ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ವಿರೋಧಿಗಳು!

Last Updated 28 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಓಟದ ಸ್ಪರ್ಧೆಗಳಲ್ಲಿ ವೃತ್ತಾಕಾರದ ಟ್ರ್ಯಾಕ್‌ಗಳನ್ನು ಮಾಡಿರುತ್ತಾರೆ. ಅತ್ಯಂತ ಒಳಭಾಗದ ಟ್ರ್ಯಾಕ್ ಚಿಕ್ಕದಾಗಿಯೂ ಏರಿಕೆ ಕ್ರಮದಲ್ಲಿ ದೊಡ್ಡದಾಗುತ್ತಾ ಅತ್ಯಂತ ಹೊರಭಾಗದ ಟ್ರ್ಯಾಕ್ ಅತೀ ದೊಡ್ಡದಾಗಿಯೂ ಇರುತ್ತದೆ. ಸ್ಪರ್ಧೆ ಆರಂಭವಾಗುವಾಗ ಚಿಕ್ಕ ಟ್ರ್ಯಾಕ್‌ನಲ್ಲಿರುವವನು ಅತೀ ಹಿಂದೆ ಇರುತ್ತಾನೆ, ಹೀಗೆ ಏರಿಕೆ ಕ್ರಮದಲ್ಲಿ ಮುಂದುವರೆದು ಕ್ರಮೇಣ ಅತ್ಯಂತ ಹೊರಗಿನ ಟ್ರ್ಯಾಕಿನ ಓಟಗಾರ ಎಲ್ಲರಿಗಿಂತ ಮುಂದೆ ನಿಂತಿರುತ್ತಾನೆ. ಇದನ್ನು ಯಾರಾದರೂ ಅನ್ಯಾಯ ಎನ್ನುತ್ತಾರೆಯೇ?

ಟ್ರ್ಯಾಕ್‌ಗಳ ನಿರ್ಮಾಣದಲ್ಲಿ ಆಗಿರುವ ಅಸಮಾನತೆಯನ್ನು ಈ ರೀತಿ ನಿಲ್ಲಿಸುವುದರ ಮೂಲಕ ಸಮಾನತೆ ತರಲಾಗಿದೆ. ಅತ್ಯಂತ ಹೊರಗಿನ ಟ್ರ್ಯಾಕ್‌ನಲ್ಲಿ ಓಡಲು ನಿಂತಿರುವವನಿಗೆ ಇತರರು ನೀಡಿರುವ ಮೀಸಲಾತಿಯು ಭಿಕ್ಷೆಯಲ್ಲ ಅದು ಅವನ ಹಕ್ಕು.

ಹೊರಗಿನ ಟ್ರ್ಯಾಕಿನ ಓಟಗಾರನನ್ನು ಮುಂದೆ ನಿಲ್ಲಿಸಿದಾಗ ಅನ್ಯಾಯವಾಗಲಿಲ್ಲ ಎಂದ ಮೇಲೆ ಸಾಮಾಜಿಕವಾಗಿ, ಜಾತಿಯ ಆಧಾರದ ಮೇಲೆ ಸಾವಿರಾರು ವರ್ಷಗಳಿಂದ ಅನ್ಯಾಯ ಅನುಭವಿಸಿದವರಿಗೆ ನಾವಾಗಿಯೇ ಮೀಸಲಾತಿ ನೀಡಿ ಸಮಾನತೆ ನೀಡಲು ಏಕೆ ಇಷ್ಟೊಂದು ಹಿಂದು ಮುಂದು ನೋಡುತ್ತಿದ್ದೇವೆ. ಯಾಕೆ ಈ ಹಿಂಜರಿಕೆ? ಯಾಕೆ ಈ ಹೀಯಾಳಿಸುವಿಕೆ ಮತ್ತು ದ್ವೇಷ?

ಇದಕ್ಕೆ ಉತ್ತರ ಹುಡುಕುವುದು ಅಷ್ಟು ಕಷ್ಟವಲ್ಲ. ಗುಜರಾತಿನಲ್ಲಿ ಕ್ಯಾರಿ ಫಾರ್ವರ್ಡ್ ವಿರುದ್ಧ ಆರಂಭವಾದ ಹೋರಾಟ ಮೀಸಲಾತಿ ವಿರೋಧಕ್ಕೆ ಬಂದು ನಿಂತಿತ್ತು. ಈ ಮೀಸಲಾತಿ ವಿರೋಧಿ ಹೋರಾಟಗಾರರು ಅಲಹಾಬಾದ್ ನಗರದ ಗೋಡೆಗಳ ಮೇಲೆ ದಪ್ಪ ದಪ್ಪ ಅಕ್ಷರಗಳಲ್ಲಿ ಹೀಗೆ ಬರೆದಿದ್ದರು: `ಅಸ್ಪೃಶ್ಯರೇ ನೀವೇಕೆ ಕಸ ಗುಡಿಸುವ ಕೆಲಸಕ್ಕೆ ಹೋಗಬಾರದು? ನೀವೇಕೆ ಚಪ್ಪಲಿಗಳನ್ನು ಹೊಲೆಯುವ, ಚರಂಡಿ ತೊಳೆಯುವ ಕೆಲಸ ಮಾಡಬಾರದು?'.

ಇಷ್ಟಕ್ಕೇ ನಿಲ್ಲದೆ ಆಟೋ ಓಡಿಸುತ್ತಿದ್ದ 20 ಜನ ಅಸ್ಪೃಶ್ಯರ ಆಟೋ ನಂಬರುಗಳನ್ನು ಅಚ್ಚು ಮಾಡಿಸಿ ಅವುಗಳನ್ನು ಯಾರೂ ಹತ್ತಬಾರದು ಎಂದು ಪ್ರಚಾರ ಮಾಡಿದ್ದರು. ಇವೆಲ್ಲದರ ಅರ್ಥವೇನು?

ಇತ್ತೀಚೆಗೆ ಮನುವಾದಿಗಳು ಪರಿಶಿಷ್ಟರ ಮತ್ತು ಹಿಂದುಳಿದ ವರ್ಗದವರ ನಡುವೆ ಬೆಂಕಿ ಹಚ್ಚುವಲ್ಲಿ ಸಫಲರಾಗಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಪರಿಶಿಷ್ಟರು ವಿರೋಧಿಸಿದ್ದಾರೆ ಮತ್ತು ಪರಿಶಿಷ್ಟರಿಗೆ ಮೀಸಲಾತಿಯಲ್ಲಿ ಬಡ್ತಿ ನೀಡಲು ಹಿಂದುಳಿದ ವರ್ಗದವರು ವಿರೋಧಿಸಿದ್ದಾರೆ.

ಅವರಿಬ್ಬರೂ ಒಂದೇ ದೋಣಿಯ ಪಯಣಿಗರು ಎಂಬುದನ್ನು ಮರೆತಿರುವಂತಿದೆ, ಇದಕ್ಕೆ ಕಾರಣ ಆಯಾ ಜಾತಿಯಲ್ಲಿ ಸೃಷ್ಟಿಯಾಗಿರುವ ಮಧ್ಯಮ ವರ್ಗಗಳು. ಈ ಮಧ್ಯಮ ವರ್ಗದ ಜನರು ಕಿತ್ತುಕೊಳ್ಳುತ್ತಿರುವುದು ತಮ್ಮದೇ ಜನಾಂಗದ ಜನರ ಮೀಸಲಾತಿಯನ್ನು! ಇದನ್ನು ಧಮನಿತರು ಅರ್ಥಮಾಡಿಕೊಳ್ಳಬೇಕಾಗಿದೆ. ಕೆನೆ ಪದರದ ಬಗ್ಗೆ ಚಿಂತಿಸಬೇಕಾಗಿದೆ.

ಹಿಂದೆ ಮೀಸಲಾತಿಯನ್ನು ವಿರೋಧಿಸುತ್ತಿದ್ದವರು ಇಂದು ಹಲವು ಸಂಚುಗಳನ್ನು ರೂಪಿಸಿಕೊಂಡು ಮೀಸಲಾತಿಯ ಪರಿಧಿಯೊಳಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕೆಲವು ಪ್ರಹಸನಗಳು ಇದನ್ನು ಸಾಬೀತು ಪಡಿಸುತ್ತವೆ. ಈಗಾಗಲೇ ಕೆಲವು ಜನಾಂಗ ಪ್ರವೇಶಿಸಿಯೂ ಆಗಿದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಮೀಸಲಾತಿಯ ವ್ಯಾಪ್ತಿಯೇ ಚಿಕ್ಕದಾಗುತ್ತಿರುವಾಗ ಇದು ಶೋಷಿತರ ಬೆಳವಣಿಗೆಗೆ ಮಾರಕವಾಗಲಿದೆ. ಮೀಸಲಾತಿ ಎಂಬುದು ಕರುಣೆ, ಪಾಪ, ಪುಣ್ಯಗಳಿಗೆ ಸಂಬಂಧಿಸಿದ್ದಲ್ಲ.

ಶೋಷಿತತರ ಹಕ್ಕಿಗೆ ಸಂಬಂಧಿಸಿದ್ದು. ಸಮಾನತೆಗೆ ಸಂಬಂದಿಸಿದ್ದು, ದೇಶದ ಪ್ರಗತಿಗೆ ಸಹಕರಿಸುವಂತಹದ್ದು. ಇದಕ್ಕೂ ಮೀರಿ ಮೀಸಲಾತಿ ತೊಲಗಬೇಕೆಂದರೆ ಅದಕ್ಕಿಂತ ಮೊದಲು ಜಾತಿ ನಾಶವಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT