ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ಸಮಾಜ ನಿರ್ಮಾಣವಾಗಲಿ

Last Updated 21 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಸ್ಪೃಶ್ಯರು ಸೇರಿದಂತೆ ಎಲ್ಲ ವರ್ಗಗಳಿಗೂ ಸಮಾಜದಲ್ಲಿ ಸಮಾನತೆ ದೊರೆಯಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ನಗರದ ಕಬೀರಾನಂದ ಮಠದಲ್ಲಿ ಸೋಮವಾರ ನಡೆದ 82ನೇ ಮಹಾಶಿವರಾತ್ರಿ ಮಹೋತ್ಸವದ ಐದನೇ ದಿನದ `ಆರೂಢಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಲವಾರು ಪ್ರಶಸ್ತಿ ಬಂದಿದ್ದರೂ ಸಹ `ಆರೂಢಶ್ರೀ~ ಪ್ರಶಸ್ತಿ ಲಭಿಸಿರುವುದು ತೃಪ್ತಿಯನ್ನುಂಟು ಮಾಡಿದೆ ಎಂದು ಭಾವುಕರಾಗಿ ನುಡಿದರು.

ಸಿದ್ಧಾರೂಢರು ತಮ್ಮ ಜೀವನದಲ್ಲಿನ ಅನುಭವಗಳನ್ನು ವಾಸ್ತವಾಗಿ ಕಂಡು ಅಗೋಚರಗಳನ್ನು ವೀಕ್ಷಿಸಿ ಪವಾಡಗಳನ್ನು ಮಾಡುತ್ತಿದ್ದರು. ಅಂತಹ ಅದ್ವೈತ ಸಾಧನೆ ಮಾಡಿರುವ ಎಲ್ಲ ಧರ್ಮಗಳನ್ನು ಕ್ರೋಢಿಕರಿಸಿಕೊಂಡು ಮಹಾತ್ಮರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ನಾನು ಸಹ ಆರೂಢರಂತೆ ಬದುಕಲು ಪ್ರೇರೇಪಿಸಿದಂತಿದೆ ಎಂದರು.

ಒಳ ಮತ್ತು ಹೊರ ಎನ್ನುವ ಭೇದವಿಲ್ಲದೆ ನಾನು ಜೀವನ ನಡೆಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಯಾವ ರೀತಿಯ ಅಹಂ ಮತ್ತು  ಅಹಂಕಾರ ಭಾವನೆ ಇಲ್ಲ ಎಂದು ನುಡಿದರು.

`ಸದ್ಗುರುಶ್ರೀ~ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ ಸ್ವಾಮೀಜಿ, ಚಿದಾನಂದಮೂರ್ತಿ ಅವರನ್ನು ಒಂದು ವರ್ಗಕ್ಕೆ ಸಿಮಿತಗೊಳಿಸಿದ ಕಾರಣ ನಗರದಲ್ಲಿ ನಡೆದ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಬೇಕಾಯಿತು.
 
ಹಿಂದೂ ಧರ್ಮ ಮತ್ತು ಸಂಸ್ಕೃತಿಗಾಗಿ ಹೋರಾಡುತ್ತಿರುವ ಅವರು ಯಾವುದೇ ಪ್ರತಿರೋಧ ಎದುರಾದರೂ ಇಳಿವಯಸ್ಸಿನಲ್ಲಿ ನಿರ್ಭಯವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ನುಡಿದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯಿತ ಪಂಚಮಸಾಲಿ ಮಹಾಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ, ಮೇದರ ಕೇತೇಶ್ವರ ಗುರುಪೀಠದ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್, ಸಂಸದ ಜನಾರ್ದನಸ್ವಾಮಿ, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಎಪಿಎಂಸಿ ನಿರ್ದೇಶಕ ಸೋಮಶೇಖರ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಪ್ರಭುದೇವ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಪಿ. ಗುರುರಾಜ್, ಭದ್ರಾವತಿ ಸಿದ್ಧಾರೂಢ ಮಠದ ಅಧ್ಯಕ್ಷ ಜಿ. ಬೆನಕಪ್ಪ, ಕಾಂಗ್ರೆಸ್ ಮುಖಂಡ ಮಹಿಮ ಪಟೇಲ್ ಹಾಜರಿದ್ದರು. ಸಿ. ಪೂಜಾ ಪ್ರಾರ್ಥಿಸಿದರು. ಎಂ. ಮಂಜುನಾಥ್ ಗುಪ್ತಾ ಸ್ವಾಗತಿಸಿದರು. ಹುರುಳಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿರೂಪಾಕ್ಷಪ್ಪ ಆಯತೋಳ ಮತ್ತು ಸಂಗಡಿಗರು, ಬಿ.ಎಂ. ಪ್ರಜ್ವಲ್ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

 ಜನಪದ ವೈಭವ
ಕಬೀರಾನಂದಾಶ್ರಮದ ವತಿಯಿಂದ ಆಯೋಜಿಸಿರುವ 82ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಸೋಮವಾರ ಪಲ್ಲಕ್ಕಿ ಹಾಗೂ ಜನಪದ ಉತ್ಸವ ಸಂಭ್ರಮದಿಂದ ನಡೆಯಿತು.
ರಾಜಬೀದಿಗಳಲ್ಲಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಮಠದ ಪೀಠಾಧ್ಯಕ್ಷ ಸದ್ಗುರು ಶಿವಲಿಂಗಾನಂದ ಸ್ವಾಮೀಜಿ ಅವರ ಮೆರವಣಿಗೆ ನಡೆಯಿತು.

ಕಾಂಗ್ರೆಸ್ ಮುಖಂಡ ಮೆಹಬೂಬ್ ಪಾಷಾ ಉತ್ಸವಕ್ಕೆ ಸಮಾಳ ಬಾರಿಸುವ ಮೂಲಕ ಚಾಲನೆ ನೀಡಿದರು.
ಜನಪದ ಉತ್ಸವದಲ್ಲಿ ಆದಿಚುಂಚನಗಿರಿ ಕಾಲಭೈರೇಶ್ವರ ವೀರಗಾಸೆ ತಂಡ, ಕೀಲು ಕುದುರೆ, ತಮಟೆ ಕಲಾವಿದರು, ಕಿನ್ನರ ಜೋಗಿಗಳು, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ಶಾರದಾ ಬ್ರಾಸ್ ಬ್ಯಾಂಡ್ ಹಾಗೂ ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳು ಸೇರಿದಂತೆ ಹಲವಾರು ಜಾನಪದ ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT