿ ಕೊಡೇಕಲ್ಲ ಬಸವೇಶ್ವರರು ಅಗ್ರಗಣ್ಯರು. ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ.

ಆ ಜಾತಿ ಈ ಜಾತಿ ಎಂದು ಹೊಡೆದಾಡದಿರಿ ಎಲ್ಲ ಮಾನವರೂ ಒಂದೇ ಜಾತಿ ಎಂದು ಸಾರಿದ ಕಾಲಜ್ಞಾನಿ ಕೊಡೇಕಲ್ ಬಸವೇಶ್ವರರು. ಒಂದೇ ಹಾಸಿಗೆ ಪೃತ್ವಿ ಸಕಲಕೆ, ಒಂದೇ ಹೊದಿಕೆ ಆಕಾಶ ಮೇಲಕೆ, ಒಂದೇ ಜಲ ಮೇಘದಲಿ ವಾಯು ಒಂದೇ, ಒಂದರೋಳು ನೂರೊಂದು ಮಾಡುವ ಸಂದೇಹಿಗಳು ಬಲ್ಲಿರೇನಯ್ಯ ಎಂದು ನುಡಿದಿದ್ದಾರೆ.

ಅವರು ಬರೆದ ಕಾಲಜ್ಞಾನದಲ್ಲಿ ಇಂದಿನ ಮತ್ತು ಮುಂದಿನ ದಿನಗಳ ಭವಿಷ್ಯವನ್ನು ಬರೆದಿದ್ದಾರೆ. ಅವರು ಸುಮಾರು ಒಂದು ಲಕ್ಷ ತೊಂಬತ್ತಾರು ಸಾವಿರ ವಚನಗಳನ್ನು ರಚಿಸಿದ್ದಾರೆ ಎಂದು ಹೇಳಲಾಗಿದ್ದು, ಅದರಲ್ಲಿ 8000 ವಚನಗಳು ಮಾತ್ರ ಲಭ್ಯವಿದ್ದು ಮಠದಲ್ಲಿ ಸುರಕ್ಷಿತವಾಗಿದ್ದು, ಕಾಣಸಿಗುತ್ತದೆ.

ಕೊಡೇಕಲ್ ಬಸವೇಶ್ವರು ಹಿಂದೂ ಮುಸ್ಲಿಂ ಒಂದೇ ಎಂದು ಸಾರಿದ್ದಾರೆ ಅದರಂತೆ ನಡೆದು ತೊರಿಸಿದ್ದಾರೆ ಅವರು ಒಂದು ಕಾಲಲ್ಲಿ ಚಪ್ಪಲಿ ಇನ್ನೊಂದು ಕಾಲಲ್ಲಿ ಕಂಸಿಯನ್ನು ಧರಿಸಿ ಎಲ್ಲರೂ ಒಂದೇ ಎಂದು ತೊರಿಸಿದ್ದಾರೆ. ಇಂದಿಗೂ ಅವರ ದೇವಸ್ಥಾನ ಹಿಂದು ಮುಸ್ಲಿಂ ವಾಸ್ತುಶಿಲ್ಪದ ಸಮ್ಮಿಶ್ರಣವಾಗಿದೆ. ಬಸವಣ್ಣನ ಸಮಾಧಿಯ ಮೇಲೆ ಮುಸ್ಲಿಂ ಸಂತರ ಸಮಾಧಿಯಂತೆ ಮಜಾರನಂತಿದೆ. ಇಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕೊಡೇಕಲ್ಲ ಸಂಪ್ರದಾಯ ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ಇಲ್ಲಿನ ಪಿಠಾಧಿಪತಿಗಳು ಈ ಸಂಪ್ರದಾಯದಲ್ಲಿ ಶಿವದಾರ, ಜನಿವಾರ, ಉಡುದಾರ ಯಾವದನ್ನೂ ಧರಿಸುವದಿಲ್ಲ. ಹಸಿರು ರುಮಾಲು ಬಿಳಿಯ ವಸ್ತ್ರಗಳನ್ನು ಧರಿಸಲಾಗುತ್ತದೆ.

ಯುಗಾದಿ ಪ್ರತಿಪದೆಯಂದು ಅಂತ್ಯಜ ಕುಟುಂಬದವರು ನದಿಯ ನೀರನ್ನು ಮೆರವಣಿಗೆಯೊಂದಿಗೆ ತರುತ್ತಾರೆ. ಆ ನೀರನ್ನು ಪೀಠಾಧಿಶರಾದ ವೀರಯ್ಯಸ್ವಾಮಿಗಳು ಸ್ನಾನಮಾಡಿ, ಅವರು ತಂದ ನೀರಿನಿಂದಲೇ ಬಸವೇಶ್ವರರ ಗದ್ದುಗೆಯನ್ನು ಪೂಜಿಸುತ್ತಾರೆ.

ವಿಷ್ಣುಪುರದಡಿ ಕೃಷ್ಣೆಗೆ ಕಡಿವಾಣ ಎಂದು ಕಾಲಜ್ಞಾನದಲ್ಲಿ 500 ವರ್ಷಗಳ ಹಿಂದೆಯೇ ತಿಳಿಸಿದ್ದಾರೆ. ಅದರಂತೆ ನಾರಾಯಣಪುರದ ಬಳಿ ಕೃಷ್ಣಾ ನದಿಗೆ ಅಣೆಕಟ್ಟು ಕಟ್ಟಲಾಗಿದೆ.

ಬಸವೇಶ್ವರರು ಉಪಯೋಗಿಸಿದ ಕಾಲಜ್ಞಾನದ ಲಿಪಿ ವಚನ, ಅಂಡಿ ಗಡಿಗೆ, ಯೋಗ ದಂಡ, ತಂಬೂರಿ ಇಂದಿಗೂ ದೇವಸ್ಥಾನದಲ್ಲಿ ಕಾಣಸಿಗುತ್ತವೆ. ಯಾದಗಿರಿ ಜಿಲ್ಲೆ ಸೇರಿದಂತೆ ವಿಜಾಪುರ, ಗುಲ್ಬರ್ಗ ಬಾಗಲಕೋಟೆ, ನೆರೆಯ ಮಹಾರಾಷ್ಟ್ರ ಸೇರಿದಂತೆಸೇರಿದಂತೆ ನೂರಾರು ಊರುಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.

ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ  ನಾರಾಯಣಪುರ, ಮುದ್ದೇಬಿಹಾಳ, ಹುಣಸಗಿ ಮತ್ತು ತಾಳಿಕೋಟೆಯಿಂದ ಬಸ್ ಸೌಲಭ್ಯವಿರುತ್ತದೆ.                             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT