ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಗಾಗಿ ಒಳ ಮೀಸಲಾತಿ ಅನಿವಾರ್ಯ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜದಲ್ಲಿ ಹಿಂದುಳಿದ ಜನಾಂಗವಾಗಿರುವ ಮಾದಿಗ ಸಮುದಾಯದ ಸಾಮಾಜಿಕ ಸಮಾನತೆಗಾಗಿ ತುರ್ತು ಒಳ ಮೀಸಲಾತಿಯ ಅನಿವಾರ್ಯತೆ ಇದೆ~ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯು ಮಲ್ಲೇಶ್ವರದ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಿಗರ ಧರ್ಮಯುದ್ಧ ಸಮಾವೇಶದಲ್ಲಿ ಅವರು ಮಾತನಾಡಿದರು.

`ಮಾದಿಗ ಸಮುದಾಯದ ಅವಶ್ಯಕತೆ ಸಮಾಜಕ್ಕೆ ಬಹಳ ಅಗತ್ಯವಿದೆ. ಸಮಾಜದ ಕೊಳಕನ್ನು ತೊಡೆಯುವ ಕಾಯಕ ಮಾಡುವ ಇವರು ಸಮಾಜಕ್ಕೆ ಎಷ್ಟು ಅವಶ್ಯಕತೆ ಇದೆಯೋ, ಅವರ ಅಭಿವೃದ್ಧಿಗಾಗಿ ಮೀಸಲಾತಿ ನೀಡುವುದು ಅಷ್ಟೇ ಅಗತ್ಯವಿದೆ~ ಎಂದು ಹೇಳಿದರು.

ಮಾದಿಗರು ಅಂದರೆ ಕಟ್ಟ ಕಡೆಯ ಸಮುದಾಯವಲ್ಲ. ಇವರು ಸಂಸ್ಕೃತಿಯ ಮೂಲ ಬೇರು. ಬಹುತೇಕವಾಗಿ ಈ ಸಮುದಾಯಗಳನ್ನು ಸಮಾಜದಿಂದ ದೂರವಿಡುವ ಸಂಗತಿಗಳು ನಡೆಯುತ್ತಿವೆ. ಇಂತಹ ಪ್ರಸಂಗಗಳು ನಿಲ್ಲಬೇಕು ಎಂದು ನುಡಿದರು.

ಹಿಂದುಳಿದ ಸಮಾಜಗಳಿಗೆ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ಸಮಾಜದಲ್ಲಿ ಸಿಗುತ್ತಿಲ್ಲ. ಪ್ರತಿಯೊಂದು ಸಮುದಾಯವು ಏಳಿಗಾಗಿ ಮೀಸಲಾತಿ ಬಯಸುವುದು ಸಹಜ. ಸಾಮಾನ್ಯ ಮಾರ್ಗದಲ್ಲಿ ಮೀಸಲಾತಿ ಸಿಗದಿದ್ದಾಗ ಹೋರಾಟದ ಮುಖಾಂತರ ಪಡೆಯಬೇಕು. ಮಾದಿಗ ಜನಾಂಗದ ಈ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, `ಮೀಸಲಾತಿ ಸೌಲಭ್ಯ ಇರುವುದು ತುಳಿತಕ್ಕೆ ಒಳಗಾದ ಸಮುದಾಯಗಳಿಗೆ. ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ಹಾಗೂ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದೇವೆ. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವ ಕಾನೂನು ಜಾರಿಗೆ ತರಬೇಕು. ಈ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುತ್ತೇನೆ~ ಎಂದು ಭರವಸೆ ನೀಡಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಪ್ರಕಾಶ್, `ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು~ ಎಂದು  ಹೇಳಿದರು.

ಇದೇ ಸಂದರ್ಭದಲ್ಲಿ ಮಾದಿಗ ಜನಾಂಗದ ಒಳ ಮೀಸಲಾತಿ ವರ್ಗೀಕರಣಕ್ಕೆ ಬೀದರ್‌ನಿಂದ ಬೆಂಗಳೂರಿಗೆ ಸೈಕಲ್ ಜಾಥಾ ಕೈಗೊಂಡಿದ್ದ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರೀರಾಮ್ ಅವರನ್ನು ಸನ್ಮಾನಿಸಲಾಯಿತು.

ಸಮಿತಿಯ ರಾಷ್ಟ್ರೀಯ ನಾಯಕ ಮಂದಾಕೃಷ್ಣ ಮಾದಿಗ, ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ಕೋಡಿಹಳ್ಳಿ ಮಠದ ಷಡಕ್ಷರಿ ಮುನಿ ಸ್ವಾಮೀಜಿ, ಬಿ.ಎಸ್.ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಪಾಲಿಕೆ ಸದಸ್ಯ ಎಲ್.ದೇವರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT